ಸಾರಾಂಶ
ಮೈಸೂರು : ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ಬೆಂಗಳೂರಿನಿಂದ ಕೈಗೊಂಡಿರುವ ಪಾದಯಾತ್ರೆ ನಿರೀಕ್ಷೆಯಂತೆ ಏಳನೆಯ ದಿನ ಮೈಸೂರು ತಲುಪಿದೆ.
ಪಾದಯಾತ್ರೆಯ ಸಮಾರೋಪದ ಭಾಗವಾಗಿ ಶನಿವಾರ, ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯನ್ನು ಬಿಜೆಪಿ ಮುಖಂಡರು ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರೂರಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಮುಖಂಡರು ತೀವ್ರ ವಾಗ್ದಾಳಿ ನಡೆಸುವ ನಿರೀಕ್ಷೆ ಇದೆ. ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣದ ವಿಚಾರವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಂದಿನ ಹೋರಾಟಗಳ ಕುರಿತು ಇದೇ ವೇದಿಕೆಯಲ್ಲಿ ಘೋಷಣೆ ಮಾಡುವ ನಿರೀಕ್ಷೆ ಕೂಡ ಇದೆ.
128 ಕಿ.ಮೀ. ಪಾದಯಾತ್ರೆ:
ಮುಡಾ ಹಗರಣ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಪರಿಶಿಷ್ಟರಿಗೆ ಮೀಸಲಾದ ಅನುದಾನ ದುರ್ಬಳಕೆ ವಿಚಾರವಾಗಿ ಕಳೆದ ಶನಿವಾರ ಬೆಂಗಳೂರಿನ ಕೆಂಗೇರಿಯಿಂದ ಆರಂಭವಾದ ಈ 128 ಕಿ.ಮೀ. ಪಾದಯಾತ್ರೆ ರಾಮನಗರ, ಮಂಡ್ಯದ ಮೂಲಕ ಸಾಗಿ ಶುಕ್ರವಾರ ರಾತ್ರಿ 8 ಗಂಟೆಗೆ ಮೈಸೂರು ಪ್ರವೇಶಿಸಿದೆ. ಕಾಂಗ್ರೆಸ್ ಜನಾಂದೋಲನ ಸಮಾವೇಶ ನಡೆದ ಮಹಾರಾಜ ಕಾಲೇಜು ಮೈದಾನದಲ್ಲೇ ಶನಿವಾರ ಬೆಳಗ್ಗೆ 11 ಗಂಟೆಗೆ ‘ಮೈಸೂರು ಚಲೋ’ ಪಾದಯಾತ್ರೆಯ ಸಮಾರೋಪವೂ ನಡೆಯಲಿದೆ.
ಕಾಂಗ್ರೆಸ್ ಜನಾಂದೋಲನ ಸಮಾವೇಶಕ್ಕೆ ಹಾಕಿದ್ದ ವೇದಿಕೆಯಲ್ಲೇ ಬಿಜೆಪಿ ಸಮಾವೇಶವೂ ನಡೆಯಲಿದೆ. ಕಾಂಗ್ರೆಸ್ ಸಮಾವೇಶಕ್ಕೆ ವೇದಿಕೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡ ವ್ಯಕ್ತಿಯೇ ಬಿಜೆಪಿ ಸಮಾವೇಶದ ವೇದಿಕೆಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದರಿಂದ ಒಂದೇ ವೇದಿಕೆಯಲ್ಲಿ ಎರಡೂ ಪಕ್ಷಗಳ ಸಮಾವೇಶಗಳು ನಡೆಯುವಂತಾಗಿದೆ.
ಸಿದ್ದರಾಯಯ್ಯ ಅವರ ತವರೂರಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ ಆರ್.ಅಶೋಕ್ ಸೇರಿ ಬಿಜೆಪಿ ಮತ್ತು ಜೆಡಿಎಸ್‌ನ ರಾಜ್ಯ ಮುಖಂಡರಷ್ಟೇ ಪಾಲ್ಗೊಳ್ಳಲಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಕೇಂದ್ರ ರಸಗೊಬ್ಬರ ಖಾತೆ ಸಚಿವ ಜೆ.ಪಿ.ನಡ್ಡಾ ಅವರು ಪಾಲ್ಗೊಳ್ಳುತ್ತಾರೆ ಎನ್ನಲಾಗಿತ್ತಾದರೂ ಕೊನೆ ಕ್ಷಣದಲ್ಲಿ ರದ್ದಾಗಿದೆ.ಶುಕ್ರವಾರ ನಡೆದ ಕಾಂಗ್ರೆಸ್ ಜನಾಂದೋಲನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರತಿಪಕ್ಷಗಳ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಇದಕ್ಕೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರೂ ಅದೇ ದಾಟಿಯಲ್ಲಿ ತಿರುಗೇಟು ನೀಡಲು ಸಿದ್ಧತೆ ನಡೆಸಿದ್ದಾರೆ.