ಸಾರಾಂಶ
ಬೆಳಗಾವಿ : ಮುಖ್ಯಮಂತ್ರಿ ಆದವರನ್ನು ಯಾರಾದರೂ ಮುಟ್ಟಲು ಆಗುತ್ತದೆಯೇ? ಹಾಗೇನಾದರೂ ಟಚ್ ಮಾಡಿದರೆ ಪೊಲೀಸರು ಒಳಗೆ ಹಾಕುತ್ತಾರೆ ಎಂದು ಹೇಳುವ ಮೂಲಕ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರೊರೊಂದಿಗೆ ಮಾತನಾಡಿ, ನನ್ನನ್ನು ಮುಟ್ಟಿದರೆ ಜನ ಸುಮ್ಮನೆ ಬಿಡುವುದಿಲ್ಲವೆಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ. ಅವರ ಮಾತಿನ ಮರ್ಮವನ್ನು ಅವರೇ ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಯನ್ನು ಮುಟ್ಟಿದರೆ ಪೊಲೀಸರು ಕೇಸ್ ಮಾಡುತ್ತಾರೆ. ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯ ಅವರು ಜನರ ಭಾವನೆ ಕೆರಳಿಸುವಂತೆ ಮಾಡನಾಡುವುದು ಎಷ್ಟು ಸರಿ? ಎಂದು ಖಾರವಾಗಿ ಪ್ರಶ್ನಿಸಿದರು.
ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಅವರು ಸಾಮಾನ್ಯ ಜನರ ಭಾವನೆಗೆ ತದ್ವಿರುದ್ಧವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸಮಂಜಸ? ನಿಮ್ಮನ್ನು ಯಾರು ಮುಟ್ಟುವುದು ಬೇಡ. ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದರು.
ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ದಿ.ಸುರೇಶ ಅಂಗಡಿ ಅವರ ಕನಸು. ಅದನ್ನು ಇದೇ ಅವಧಿಯಲ್ಲಿ ನನಸು ಮಾಡಲು ಪ್ರಯತ್ನಿಸುತ್ತೇವೆ. ಈ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಸಂಕೀರ್ಣವಾಗಿದ್ದು, ಪರಿಹರಿಸುತ್ತೇವೆ ಎಂದರು.