ಚೀನಾ, ರಷ್ಯಾ ಜೊತೆ ಭಾರತದ ಮೈತ್ರಿ ನಾಚಿಕೆಗೇಡು: ಟ್ರಂಪ್‌ ಆಪ್ತ

| Published : Sep 03 2025, 01:01 AM IST

ಸಾರಾಂಶ

ರಷ್ಯಾ ತೈಲ ಖರೀದಿಯಿಂದ ಭಾರತದ ಬ್ರಾಹ್ಮಣರು ಭಾರೀ ಸಂಪತ್ತು ಗಳಿಸುತ್ತಿದ್ದಾರೆ ಎಂದು ಸೋಮವಾರವಷ್ಟೇ ಭಾರತೀಯರ ವಿರುದ್ಧ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್‌ ನವರೋ, ಚೀನಾ ಮತ್ತು ರಷ್ಯಾ ಜೊತೆಗಿನ ಭಾರತದ ಮೈತ್ರಿ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.

ಮೂವರ ಮೈತ್ರಿ ಕಳವಳಕಾರಿ: ಪೀಟರ್‌ ನವರೋ ಮತ್ತೆ ಕಿಡಿವಾಷಿಂಗ್ಟನ್‌: ರಷ್ಯಾ ತೈಲ ಖರೀದಿಯಿಂದ ಭಾರತದ ಬ್ರಾಹ್ಮಣರು ಭಾರೀ ಸಂಪತ್ತು ಗಳಿಸುತ್ತಿದ್ದಾರೆ ಎಂದು ಸೋಮವಾರವಷ್ಟೇ ಭಾರತೀಯರ ವಿರುದ್ಧ ಕಿಡಿಕಾರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ರ ಹಿರಿಯ ವ್ಯಾಪಾರ ಸಲಹೆಗಾರ ಪೀಟರ್‌ ನವರೋ, ಚೀನಾ ಮತ್ತು ರಷ್ಯಾ ಜೊತೆಗಿನ ಭಾರತದ ಮೈತ್ರಿ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ. ಅಲ್ಲದೆ ಭಾರತ-ಚೀನಾ-ರಷ್ಯಾ ದೇಶಗಳ ಮೈತ್ರಿ ಕಳವಳಕಾರಿ ಎಂದಿದ್ದಾರೆ.

ಶಾಂಘೈ ಸಹಕಾರ ಶೃಂಗಸಭೆಯಲ್ಲಿ ಮೂರು ದೇಶಗಳ ಒಗ್ಗಟ್ಟಿನ ಪ್ರದರ್ಶನದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ ನವಾರೋ ‘ಇದು ಕಳವಳಕಾರಿ, ಕಳವಳಕಾರಿ’ ಎಂದಿದ್ದಾರೆ. ಜೊತೆಗೆ ‘ಮೋದಿ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕನಾಗಿ, ವಿಶ್ವದ ಎರಡು ಅತಿದೊಡ್ಡ ಸರ್ವಾಧಿಕಾರಿ ದೇಶಗಳ ನಾಯಕರಾದ ಪುಟಿನ್‌ ಮತ್ತು ಕ್ಸಿ ಜಿನ್‌ಪಿಂಗ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ನಾಚಿಕೆಗೇಡಿನ ವಿಷಯ. ಇದಕ್ಕೆ ಯಾವುದೇ ಅರ್ಥವಿಲ್ಲ’ ಎಂದು ಹೇಳಿದ್ದಾರೆ.

‘ಹಲವು ದಶಕಗಳಿಂದ ಭಾರತ ಚೀನಾದ ಜೊತೆಗೆ ಶೀತಲ ಸಮರ, ಇನ್ನು ಕೆಲವೊಂದು ಸಮಯ ಬಿಸಿಬಿಸಿ ಸಮರ ನಡೆಸುತ್ತಿದೆ. ಹೀಗಿರುವಾಗ ಅವರು (ಮೋದಿ) ಏನು ಚಿಂತಿಸುತ್ತಿದ್ದಾರೆ ಎಂಬುದೇ ನನಗೆ ಖಚಿತವಿಲ್ಲ. ಅವರು ನಮ್ಮೊಂದಿಗೆ, ಯುರೋಪ್‌ನೊಂದಿಗೆ ಮತ್ತು ಉಕ್ರೇನ್‌ನೊಂದಿಗೆ ಇರಬೇಕೇ ಹೊರತೂ ರಷ್ಯಾ ಜೊತೆಗಲ್ಲ. ಜೊತೆಗೆ ಅವರು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಬೇಕು’ ಎಂದು ನವರೋ ಹೇಳಿದ್ದಾರೆ.

ಇದಕ್ಕೂ ಮೊದಲು ರಷ್ಯಾ ತೈಲ ಖರೀದಿಯಿಂದ ಇಡೀ ದೇಶ ನಷ್ಟ ಅನುಭವಿಸುತ್ತಿದ್ದರೆ, ಬ್ರಾಹ್ಮಣ (ಶ್ರೀಮಂತ ವ್ಯಕ್ತಿಗಳಷ್ಟೇ) ರಷ್ಟೇ ಲಾಭ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯವಿದೆ ಎಂದು ಹೇಳಿದ್ದರು. ಜೊತೆಗೆ ಇನ್ನೊಮ್ಮೆ ಭಾರತವು ರಷ್ಯಾ ತೈಲವನ್ನು ಬೇರೆ ದೇಶಗಳಿಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರೆ, ಮಗದೊಮ್ಮ ಉಕ್ರೇನ್‌ ಯುದ್ಧವನ್ನು ‘ಮೋದಿ ಅವರ ಯುದ್ಧ’ ಎಂದು ಕರೆದಿದ್ದರು.

==

ಖಾಸಗಿ ಹಿತಾಸಕ್ತಿಗಾಗಿ ಭಾರತದ ಸ್ನೇಹ ಬಲಿಕೊಟ್ಟ ಟ್ರಂಪ್‌: ಮಾಜಿ ಎನ್‌ಎಸ್‌ಎ

-ಪಾಕ್‌ ಜೊತೆ ಕುಟುಂಬ ವ್ಯಾಪಾರ ಅಭಿವೃದ್ಧಿ

ವಾಷಿಂಗ್ಟನ್‌: ಪಾಕಿಸ್ತಾನದೊಂದಿಗಿನ ಕುಟುಂಬದ ವ್ಯವಹಾರಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಭಾರತದ ಜೊತೆಗಿನ ಅಮೆರಿಕ ಸಂಬಂಧ ಬದಿಗಿಟ್ಟರು’ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ( ಎನ್‌ಎಸ್‌ಎ) ಜೇಕ್‌ ಸುಲ್ಲಿವನ್ ಆರೋಪಿಸಿದ್ದಾರೆ.

ಜೋ ಬೈಡೆನ್‌ ಆಡಳಿತದಲ್ಲಿ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಸುಲ್ಲಿವನ್ ಪ್ರತಿಕ್ರಿಯೆ ನೀಡಿ, ‘ಅಮೆರಿಕ ಅಧ್ಯಕ್ಷರು ಭಾರತಕ್ಕಿಂತ ಪಾಕಿಸ್ತಾನಕ್ಕೆ ಹೆಚ್ಚು ಆತ್ಮೀಯರಾಗಿದ್ದಾರೆ. ಪಾಕ್‌ನಲ್ಲಿನ ಅವರ ಕುಟುಂಬದ ವ್ಯವಹಾರ ಒಪ್ಪಂದಗಳಿಗಾಗಿ ಭಾರತದೊಂದಿಗೆ ಸಂಬಂಧ ಕೈಬಿಟ್ಟಿದ್ದಾರೆ. ಭಾರತದ ಜತೆಗೆ ಅಮೆರಿಕದ ಸಂಬಂಧ ಹಾಳಾಗುವುದು ಮುಂದೆ ಅಮೆರಿಕಗೆ ಆಗುವ ದೊಡ್ಡ ಹಾನಿ’ ಎಂದು ಕರೆದಿದ್ದಾರೆ.