ಮೇಲ್ಮನೆ ಪ್ರವೇಶಕ್ಕೆ ಮೇಲಾಟ: ಅವಿಭಜಿತ ಜಿಲ್ಲೆಯಿಂದಲೂ ಹಲವಾರು ಮಂದಿ ಲಾಬಿ..!

| Published : May 14 2024, 01:08 AM IST / Updated: May 14 2024, 04:32 AM IST

ಮೇಲ್ಮನೆ ಪ್ರವೇಶಕ್ಕೆ ಮೇಲಾಟ: ಅವಿಭಜಿತ ಜಿಲ್ಲೆಯಿಂದಲೂ ಹಲವಾರು ಮಂದಿ ಲಾಬಿ..!
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಶಾಸಕರ ಸಂಖ್ಯೆಯ ಆಧಾರದ ಮೇಲೆ ಕಾಂಗ್ರೆಸ್ಗೆ ಹೆಚ್ಚು ಸ್ಥಾನಗಳು ಸಿಗುತ್ತವೆ. ಇದಲ್ಲದೇ, ನಾಮ ನಿರ್ದೇಶಿತ ಸದಸ್ಯರ ಕೆಲ ಸ್ಥಾನಗಳು ಕೂಡ ತೆರವಾಗುತ್ತಿರುವುದರಿಂದ ಆಡಳಿತರೂಢ ಕಾಂಗ್ರೆಸ್‌ನಲ್ಲಿ ಲಾಬಿ ಜೋರಾಗಿದೆ.

ಅಂಶಿ ಪ್ರಸನ್ನಕುಮಾರ್

 ಮೈಸೂರು :  ಲೋಕಸಭಾ ಚುನಾವಣೆ, ಪದವೀಧರ ಹಾಗೂ ಶಿಕ್ಷಕರ ಚುನಾವಣೆಯ ಫಲಿತಾಂಶದ ಬೆನ್ನಲ್ಲೆ ವಿಧಾನ ಪರಿಷತ್ತಿನಲ್ಲಿ ಖಾಲಿಯಾಗುವ ಸ್ಥಾನಗಳಿಗೆ ಈಗಾಗಲೇ ಲಾಬಿ ಆರಂಭವಾಗಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ಶಾಸಕರ ಸಂಖ್ಯೆಯ ಆಧಾರದ ಮೇಲೆ ಕಾಂಗ್ರೆಸ್ಗೆ ಹೆಚ್ಚು ಸ್ಥಾನಗಳು ಸಿಗುತ್ತವೆ. ಇದಲ್ಲದೇ, ನಾಮ ನಿರ್ದೇಶಿತ ಸದಸ್ಯರ ಕೆಲ ಸ್ಥಾನಗಳು ಕೂಡ ತೆರವಾಗುತ್ತಿರುವುದರಿಂದ ಆಡಳಿತರೂಢ ಕಾಂಗ್ರೆಸ್‌ನಲ್ಲಿ ಲಾಬಿ ಜೋರಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರ ವರುಣವನ್ನು ತಂದೆಯವರಿಗೆ ಬಿಟ್ಟುಕೊಟ್ಟ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಮುಂಚೂಣಿಯಲ್ಲಿದೆ. ಇದಲ್ಲದೇ ಕಳೆದ ಒಂಭತ್ತು ವರ್ಷಗಳಿಂದ ಮೈಸೂರು ಜಿಲ್ಲಾಧ್ಯಕ್ಷರಾಗಿ ಪಕ್ಷವನ್ನು ಸಂಘಟಿಸುತ್ತಿರುವ ಬಿ.ಜೆ. ವಿಜಯಕುಮಾರ್ ಅವರು ಪಿರಿಯಾಪಟ್ಟಣ ಅಥವಾ ಚಾಮುಂಡೇಶ್ವರಿಯಿಂದ ವಿಧಾನಸಭೆ, ಮೈಸೂರು- ಕೊಡಗು ಕ್ಷೇತ್ರದಿಂದ ಲೋಕಸಭೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಲೋಕಸಭೆಗೆ ಅವರ ಹೆಸರು ಪ್ರಬಲವಾಗಿತ್ತು. ಆದರೂ ಟಿಕೆಟ್ ಎಂ. ಲಕ್ಷ್ಮಣ ಪಾಲಾಯಿತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದೆ ಉತ್ತಮ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ದಕ್ಷಿಣ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸತತ ಮೂರು ಬಾರಿ ಸೋತ ನಂತರ ಚುನಾವಣಾ ರಾಜಕಾರಣದಿಂದ ದೂರ ಇರುವ ಮೈಲ್ಯಾಕ್ ಮಾಜಿ ಅಧ್ಯಕ್ಷ, ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಕೂಡ ಸೂಕ್ಷ್ಮಾತಿಸೂಕ್ಷ್ಮ ಹಿಂದುಳಿದ ಜಾತಿ ಹಾಗೂ ಶೈಕ್ಷಣಿಕ ಕೋಟಾದಡಿ ತಮಗೆ ಅವಕಾಶ ನೀಡುವಂತೆ ವರಿಷ್ಠರ ಮುಂದೆ ಮನವಿ ಮಾಡಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿರುವ ಹುಣಸೂರಿನ ಮಾಜಿ ಶಾಸಕ ಎಚ್.ಪಿ. ಮಂಜುನಾಥ್, ಹನೂರಿನ ಮಾಜಿ ಶಾಸಕ ಆರ್. ನರೇಂದ್ರ ಅವರು ಕೂಡ ತಮಗೆ ಅವಕಾಶ ಸಿಗಬಹುದು ಎಂದು ಕಾದಿದ್ದಾರೆ. ಲೋಕಸಭಾ ಪ್ರಚಾರ ಕಾಲಕ್ಕೆ ಹುಣಸೂರಿನಲ್ಲಿ ಎಚ್.ಪಿ. ಮಂಜುನಾಥ್ ಪರ ಕಾರ್ಯಕರ್ತರು ಸಿಎಂ ಸಿದ್ದರಾಮಯ್ಯ ಅವರಿಗೆ ಬಹಿರಂಗವಾಗಿ ಮನವಿ ಮಾಡಿಕೊಂಡಿದ್ದಾರೆ.

ಕೆ.ಆರ್. ನಗರ ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಅವರ ಪುತ್ರಿ ಐಶ್ವರ್ಯಾ ಮಹದೇವ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಿಎಂ ಡಿ. ದೇವರಾಜ ಅರಸು ಅವರ ಮೊಮ್ಮಗ ಸೂರಜ್ ಹೆಗ್ಡೆ, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜ್, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷರಾದ ಮಾಜಿ ಮೇಯರ್ ನಾರಾಯಣ ಕೂಡ ಮೇಲ್ಮನೆಗೆ ಹೋಗಲು ಬಯಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳೊಂದಿಗೆ ಚರ್ಚಿಸಿದ ನಂತರ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಐಎಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ವರಿಷ್ಠರಾದ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚಿಸಿ, ಪಟ್ಟಿಯನ್ನು ಆಖೈರುಗೊಳಿಸಲಿದ್ದಾರೆ.

ಕಾಂಗ್ರೆಸ್ಗೆ ಸಿಗುವ ಸ್ಥಾನಗಳನ್ನು ಜಾತಿ, ಲಿಂಗ, ಪ್ರಾದೇಶಿಕತೆ ಆಧಾರದ ಮೇಲೆ ಹಂಚಬೇಕಾಗಿರುವುದರಿಂದ ಅವಿಭಜಿತ ಮೈಸೂರು ಜಿಲ್ಲೆಯಿಂದ ಒಬ್ಬರಿಗೆ ಅವಕಾಶ ಆಗಬಹುದು ಎಂದು ಹೇಳಲಾಗುತ್ತಿದೆ.