ಸಾರಾಂಶ
ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್ತು
ವಾಲ್ಮೀಕಿ ಅಭಿವೃದ್ದಿ ನಿಗಮದ ಹಗರಣದ ಸದ್ದು ಮಂಗಳವಾರವೂ ವಿಧಾನ ಪರಿಷತ್‌ನಲ್ಲಿ ಪ್ರತಿಧ್ವನಿಸಿತು. ಮುಖ್ಯಮಂತ್ರಿಯವರ ತಲೆದಂಡಕ್ಕೆ ಆಗ್ರಹ ಮತ್ತು ನೆಕ್ಕುಂಟಿ ನಾಗರಾಜ್ ಫೋಟೋ ಪೋಸ್ಟರ್ ವಿಚಾರ ಕಾಂಗ್ರೆಸ್, ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿ ಕಲಾಪ ಮುಂದೂಡಿಕೆಯಾಯಿತು.ಬಿಜೆಪಿ ಸದಸ್ಯ ಸಿ.ಟಿ.ರವಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಕುರಿತು ಮಾತನಾಡುವ ಸಂದರ್ಭದಲ್ಲಿ ಪ್ರಕರಣದ ಆರೋಪಿ ನೆಕ್ಕುಂಟಿ ನಾಗರಾಜ್ ಕಾಂಗ್ರೆಸ್ ಬೆಂಬಲಿಗನಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮತ್ತಿತರ ಸಚಿವರ ಜೊತೆ ಫೋಟೋ ತೆಗೆಸಿಕೊಂಡಿದ್ದಾನೆ. ಹಣಕಾಸು ಇಲಾಖೆಯ ಗಮನಕ್ಕೆ ಬಂದೇ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ. ಹೀಗಾಗಿ ಮುಖ್ಯಮಂತ್ರಿಯವರ ತಲೆದಂಡ ಆಗಬೇಕು ಎಂದು ಸಭಾಪತಿಯವರಿಗೆ ನೆಕ್ಕುಂಟಿ ನಾಗರಾಜ್ ಫೋಟೋ ತೋರಿಸಿದರು.
ಇದೇ ವೇಳೆ ಕಾಂಗ್ರೆಸ್ ಸದಸ್ಯರು, ನೆಕ್ಕುಂಟಿ ನಾಗರಾಜ್ ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಇನ್ನಿತರ ಬಿಜೆಪಿ ನಾಯಕರ ಜೊತೆ ತೆಗೆಸಿಕೊಂಡಿರುವ ಫೋಟೋ ಸಹಿತ ದೊಡ್ಡ ಪೋಸ್ಟರ್‌ಗಳನ್ನು ಪ್ರದರ್ಶಿಸಿದರು. ಭ್ರಷ್ಟರ ಜೊತೆಗೆ ನಿಂತಿರುವ ಬಿಜೆಪಿಗೆ ಶೇಮ್, ಶೇಮ್ ಎಂದು ಘೋಷಣೆ ಕೂಗಿದರು. ಕಾಂಗ್ರೆಸ್ ಸದಸ್ಯ ನಸೀರ್ ಅಹ್ಮದ್, ಲೂಟಿ ರವಿ, ಲೂಟಿ ರವಿ ಎಂದು ಅನೇಕ ಬಾರಿ ಘೋಷಣೆ ಕೂಗಿದರು.ಇದರಿಂದ ಕೆರಳಿದ ಸಿ.ಟಿ.ರವಿ ಭ್ರಷ್ಟರ ರಕ್ಷಣೆ ಮಾಡುತ್ತಿರುವ ನಿಮಗೆ ಮರ್ಯಾದೆ ಇದೆಯೇ? ಭ್ರಷ್ಟರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ರಾಜಯೋಗವಿದೆ ಎಂದು ಕಿಡಿಕಾರಿದರು. ಬಳಿಕ ಬಿಜೆಪಿಯ ಉಳಿದ ಸದಸ್ಯರು ಕೂಡ ನೆಕ್ಕುಂಟಿ ನಾಗರಾಜ್ ಫೋಟೋಗಳನ್ನು ಪ್ರದರ್ಶಿಸಿದರು. ವಾಗ್ವಾದ ಜೋರಾಗಿ ಗಲಾಟೆ ಮುಂದುವರೆದ ಹಿನ್ನೆಲೆಯಲ್ಲಿ ಸದನವನ್ನು ಗುರುವಾರಕ್ಕೆ ಮುಂದೂಡಿದರು.
ಇದಕ್ಕು ಮುನ್ನ ಸಿ.ಟಿ.ರವಿ ಮಾತನಾಡಿ, ರಾಜ್ಯದಲ್ಲಿ ನಡೆದ ಹಗರಣಗಳಿಗೆ ಹೋಲಿಸಿದರೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವುದು ಹಗಲು ದರೋಡೆ. ಇದು ಬ್ರಹ್ಮಾಂಡ ಭ್ರಷ್ಟಾಚಾರ. ಲೂಟಿ ಮಾಡಿರುವವರಿಂದ ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂಬುದನ್ನು ಒಪ್ಪಿಕೊಳ್ಳಬೇಕು. ಹಣಕಾಸು ಇಲಾಖೆ ನಿರ್ವಹಣೆ ಮಾಡುವ ಮುಖ್ಯಮಂತ್ರಿಯವರ ಮೂಗಿನಡಿಯಲ್ಲೇ ಈ ಹಗರಣ ನಡೆದಿದೆ. ಹಣಕಾಸು ಇಲಾಖೆ ಗಮನಕ್ಕೆ ಇದು ಬಂದೇ ಇಲ್ಲವೇ? ಎಂದು ಪ್ರಶ್ನಿಸಿದರು.ಪರಿಶಿಷ್ಟ ವರ್ಗದ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಬೇಕಿದ್ದ 94 ಕೋಟಿ ಹಣ ಬೇನಾಮಿ ಖಾತೆಗಳಿಗೆ ವರ್ಗಾವಣೆಯಾಗಿದೆ. ಇದೊಂದು ಪೂರ್ವಯೋಜಿತ ದರೋಡೆ. ಒಂದು ವೇಳೆ ನಿಗಮದ ಲೆಕ್ಕಾಧಿಕಾರಿಯಾಗಿದ್ದ ಚಂದ್ರಶೇಖರನ್ ಆತ್ಮಹತ್ಯೆಗೆ ಮಾಡಿಕೊಳ್ಳದಿದ್ದರೆ ಹಗರಣ ಬೆಳಕಿಗೆ ಬರುತ್ತಿರಲಿಲ್ಲ. ಅವರ ಸಾವಿಗೂ ಮುನ್ನ ಬರೆದಿದ್ದ ಡೆತ್ ನೋಟ್ ವಿವರಗಳನ್ನ ಉಲ್ಲೇಖಿಸಲಾಗಿದೆ ಎಂದು ಹೇಳಿದರು.
ಪೊಲೀಸರು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯ ಮನೆಗೆ ಹೋಗಿ ಅವರ ಪತ್ನಿಗೆ ಹಗರಣ ಆರೋಪಿಗಳ ಪರವಾಗಿ ಜಾಮೀನು ನೀಡಲು ತಮ್ಮ ತಕರಾರು ಇಲ್ಲ ಎಂದು ಸಹಿ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಆರೋಪಿಗಳ ಪರವಾಗಿ ಕೆಲಸ ಮಾಡುತ್ತಿರುವ ಪೊಲೀಸರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.