ಸಾರಾಂಶ
ಬೆಂಗಳೂರು : ತಮ್ಮ ವಿರುದ್ಧ ಸ್ವಪಕ್ಷೀಯರಿಂದ ಬಂಡಾಯದ ಕಹಳೆ ಮೊಳಗಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಂಘ ಪರಿವಾರದ ಮುಖಂಡರು ಹಾಗೂ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಬುಧವಾರ ಬೆಳಗ್ಗೆ ಚಾಮರಾಜಪೇಟೆಯಲ್ಲಿನ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕೇಂದ್ರ ಕಚೇರಿಗೆ ತೆರಳಿದ ವಿಜಯೇಂದ್ರ ಅವರು ಮುಖಂಡರೊಂದಿಗೆ ಪಕ್ಷದ ಸಂಘಟನೆ ಜತೆಗೆ ಇತ್ತೀಚಿನ ವಿದ್ಯಮಾನಗಳ ಬಗ್ಗೆಯೂ ಚರ್ಚೆ ನಡೆಸಿದರು. ಬಳಿಕ ಸಂಜೆ ಬಿಜೆಪಿ ಕಚೇರಿಯಲ್ಲಿ ಸಂತೋಷ್ ಅವರನ್ನು ಭೇಟಿ ಮಾಡಿ ಸಮಾಲೋಚಿಸಿದರು ಎಂದು ಮೂಲಗಳು ತಿಳಿಸಿವೆ.
ಹರ್ ಘರ್ ತಿರಂಗಾ ಅಭಿಯಾನ ಸೇರಿದಂತೆ ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಮುಂದೆ ಹಮ್ಮಿಕೊಳ್ಳಲಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ಮುಡಾ ಹಗರಣ ಸೇರಿದಂತೆ ವಿವಿಧ ಹಗರಣಗಳನ್ನು ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಯಶಸ್ಸಿನ ಬಗ್ಗೆಯೂ ಪ್ರಸ್ತಾಪಿಸಿದರು. ಇದಕ್ಕೆ ಸಂಘ ಪರಿವಾರದ ಮುಖಂಡರು ಹಾಗೂ ಸಂತೋಷ್ ಅವರು ಹರ್ಷ ವ್ಯಕ್ತಪಡಿಸಿದರು ಎನ್ನಲಾಗಿದೆ.
ಇದೇ ವೇಳೆ ವಿಜಯೇಂದ್ರ ಅವರು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಬಿಜೆಪಿ ಮುಖಂಡರು ಪ್ರತ್ಯೇಕ ಸಭೆ ನಡೆಸಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬರುವ ಸೆ.17ರಂದು ಕೂಡಲಸಂಗಮದಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸುವ ಬಗ್ಗೆ ನಿರ್ಧಾರ ಕೈಗೊಂಡಿದ್ದನ್ನು ಗಮನಕ್ಕೆ ತಂದರು. ಆದರೆ, ಈ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಿಲ್ಲ. ಕೇವಲ ಗಮನಕ್ಕೆ ತಂದಿದ್ದಾರೆ. ಆದರೆ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಸ್ವಪಕ್ಷೀಯ ಭಿನ್ನರ ನಡೆಯನ್ನು ಅವಲೋಕಿಸುತ್ತಿರುವ ವಿಜಯೇಂದ್ರ ಅವರು ಮುಂದಿನ ದಿನಗಳಲ್ಲಿ ಈ ಬಗ್ಗೆ ಪಕ್ಷದ ವರಿಷ್ಠರ ಗಮನಕ್ಕೆ ತಂದು ಕ್ರಮಕ್ಕೆ ಒತ್ತಾಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಏನೇನು ಮಾತುಕತೆ?
- ಪಕ್ಷದ ಸಂಘಟನೆ, ಇತ್ತೀಚಿನ ವಿದ್ಯಮಾನಗಳ ಬಗ್ಗೆ ಚರ್ಚೆ
- ಮೈಸೂರಿಗೆ ನಡೆಸಿದ ಪಾದಯಾತ್ರೆ ಯಶಸ್ಸಿನ ಬಗ್ಗೆ ಮಾಹಿತಿ
- ಬೆಳಗಾವಿಯಲ್ಲಿ ಬಿಜೆಪಿ ಮುಖಂಡರು ನಡೆಸಿದ ಪ್ರತ್ಯೇಕ ಸಭೆಯ ಬಗ್ಗೆಯೂ ತಿಳಿಸಿದ ವಿಜಯೇಂದ್ರ
- ಆದರೆ ಈ ಬಗ್ಗೆ ಗಂಭೀರ ಚರ್ಚೆ ಇಲ್ಲ, ಪ್ರತಿಕ್ರಿಯೆಯೂ ಇಲ್ಲ: ಮೂಲಗಳು
- ಬಂಡಾಯ ತೀವ್ರಗೊಂಡರೆ ಪಕ್ಷದ ವರಿಷ್ಠರ ಬಳಿ ಕ್ರಮಕ್ಕೆ ಒತ್ತಾಯ?