ಕೇಂದ್ರ ಕ್ಷೇತ್ರದಲ್ಲಿ ಮತದಾರರ ಉತ್ಸಾಹ; ಮಧ್ಯ ವಯಸ್ಸಿನವರು, ಹಿರಿಯರಿಗೆ ಆಸಕ್ತಿ, ಯುವ ಜನತೆಗೆ ನಿರಾಸಕ್ತಿ

| Published : Apr 27 2024, 02:02 AM IST / Updated: Apr 27 2024, 04:24 AM IST

ಕೇಂದ್ರ ಕ್ಷೇತ್ರದಲ್ಲಿ ಮತದಾರರ ಉತ್ಸಾಹ; ಮಧ್ಯ ವಯಸ್ಸಿನವರು, ಹಿರಿಯರಿಗೆ ಆಸಕ್ತಿ, ಯುವ ಜನತೆಗೆ ನಿರಾಸಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಯುವ ಮತದಾರರ ನಿರಾಸಕ್ತಿಯ ನಡುವೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಗರಿಕರು ಉತ್ಸಾಹದಿಂದ ಮತ ಚಲಾಯಿಸಿದರು.

 ಬೆಂಗಳೂರು : ಯುವ ಮತದಾರರ ನಿರಾಸಕ್ತಿಯ ನಡುವೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾಗರಿಕರು ಉತ್ಸಾಹದಿಂದ ಮತ ಚಲಾಯಿಸಿದರು.

ಹಲವು ಮತಗಟ್ಟೆಗಳಲ್ಲಿ ಉದ್ದನೆಯ ಸಾಲುಗಳು ಕಂಡು ಬಂದವು. ಮತಗಟ್ಟೆಗಳಲ್ಲಿ ಮಧ್ಯ ವಯಸ್ಸಿನವರು ಮತ್ತು ಹಿರಿಯ ನಾಗರಿಕರು ಉತ್ತಮ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿದರು. ಎಂದಿನಂತೆ ಯುವ ಮತದಾರರ ಸಂಖ್ಯೆ ಮತಗಟ್ಟೆಗಳಲ್ಲಿ ಕಡಿಮೆ ಇತ್ತು.

15 ಬೂತ್‌ಗಳಿದ್ದ ಸಿ.ವಿ.ರಾಮನ್‌ನಗರದ ಕೇಂದ್ರಿಯ ವಿದ್ಯಾಲಯ ಮತಗಟ್ಟೆಯಲ್ಲಿ 81 ವರ್ಷದ ನಿವೃತ್ತ ಎಂಜಿನಿಯರ್‌ ಶಿವರಾಮಕೃಷ್ಣ ಶಾಸ್ತ್ರೀ ಗಾಲಿ ಕುರ್ಚಿಯಲ್ಲಿ ಬಂದು ಮತ ಚಲಾಯಿಸಿದರು. ಮನೆಯಿಂದಲೇ ಮತದಾನಕ್ಕೆ ಅವಕಾಶವಿದ್ದರೂ ಮತಗಟ್ಟೆ ಆಯ್ಕೆ ಮಾಡಿಕೊಂಡ ಅವರು, ನನಗೆ ಮನೆಗಿಂತ ಮತಗಟ್ಟೆಗೆ ಬಂದು ಮತದಾನ ಮಾಡುವುದು ಖುಷಿ ನೀಡುತ್ತದೆ. ಕಳೆದ 20 ವರ್ಷಗಳಿಂದ ತಪ್ಪದೇ ಮತದಾನ ಮಾಡುತ್ತಿದ್ದೇನೆ ಎಂದು ಹೇಳಿದರು.

ಕೊನೇನ ಅಗ್ರಹಾರದ ಸರ್ ಎಂ.ವಿಶ್ವೇಶ್ವರಯ್ಯ ಪ್ರೌಢಶಾಲೆ ಮತಗಟ್ಟೆಯಲ್ಲಿ ಮೊದಲ ಬಾರಿ ಮತದಾನ ಮಾಡಿದ ಶ್ರುತಿ ಪೈ, ಮತದಾನ ವ್ಯವಸ್ಥೆ ಅತ್ಯಂತ ಸರಳವಾಗಿತ್ತು. ಮೊದಲ ಬಾರಿ ಮತದಾನ ಮಾಡಿ ಖುಷಿಯಾಯಿತು. ದೇಶದ ಭವಿಷ್ಯ ರೂಪಿಸುವಲ್ಲಿ ನಾನೂ ಪಾಲುದಾರರಾಗುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಸಂಸತ ವ್ಯಕ್ತಪಡಿಸಿದರು.

ಮಹಿಳಾ ಅಧಿಕಾರಿಗಳೇ ಸಂಪೂರ್ಣವಾಗಿ ನಿರ್ವಹಿಸಿರುವ ‘ಸಖಿ ಬೂತ್’ ಮತ್ತು ‘ಯುವ ಅಧಿಕಾರಿಗಳು’ ನಿರ್ವಹಿಸುವ ಯುವ ಬೂತ್‌ಗಳನ್ನು ಅನೇಕ ಕಡೆಗಳಲ್ಲಿ ಸ್ಥಾಪಿಸಲಾಗಿತ್ತು.

ಬಿರು ಬಿಸಿಲಲ್ಲಿ ಸಾಲು, ಕೆಲವೆಡೆ ಟೆಂಟ್ ವ್ಯವಸ್ಥೆ

ಹರಳೂರಿನ ಬೂತ್‌ನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಮತದಾರರಿಗೆ ಬಿಸಿಲಿನ ಬೇಗೆಯಿಂದ ತಪ್ಪಿಸಲು ಟೆಂಟ್ ವ್ಯವಸ್ಥೆ ಮಾಡಲಾಗಿತ್ತು. ಮತ್ತೊಂದೆಡೆ ನಾಗವಾರಪಾಳ್ಯದ ಮತಗಟ್ಟೆಯಲ್ಲಿ ಬಿರು ಬಿಸಿಲಿನಲ್ಲಿ ಜನರು ಉದ್ದನೆ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಅಂಗವಿಕಲರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.

ಕೈ ಕೊಟ್ಟ ಯುವ ಜನತೆ!

ಮತದಾನ ಪ್ರಕ್ರಿಯೆಯಲ್ಲಿ ಯುವಜನತೆ ಈ ಬಾರಿಯು ಉತ್ಸಾಹ ತೋರದೆ ಇರುವುದು ಕೇಂದ್ರ ಲೋಕಸಭಾ ಕ್ಷೇತ್ರದ ವಿವಿಧೆಡೆ ಕಂಡು ಬಂತು. ಸಿ.ವಿ. ರಾಮನ್‌ನಗರ, ಶಿವಾಜಿನಗರ, ಶಾಂತಿನಗರ ಕ್ಷೇತ್ರದ ಅನೇಕ ಮತಗಟ್ಟೆಗಳಲ್ಲಿ ಬೆಳಗಿನ ಅವಧಿಯಲ್ಲಿ ಯುವ ಮತದಾರರ ಸಂಖ್ಯೆ ಕಡಿಮೆ ಇತ್ತು. ಮಧ್ಯ ವಯಸ್ಸಿನವರು ಮತ್ತು ಹಿರಿಯ ಮತದಾರರು ಸಂಖ್ಯೆ ಉತ್ತಮವಾಗಿತ್ತು.