ಸಾರಾಂಶ
ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಏ.13ರಿಂದ 18ರವರೆಗೆ ಮನೆಯಿಂದ ಅಂಚೆ ಮತದಾನ ನಡೆಯಲಿದ್ದು, 6,372 ಮಂದಿ ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರು ಮನೆಯಿಂದ ಮತದಾನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು: ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳಿಗೆ ಏ.13ರಿಂದ 18ರವರೆಗೆ ಮನೆಯಿಂದ ಅಂಚೆ ಮತದಾನ ನಡೆಯಲಿದ್ದು, 6,372 ಮಂದಿ ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರು ಮನೆಯಿಂದ ಮತದಾನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಮತದಾರರ ಪಟ್ಟಿಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಏ.13ರಿಂದ ಏ.18ರವರೆಗೆ ಒಟ್ಟು ಆರು ದಿನ ಮನೆಯಿಂದ ಅಂಚೆ ಮತದಾನ ಕೈಗೊಳ್ಳಲಾಗುವುದು. ಅಧಿಕಾರಿಗಳ ತಂಡ ಅರ್ಜಿ ಸಲ್ಲಿಕೆ ಮಾಡಿದ ಪ್ರತಿ ಮತದಾರರ ಮನೆಗೆ ತೆರಳಿ ಮತದಾರರಿಂದ ಅಂಚೆ ಮತದಾನ ಪಡೆಯಲಿದ್ದಾರೆ. ಯಾವ ದಿನ ಅಧಿಕಾರಿಗಳ ತಂಡ ಮನೆಗೆ ಭೇಟಿ ನೀಡಲಿದೆ ಎಂಬುದರ ಕುರಿತು ಮೊದಲೇ ಮತದಾರರಿಗೆ ಮಾಹಿತಿ ಒದಗಿಸಲಾಗಿದೆ.
ನಗರದಲ್ಲಿ ಒಟ್ಟು 95,128 ಹಿರಿಯ ನಾಗರಿಕರು ಹಾಗೂ 22,222 ಅಂಗವಿಕಲರು ಸೇರಿದಂತೆ ಒಟ್ಟು 1,17,350 ಮತದಾರರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅರ್ಹತೆ ಹೊಂದಿದ್ದಾರೆ. ಈ ಪೈಕಿ ಕೇವಲ 6,128 ಹಿರಿಯ ನಾಗರಿಕರು, 191 ಅಂಗವಿಕಲರು ಸೇರಿದಂತೆ ಒಟ್ಟು 6,372 ಮಂದಿ 12.ಡಿ ಅರ್ಜಿ ಸಲ್ಲಿಕೆ ಮಾಡಿ ಮನೆಯಿಂದ ಅಂಚೆ ಮತದಾನ ಮಾಡುವುದಾಗಿ ತಿಳಿಸಿದ್ದಾರೆ.
ಮನೆಯಿಂದ ಅಂಚೆ ಮತದಾನ ಮಾಡುವುದಕ್ಕೆ 12ಡಿ ಅರ್ಜಿ ಸಲ್ಲಿಕೆ ಮಾಡಿದ ಮತದಾರರು ನಿಗದಿತ ದಿನಾಂಕದಲ್ಲಿ ಮನೆಯಿಂದಲೇ ಅಂಚೆ ಮತದಾನ ಮಾಡಬೇಕು. ಒಂದು ವೇಳೆ ಮನೆಯಿಂದ ಅಂಚೆ ಮತದಾನ ಸಾಧ್ಯವಾಗಿಲ್ಲ ಎಂದು ಸಾರ್ವತ್ರಿಕ ಮತದಾನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವುದಕ್ಕೆ ಅವಕಾಶ ಇರುವುದಿಲ್ಲ.