ನಮಗೆ ನಿರೀಕ್ಷೆಯಷ್ಟು ಸ್ಥಾನ ಬಂದಿಲ್ಲ: ಸಿದ್ದು

| Published : Jun 05 2024, 08:36 AM IST

Siddaramaiah
ನಮಗೆ ನಿರೀಕ್ಷೆಯಷ್ಟು ಸ್ಥಾನ ಬಂದಿಲ್ಲ: ಸಿದ್ದು
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ 15ರಿಂದ 20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು. ಆದರೆ, ಒಂದು ಸ್ಥಾನದಿಂದ 9 ಸ್ಥಾನ ಗೆಲ್ಲುವ ಮೂಲಕ ಪಕ್ಷ ಉತ್ತಮ ಸಾಧನೆಯನ್ನೇ ಮಾಡಿದೆ. ಅಲ್ಲದೆ, 2019ಕ್ಕಿಂತ ಈ ಬಾರಿ ಶೇ.14ರಷ್ಟು ಮತ ಗಳಿಕೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು :  ರಾಜ್ಯದಲ್ಲಿ 15ರಿಂದ 20 ಸ್ಥಾನಗಳಲ್ಲಿ ಕಾಂಗ್ರೆಸ್‌ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು. ಆದರೆ, ಒಂದು ಸ್ಥಾನದಿಂದ 9 ಸ್ಥಾನ ಗೆಲ್ಲುವ ಮೂಲಕ ಪಕ್ಷ ಉತ್ತಮ ಸಾಧನೆಯನ್ನೇ ಮಾಡಿದೆ. ಅಲ್ಲದೆ, 2019ಕ್ಕಿಂತ ಈ ಬಾರಿ ಶೇ.14ರಷ್ಟು ಮತ ಗಳಿಕೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಚುನಾವಣಾ ಫಲಿತಾಂಶದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿಲ್ಲ. 20 ಸ್ಥಾನಗಳವರೆಗೆ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ನಿರೀಕ್ಷೆ ಹೊಂದಿದ್ದೆವು. ಆದರೆ, 9 ಸ್ಥಾನಗಳಲ್ಲಿ ಗೆಲುವು ಸಾಧಿಸಲಷ್ಟೇ ಸಾಧ್ಯವಾಗಿದೆ. ಆದರೂ 2019ರಲ್ಲಿ ಒಂದು ಸ್ಥಾನ ಗೆದ್ದಿದ್ದೆವು, ಈ ಬಾರಿ 8 ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಉತ್ತಮ ಸಾಧನೆ ಮಾಡಿದ್ದೇವೆ. ಅಲ್ಲದೆ, ಮತ ಗಳಿಕೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ಬಾರಿ ಕಾಂಗ್ರೆಸ್‌ ಶೇ.31.88ರಷ್ಟು ಮತಗಳಿಸಿತ್ತು. ಈ ಬಾರಿ ಶೇ. 45.34ರಷ್ಟು ಮತಗಳಿಕೆಯಾಗಿದೆ. ಅದೇ ಬಿಜೆಪಿ ಕಳೆದ ಬಾರಿ ಶೇ.51.38ರಷ್ಟು ಮತ ಗಳಿಸಿತ್ತು, ಈ ಬಾರಿ ಶೇ.46.04ಕ್ಕೆ ಕುಸಿದಿದೆ. ಜೆಡಿಎಸ್‌ ಜತೆಗಿನ ಹೊಂದಾಣಿಕೆ ನಡುವೆಯೂ ಬಿಜೆಪಿ ಮತಗಳಿಕೆ ಶೇ.5ರಷ್ಟು ಕುಸಿತ ಕಂಡಿದೆ ಎಂದರು.

ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಉತ್ತಮ ಸಾಧನೆ ಮಾಡಿದೆ. ದೇಶದಲ್ಲಿ ಕಾಂಗ್ರೆಸ್‌ ಮತಗಳಿಕೆ ಪ್ರಮಾಣ ಶೇ.3ರಷ್ಟು ಹೆಚ್ಚಾಗಿದೆ. ಕೇಂದ್ರದಲ್ಲಿ ಬಿಜೆಪಿ ಎರಡು ಬಾರಿ ಅಧಿಕಾರದಲ್ಲಿದ್ದರೂ ಬಹುಮತ ಪಡೆಯಲು ಸಾಧ್ಯವಾಗಿಲ್ಲ. 2014 ಮತ್ತು 2019ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದು ದೇಶದಲ್ಲಿ ನರೇಂದ್ರ ಮೋದಿ ಅವರ ಅಲೆ ಇಲ್ಲ ಎಂಬುದನ್ನು ಸಾಬೀತು ಮಾಡಿದೆ. ಕೇಂದ್ರದಲ್ಲಿ ಇನ್ನೂ ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ, ಯಾರು ಸರ್ಕಾರ ರಚನೆ ಮಾಡುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.

ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಧರ್ಮ, ದೇವರ ಹೆಸರಿನಲ್ಲಿ ಮತ ಕೇಳಿದರು. ನೇರವಾಗಿ ಇತರ ಧರ್ಮೀಯರ ವಿರುದ್ಧ ಭಾಷಣ ಮಾಡಿದರು. ಮೀಸಲಾತಿ ವಿಚಾರವಾಗಿ ಸುಳ್ಳು ಹೇಳಿದರು. ರಾಮ, ರಾಮ ಮಂದಿರದ ಹೆಸರಿನಲ್ಲಿ ಚುನಾವಣೆ ನಡೆಸಿದ ಬಿಜೆಪಿ ಅಯೋಧ್ಯೆಯಲ್ಲೇ ಸೋತಿದೆ. ಈ ಎಲ್ಲ ಕಾರಣದಿಂದಾಗಿ ಎನ್‌ಡಿಎ ಮೈತ್ರಿಕೂಟ ಕಳೆದ ಬಾರಿಗಿಂತ 64 ಸ್ಥಾನ ಕಳೆದುಕೊಂಡಿದೆ. ಇದು ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಸೋಲು. ಈ ಸೋಲಿನಿಂದಾಗಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗುವ ನೈತಿಕ ಹಕ್ಕಿಲ್ಲ. ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿಗಳನ್ನು ಜೈಲಿಗೆ ಹಾಕಿದರು. ಇಡಿ, ಐಟಿ, ಸಿಬಿಐ ಹೆಸರಿನಲ್ಲಿ ಹೆದರಿಸಿದರು. ಆದರೂ, ದೇಶದ ಜನ ಬಿಜೆಪಿಯನ್ನು ಒಪ್ಪಲಿಲ್ಲ ಎಂದು ತಿಳಿಸಿದರು.

 ರಾಹುಲ್‌ ಗಾಂಧಿಯನ್ನು ದೇಶ ಒಪ್ಪಿದೆ: 

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಾಡಿದ ಎರಡು ಯಾತ್ರೆಗಳು ಫಲ ನೀಡಿವೆ. ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿಯವರನ್ನು ದೇಶದ ಜತೆಗೆ ಬಹಳ ದೊಡ್ಡಮಟ್ಟದಲ್ಲಿ ಒಪ್ಪಿಕೊಂಡಿದ್ದಾರೆ. ರಾಹುಲ್‌ ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲೂ ಭರ್ಜರಿ ಜಯಗಳಿಸಿದ್ದಾರೆ. ರಾಹುಲ್‌ ಗಾಂಧಿ ಸಂವಿಧಾನದ ಆಧಾರದಲ್ಲಿಯೇ ಚುನಾವಣಾ ಪ್ರಚಾರ ಮಾಡಿದರು. ದೇಶದ ಜನ ಸಂವಿಧಾನ, ಪ್ರಜಾಪ್ರಭುತ್ವದ ಉಳಿವಿಗಾಗಿ ರಾಹುಲ್‌ ಗಾಂಧಿ ಅವರ ಕೈ ಹಿಡಿದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

 ಗ್ಯಾರಂಟಿ ಪರಿಣಾಮದ ಬಗ್ಗೆ ವಿಶ್ಲೇಷಣೆ 

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಪರಿಣಾಮ ಏನು ಎಂಬ ಬಗ್ಗೆ ವಿಶ್ಲೇಷಣೆ ನಡೆಯಬೇಕಿದೆ. ಲೋಕಸಭಾ ಚುನಾವಣೆಯಲ್ಲಿ ಅದರ ಪರಿಣಾಮ, ಜನರಿಗೆ ಅದರಿಂದಾಗುತ್ತಿರುವ ಪ್ರಯೋಜನಗಳ ಬಗ್ಗೆಯೂ ವಿಶ್ಲೇಷಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.