ಬುದ್ದಿಜೀವಿಗಳು ಈಗೇಕೆ ಮೌನ: ಅನು ಆನಂದ್‌ ಪ್ರಶ್ನೆ

| Published : Aug 14 2024, 12:47 AM IST

ಸಾರಾಂಶ

ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಅಮಾನುಷ ದಾಳಿ, ಕೌರ್ಯ ನಿಯಂತ್ರಿಸುವಲ್ಲಿ ಅಲ್ಲಿನ ಸರ್ಕಾರ ಮುಂದಾಗಿ ಹಿಂದುಗಳ ರಕ್ಷಣೆ ಮಾಡಿ ಅವರು ನೆಮ್ಮದಿಯಿಂದ ಬಾಳುವಂತಹ ವಾತಾವರಣ ನಿರ್ಮಾಣ ಮಾಡಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಾಂಗ್ಲಾ ದೇಶದಲ್ಲಿನ ದೌರ್ಜನ್ಯಕ್ಕೆ ಒಳಗಾಗಿರುವ ಹಿಂದೂಗಳಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್, ಭಜರಂಗದಳ, ಹಿಂದೂ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಬಾಂಗ್ಲಾದಲ್ಲಿರುವ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಕ್ಕೆ ಕಡಿ ವಾಣ ಹಾಕಬೇಕು, ಹಿಂದೂಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿ ಘೋಷಣೆ ಕೂಗಿದರು. ನಂತರ ನಗರ ಮಂಡಲಾಧ್ಯಕ್ಷ ಅನು ಆನಂದ್ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ನೈತಿಕ ಬೆಂಬಲ ನೀಡಿ

ನಗರ ಮಂಡಲಾಧ್ಯಕ್ಷ ಅನು ಆನಂದ್ ಮಾತನಾಡಿ, ಮತಾಂಧರ ಕೈಗೆ ಬಾಂಗ್ಲಾ ಆಡಳಿತ ಸಿಗುತ್ತಿರುವುದು ಅಪಾಯಕಾರಿ ಸಂಗತಿ. ಅಲ್ಲಿನ ಹಿಂದೂಗಳ ಮೇಲೆ ಮುಸ್ಲಿಂ ಮೂಲಭೂತವಾದಿಗಳು ಅತ್ಯಾಚಾರ, ಅನಾಚಾರ ಮಾಡುತ್ತಿದ್ದಾರೆ. ಹಿಂದುಗಳ ಮೇಲೆ ಅಮಾನುಷ ದಾಳಿ, ಕೌರ್ಯ ನಿಯಂತ್ರಿ ಸುವಲ್ಲಿ ಅಲ್ಲಿನ ಸರ್ಕಾರ ಮುಂದಾಗಿ ಹಿಂದುಗಳ ರಕ್ಷಣೆ ಮಾಡಿ ಅವರು ನೆಮ್ಮದಿಯಿಂದ ಬಾಳುವಂತಹ ವಾತಾವರಣ ನಿರ್ಮಾಣ ಮಾಡಬೇಕು. ಬಾಂಗ್ಲಾದ ಹಿಂದೂಗಳ ರಕ್ಷಣೆಗೆ ಪ್ರಧಾನಿ ಮೋದಿ ಸರ್ಕಾರ ದಿಟ್ಟ ನಿಲುವು ತೆಗೆದುಕೊಳ್ಳುತ್ತದೆ. ದೇಶದ ಹಿಂದೂಗಳೆಲ್ಲಾ ಬಾಂಗ್ಲಾ ಹಿಂದೂಗಳಿಗೆ ನೈತಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಬಾಂಗ್ಲಾ ದೇಶದ ಚುನಾಯಿತ ಪ್ರಧಾನಿ ರಾಜೀನಾಮೆ ನೀಡಿ ದೇಶ ತೊರೆದ ನಂತರ ಅಲ್ಲಿ ಅರಾಜಕತೆ ಸೃಷ್ಟಿಯಾಗಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ. ತೀವ್ರಗಾಮಿ ಜಿಹಾದಿ ತಕ್ಕಿಗಳು ಹಿಂದು ಶಕ್ತಿಗಳು ಹಿಂದೂಗಳನ್ನು, ಹಿಂದೂ ಗಳ ಆಸ್ತಿಪಾಸ್ತಿ, ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ. ಹಿಂದೂಗಳ ಸುರಕ್ಷತೆಗಾಗಿ ಮತ್ತು ಅವರ ಮಾನವ ಹಕ್ಕುಗಳ ರಕ್ಷಿಸಲು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ನಕಲಿ ಬುದ್ದಿಜೀವಿಗಳು

ಗಾಜಾಪಟ್ಟಿಯ ಮುಸ್ಲಿಮರ ಪರ ಪಾರ್ಲಿಮೆಂಟಿನಲ್ಲಿ, ಬೀದಿಬೀದಿಯಲ್ಲಿ ಗಟ್ಟಿ ಧ್ವನಿ ಮಾಡಿದ್ದ ಬುದ್ದಿಜೀವಿ ಎನಿಸಿಕೊಂಡವರು ಈಗ ಎಲ್ಲಿ ಹೋದರು. ಬಾಂಗ್ಲಾದ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ, ಇವರು ವಿಕೃತ, ನಕಲಿ ಬುದ್ದಿಜೀವಿಗಳು ಎಂದು ವಾಗ್ದಾಳಿ ನಡೆಸಿದರು. ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ

ವಿಶ್ವ ಹಿಂದೂ ಪರಿಷತ್ ಸಂಚಾಲಕ ವೇಣುಗೋಪಾಲ್ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಘೋರ ದಾಳಿ ನಡೆಯುತ್ತಿದೆ. ಅಲ್ಲಿನ ಸರ್ಕಾರ ರಕ್ಷಣಾ ಕ್ರಮ ಕೈಗೊಳ್ಳದೆ ಕಡೆಗಣಿಸಿದೆ. ಈ ಭೀಕರ ಪರಿಸ್ಥಿತಿಯ ಲಾಭ ಪಡೆದುಕೊಂಡು ಗಡಿಯಾಚೆಯಿಂದ ಜಿಹಾದಿಗಳು ಒಳನುಸುಳಿವಿಕೆ ಪ್ರಯತ್ನ ತಡೆಯಲು ಗಡಿಗಳಲ್ಲಿ ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಡಿ.ವಿ.ರಾಮಲಿಂಗಪ್ಪ,ವಿಶ್ವ ಹಿಂದೂಪರಿಷತ್ ಕಾರ್ಯಾಧ್ಯಕ್ಷ ಡಾ.ಮಂಜುನಾಥ್,ಬಾಲು,ಅನಿಲ್, ವಿಕ್ರಮ್, ಬಾಹುಬಲಿ ವಿಶ್ವ ಹಿಂದು ಪರಿಷತ್, ಭಜರಂಗದಳ, ಹಿಂದೂ ಹಿತರಕ್ಷಣಾ ಸಮಿತಿ, ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಇದ್ದರು.