ಸಾರಾಂಶ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ನೀಡದೆ ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಲೇವಡಿ ಮಾಡಿರುವ ಅಮಿತ್ ಶಾ ಅವರು, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ ಖಾತೆ ತೆರೆಯುವುದಕ್ಕೇ ಬಿಡಬಾರದು ಎಂದು ಕರೆ ನೀಡಿದ್ದಾರೆ.
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ನೀಡದೆ ತಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಲೇವಡಿ ಮಾಡಿರುವ ಕೇಂದ್ರದ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ ಖಾತೆ ತೆರೆಯುವುದಕ್ಕೇ ಬಿಡಬಾರದು ಎಂದು ಕರೆ ನೀಡಿದ್ದಾರೆ.
ಮಂಗಳವಾರ ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬೆಂಗಳೂರಿಗೆ ಸಂಬಂಧಿಸಿದ ಐದು ಲೋಕಸಭಾ ಕ್ಷೇತ್ರಗಳ ಬಿಜೆಪಿಯ ಶಕ್ತಿಕೇಂದ್ರ ಪ್ರಮುಖರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಮುಖ್ಯಮಂತ್ರಿಗಳಿಗೆ ತಮ್ಮ ಕುರ್ಚಿ ಉಳಿಸಿಕೊಳ್ಳುವುದೇ ಕೆಲಸವಾಗಿದ್ದರೆ, ಇನ್ನೊಬ್ಬರಿಗೆ ಅವರ ಕುರ್ಚಿ ಎಳೆಯುವುದೇ ಕೆಲಸವಾಗಿದೆ. ಬಿಜೆಪಿ ಅಭಿವೃದ್ಧಿ ಕಾರ್ಯಗಳ ಕುರಿತು ಮತ್ತು ಕಾಂಗ್ರೆಸ್‌ನ ಅಭಿವೃದ್ಧಿ ಶೂನ್ಯತೆ-ಭ್ರಷ್ಟಾಚಾರ ಕುರಿತು ಕಾರ್ಯಕರ್ತರು ಮನೆ ಮನೆಗೆ ತಲುಪಿಸಿ ಮಾಹಿತಿ ಒದಗಿಸಬೇಕು ಎಂದರು.
ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ.43ರಷ್ಟು ಮತಗಳೊಂದಿಗೆ 17 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಜಯ ಲಭಿಸಿತು. 2019ರ ಚುನಾವಣೆಯಲ್ಲಿ ಶೇ.51ರಷ್ಟು ಮತದೊಂದಿಗೆ 25 ಕ್ಷೇತ್ರದಲ್ಲಿ ಬಿಜೆಪಿಯನ್ನು ಜನತೆ ಗೆಲ್ಲಿಸಿದರು. ಈಗಲೂ ಶೇ.60ರಷ್ಟು ಮತ ನೀಡುವ ಮೂಲಕ ಎಲ್ಲಾ 28 ಕ್ಷೇತ್ರಗಳಲ್ಲೂ ಗೆಲ್ಲಿಸಬೇಕು. ಕಾಂಗ್ರೆಸ್‌ಗೆ ಖಾತೆ ತೆರೆಯುವುದಕ್ಕೇ ಅವಕಾಶ ನೀಡಬಾರದು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
3ನೇ ಬಾರಿ ಮೋದಿಗೆ ಅಧಿಕಾರ ನೀಡಿ:
ಹತ್ತು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬರುವ ಮುನ್ನ ಜಾಗತಿಕವಾಗಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಕಳೆದ 10 ವರ್ಷಗಳಲ್ಲಿ ಆರ್ಥಿಕತೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಇದೀಗ ಐದನೇ ಸ್ಥಾನಕ್ಕೆ ತಲುಪಿದೆ. ಮೂರನೇ ಬಾರಿ ಮೋದಿ ಅವರಿಗೆ ಅವಕಾಶ ನೀಡಿದರೆ ದೇಶದ ಆರ್ಥಿಕತೆ ಮೂರನೇ ಸ್ಥಾನಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಲಾಗಿದೆ ಎಂದು ಅಮಿತ್ ಶಾ ತಿಳಿಸಿದರು.
ಡಿಕೆಶಿಗೆ ತರಾಟೆ:
ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಕಳೆದ 23 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಈ ಅವಧಿಯಲ್ಲಿ 25 ಪೈಸೆಯಷ್ಟೂ ಭ್ರಷ್ಟಾಚಾರ ಆರೋಪ ಮಾಡಲು ಪ್ರತಿಪಕ್ಷಗಳಿಗೆ ಸಾಧ್ಯವಾಗಲಿಲ್ಲ. 10 ವರ್ಷದ ಅವಧಿಯಲ್ಲಿ ಯುಪಿಎ ಸರ್ಕಾರ 12 ಲಕ್ಷ ಕೋಟಿ ರು. ಮೌಲ್ಯದ ಅಕ್ರಮ ಎಸಗಿದೆ. ಇಲ್ಲಿನ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಭ್ರಷ್ಟಾಚಾರಕ್ಕೂ ಬಿಡದ ನಂಟಿದೆ. ಭ್ರಷ್ಟಾಚಾರಿಗಳನ್ನು ಬಚಾವ್ ಮಾಡಲು ಇಂಡಿ ಒಕ್ಕೂಟ ಮಾಡಿದ್ದಾರೆ. ಭ್ರಷ್ಟಾಚಾರಿಗಳನ್ನು ಜೈಲಿಗೆ ಕಳುಹಿಸಿದ್ದೇವೆ. ಮುಂದೆಯೂ ಕಳುಹಿಸಲಿದ್ದೇವೆ ಎಂದರು.
ರಾಹುಲ್ ಬಾಬಾಗೆ ರಜೆ ಇಷ್ಟ:
ನಾನು ಸುಮಾರು 40 ವರ್ಷಗಳಿಂದ ಮೋದಿ ಅವರ ಜತೆಗೆ ಕೆಲಸ ಮಾಡಿದ್ದೇನೆ. ಅವರು ಭಾರತಕ್ಕಾಗಿ ಸತತವಾಗಿ ಕೆಲಸ ಮಾಡಿದರು. ಒಂದು ದಿನವೂ ರಜೆ ತೆಗೆದುಕೊಳ್ಳಲಿಲ್ಲ. ಆದರೆ, ಕಾಂಗ್ರೆಸ್‌ನ ರಾಹುಲ್ ಬಾಬಾ ಅವರು ಬೇಸಿಗೆ ಬಂದರೆ ವಿದೇಶಕ್ಕೆ ಹಾರುತ್ತಾರೆ. ಪ್ರತಿ ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಪಕ್ಷ ಅವರನ್ನು ಹುಡುಕಬೇಕಾಗುತ್ತದೆ. ಇಬ್ಬರಿಗೂ ಹೋಲಿಕೆಯೇ ಇಲ್ಲ ಎಂದರು.
ಮಂದಿರಕ್ಕೆ ಏಕೆ ಬರಲಿಲ್ಲ?:
ಕಳೆದ 50 ವರ್ಷದಿಂದ ರಾಮ ಮಂದಿರ ವಿಚಾರ ಬಗೆಹರಿಸಲಿಲ್ಲ. ಮೋದಿ ಅವರು ರಾಮಮಂದಿರ ನಿರ್ಮಿಸಿ ರಾಮನ ಪ್ರಾಣ ಪ್ರತಿಷ್ಠಾಪನೆಯನ್ನೂ ಮಾಡಿದರು. ಗಗನಚುಂಬಿ ಕಟ್ಟಡದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆ ಮಾಡಲಾಗಿದೆ. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಎಲ್ಲರಿಗೂ ಪ್ರಾಣ ಪ್ರತಿಷ್ಠಾಪನೆಗೆ ಆಹ್ವಾನ ಇತ್ತು. ವೋಟ್ ಬ್ಯಾಂಕ್ ಹೋಗಿ ಬಿಡುತ್ತದೆ ಎನ್ನುವ ಭಯದಿಂದ ಅವರು ಬರಲಿಲ್ಲ ಎಂದರು.
ಬಾಂಬ್ ಹಾಕಿದ್ರೂ ಸಿಂಗ್ ಮೌನ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10 ವರ್ಷಗಳ ಕಾಲ ಯುಪಿಎ ಅಧಿಕಾರದಲ್ಲಿದ್ದಾಗ ಏನಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗುತ್ತಿದ್ದರೂ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೌನವಾಗಿರುತ್ತಿದ್ದರು. ಆದರೆ, ನರೇಂದ್ರ ಮೋದಿ ಅವರು ಪಾಕಿಸ್ತಾನದೊಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದರು ಎಂದು ಅಮಿತ್ ಶಾ ಹೇಳಿದರು.
ಸಮಾವೇಶದಲ್ಲಿ ರಾಜ್ಯದ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್‌ವಾಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರತಿಪಕ್ಷದ ನಾಯಕ ಅಶೋಕ್, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪಿ.ಸಿ.ಮೋಹನ್, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಸಿ.ಎನ್.ಮಂಜುನಾಥ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಮತ್ತಿತರರು ವೇದಿಕೆ ಮೇಲಿದ್ದರು.