ಸೋಲು- ಗೆಲುವಿನ ಲೆಕ್ಕಾಚಾರ: ಬೆಟ್ಟಿಂಗ್‌ ಜೋರು

| Published : May 04 2024, 12:46 AM IST / Updated: May 04 2024, 04:17 AM IST

Voting

ಸಾರಾಂಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ 27 ರಂದು ನಡೆದ ಮತದಾನದಲ್ಲಿ ಕ್ಷೇತ್ರದ್ಯಾಂತ ಒಟ್ಟಾರೆ ಶೇ.76.98 ರಷ್ಟು ಮತದಾನ ನಡೆದಿದೆ. ಈ ಬಾರಿ ಶೇಕಡವಾರು ಹೆಚ್ಚಿಗೆ ಮತದಾನ ಆಗಿದ್ದು, ಯಾವ ಪಕ್ಷಕ್ಕೆ ಲಾಭ ಎನ್ನುವ ಲೆಕ್ಕಾಚಾರ ಕ್ಷೇತ್ರದಲ್ಲಿ ನಡೆಯುತ್ತಿದೆ

 ಚಿಕ್ಕಬಳ್ಳಾಪುರ :  ರಾಜಕೀಯ ಪಕ್ಷಗಳ ನಡವೆ ತೀವ್ರ ಹಾಣಾಹಣಿಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣೆ ಫ‌ಲಿತಾಂಶ ಪ್ರಕಟಕ್ಕೆ ಇನ್ನೂ 29 ದಿನ ದಿನಗಳು ಬಾಕಿಯಿದ್ದು, ಕ್ಷೇತ್ರದ್ಯಾಂತ ಸುಗಮವಾಗಿ ಮತಬೇಟೆ-ಮತದಾನ ಮುಗಿದ ಬೆನ್ನಲ್ಲೇ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರ ಮತ್ತು ಬೆಂಬಲಿಗರ ಬಾಜಿ ಕಟ್ಟುವ ಪ್ರಕ್ರಿಯೆಗಳು ತಾರಕಕ್ಕೇರಿದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಳೆದ 27 ರಂದು ನಡೆದ ಮತದಾನದಲ್ಲಿ ಕ್ಷೇತ್ರದ್ಯಾಂತ ಒಟ್ಟಾರೆ ಶೇ.76.98 ರಷ್ಟು ಮತದಾನ ನಡೆದಿದೆ. ಈ ಬಾರಿ ಶೇಕಡವಾರು ಹೆಚ್ಚಿಗೆ ಮತದಾನ ಆಗಿದ್ದು, ಯಾವ ಪಕ್ಷಕ್ಕೆ ಲಾಭ, ಯಾವ ಪಕ್ಷಕ್ಕೆ ನಷ್ಟ ಎನ್ನುವ ಲೆಕ್ಕಾಚಾರ ಕ್ಷೇತ್ರದಲ್ಲಿ ನಡೆಯುತ್ತಿದೆ. ಲೋಕಸಭಾ ಚುನಾವಣಾ ಕಣದಲ್ಲಿರುವ 28ಮಂದಿ ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಜೂನ್‌ 4 ರಂದು ಹೊರ ಬೀಳಲಿದೆ.

ಸೋಲು- ಗೆಲುವಿನ ಲೆಕ್ಕಾಚಾರ

ಆದರೆ ಮತದಾನ ಮುಗಿದ ಕೂಡಲೇ, ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌(ಇಂಡಿಯಾ) ಹಾಗೂ ಬಿಜೆಪಿ-ಜೆಡಿಎಸ್‌ ಮೈತ್ರಿ(ಎನ್ ಡಿಎ) ಅಭ್ಯರ್ಥಿಗಳು, ಇತರೆ ಪಕ್ಷಗಳ ಹಾಗೂ ಪಕ್ಷೇತರ ಅಭ್ಯರ್ಥಿಗಳು ಈಗಾಗಲೇ ಮತಗಟ್ಟೆವಾರು ಆಗಿರುವ ಮತದಾನ ವಿವರಗಳನ್ನು ಕೈಯಲ್ಲಿ ಹಿಡಿದು ತಮಗೆ ಬರಬಹುದಾದ ಮತಗಳ ಮತ್ತು ತಮ್ಮಿಂದ ಯಾವ ಆಭ್ಯರ್ಥಿ ಸೋಲಲಿದ್ದಾರೆ ಎಂಬ ಲೆಕ್ಕಾಚಾರವನ್ನು ಆರಂಭಿಸಿದ್ದಾರೆ.

ಹಣ, ಜಮೀನು, ಟ್ರ್ಯಾಕ್ಟರ್‌ ಬೆಟ್ಟಿಂಗ್‌

ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಬಾಜಿ ಕಟ್ಟುವ ದಂಧೆ ಆರಂಭವಾಗಿದೆ. ಕೆಲವಡೆ ಎನ್ ಡಿಎ ಅಭ್ಯರ್ಥಿ ಪರ ದುಪ್ಪಟ್ಟು ಬಾಜಿ ನೀಡಿದರೆ ಕೆಲವಡೆ ಇಂಡಿಯಾ ಅಭ್ಯರ್ಥಿ ಪರ ದುಪ್ಪಟ್ಟು ಬಾಜಿ ನೀಡುತ್ತಿದ್ದಾರೆ. ಪಟ್ಟಣ ಮತ್ತು ನಗರ ಪ್ರದೇಶಗಳಲ್ಲಿ ಸಾವಿರ ರು.ಗಳಿಂದ ಲಕ್ಷಾಂತರ ರು.ಗಳನ್ನು ಬೆಟ್ಟಿಂಗ್‌ ಕಟ್ಟುತ್ತಿದ್ದಾರೆ. ಸೈಟ್ ಗಳು, ಮನೆಗಳನ್ನು ಪಣಕ್ಕಿಟ್ಟಿರುವ ಉದಾಹರಣೆಗಳೂ ಇವೆ. ಗ್ರಾಮಾಂತರ ಪ್ರದೇಶಗಳಲ್ಲಿ ಜಮೀನು, ಟ್ರ್ಯಾಕ್ಟರ್, ಕಾರು, ದನ ಕರುಗಳು, ಎಮ್ಮೆ, ಕುರಿ-ಮೇಕೆ, ಕೋಳಿಗಳನ್ನು ಪಣಕ್ಕಿಟ್ಟಿದ್ದಾರೆ.

ಕ್ಷೇತ್ರದ ಒಟ್ಟಾರೆ ಮತದಾನ ಪ್ರಮಾಣ, ಕ್ಷೇತ್ರದಲ್ಲಿರುವ ಜಾತಿವಾರು ಮತದಾರರ ಪ್ರಮಾಣವನ್ನು ಉಲ್ಲೇಖೀಸಿಕೊಂಡು ಈ ಪಕ್ಷದ ಅಭ್ಯರ್ಥಿ ಇಷ್ಟೇ ಮತ ಪಡೆಯುತ್ತಾರೆಂದು ಹೇಳುವ ಮೂಲಕ ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿನ ಬಗ್ಗೆ ರಾಜಕೀಯ ಪಕ್ಷಗಳ ಬೆಂಬಲಿಗರು ವಿಶ್ವಾಸದಿಂದ ಹೇಳಿಕೊಳ್ಳುವ ಮೂಲಕ ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಮುಳಗಿ ಬಾಜಿ ಕಟ್ಟುತ್ತಿದ್ದು ಯಾರೇ ಗೆಲ್ಲಲಿ, ಯಾರೇ ಸೋಲಲಿ, ಒಂದು ಕಡೆಯ ಬೆಂಬಲಿಗರಂತು ಬೀದಿಗೆ ಬೀಲುವುದು ಸತ್ಯ.