ಜೆಡಿಎಸ್‌ನಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದೇ ಎಚ್ಡಿಕೆ ಸ್ಪರ್ಧೆಗೆ ಒತ್ತಡ: ಸಚಿವ ಚಲುವರಾಯಸ್ವಾಮಿ

| Published : Jan 29 2024, 01:30 AM IST

ಜೆಡಿಎಸ್‌ನಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದೇ ಎಚ್ಡಿಕೆ ಸ್ಪರ್ಧೆಗೆ ಒತ್ತಡ: ಸಚಿವ ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪಕ್ಷ ರಾಜಕೀಯವಾಗಿ ಹೀನಾಯ ಸ್ಥಿತಿಗೆ ತಲುಪಿರುವುದರಿಂದ ಅವರು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಸೇರಿದ್ದಾರೆ. ಅಳೀದುಳಿದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿದಲ್ಲಿ ಅಚ್ಚರಿ ಪಡಬೇಕಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದಿರುವುದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿರಬಹುದು.

ಕನ್ನಡಪ್ರಭ ವಾರ್ತೆ ಮದ್ದೂರು

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಸಮರ್ಥ ಅಭ್ಯರ್ಥಿ ಇಲ್ಲದಿರುವುದರಿಂದ ಪಕ್ಷದ ಮುಖಂಡರು, ಕಾರ್ಯಕರ್ತರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕುಹಕವಾಡಿದರು.

ಪಟ್ಟಣದ ಶಿವಪುರದ ಖಾಸಗಿ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಜೆಡಿಎಸ್ ಅಥವಾ ಬಿಜೆಪಿಯಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂಬ ಗೊಂದಲ ಮೂಡಿದೆ. ಈ ಎರಡು ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ಅದನ್ನು ಎದುರಿಸಲು ಕಾಂಗ್ರೆಸ್ ಸಿದ್ಧವಾಗಿದ್ದು. ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದೆ ಎಂದು ಭವಿಷ್ಯ ನುಡಿದರು.

ಸಂಸದ ಪ್ರಜ್ವಲ್‌ ರೇವಣ್ಣ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಇಬ್ಬರ ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.

ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತಂತೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಈಗಾಗಲೇ ಮೂವರು ಆಕಾಂಕ್ಷಿಗಳ ಪಟ್ಟಿ ಸಿದ್ಧಪಡಿಸಿ ಪಕ್ಷದ ಹೈಕಮಾಂಡ್‌ಗೆ ಸಲ್ಲಿಸಲಾಗಿದೆ. ಆದರೆ, ಆಕಾಂಕ್ಷಿಗಳ ಹೆಸರು ಅಥವಾ ಅಂತಿಮ ಅಭ್ಯರ್ಥಿಯ ಹೆಸರನ್ನು ಈಗ ಬಹಿರಂಗ ಪಡಿಸುವುದಿಲ್ಲ. ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಅಧಿಕಾರ ಎಐಸಿಸಿ ಹಾಗೂ ಕೆಪಿಸಿಸಿ ಮಾತ್ರವೇ ಇದ್ದು. ಈ ವಿಚಾರದಲ್ಲಿ ನಾವು ಮೂಗು ತೂರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾರಿಗೂ ಅಸಮಾಧಾನವಿಲ್ಲ:

ನಿಗಮ ಮಂಡಳಿ ಅಧ್ಯಕ್ಷರ ನೇಮಕದ ವಿಚಾರದಲ್ಲಿ ಯಾರಿಗೂ ಅಸಮಾಧಾನವಿಲ್ಲ. ವಂಚಿತರಿಗೆ ಮತ್ತೊಂದು ಪಟ್ಟಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಮೊದಲ ಹಂತದಲ್ಲಿ ಪಕ್ಷದ ಶಾಸಕರಿಗೆ ಆದ್ಯತೆ ನೀಡಲಾಗಿದೆ. ಇನ್ನು ಎರಡು ಮತ್ತು ಮೂರನೇ ಪಟ್ಟಿ ಬಿಡುಗಡೆಯಾಗುತ್ತಿದೆ ಎಂದರು.

ಈ ಎರಡು ಪಟ್ಟಿಗಳಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಶ್ರಮಿಸಿದ ಮುಖಂಡರು ಹಾಗೂ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡಲಾಗುವುದು. ಎರಡನೇ ಪಟ್ಟಿಯನ್ನು ಲೋಕಸಭಾ ಚುನಾವಣೆ ನಂತರ ಬಿಡುಗಡೆ ಮಾಡಲಾಗುವುದು ಹೀಗಾಗಿ ಯಾರಲ್ಲೂ ಅಸಮಾಧಾನ ಉಂಟಾಗುವ ಪ್ರಶ್ನೆಯೇ ಇಲ್ಲ ಎಂದರು.

ಗ್ಯಾರಂಟಿ ಪರಿಶೀಲನೆಗೆ ಪ್ರಾಧಿಕಾರ ರಚನೆ:

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿವೆ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲ ನಡೆಸಲು ಪ್ರಾಧಿಕಾರ ರಚನೆ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಆ ನಂತರ ನಾವುಗಳು ಸುಮ್ಮನೆ ಕೂರದೆ ಯೋಜನೆಗಳ ಲಾಭ ನಾಡಿನ ಪ್ರತಿ ವ್ಯಕ್ತಿಗೂ ತಲುಪುತ್ತಿದೆಯೇ ಎಂಬ ಉದ್ದೇಶದಿಂದ ಅದನ್ನು ಪರಿಶೀಲಿಸಲು ಪ್ರಾಧಿಕಾರ ರಚನೆ ಮಾಡಲಾಗಿದೆ ಎಂದರು.

ಪ್ರಾಧಿಕಾರ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅನುಷ್ಠಾನ ಸಮಿತಿ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಲಿದೆ ಎಂದರು.

ಈ ವೇಳೆ ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ತಾಪಂ ಮಾಜಿ ಸದಸ್ಯ ಕೆ.ಆರ್.ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಅಮರ ಬಾಬು. ಕಾಂಗ್ರೆಸ್ ಮುಖಂಡರಾದ ಅರುಣ್ ಕುಮಾರ್. ಅವಿನಾಶ್, ಕೆ.ಪಿ.ಶ್ರೀಧರ, ಸೊಳ್ಳೆಪುರ ರಮೇಶ್ ಇದ್ದರು.

ಎಚ್ಡಿಕೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳು ಬಿಜೆಪಿಯೊಂದಿಗೆ ಸೇರಿದ್ದಾರೆ: ಎನ್.ಚಲುವರಾಯಸ್ವಾಮಿ

ಮದ್ದೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಪಕ್ಷ ರಾಜಕೀಯವಾಗಿ ಹೀನಾಯ ಸ್ಥಿತಿಗೆ ತಲುಪಿರುವುದರಿಂದ ಅವರು ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿಯೊಂದಿಗೆ ಸೇರಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭಾನುವಾರ ಟೀಕಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಳೀದುಳಿದ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಸಂಸದೆ ಸುಮಲತಾ ಅವರನ್ನು ಭೇಟಿ ಮಾಡಿದಲ್ಲಿ ಅಚ್ಚರಿ ಪಡಬೇಕಾಗಿಲ್ಲ ಎಂದು ಲೇವಡಿ ಮಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಇದರ ಅರ್ಥ ಇನ್ನು ರಾಜ್ಯಕ್ಕೆ ಜೆಡಿಎಸ್ ಪಕ್ಷದ ಅವಶ್ಯಕತೆ ಎಂಬುದಾಗಿದೆ. ಜನ ಸಾಮಾನ್ಯರ ಜೊತೆ ನಿಲ್ಲದಿರುವುದು ಮತ್ತು ಕಾರ್ಯಕರ್ತರಿಗೆ ಅವಕಾಶ ನೀಡಿದೆ ಪಕ್ಷವನ್ನು ಕುಟುಂಬಕ್ಕೆ ಸೀಮಿತಗೊಳಿಸಿದ್ದರಿಂದಲೇ ಇವತ್ತು ಜೆಡಿಎಸ್ ಹೀನಾಯ ಸ್ಥಿತಿಗೆ ಬರಲು ಕಾರಣವಾಗಿದೆ ಎಂದು ಟೀಕಿಸಿದರು.

ಚುನಾವಣೆ ಉದ್ದೇಶದಿಂದ ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದರೆ ಅದು ಬಿಜೆಪಿಗೆ ಕೆಡುಕೆ ಹೊರತು ಪ್ಲಸ್ ಆಗುವುದಿಲ್ಲ. ಈಗಾಗಲೇ ಜೆಡಿಎಸ್ ಜೊತೆ ಕೈಜೋಡಿಸಿದ್ದ ಕಾಂಗ್ರೆಸ್ ಒಮ್ಮೆ ಅದರ ಫಲ ಅನುಭವಿಸಿದೆ. ಮುಂದೆ ಸಹ ಬಿಜೆಪಿಗೂ ಇದೇ ಪರಿಸ್ಥಿತಿಗೆ ಬಂದು ನಿಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.