ಸಾರಾಂಶ
ವಕ್ಫ್ ವಿರುದ್ಧ ವಿಜಯಪುರ ನಗರ ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆಸಲುದ್ದೇಶಿಸಿರುವ ಅಭಿಯಾನಕ್ಕೆ ಬೀದರ್‌ನಲ್ಲಿ ಸೋಮವಾರ ಅಧಿಕೃತವಾಗಿ ಚಾಲನೆ ಸಿಗಲಿದೆ.
ಬೀದರ್ : ವಕ್ಫ್ ವಿರುದ್ಧ ವಿಜಯಪುರ ನಗರ ಶಾಸಕ ಯತ್ನಾಳ ನೇತೃತ್ವದಲ್ಲಿ ನಡೆಸಲುದ್ದೇಶಿಸಿರುವ ಅಭಿಯಾನಕ್ಕೆ ಬೀದರ್‌ನಲ್ಲಿ ಸೋಮವಾರ ಅಧಿಕೃತವಾಗಿ ಚಾಲನೆ ಸಿಗಲಿದೆ. ಬೀದರ್‌ನಿಂದ ಆರಂಭವಾಗಿ ಡಿ.1ರವರೆಗೆ ಐದು ಜಿಲ್ಲೆಗಳಲ್ಲಿ ಈ ಹೋರಾಟ ನಡೆಯಲಿದ್ದು, ಬಳಿಕ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಕ್ಫ್‌ನಿಂದಾಗಿರುವ ಸಮಸ್ಯೆ ಕುರಿತು ಸರ್ಕಾರದ ಗಮನ ಸೆಳೆಯಲಿದೆ.
ನ.25ರಂದು ಬೀದರ್, ನ.26ರಂದು ಕಲಬುರಗಿ ಜಿಲ್ಲೆಯ ಚಿಂಚೋಳಿಯ ಮಹಾಂತೇಶ ಮಠ, ನ.27ರಂದು ಯಾದಗಿರಿ ಹಾಗೂ ರಾಯಚೂರು, ಬಳಿಕ ಎರಡು ದಿನಗಳ ಬಿಡುವಿನ ತರುವಾಯ ನ.30ರಂದು ವಿಜಯಪುರ ಹಾಗೂ ಬಾಗಲಕೋಟೆ, ಅಂತಿಮವಾಗಿ ಡಿ.1ರಂದು ಬೆಳಗಾವಿಯಲ್ಲಿ ವಕ್ಫ್ ಆಸ್ತಿ ಗೊಂದಲದ ವಿಚಾರವಾಗಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯಲಿದೆ.
ರಾಜ್ಯಾದ್ಯಂತ ಸಾವಿರಾರು ಎಕರೆ ಪ್ರದೇಶ ರೈತರ ಜಮೀನು, ಮಠ-ಮಂದಿರಗಳ ಆಸ್ತಿಗಳ ಹೆಸರಲ್ಲಿ ವಕ್ಫ್ ಹೆಸರು ನಮೂದಾಗಿರುವುದು ಬೆಳಕಿಗೆ ಬಂದಿದ್ದು, ಈ ಕುರಿತು ಈಗಾಗಲೇ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಮಟ್ಟದಲ್ಲಿ ಈಗಾಗಲೇ ಪ್ರತಿಭಟನೆ ನಡೆಸಿರುವ ಬಿಜೆಪಿ ಮುಖಂಡರು ರಾಜ್ಯಾದ್ಯಂತ ಮತ್ತೊಂದು ಸುತ್ತಿನ ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ. ಈ ನಡುವೆ, ಯತ್ನಾಳ್ ನೇತೃತ್ವದ ತಂಡ ಬೀದರ್‌ನಿಂದ ಜನರ ಅಹವಾಲು ಹಾಗೂ ವಕ್ಫ್ ವಿರುದ್ಧ ಜನಜಾಗೃತಿ ಮೂಡಿಸುವ ಕೆಲಸ ಮಾಡಲಿದೆ.
ಹಳ್ಳಿಗಳಿಗೂ ಭೇಟಿ: ಯತ್ನಾಳ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ತಂಡ ಬೀದರ್‌ನ ಗಣೇಶ ಮೈದಾನದಲ್ಲಿ ಸಂತ್ರಸ್ತರ ಸಭೆ ನಡೆಸಿ ಅಹವಾಲು ಆಲಿಸಲಿದೆ. ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ. ಇದಕ್ಕೂ ಮುನ್ನ ಗ್ರಾಮಕ್ಕೆ ಗ್ರಾಮವೇ ವಕ್ಫ್ ಆಸ್ತಿ ಎಂದು ಗುರುತಿಸಲ್ಪಟ್ಟಿರುವ ಜಿಲ್ಲೆಯ ಧರ್ಮಾಪೂರ ಗ್ರಾಮಕ್ಕೂ ಭೇಟಿ ನೀಡಲಿದೆ. ಕೊನೆಗೆ 900 ಎಕರೆಗೂ ಹೆಚ್ಚು ಜಮೀನು ವಕ್ಫ್ ಎಂದು ಕೆಲ ವರ್ಷಗಳ ಹಿಂದೆಯೇ ಗುರುತಿಸಲ್ಪಟ್ಟಿರುವ ಚಟ್ನಳ್ಳಿ ಗ್ರಾಮಕ್ಕೂ ತೆರಳಿ ಜನರ ಸಮಸ್ಯೆಗೆ ಕಿವಿಯಾಗಲಿದೆ.
ಯತ್ನಾಳ್ ಅವರಲ್ಲದೆ, ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ್, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಬಿ.ಪಿ ಹರೀಶ್, ಹೊಳಲ್ಕೆರೆ ಚಂದ್ರಪ್ಪ, ಮಾಜಿ ಸಂಸದ ಬಿ.ವಿ.ನಾಯಕ್, ಜೆಡಿಎಸ್ ನಾಯಕ, ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್, ಮುಖಂಡರಾದ ಎನ್.ಆರ್.ಸಂತೋಷ ಇತರರು ಈ ನಿಯೋಗದಲ್ಲಿದ್ದಾರೆ.
ಜಿಲ್ಲೆಯ ಬಿಜೆಪಿ ಶಾಸಕರೇ ಗೈರು?
ವಕ್ಫ್ ಮಂಡಳಿ ವಿರುದ್ಧ ಬೀದರ್‌ನಿಂದ ಆರಂಭವಾಗಲಿರುವ ಯತ್ನಾಳ್ ನೇತೃತ್ವದ ಹೋರಾಟದಲ್ಲಿ ಜಿಲ್ಲೆಯ ಬಿಜೆಪಿ ಶಾಸಕ, ಪ್ರಮುಖ ಮುಖಂಡರು ಪಾಲ್ಗೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಯತ್ನಾಳ ನೇತೃತ್ವದಲ್ಲಿ ನಡೆಯುತ್ತಿರುವುದು ಬಿಜೆಪಿಯ ಅಧಿಕೃತ ಕಾರ್ಯಕ್ರಮ ಎಂದು ಈವರೆಗೆ ಪಕ್ಷದಿಂದ ಯಾವುದೇ ಸಂದೇಶವೂ ಬಂದಿಲ್ಲ ಎಂದು ಹೇಳಲಾಗುತ್ತಿದೆ.
ರಾಜ್ಯಾಧ್ಯಕ್ಷರಿಂದ ಯತ್ನಾಳ ಹೋರಾಟದ ಕುರಿತು ಯಾವುದೇ ಸೂಚನೆ ಬಂದಿಲ್ಲ, ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೂಚನೆ ಇಲ್ಲದೆ ಯಾವುದೇ ಹೋರಾಟದಲ್ಲಿ ಪಾಲ್ಗೊಳ್ಳಲ್ಲ. ಯತ್ನಾಳ್ ಅವರೇ ನಿಮ್ಮ ನಡೆ ಜನರಿಗೆ ದಾರಿ ತಪ್ಪಿಸುತ್ತಿದೆ. ಈ ರೀತಿಯ ಸಂಶಯದಿಂದಾಗಿಯೇ ಮೂರು ಕಡೆ ಸೋಲಾಗಿದೆ ಎಂದು ಈಗಾಗಲೇ ಬಿಜೆಪಿ ಶಾಸಕ ಶರಣು ಸಲಗರ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಇನ್ನು ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ್ ಅವರು ಕರೆದಲ್ಲಿ ಮಾತ್ರ ಹೋಗುವೆ, ಯತ್ನಾಳ್ ಸಭೆ ಬಗ್ಗೆ ಕಿಂಚಿತ್ತೂ ಮಾಹಿತಿ ಇಲ್ಲ ಎಂದಿದ್ದಾರೆ.
ಅದೇ ರೀತಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಅವರು, ಡಿ.4ರಂದು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬೀದರ್‌ನಿಂದ ಮತ್ತೆ ವಕ್ಫ್ ವಿರುದ್ಧ ಹೋರಾಟ ನಡೆಯಲಿದೆ. ಸೋಮವಾರದ ಹೋರಾಟದ ಬಗ್ಗೆ ಈವರೆಗೆ ಮಾಹಿತಿ ಇಲ್ಲ ಎಂದರೆ, ಶಾಸಕ ಪ್ರಭು ಚವ್ಹಾಣ್ ಮಾತ್ರ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನ ಮುಂದುವರಿಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಹುಡಗಿ ಅವರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿ, ಇದು ಪಕ್ಷದ ಕಾರ್ಯಕ್ರಮವಲ್ಲ. ನಮಗೆ ಪಕ್ಷದ ರಾಜ್ಯಾಧ್ಯಕ್ಷರಿಂದ ಯಾವುದೇ ಸೂಚನೆ ಬಂದಿಲ್ಲ. ಇದು ಸಂಘಟನೆಯೊಂದರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ನನಗೆ ಆಹ್ವಾನ ಬಂದಲ್ಲಿ ಹೋಗುವೆ. ವಕ್ಫ್ ರಾಜ್ಯದ ಜನತೆಯ ಜೀವ ಹಿಂಡುತ್ತಿದೆ. ಅದರ ವಿರುದ್ಧ ಯಾರೇ ಪ್ರತಿಭಟಿಸಿದರೂ ಹೋಗುವೆ ಎಂದು ಸ್ಪಷ್ಟಪಡಿಸಿದ್ದಾರೆ.