ಇನ್ಮೇಲೆ ನಾನು ಸೈಲೆಂಟ್, ರಮೇಶ್‌ ಜಾರಕಿಹೊಳಿ ವೈಲೆಂಟ್ : ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌

| Published : Dec 07 2024, 01:33 AM IST / Updated: Dec 07 2024, 04:23 AM IST

ಸಾರಾಂಶ

 ಬಹಿರಂಗ ಹೇಳಿಕೆಯನ್ನು ಪರ್ಮನೆಂಟ್‌ ಆಗಿ ನಿಲ್ಲಿಸಿ ಎಂದು ದೆಹಲಿ ನಾಯಕರಿಂದ ಸೂಚನೆ ಪಡೆದು ಬಂದಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಹೋರಾಟ ಚುಕ್ಕಾಣಿಯನ್ನು ಹಸ್ತಾಂತರ ಮಾಡುವ ಸುಳಿವು ನೀಡಿದ್ದಾರೆ. ‘ 

 ಹುಬ್ಬಳ್ಳಿ : ಪಕ್ಷದ ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆಯನ್ನು ಪರ್ಮನೆಂಟ್‌ ಆಗಿ ನಿಲ್ಲಿಸಿ ಎಂದು ದೆಹಲಿ ನಾಯಕರಿಂದ ಸೂಚನೆ ಪಡೆದು ಬಂದಿರುವ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧದ ಹೋರಾಟ ಚುಕ್ಕಾಣಿಯನ್ನು ಹಸ್ತಾಂತರ ಮಾಡುವ ಸುಳಿವು ನೀಡಿದ್ದಾರೆ. ‘ಇನ್ಮೇಲೆ ನಾನು ಸೈಲೆಂಟ್ ಆಗುತ್ತೇನೆ, ರಮೇಶ್ ಜಾರಕಿಹೊಳಿ ವೈಲೆಂಟ್ ಆಗುತ್ತಾರೆ’ ಎಂದು ಅವರು ತಿಳಿಸಿದ್ದಾರೆ.

ಜೊತೆಗೆ ನಮ್ಮ ನಾಯಕರ ವಿರುದ್ಧ ಗುಪ್ತ ಪತ್ರಗಳನ್ನು ಕೇಂದ್ರ ನಾಯಕರಿಗೆ ಬರೆಯುತ್ತೇವೆ. ವಿಜಯೇಂದ್ರ ಸೇರಿ ಎಲ್ಲರ ಬಗ್ಗೆಯೂ ಬರೀತಿವಿ. ನಮ್ಮ ಟಾರ್ಗೆಟ್ ವಿಜಯೇಂದ್ರ ಅಲ್ಲವೇ ಅಲ್ಲ, ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎನ್ನುವುದೇ ನಮ್ಮ ಟಾರ್ಗೆಟ್. ನಾವು ಅಧಿಕಾರಕ್ಕೆ ಬಂದಾಗ ಪ್ರಾಮಾಣಿಕರನ್ನು ಸಿಎಂ ಮಾಡುವ ಗುರಿಯಿದೆ. ಭ್ರಷ್ಟರು ಸಿಎಂ ಆಗಬಾರದು ಎನ್ನುವುದು ನಮ್ಮ ಉದ್ದೇಶ ಎಂದರು.

ದೆಹಲಿಯಿಂದ ಶುಕ್ರವಾರ ಹುಬ್ಬಳ್ಳಿಗೆ ಆಗಮಿಸಿದ ಯತ್ನಾಳ್‌, ಸುದ್ದಿಗಾರರ ಜೊತೆ ಮಾತನಾಡಿದರು. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಒಪ್ಪಲ್ಲ ಎನ್ನುವ ರಮೇಶ್‌ ಜಾರಕಿಹೊಳಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಇನ್ನು ಮುಂದೆ ನಾನು ಸೈಲೆಂಟ್‌ ಆಗಿ ಇರುತ್ತೇನೆ. ರಮೇಶ್‌ ಜಾರಕಿಹೊಳಿಯವರು ವೈಲೆಂಟ್‌ ಆಗುತ್ತಾರೆ’ಎಂದರು. ನಮ್ಮ ಮುಂದಿನ ಹೋರಾಟ ಕುರಿತು ನಾವು ಪ್ಲ್ಯಾನ್‌ ಮಾಡಿದ್ದೇವೆ. ಅದರಂತೆ ನಾನು ಸದ್ಯಕ್ಕೆ ಸೈಲೆಂಟ್ ಆಗುತ್ತೇನೆ. 

ಮುಂದೆ ನಾವು ಒಬ್ಬೊಬ್ಬರಾಗಿ ವೈಲೆಂಟ್ ಆಗುತ್ತಾ ಹೋಗುತ್ತೇವೆ ಎಂದರು.

ನನ್ನ ಮೇಲೆ ಪ್ರೀತಿ ಇದೆ:

ನನ್ನ ಮೇಲೆ ಹೈಕಮಾಂಡ್ ಗೆ ಯಾವಾಗಲೂ ಪ್ರೀತಿ ಇದ್ದೇ ಇದೆ. ಯತ್ನಾಳ್ ನನ್ನು ಮುಗಿಸುತ್ತೇವೆ ಎನ್ನುವವರಿಂದ ಏನೂ ಆಗಲ್ಲ. ಯಾರಿಂದಲೂ ನನಗೆ ಏನೂ ಮಾಡಲು ಆಗುವುದಿಲ್ಲ. ಯಾರ್‍ಯಾರು ಉತ್ತರ ಕೊಡುತ್ತಾರೋ ನೋಡೋಣ. ಅವರೆಲ್ಲರಿಗೂ ಉತ್ತರ ಕೊಡಲು ನಾನು ಸಿದ್ದ. ನನಗೆ ಅಂಜಿಕೆಯಿಲ್ಲ, ಅಳುಕಿಲ್ಲ ಎಂದು ಹೇಳಿದರು.

ಶಿಸ್ತು ಕ್ರಮ ಇಲ್ಲ:

ದೆಹಲಿಯಿಂದ ಹಸನ್ಮುಖಿಯಾಗಿ ಬರುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನನ್ನನ್ನು ಯಾರೂ ತರಾಟೆಗೆ ತೆಗೆದುಕೊಂಡಿಲ್ಲ. ದೆಹಲಿ ನಾಯಕರು ನನಗೆ ಶಹಬಾಸ್‌ ಗಿರಿ ಕೊಟ್ಟಿದ್ದಾರೆ. ಹೈಕಮಾಂಡ್ ಕೊಟ್ಟ ನೋಟಿಸ್ ಗೆ ನಾನು ಉತ್ತರ ಕೊಟ್ಟಿದ್ದೇನೆ. ನನ್ನ ವಿರುದ್ಧ ಶಿಸ್ತು ಕ್ರಮದ ಪ್ರಶ್ನೆಯೇ ಇಲ್ಲ. ಮುಂದೆ ಒಳ್ಳೆಯ ಭವಿಷ್ಯವಿದೆ, ಪಕ್ಷದ ಪರ ಒಳ್ಳೆಯ ಕೆಲಸ ಮಾಡಿ ಎಂದು ಹೇಳಿದ್ದಾರೆ ಎಂದರು.

ಪರ್ಮನೆಂಟ್‌ ಸೈಲೆಂಟ್‌:

ಶಿಸ್ತು ಸಮಿತಿ ಅಧ್ಯಕ್ಷ ಮತ್ತು ರಾಜನಾಥ್ ಸಿಂಗ್ ರನ್ನು ಭೇಟಿಯಾಗಿದ್ದು ಬಿಟ್ಟರೆ ಬೇರೆ ಯಾರನ್ನೂ ಭೇಟಿಯಾಗಿಲ್ಲ. ವಕ್ಫ್ ಕಾನೂನಿನ ಬಗ್ಗೆ ನಾವು ಹೆಚ್ಚು ಗಮನ ಕೊಟ್ಟಿದ್ದೇವೆ. ನನಗೆ ಪರ್ಮನೆಂಟ್ ಆಗಿ ಸೈಲೆಂಟ್ ಆಗಿರೋಕೆ ಹೇಳಿದ್ದಾರೆ. ಹೀಗಾಗಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ ಎಂದು ಹೇಳಿದರು. 

ಒಂದೇ ವಿಮಾನದಲ್ಲಿ ಬಂದ ಮುಖಂಡರು:

ದೆಹಲಿಯಿಂದ ಶಾಸಕ ಯತ್ನಾಳ್‌, ಲಕ್ಷ್ಮಣ ಸವದಿ, ಸಂಸದರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಈರಣ್ಣ ಕಡಾಡಿ ಎಲ್ಲರೂ ಒಂದೇ ವಿಮಾನದಲ್ಲಿ ಬಂದಿಳಿದರು. ಈ ವೇಳೆ ಮಾತನಾಡಿದ ಸವದಿ, ಯತ್ನಾಳ್‌ ಮತ್ತು ನನ್ನ ನಡುವೆ ರಾಜಕೀಯದ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಅವರು ನಮ್ಮ ಪಕ್ಕದ ಜಿಲ್ಲೆಯವರು, ಹಾಗಾಗಿ ಕುಶಲೋಪರಿ ಮಾತನಾಡಿದ್ದೇವೆ. ನಮ್ಮ ಹಳೆಮನೆ, ಹೊಸಮನೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದರು.