ಸಾರಾಂಶ
ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಬುಧವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದಾರೆ.
ವಿಜಯ್ ಕೇಸರಿ
ಚನ್ನಪಟ್ಟಣ : ಚನ್ನಪಟ್ಟಣ ಉಪಚುನಾವಣೆ ಟಿಕೆಟ್‌ಗಾಗಿ ಜೆಡಿಎಸ್-ಬಿಜೆಪಿ ನಡುವೆ ಹಗ್ಗಜಗ್ಗಾಟ ಮುಂದುವರಿದಿರುವುದರ ನಡುವೆಯೇ ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಬುಧವಾರ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿದ್ದಾರೆ. ಟಿಕೆಟ್ ವಿಚಾರವಾಗಿ ಅಸಮಾಧಾನಗೊಂಡಿರುವ ಯೋಗೇಶ್ವರ್ ಅವರು ಈ ಸಭೆಯಲ್ಲಿ ಬಂಡಾಯದ ಅಸ್ತ್ರ ಪ್ರಯೋಗಿಸುತ್ತಾರೆಯೇ ಎಂಬ ಕುತೂಹಲ ಇದೀಗ ಮನೆಮಾಡಿದೆ.
ಈಗಾಗಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಸ್ಪಷ್ಟ ಸಂದೇಶ ನೀಡಿದ್ದು, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ, ನಾಡಿಮಿಡಿತ ಅರಿಯುವ ಪ್ರಯತ್ನ ನಡೆಸಿದ್ದಾರೆ. ಇದೇ ವೇಳೆ, ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡುವ ಕುರಿತು ಯಾವುದೇ ಒಪ್ಪಂದ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮತ್ತೊಂದು ಕಡೆ ಬಿಜೆಪಿ ಪದಾಧಿಕಾರಿಗಳು ಸಭೆ ನಡೆಸಿ ಜಿಲ್ಲೆಯಲ್ಲಿ ಚನ್ನಪಟ್ಟಣದಲ್ಲಿ ಮಾತ್ರ ಬಿಜೆಪಿ ಬಲಿಷ್ಠವಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಂಡು ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕೆಂದು ಆಗ್ರಹಿಸಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ ಯೋಗೇಶ್ವರ್ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸೈಲೆಂಟ್ ಆಗಿದ್ದ ಸೈನಿಕ:
ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಕೇಂದ್ರ ಸಚಿವರಾದ ನಂತರ ಯೋಗೇಶ್ವರ್ ಸಾಕಷ್ಟು ಚುರುಕಾಗಿದ್ದರು. ಕ್ಷೇತ್ರದ ಉಪ ಚುನಾವಣೆ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಅವರು ಹಲವು ಬಾರಿ ದೆಹಲಿಗೂ ಹೋಗಿ ಬಂದಿದ್ದರು.
ಉಪಚುನಾವಣೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕ್ಷೇತ್ರಕ್ಕೆ ಸಾಕಷ್ಟು ಬಾರಿ ಭೇಟಿ ನೀಡುತ್ತಿದ್ದು, ಆದಷ್ಟು ಬೇಗ ಎನ್‌ಡಿಎ ಅಭ್ಯರ್ಥಿ ಹೆಸರು ಘೋಷಿಸುವಂತೆ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದರು. ಆದರೆ, ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾಗಿ ಬಂದ ಬಳಿಕ ಸುಮ್ಮನಿದ್ದ ಯೋಗೇಶ್ವರ್, ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದರು.
ಎಚ್‌ಡಿಕೆ ಸರಣಿ ಸಭೆ:
ಇದೇ ವೇಳೆ ,ಕಳೆದ ವಾರ ಕ್ಷೇತ್ರಕ್ಕೆ ಎರಡು ಬಾರಿ ಭೇಟಿ ನೀಡಿದ್ದ ಕುಮಾರಸ್ವಾಮಿ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸರಣಿ ಸಭೆ ನಡೆಸಿದ್ದಾರೆ. ಬಿಡದಿಯ ತಮ್ಮ ತೋಟದ ಮನೆಯಲ್ಲಿ ವಿಜಯದಶಮಿಯಂದು ಕ್ಷೇತ್ರದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿದ್ದು, ತಾವು ಸೂಚಿಸುವ ಅಭ್ಯರ್ಥಿ ಬೆಂಬಲಿಸುಂತೆ ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಸರಣಿ ಸಭೆ ಹಾಗೂ ಅವರ ಮಾತುಗಳಿಂದ ಯೋಗೇಶ್ವರ್‌ಗೆ ಕ್ಷೇತ್ರದ ಟಿಕೆಟ್ ಕೈತಪ್ಪುವ ಆತಂಕ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಕಳೆದ ವಾರ ಸಭೆ ನಡೆಸಿದ್ದ ಬಿಜೆಪಿ ಜಿಲ್ಲಾ ಹಾಗೂ ತಾಲೂಕು ಘಟಕ ಕ್ಷೇತ್ರವನ್ನು ಉಳಿಸಿಕೊಂಡು ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸುವಂತೆ ಒತ್ತಾಯಿಸಿದೆ.