ಸಾರಾಂಶ
ರಾಮನಗರ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹಮದ್ ಖಾನ್ ಅವರು ‘ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ)’ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಉಪ ಚುನಾವಣೆ ಹೊಸ್ತಿಲಲ್ಲಿ ಹೊಸ ವಿವಾದ ಹುಟ್ಟು ಹಾಕಿದೆ.
ಭಾನುವಾರ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಭಾಷಣದಲ್ಲಿ ಮಾತನಾಡಿದ್ದ ಜಮೀರ್ ಅವರು, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ‘ಬಿಜೆಪಿಯವರಿಗಿಂತ ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಹೆಚ್ಚು ಡೇಂಜರ್’ ಎಂದು ಉರ್ದುವಿನಲ್ಲಿ ಟೀಕಿಸಿದ್ದರು.
ಸಿ.ಪಿ.ಯೋಗೇಶ್ವರ್ ನಮ್ಮ ಪಕ್ಷದಿಂದ ರಾಜಕೀಯ ಪ್ರಾರಂಭ ಮಾಡಿದರು. ಕೆಲವು ವ್ಯತ್ಯಾಸಗಳಾಗಿ ಬಿಜೆಪಿಗೆ ಹೋದರು. ಜೆಡಿಎಸ್ಗೆ ಹೋಗಬೇಕು ಅಂತ ಅಂದುಕೊಂಡಿದ್ದರು. ಆದರೆ, ಕರಿಯ ಕುಮಾರಸ್ವಾಮಿ ಬಿಜೆಪಿಗಿಂತ ಡೇಂಜರ್ ಅಂತ ಜೆಡಿಎಸ್ಗೆ ಹೋಗಿಲ್ಲ ಎಂದಿದ್ದರು.
ಜೆಡಿಎಸ್ ‘ಎಕ್ಸ್’ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಜಮೀರ್ ಅವರು ಕಪ್ಪು ವರ್ಣದವರ ಬಗ್ಗೆ ಜನಾಂಗೀಯ ನಿಂದನೆ ಮಾಡಿ ವರ್ಣಭೇದ ತಾರತಮ್ಯ ಎಸಗಿದ್ದಾರೆ. ಒಂದು ಸಮುದಾಯವನ್ನು ಎತ್ತಿಕಟ್ಟಿ ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಡಲು ಜನರನ್ನು ಪ್ರಚೋದಿಸಿರುವುದು ಅಕ್ಷಮ್ಯ ಅಪರಾಧ. ಗೃಹ ಸಚಿವ ಪರಮೇಶ್ವರ್ ಹಾಗೂ ಪೊಲೀಸರು ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನೈತಿಕತೆಯಿದ್ದರೆ ಅವರ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದೆ.
ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಪ್ರಿಯಾಂಕ್ ಖರ್ಗೆ, ಕೆ.ಎಚ್. ಮುನಿಯಪ್ಪ, ಕೆ.ಜೆ.ಜಾರ್ಜ್, ಡಿ.ಕೆ. ಸುರೇಶ್ ಹಾಗೂ ರಹೀಮ್ ಖಾನ್ ಅವರ ಬಣ್ಣ ಯಾವುದು ಎಂದು ಪ್ರಶ್ನಿಸಿದೆ.
ಇದೇ ವೇಳೆ ಜಮೀರ್ ಹೇಳಿಕೆಯನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಸೇರಿ ಬಿಜೆಪಿಯ ಹಲವು ನಾಯಕರು ಖಂಡಿಸಿದ್ದು, ಇದು ಜಾತಿವಾದಿ ಮನಸ್ಥಿತಿಯ ಪ್ರತೀಕ ಎಂದು ಖಂಡಿಸಿದ್ದಾರೆ.
2021ರಲ್ಲಿ ಸಹ ಕುಮಾರಸ್ವಾಮಿ ಅವರನ್ನು ಕಾಲಾ ಕುಮಾರಸ್ವಾಮಿ (ಕರಿಯ ಕುಮಾರಸ್ವಾಮಿ) ಎಂದು ಅವರು ನಿಂದಿಸಿದ್ದರು.
ವಿವಾದಾತ್ಮಕ ಹೇಳಿಕೆಗೆ ಜಮೀರ್ ಸ್ಪಷ್ಟನೆ:
ಈ ಮಧ್ಯೆ ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಮೀರ್, ಮೊದಲಿನಿಂದಲೂ ಕುಮಾರಸ್ವಾಮಿಯವರು ನನ್ನನ್ನು ಕುಳ್ಳ ಅನ್ನುತ್ತಾರೆ. ನಾನು ಅವರನ್ನು ಕರಿಯಣ್ಣ ಎಂದು ಕರೆಯುತ್ತೇನೆ. ಕುಮಾರಸ್ವಾಮಿಯನ್ನು ನಾನು ಪ್ರೀತಿಯಿಂದ ಹಾಗೆ ಕರೆಯುತ್ತೇನೆಯೇ ಹೊರತು ಅದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ನಾವು ಬೇರೆ, ಬೇರೆ ಪಕ್ಷದಲ್ಲಿ ಇರಬಹುದು. ಆದರೆ, ಹಳೆಯ ಸ್ನೇಹವನ್ನು ಮರೆಯಲು ಸಾಧ್ಯವಿಲ್ಲ ಎಂದು ಸಮಜಾಯಿಸಿ ನೀಡಿದರು.
ನಾನು ಪ್ರೀತಿಯಿಂದ ಕರಿಯಣ್ಣ ಎನ್ನುತ್ತೇನೆ
ಕುಮಾರಸ್ವಾಮಿಯವರು ನನ್ನನ್ನು ಕುಳ್ಳ ಎನ್ನುತ್ತಾರೆ. ನಾನು ಮೊದಲಿನಿಂದಲೂ ಅವರನ್ನು ಕರಿಯಣ್ಣ ಎಂದು ಕರೆಯುತ್ತೇನೆ. ಪ್ರೀತಿಯಿಂದ ಹೀಗೆ ಕರೆಯುತ್ತೇನೇ ಹೊರತು ಯಾವುದೇ ದುರುದ್ದೇಶ ಇಲ್ಲ. ಬೇರೆ ಪಕ್ಷದಲ್ಲಿದ್ದರೂ ಹಳೆಯ ಸ್ನೇಹ ಮರೆಯಲು ಸಾಧ್ಯವಿಲ್ಲ.
- ಜಮೀರ್ ಅಹ್ಮದ್, ಸಚಿವ