ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳು ನಮ್ಮದೇ ರಾಕೆಟ್‌ನಲ್ಲಿ ತೆರಳಿ ಚಂದ್ರನ ಮೇಲೆ ಇಳಿದು ಸಂಶೋಧನೆ ನಡೆಸಿ ವಾಪಸ್ ಭೂಮಿಗೆ ಮರಳಲು 1.5 ಲಕ್ಷ ಕೋಟಿ ರು. ಒಟ್ಟಾರೆ ವೆಚ್ಚಾವಾಗುತ್ತದೆ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಮಂಗಳವಾರ ನಗರದ ಡಾ. ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆಯ ಸಭಾಂಗಣದಲ್ಲಿ ಮತ್ತು ಆನ್‌ಲೈನ್ ಮೂಲಕ ಕ್ರೈಸ್ ಶಿಕ್ಷಣ ಸಂಸ್ಥೆಗಳ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಈ ವಿಷಯ ಪ್ರಸ್ತಾಪಿಸಿದರು.ಚಂದ್ರನ ಅಧ್ಯಯನದಿಂದ ಅನೇಕ ಪ್ರಯೋಜನಗಳಿವೆ. ಆದರೆ, ಸಂಕೀರ್ಣವಾದ ಕೆಲಸವಾಗಿದೆ. ದುಬಾರಿ ವೆಚ್ಚವಾಗುತ್ತದೆ. ಅಮೆರಿಕ ಮೊದಲ ಬಾರಿ ಚಂದ್ರನ ಮೇಲೆ ಹೋಗಿ ಬರಲು ತನ್ನ ಜಿಡಿಪಿಯ ಶೇ.30ರಷ್ಟು ಹಣ ಖರ್ಚು ಮಾಡಿತ್ತು. ಹೀಗಾಗಿ, ಚಂದ್ರನಲ್ಲಿಗೆ ಹೋಗಲು ದೇಶಗಳು ಹಿಂದೇಟು ಹಾಕುತ್ತವೆ. ಆದರೆ, ಭಾರತ ದೇಶಕ್ಕೆ ಇದು ಅಸಾಧ್ಯವಲ್ಲ. 2040ಕ್ಕೆ ನಾವು ಚಂದ್ರನ ಮೇಲೆ ಇಳಿಯಬೇಕಿದೆ. ಅದಕ್ಕಾಗಿ ಕೆಲಸ ನಡೆಯುತ್ತಿದೆ. ಈ ಅವಧಿಯಲ್ಲಿ ಅನೇಕ ಆವಿಷ್ಕಾರಗಳು, ಸಂಶೋಧನೆಗಳು ಆಗುತ್ತವೆ. ಅದರಿಂದ ತಂತ್ರಜ್ಞಾನ ಅಭಿವೃದ್ಧಿಯಾಗಿ ಭಾರತಕ್ಕೆ ಧೀರ್ಘಾವಧಿಯಲ್ಲಿ ಆರ್ಥಿಕ ಲಾಭವಾಗುತ್ತದೆ ಎಂದರು.
ಇಸ್ರೋ ಯೋಜನೆಗಳಿಗೆ ಕೊಟ್ಯಂತರ ರು. ಖರ್ಚಾಗುತ್ತದೆ. ಅದರಿಂದ ಜನ ಸಾಮಾನ್ಯರಿಗೆ ಏನು ಪ್ರಯೋಜನ? ಎಂದು ಬಾಲಕಿಯೊಬ್ಬಳು ಕೇಳಿದ ಪ್ರಶ್ನೆಗೆ, ಇಸ್ರೋ ಖರ್ಚು ಮಾಡುವ ಪ್ರತಿಯೊಂದು ರುಪಾಯಿಗೆ ಪ್ರತಿಯಾಗಿ ಎರಡುವರೆ ರುಪಾಯಿ ಗಳಿಸುತ್ತದೆ. ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತ ವರ್ಷಕ್ಕೆ 12,000 ಕೋಟಿ ರು. ವಿನಿಯೋಗಿಸುತ್ತದೆ. 140 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶಕ್ಕೆ ಇದು ಸಣ್ಣ ಮೊತ್ತ. ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯ ಗಾತ್ರ 500 ಬಿಲಿಯನ್ ಅಮೆರಿಕನ್ ಡಾಲರ್ ಇದ್ದು, ಅದರಲ್ಲಿ ಭಾರತದ ಪಾಲು ಶೇ.2ರಷ್ಟು ಮಾತ್ರ ಇದೆ. ನಮ್ಮ ಪಾಲು ಹೆಚ್ಚಿಸಿಕೊಳ್ಳಲು ಬಾಹ್ಯಾಕಾಶದಲ್ಲಿ ವ್ಯಾಪಕವಾಗಿ ಹೂಡಿಕೆಯಾಗಬೇಕಿದೆ ಎಂದು ಸೋಮನಾಥ್ ತಿಳಿಸಿದರು.ಭಾರತ 50 ಸ್ಯಾಟಲೈಟ್‌ಗಳನ್ನು ಹೊಂದಿದೆ ಆದರೆ, ಅವುಗಳ ಸಂಖ್ಯೆ 500 ಆಗಬೇಕು. ಪ್ರತಿ ವಾರ ಒಂದು ರಾಕೆಟ್ ಲಾಂಚ್ ಆಗಬೇಕು. ಇಂಟರ್ನೆಟ್, ಹವಾಮಾನ, ಪರಿಸರ, ರಿಯಲ್ ಎಸ್ಟೇಟ್, ಕಮ್ಯುನಿಕೇಷನ್ಸ್, ಲಾಜಿಸ್ಟಿಕ್ಸ್ ಸೇರಿ ಪ್ರತಿಯೊಂದು ಕಡೆಯು ನಮ್ಮ ಸ್ಯಾಟಲೈಟ್ ಡೆಟಾ ಬಳಕೆಯಾಗಬೇಕು. ಸ್ಯಾಟಲೈಟ್ ಮೂಲಕ ನೇರವಾಗಿ ಮೊಬೈಲ್‌ಗೆ ಇಂಟರ್ನೆಟ್ ಸಂಪರ್ಕ ಸಾಧ್ಯವಾಗಿಸಬೇಕು. ಇಂತಹ ಅನೇಕ ಆಲೋಚನೆಗಳನ್ನು ಇಸ್ರೋ ಹೊಂದಿದೆ. ಅದಕ್ಕಾಗಿ ಖಾಸಗಿ ಕಂಪನಿಗಳ ಪಾಲುದಾರಿಕೆಯನ್ನು ಆಹ್ವಾನಿಸಿದ್ದೇವೆ.
ವೆಚ್ಚ ಕಡಿಮೆ ಆಗುವ ಕಾರಣ ನಮ್ಮ ದೇಶಕ್ಕೆ ಬಂದು ಸ್ಯಾಟಲೈಟ್ ತಯಾರಿಸಿ ಎಂದು ಮಾಡಿದ ಮನವಿಗೆ ಅಮೆರಿಕಾ, ಯುರೋಪ್ ದೇಶಗಳ ಕಂಪನಿಗಳು ಆಸಕ್ತಿ ತೋರಿಸಿವೆ. ಖಾಸಗಿ ಪಾಲುದಾರಿಕೆಯಲ್ಲಿ ಸ್ಯಾಟಲೈಟ್ ನಿರ್ಮಾಣ, ಕಮ್ಯುನಿಕೇಷನ್ ಸೇವೆಗಳು, ಸಂವಹನ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ಆರಂಭಿಸಿವೆ ಎಂದು ಸೋಮನಾಥ ಹೇಳಿದರು.ಸಚಿವ ಎಚ್.ಸಿ. ಮಹದೇವಪ್ಪ ಮಾತನಾಡಿ, ಮೂಢನಂಬಿಕೆ, ಅಜ್ಞಾನವನ್ನು ಕಳೆದು ಜ್ಞಾನವನ್ನು ಹೊಂದಲು ವಿಜ್ಞಾನ, ತಂತ್ರಜ್ಞಾನ ಅವಶ್ಯಕವಾಗಿದೆ. ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಲು ಈ ಸಂವಾದ ಆಯೋಜಿಸಲಾಗಿದೆ ಎಂದರು.
2 ಟೆಲಿಸ್ಕೊಪ್ ವಿತರಣೆ: ರಾಜ್ಯದ 833 ವಸತಿ ಶಾಲೆಗಳಿಗೆ ರಾಜ್ಯ ಸರ್ಕಾರ ಟೆಲಿಸ್ಕೊಪ್ ಒದಗಿಸುತ್ತಿದ್ದು, ಸಾಂಕೇತಿಕವಾಗಿ ಎರಡು ವಸತಿ ಶಾಲೆಗಳಿಗೆ ಕಾರ್ಯಕ್ರಮದಲ್ಲಿ ಟೆಲಿಸ್ಕೊಪ್ ನೀಡಲಾಯಿತು.