ಸಾರಾಂಶ
ಬೆಂಗಳೂರು : ನಗರ ವ್ಯಾಪ್ತಿಯ ಆಸ್ತಿ ಮಾಲೀಕರು ಇ-ಖಾತಾ ಪಡೆಯುವುದಕ್ಕೂ ಮುನ್ನ ತಮ್ಮ ಆಸ್ತಿಯ ಖಾತಾದಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸೋಮವಾರದಿಂದ ಅವಕಾಶ ನೀಡಲಾಗುವುದು ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ಶುಕ್ರವಾರ ಏರ್ಪಡಿಸಲಾಗಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿನ 22 ಲಕ್ಷ ಆಸ್ತಿಗಳಿಗೆ ಈಗಾಗಲೇ ಕರಡು ಇ-ಖಾತಾ ಸಿದ್ಧಪಡಿಸಲಾಗಿದೆ. ಆದರೆ, ಕೆಲವು ಆಸ್ತಿಗಳ ಖಾತಾದಲ್ಲಿ ವಿಸ್ತೀರ್ಣ, ಹೆಸರು ಸೇರಿ ಇನ್ನಿತರ ಅಂಶಗಳು ತಪ್ಪಾಗಿ ನಮೂದಾಗಿರುವುದು ಕಂಡು ಬಂದಿದೆ, ಈ ಕುರಿತು ದೂರುಗಳು ಸಲ್ಲಿಕೆಯಾಗಿವೆ. ಅದಕ್ಕಾಗಿ, ಖಾತಾದಲ್ಲಿನ ತಪ್ಪು ಮಾಹಿತಿಯನ್ನು ಸೂಕ್ತ ದಾಖಲೆಗಳನ್ನು ನೀಡಿ ಸರಿಪಡಿಸಲು ಸೋಮವಾರದಿಂದ ಅವಕಾಶ ನೀಡಲಾಗುತ್ತಿದೆ. ಆಸ್ತಿ ಮಾಲೀಕರು ನಿಗದಿತ ವೆಬ್‌ಸೈಟ್‌ನಲ್ಲಿ ಸ್ವಯಂ ತಾವೇ ತಪ್ಪು ಸರಿಪಡಿಸಿಕೊಳ್ಳಬಹುದಾಗಿದೆ ಎಂದರು.
2000 ಕೋಟಿ ಅಕ್ರಮ ತಡೆಗೆ ಕ್ರಮ: ಇ-ಖಾತಾ ವಿತರಣೆಗೆ ಸಂಬಂಧಿಸಿದಂತೆ ಪ್ರತಿ ಆಸ್ತಿಗೆ 1 ಲಕ್ಷ ರು. ಲಂಚ ಕೇಳಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ. ಜಂಟಿ ಆಯುಕ್ತರೊಬ್ಬರ ಸಹೋದರರು ಸೇರಿ ಕೆಲ ಅಧಿಕಾರಿಗಳ ಸಂಬಂಧಿಕರೇ ಲಂಚ ನೀಡಿ ಇ-ಖಾತಾ ಪಡೆದಿರುವ ನಿದರ್ಶನಗಳು ದೊರೆತಿವೆ. ಅದರಂತೆ 22 ಲಕ್ಷ ಆಸ್ತಿಗಳಿಗೆ ತಲಾ 1 ಲಕ್ಷ ರು. ನಂತರ 2,200 ಕೋಟಿ ರು. ಹಗರಣವಾಗುತ್ತದೆ. ಇದನ್ನು ತಡೆಯಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವೇಗವಾಗಿ ಇ-ಖಾತಾ ವ್ಯವಸ್ಥೆ ಜಾರಿ ಮಾಡುವಂತೆ ಸೂಚನೆ ನೀಡಿದ್ದಾರೆ ಎಂದರು.
ಕಂದಾಯಾಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡದೇ, ಬೆಂಗಳೂರು ಒನ್ ಕೇಂದ್ರ ಅಥವಾ ಆಸ್ತಿ ಮಾಲೀಕರು ಸ್ವಂತ ತಾವೇ ಇ-ಖಾತಾ ಪಡೆಯುವಂತಹ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಸೈಬರ್ ಕೇಂದ್ರಗಳ ಮೂಲಕವೂ ಇ-ಖಾತಾ ನೀಡುವ ಚಿಂತನೆ ಮಾಡಲಾಗಿದೆ. ಇನ್ನೊಂದು ತಿಂಗಳಲ್ಲಿ ಖಾಸಗಿ ಸೈಬರ್ ಕೇಂದ್ರಗಳಿಗೆ ಅದಕ್ಕೆ ಅವಕಾಶ ನೀಡಲಾಗುವುದು. ಇ-ಖಾತಾ ವಿತರಣೆಗೆ ಹಣ ಕೇಳುವ ಸಿಬ್ಬಂದಿ, ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಬಹುದು ಎಂದು ಮುನೀಶ್ ಮೌದ್ಗಿಲ್ ಹೇಳಿದರು.
ಶೀಘ್ರದಲ್ಲಿ ನಕ್ಷೆ ಸಹಿತ ಇ-ಖಾತಾ: ನಗರದಲ್ಲಿ 22 ಲಕ್ಷ ಆಸ್ತಿಗಳಲ್ಲಿ ಶೇ. 90ರಷ್ಟು ಆಸ್ತಿಗಳ ಪರಿಶೀಲನೆ ನಡೆಸಿರಲಿಲ್ಲ. ಹೀಗಾಗಿ ನಗರದ ಎಲ್ಲ ಆಸ್ತಿಗಳನ್ನು ಜಿಪಿಎಸ್ ಮ್ಯಾಪಿಂಗ್ ಮಾಡಲಾಗುತ್ತಿದೆ. ಜತೆಗೆ ಎಲ್ಲ ಆಸ್ತಿಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಸದ್ಯ ನೀಡಲಾಗುತ್ತಿರುವ ಇ-ಖಾತಾದಲ್ಲಿ ಖಾತಾದಲ್ಲಿನ ವಿವರಗಳಷ್ಟೇ ನಮೂದಾಗುತ್ತಿದೆ. ಜಿಪಿಎಸ್ ಮ್ಯಾಪಿಂಗ್ ಮತ್ತು ಡಿಜಿಟಲೈಸ್ ಮಾಡಿದ್ದರಿಂದ ಶೀಘ್ರದಲ್ಲಿ ಇ-ಖಾತಾದಲ್ಲಿ ಆಸ್ತಿಯ ನಕ್ಷೆ ಮತ್ತು ಆಸ್ತಿಯ ಮೇಲ್ಭಾಗದ ಭಾವಚಿತ್ರವೂ ಮುದ್ರಣವಾಗಲಿದೆ. ಅದರಿಂದ ಇ-ಖಾತಾದ ಬಗ್ಗೆ ಆಸ್ತಿ ಮಾಲೀಕರಿಗೆ ನಂಬಿಕೆ ಉಂಟಾಗುವಂತಾಗಲಿದೆ ಎಂದರು.
ದೂರು ನೀಡಲು ಪ್ರತ್ಯೇಕ ವೆಬ್‌ಸೈಟ್: ಖಾತಾ ಮತ್ತು ಇ-ಖಾತಾಗೆ ಸಂಬಂಧಿಸಿದಂತೆ ದೂರುಗಳು ಸೇರಿ ಬೇರೆ ಯಾವುದೇ ವಿಚಾರಗಳನ್ನು ಹಂಚಿಕೊಳ್ಳಲು ಪ್ರತ್ಯೇಕ ವೆಬ್‌ಸೈಟ್ ಮಾಡಲು ನಿರ್ಧರಿಸಲಾಗಿದೆ. ಅದಕ್ಕಾಗಿ ಕಾರ್ಯನಿರ್ವಹಿಸಲಾಗುತ್ತಿದ್ದು, ಇನ್ನು 3 ವಾರಗಳಲ್ಲಿ ಜನರ ಬಳಕೆಗೆ ನೀಡಲಾಗುವುದು. ಹಾಗೆಯೇ, ಸದ್ಯ ಇರುವ ಸಹಾಯವಾಣಿಗಳ ಸಂಖ್ಯೆಯನ್ನು 15ರಿಂದ 30ಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ಮೌದ್ಗಿಲ್ ಮಾಹಿತಿ ನೀಡಿದರು.
7 ದಿನಗಳಲ್ಲಿ ಖಾತಾ ಬದಲಾವಣೆ: ಖಾತಾ ಬದಲಾವಣೆ ಸೇರಿ ಮತ್ತಿತರ ವಿಚಾರದಲ್ಲಿ ಸಮಸ್ಯೆ ತಪ್ಪಿಸಲು ಇ-ಖಾತಾ ಮತ್ತು ಸೇಲ್‌ಡೀಡ್ ಹೊಂದಿರುವ ಆಸ್ತಿ ಮಾಲೀಕರು ಏಳು ದಿನಗಳಲ್ಲಿ ತಮ್ಮ ಆಸ್ತಿ ಮಾರಾಟ ಮಾಡುವ ವ್ಯವಸ್ಥೆ ತರಲಾಗಿದೆ. ಅದಕ್ಕೆ ಖರೀದಿದಾರರ ಮತ್ತು ಮಾರಾಟಗಾರರ ಆಧಾರ್ ಪ್ರಮಾಣಪತ್ರವನ್ನು ಕಡ್ಡಾಯವಾಗಿ ನೀಡಬೇಕು ಎಂದು ಮುನೀಶ್ ಮೌದ್ಗಿಲ್ ತಿಳಿಸಿದರು.
ಇ-ಖಾತಾ ವಿತರಣೆ ವಿವರ
* 22 ಲಕ್ಷ ಆಸ್ತಿಗಳ ಕರಡು ಇ-ಖಾತಾ ಸಿದ್ಧ
* 54 ಲಕ್ಷ ಆಸ್ತಿ ಮಾಲೀಕರು ಇ-ಖಾತಾಗಾಗಿ ವೆಬ್‌ಸೈಟ್‌ಗೆ ಭೇಟಿ
* 6 ಲಕ್ಷ ಆಸ್ತಿಗಳ ಕರಡು ಇ-ಖಾತಾ ಡೌನ್‌ಲೋಡ್
* 5,324 ಅಂತಿಮ ಇ-ಖಾತಾ ವಿತರಣೆ