ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹುಲುಸಾಗಿ ಬೆಳೆದು ನಿಂತಿದ್ದ ಹಲವು ಮರಗಳ ಹನನ ಮಾಡಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸುತ್ತಿರುವ ಕೃಷಿ ಮೇಳ ಹೆಬ್ಬಾಳದ ಜಿಕೆವಿಕೆಯಲ್ಲಿ ನ.14 ರಿಂದ 17 ನಡೆಯಲಿದ್ದು, ಮೇಳದಲ್ಲಿ ಹೊಸ ತಳಿಗಳ ಲೋಕಾರ್ಪಣೆ, ಕೃಷಿ ಸಂಬಂಧ ಹೊಸ ತಂತ್ರಜ್ಞಾನಗಳ ಪರಿಚಯ, ಚರ್ಚೆ, ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಎಸ್.ವಿ.ಸುರೇಶ್ ಅವರು, ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಘೋಷವಾಕ್ಯದಡಿ ಕೃಷಿ ಮೇಳ ಹಮ್ಮಿಕೊಳ್ಳಲಾಗಿದೆ. ಸಿಎಂ ಸಿದ್ದರಾಮಯ್ಯ ನ.14 ರಂದು ಬೆಳಗ್ಗೆ 11 ಗಂಟೆಗೆ ಮೇಳಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ನಾಲ್ಕು ಹೊಸ ತಳಿ ಲೋಕಾರ್ಪಣೆ: ರಾಜ್ಯ ಮಟ್ಟದ ಪ್ರಶಸ್ತಿಯ ಜೊತೆಗೆ ವಿವಿ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳ ಸಾಧಕರಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿವಿ ಅಭಿವೃದ್ಧಿಪಡಿಸಿರುವ ಮುಸುಕಿನ ಜೋಳ, ಅಲಸಂದೆ, ಸೂರ್ಯಕಾಂತಿ ಮತ್ತು ಮೇವಿನ ಹೊಸ ತಳಿಗಳು ಮತ್ತು ನೂತನ ತಂತ್ರಜ್ಞಾನಗಳ ಲೋಕಾರ್ಪಣೆಗೊಳಿಸಲಾಗುವುದು ಎಂದರು.ಆರು ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅತ್ಯುತ್ತಮ ರೈತ ಪ್ರಶಸ್ತಿಗೆ ಚಿಂತಾಮಣಿಯ ಕುರುಟಹಳ್ಳಿಯ ಸಿ.ಆರ್.ರಾಧಕೃಷ್ಣ, ಡಾ.ಎಂ.ಎಚ್.ಮರೀಗೌಡ ತೋಟಗಾರಿಕಾ ಪ್ರಶಸ್ತಿಗೆ ದೊಡ್ಡಬಳ್ಳಾಪುರದ ಹಾಡೋನಹಳ್ಳಿ ತೂಬಗೆರೆಯ ಎಚ್.ಪಿ.ರೂಪಾ, ಕ್ಯಾನ್ ಬ್ಯಾಂಕ್ ಪ್ರಶಸ್ತಿ- ಚನ್ನರಾಯಪಟ್ಟಣದ ವಗರಹಳ್ಳಿಯ ವಿ.ಎಸ್.ಪ್ರವೀಣ್, ರೈತ ಮಹಿಳೆ ಪ್ರಶಸ್ತಿ- ರಾಮನಗರದ ಕಗ್ಗಲಹಳ್ಳಿಯ ವೈ.ಸಿ.ಶಾಂತಮ್ಮ, ಡಾ.ಆರ್.ದ್ವಾರಕೀನಾಥ್ ಪ್ರಶಸ್ತಿ- ಹೊಳೇನರಸೀಪುರದ ಉಣ್ಣೇನಹಳ್ಳಿಯ ಯು.ಎಂ.ನಾಗವರ್ಮ ಮತ್ತು ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಯನ್ನು ಬೆಂಗಳೂರು ಕೃಷಿ ವಿವಿಯ ತೋಟಗಾರಿಕಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಶಾಲಿನಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಸುರೇಶ್ ತಿಳಿಸಿದರು.
ಮರ ಕಡಿದ ಕೃಷಿ ವಿವಿ: ಕೃಷಿ ಮೇಳವು ದಶಕಗಳಿಂದ ನಡೆಯುತ್ತಿದ್ದರೂ ಇದೇ ಪ್ರಥಮ ಬಾರಿಗೆ ಮೇಳದ ಸಮಾರಂಭ ನಡೆಸಲು ಹುಲುಸಾಗಿ ಬೆಳೆದಿದ್ದ ನಾಲ್ಕಾರು ಮರಗಳನ್ನು ಕೃಷಿ ವಿಶ್ವವಿದ್ಯಾಲಯ ಕಡಿತ ಮಾಡಿತ್ತು. ಮರ ಬೆಳೆಸಬೇಕಿದ್ದ ಕೃಷಿ ವಿವಿಯೇ ಮರಕ್ಕೆ ಕೊಡಲಿ ಹಾಕಿದ್ದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ಕೇಳಿಬಂದಿತ್ತು. ಆದರೆ, ಕೃಷಿ ವಿವಿ ತನ್ನ ಈ ಕೃತ್ಯದ ಬಗ್ಗೆ ಚಕಾರವೆತ್ತಿರಲಿಲ್ಲ.