ಸಾರಾಂಶ
ಬೆಂಗಳೂರು : ಪ್ರಾಧಿಕಾರದ ಜಾಗ ಒತ್ತುವರಿ ಮಾಡಿ ನಿರ್ಮಿಸಲಾಗಿದ್ದ 8 ಶೆಡ್‌ಗಳನ್ನು ಸ್ಥಳೀಯರ ವಿರೋಧದ ನಡುವೆಯೂ ತೆರವುಗೊಳಿಸಿ ಅಂದಾಜು ₹60 ಕೋಟಿ ಮೌಲ್ಯದ 26 ಗುಂಟೆ ಜಾಗವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವಶಕ್ಕೆ ಪಡೆದುಕೊಂಡಿದೆ.
ನಾಗರಬಾವಿ ಬಡಾವಣೆಯ 1ನೇ ಹಂತದ ಸರ್ವೆ ನಂ.78ರಲ್ಲಿ ಬಿಡಿಎಗೆ ಸೇರಿದ್ದ 26 ಗುಂಟೆ ಜಾಗವನ್ನು ಒತ್ತುವರಿ ಮಾಡಿಕೊಂಡು 1 ಹೋಟೆಲ್, ಕಾರ್ ಶೆಡ್ ಸೇರಿ 8 ಶೆಡ್‌ಗಳನ್ನು ನಿರ್ಮಿಸಿ ಭೂಮಾಲೀಕರು ಬಾಡಿಗೆಗೆ ನೀಡಿದ್ದರು. ಅನಧಿಕೃತ ಶೆಡ್‌ಗಳನ್ನು ತೆರವುಗೊಳಿಸಿ ಜಾಗ ಬಿಟ್ಟುಕೊಡುವಂತೆ ಅನೇಕ ಬಾರಿ ನೋಟಿಸ್ ನೀಡಿದ್ದರೂ ಒತ್ತುವರಿ ತೆರವು ಮಾಡಿರಲಿಲ್ಲ.
ಈ ಹಿನ್ನೆಲೆ ಗುರುವಾರ ಬೆಳಗ್ಗೆ 7.30ರ ಸುಮಾರಿಗೆ ಬಿಡಿಎ ಎಂಜಿನಿಯರ್‌ಗಳು, ಬಿಡಿಎ ಆರಕ್ಷಕ ಅಧೀಕ್ಷರು ಮತ್ತು ಸಿಬ್ಬಂದಿ ಸಹಕಾರದಲ್ಲಿ ಜೆಸಿಬಿ ಸಹಾಯದಿಂದ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಮನೆ ಮಾಲೀಕ ಮತ್ತು ಆತನ ಕುಟುಂಬಸ್ಥರು, ಯಾವುದೇ ನೋಟಿಸ್ ನೀಡದೆ ಏಕಾಏಕಿ ತೆರವು ಮಾಡಿದರೆ ನಾವು ಎಲ್ಲಿಗೆ ಹೋಗಬೇಕು. ಇಲ್ಲಿ 38 ಗುಂಟೆ ಜಾಗ ನಮ್ಮದು. 40ಕ್ಕೂ ಹೆಚ್ಚು ಕುಟುಂಬದ ಸದಸ್ಯರು ಇದನ್ನೇ ನಂಬಿಕೊಂಡಿದ್ದೇವೆ. ಈ ಜಾಗವನ್ನು ತೆರವು ಮಾಡಬೇಡಿ ಎಂದು ಬಿಡಿಎ ಅಧಿಕಾರಗಳ ಮುಂದೆ ಕಣ್ಣೀರು ಹಾಕುತ್ತಾ ಮನವಿ ಮಾಡಿದರು. ಆದರೆ ಅವರ ಮನವಿ ಪರಿಗಣಿಸದೇ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿದರು.
ಈ ಕುರಿತು ‘ಕನ್ನಡಪ್ರಭ’ ಜೊತೆ ಮಾತನಾಡಿದ ಬಿಡಿಎ ಪಶ್ಚಿಮ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ರಮ್ಯಾ ಅವರು, ಭೂ ಮಾಲೀಕರಿಗೆ ಸೇರಿದ 35 ಗುಂಟೆ ಜಾಗವನ್ನು ಹೊರತುಪಡಿಸಿ ಉಳಿದಂತೆ 26 ಗುಂಟೆ ಬಿಡಿಎ ಜಾಗದ ಒತ್ತುವರಿಯನ್ನು ತೆರವು ಮಾಡಲಾಗಿದೆ. ಈ ಜಾಗದ ವಿಚಾರವಾಗಿ ನ್ಯಾಯಾಲಯದಲ್ಲಿದ್ದ ಪ್ರಕರಣದಲ್ಲಿ ಬಿಡಿಎ ಪರವಾಗಿ ಆದೇಶ ಆಗಿದೆ. ಈ ಹಿನ್ನೆಲೆ ತೆರವು ಮಾಡಲಾಗಿದೆ ಎಂದರು.