100 ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ! ಸೌರ ಕೊರೋನಾ ಅಧ್ಯಯನಕ್ಕೆ ಐರೋಪ್ಯ ಉಪಗ್ರಹಗಳು ರೆಡಿ

| Published : Dec 03 2024, 11:20 AM IST

Solar Eclipse 2024

ಸಾರಾಂಶ

ಯುರೋಪ್‌ ಸ್ಪೇಸ್‌ ಅಭಿವೃದ್ಧಿ ಪಡಿಸಿರುವ ಪ್ರೋಬಾ-3ಯನ್ನು ಡಿ.4ರಂದು ಪಿಎಸ್ಎಲ್‌ವಿ-ಸಿ59 ರಾಕೆಟ್‌ ಮೂಲಕ ಇಸ್ರೋ ಉಡಾವಣೆಗೊಳಿಸಲು ಸಿದ್ಧತೆ ನಡೆಸಿದೆ.  

ಯುರೋಪ್‌ ಸ್ಪೇಸ್‌ ಅಭಿವೃದ್ಧಿ ಪಡಿಸಿರುವ ಪ್ರೋಬಾ-3ಯನ್ನು ಡಿ.4ರಂದು ಪಿಎಸ್ಎಲ್‌ವಿ-ಸಿ59 ರಾಕೆಟ್‌ ಮೂಲಕ ಇಸ್ರೋ ಉಡಾವಣೆಗೊಳಿಸಲು ಸಿದ್ಧತೆ ನಡೆಸಿದೆ. ಈ ಮಹತ್ವ ಯೋಜನೆಯು ಸೌರ ಕೊರೋನಾದ ಅಧ್ಯಯನ ನಡೆಸುವ ಉದ್ದೇಶವನ್ನು ಹೊಂದಿದೆ. ಸೂರ್ಯನ ಮೇಲ್ಮೈ ಹೆಚ್ಚು ಬಿಸಿಯಾಗಿರುವ ಕಾರಣವೇನೆಂದು ತಿಳಿಯಲು ವಿಜ್ಞಾನಿಗಳು ಪ್ರಯತ್ನ ನಡೆಸಲಿದ್ದಾರೆ.

======

ಗಿರೀಶ್ ಲಿಂಗಣ್ಣ

-ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಯುರೋಪಿಯನ್ ಸ್ಪೇಸ್ ಏಜೆನ್ಸಿ (ಇಎಸ್ಎ) ಅಭಿವೃದ್ಧಿಪಡಿಸಿರುವ ಪ್ರೋಬಾ-3 ಅನ್ನು (ಪ್ರಾಜೆಕ್ಟ್ ಆನ್‌ಬೋರ್ಡ್ ಅನಾಟಮಿ) ಡಿ.4ರ ಸಂಜೆ 4:08ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ತನ್ನ ಪಿಎಸ್ಎಲ್‌ವಿ-ಸಿ59 ರಾಕೆಟ್ ಮೂಲಕ ಉಡಾವಣೆಗೊಳಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿದ್ಧತೆ ನಡೆಸುತ್ತಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಸೂರ್ಯನ ಅತ್ಯಂತ ಹೊರಗಿನ ಮತ್ತು ಅತ್ಯಂತ ಬಿಸಿಯ ಪದರವಾದ ಸೌರ ಕೊರೋನಾದ ಅಧ್ಯಯನ ನಡೆಸುವ ಉದ್ದೇಶ ಹೊಂದಿದೆ.

ಪ್ರೋಬಾ-3 ಪ್ರಿಸಿಷನ್ ಫಾರ್ಮ್ಯಾಟಿಂಗ್ ಫ್ಲೈಯಿಂಗ್ ಎಂಬ ವಿನೂತನ ಪ್ರಯತ್ನವನ್ನು ನಡೆಸಲಿದೆ. ಅಂದರೆ, ಈ ಯೋಜನೆಯಲ್ಲಿ 2 ಉಪಗ್ರಹಗಳು ಒಂದಕ್ಕೊಂದು ಸನಿಹದಲ್ಲಿ ಸ್ಥಿರವಾದ ಸ್ಥಾನದಲ್ಲಿದ್ದು, ಬಾಹ್ಯಾಕಾಶದಲ್ಲಿ ಚಲಿಸಲಿವೆ. ಇದು ಇಎಸ್ಎಯ ಪ್ರೋಬಾ ಸರಣಿಯ ವಿನೂತನ ಯೋಜನೆಯಾಗಿದೆ. 2001 ಮತ್ತು 2009ರಲ್ಲಿ ಕ್ರಮವಾಗಿ ಪ್ರೋಬಾ-1, ಪ್ರೋಬಾ-2 ಉಡಾವಣೆಗೊಂಡಿದ್ದವು. ಪ್ರೋಬಾ-1ರ ಉಡಾವಣೆಯನ್ನು ಇಸ್ರೋ ನಿರ್ವಹಿಸಿತ್ತು. ಪ್ರೋಬಾ-3ರ ಅಭಿವೃದ್ಧಿಗಾಗಿ ಸ್ಪೇನ್, ಬೆಲ್ಜಿಯಂ, ಪೋಲೆಂಡ್, ಇಟಲಿ ಮತ್ತು ಸ್ವಿಟ್ಜರ್ಲೆಂಡ್‌ಗಳ ವಿಜ್ಞಾನಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರೋಬಾ-3ರ ಉದ್ದೇಶವೇನು?

ಪ್ರೋಬಾ-3 ಯೋಜನೆಯನ್ನು ಅಂದಾಜು 200 ಮಿಲಿಯನ್ ಯೂರೋ (1 ಮಿಲಿಯನ್ ಯೂರೋ ಎಂದರೆ ಅಂದಾಜು 9.2 ಕೋಟಿ ರು.) ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದ್ದು, ಇದು 2 ವರ್ಷಗಳ ಕಾಲ ಕಾರ್ಯಾಚರಿಸುವ ನಿರೀಕ್ಷೆಗಳಿವೆ. ಈ ಅವಧಿಯಲ್ಲಿ ವಿಜ್ಞಾನಿಗಳು ಪ್ರತಿ ವರ್ಷವೂ ತಲಾ 6 ಗಂಟೆಗಳ 50 ಕೃತಕ ಸೂರ್ಯ ಗ್ರಹಣಗಳನ್ನು ಉಂಟುಮಾಡಲಿದ್ದಾರೆ. ಪ್ರೋಬಾ-3 ಬಾಹ್ಯಾಕಾಶ ನೌಕೆಯನ್ನು ಭೂಮಿಯ ಸುತ್ತಲೂ ದೀರ್ಘವೃತ್ತಾಕಾರದ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ. ಭೂಮಿಗೆ ಅತ್ಯಂತ ಸನಿಹದ ಬಿಂದುವಿನಲ್ಲಿ (ಪೆರಿಜೀ) ಇದು ಭೂಮಿಯಿಂದ 600 ಕಿ.ಮೀ ದೂರದಲ್ಲಿದ್ದರೆ, ಭೂಮಿಗೆ ಅತ್ಯಂತ ದೂರದ ಬಿಂದುವಿನಲ್ಲಿ (ಅಪೊಜೀ) 60,530 ಕಿ.ಮೀ.ಗಳಷ್ಟು ದೂರದಲ್ಲಿರಲಿದೆ.

ಈ ಕಕ್ಷೆಯಲ್ಲಿ ಚಲಿಸುತ್ತಾ, ಬಾಹ್ಯಾಕಾಶ ನೌಕೆಗೆ ಭೂಮಿಯ ಸುತ್ತಲೂ 1 ಪ್ರದಕ್ಷಿಣೆ ನಡೆಸಲು ಬಹುತೇಕ 19.7 ಗಂಟೆ ಸಮಯ ಹಿಡಿಯುತ್ತದೆ. ಉಪಗ್ರಹ ಚಲಿಸುವ ಕಕ್ಷೆ ದೀರ್ಘವೃತ್ತಾಕಾರದ ಕಕ್ಷೆ ಆಗಿರುವುದರಿಂದ, ಬಾಹ್ಯಾಕಾಶ ನೌಕೆ ಭೂಮಿಗೆ ಸನಿಹದಲ್ಲಿರುವಾಗ (ಪೆರಿಜಿಯಲ್ಲಿ) ವೇಗವಾಗಿಯೂ, ಭೂಮಿಯಿಂದ ಹೆಚ್ಚಿನ ದೂರದಲ್ಲಿರುವಾಗ (ಅಪೊಜಿಯಲ್ಲಿ) ನಿಧಾನವಾಗಿಯೂ ಚಲಿಸಲಿದೆ. ಇದಕ್ಕೆ ಬಾಹ್ಯಾಕಾಶ ನೌಕೆ ಭೂಮಿಯ ಬಳಿ ಇರುವಾಗ ಹೆಚ್ಚಿನ ಗುರುತ್ವಾಕರ್ಷಣಾ ಸೆಳೆತ ಎದುರಾಗುವುದು ಕಾರಣವಾಗಿದೆ. ಪ್ರೋಬಾ-3 ಯೋಜನೆಯ ಅಭಿವೃದ್ಧಿ ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ನಡೆಯುತ್ತಿದೆ. ಇದರಲ್ಲಿ ಯುರೋಪಿನಾದ್ಯಂತ ಇರುವ 40ಕ್ಕೂ ಹೆಚ್ಚು ಕಂಪನಿಗಳ ಪಾತ್ರವಿದೆ. ಇಎಸ್ಎಯ 13 ಸದಸ್ಯ ರಾಷ್ಟ್ರಗಳು ಪ್ರೋಬಾ-3ಗೆ ಬೆಂಬಲ, ನೆರವು ನೀಡಿವೆ.

ನೆರಳು ಸೃಷ್ಟಿಸಿ ಅಧ್ಯಯನಕ್ಕೆ 2 ಉಪಗ್ರಹ

ಪ್ರೋಬಾ-3ರಲ್ಲಿ 2 ಉಪಗ್ರಹಗಳಿದ್ದು, ಈ ಪೈಕಿ 1 ಉಪಗ್ರಹ ದೂರದರ್ಶಕವನ್ನು ಹೊಂದಿದ್ದರೆ, ಅದರಿಂದ 150 ಮೀ. ದೂರದಲ್ಲಿರುವ ಎರಡನೇ ಉಪಗ್ರಹ, ಒಕಲ್ಟರ್ ಎಂದು ಕರೆಯುವ ವಿಶೇಷ ಬಿಲ್ಲೆಯನ್ನು ಬಳಸಿ, ಸೂರ್ಯನ ಬೆಳಕನ್ನು ತಡೆಯುತ್ತದೆ. ಈ ಉಪಕರಣ ಸೂರ್ಯನ ಪ್ರಖರ ಬೆಳಕನ್ನು ತಡೆದು, ಒಂದು ನೆರಳನ್ನು ಸೃಷ್ಟಿಸಿ, ದೂರದರ್ಶಕಕ್ಕೆ ಮಸುಕಾದ ಸೂರ್ಯನ ಹೊರ ವಾತಾವರಣವಾದ ಕೊರೋನಾವನ್ನು ಸ್ಪಷ್ಟವಾಗಿ, ಯಾವುದೇ ಅಡಚಣೆಯಿಲ್ಲದೆ ವೀಕ್ಷಿಸಲು ಅನುಕೂಲ ಕಲ್ಪಿಸುತ್ತದೆ. ನೆರಳು ಸರಿಯಾದ ಜಾಗದಲ್ಲಿ ಉಂಟಾಗಬೇಕಾದರೆ, ಎರಡೂ ಉಪಗ್ರಹಗಳು ಸರಿಯಾದ ಸ್ಥಾನದಲ್ಲೇ ಇದ್ದು, ನಿಖರವಾಗಿ ಚಲಿಸಬೇಕು. ಅವೆರಡೂ ಎಷ್ಟು ನಿಖರವಾಗಿರಬೇಕೆಂದರೆ, ನಿಗದಿತ ಸ್ಥಳದಿಂದ 1 ಮಿಲಿಮೀಟರ್ ಸಹ ಆಚೆ ಈಚೆ ಚಲಿಸುವಂತಿಲ್ಲ. ಹಾಗಾದಾಗ ಮಾತ್ರ, ಯಾವುದೇ ಪ್ರಖರ ಬೆಳಕಿನ ಅಡಚಣೆಯಿಲ್ಲದೆ ದೂರದರ್ಶಕಕ್ಕೆ ಸೂರ್ಯನ ಹೊರ ವಾತಾವರಣವನ್ನು ವೀಕ್ಷಿಸಲು ಸಾಧ್ಯವಾಗುತ್ತದೆ.

ಯಾಕೆ ಭಾರತದಿಂದ ಉಡಾವಣೆ?

ಭಾರತದ ಪಿಎಸ್ಎಲ್‌ವಿ-ಎಕ್ಸ್ಎಲ್ ರಾಕೆಟ್ ಪ್ರೋಬಾ-3ರ ಎರಡೂ ಉಪಗ್ರಹಗಳು, ಒಕಲ್ಟರ್ ಬಾಹ್ಯಾಕಾಶ ನೌಕೆ (200 ಕೇಜಿ), ಕೊರೊನಾಗ್ರಾಫ್ ಬಾಹ್ಯಾಕಾಶ ನೌಕೆ (340 ಕೇಜಿ) ಒಟ್ಟು ತೂಕವನ್ನು ಅತ್ಯಂತ ದೀರ್ಘವೃತ್ತಾಕಾರದ ಕಕ್ಷೆಗೆ ಒಯ್ಯುವ ಸಾಮರ್ಥ್ಯ ಹೊಂದಿದೆ. ಆದ್ದರಿಂದಲೇ ಪ್ರೋಬಾ-3ರ ಉಡಾವಣೆ ಭಾರತದಿಂದ ನಡೆಯಲಿದೆ. ಪ್ರೋಬಾ ಎಂದರೆ ಪ್ರಾಜೆಕ್ಟ್ ಫಾರ್ ಆನ್‌ಬೋರ್ಡ್ ಅಟಾನಮಿ ಎಂಬುದರ ಸ್ವರೂಪವಾಗಿದ್ದು, ಉಪಗ್ರಹಗಳು ಭೂಮಿಯಿಂದ ನಿರಂತರ ನಿಯಂತ್ರಣವಿಲ್ಲದೆಯೇ ಸ್ವಂತವಾಗಿ ಕಾರ್ಯಾಚರಿಸುವ ರೀತಿಯಲ್ಲಿ ವಿನ್ಯಾಸಗೊಂಡಿವೆ. ಪ್ರೋಬಾ-3 ಯೋಜನೆಯ 2 ಉಪಗ್ರಹಗಳು ರಚನಾತ್ಮಕ ಹಾರಾಟದ (ಫಾರ್ಮೇಶನ್ ಫ್ಲೈಯಿಂಗ್) ಪ್ರಯೋಗಗಳನ್ನು ಸ್ವತಂತ್ರವಾಗಿ ನಡೆಸುತ್ತಾ, ತಮ್ಮ ಅಂತರ್ಗತ ವ್ಯವಸ್ಥೆಗಳನ್ನು ಬಳಸಿಕೊಂಡು ಸರಿಯಾದ ಸ್ಥಾನದಲ್ಲಿದ್ದು, ಜೊತೆಯಾಗಿ ಕಾರ್ಯನಿರ್ವಹಿಸುತ್ತವೆ.

ಸೂರ್ಯನ ಕೊರೋನಾದ ಅಧ್ಯಯನ ಏಕೆ?

ಸೂರ್ಯನ ಅತ್ಯಂತ ಹೊರಗಿನ ವಾತಾವರಣವಾದ ಕೊರೋನಾ ಕೌತುಕಗಳ ಆಗರವಾಗಿದೆ. ವಿಸ್ಮಯಕಾರಿ ವಿಚಾರವೆಂದರೆ, ಭೂಮಿಯಿಂದ ಕಾಣುವ, ಸೂರ್ಯನ ಹೊಳೆಯುವ ಹೊರಮೈಗೆ ಹೋಲಿಸಿದರೆ ಕೊರೋನಾ 1 ಮಿಲಿಯನ್ ಡಿಗ್ರಿ ಸೆಲ್ಶಿಯಸ್‌ಗಿಂತಲೂ ಹೆಚ್ಚು ಬಿಸಿಯಾಗಿರುತ್ತದೆ. ಸೂರ್ಯನಿಂದ ದೂರ ಸಾಗಿದಂತೆ ಬಿಸಿ ಕಡಿಮೆಯಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ, ಕೊರೋನಾ ಸೂರ್ಯನ ಮೇಲ್ಮೈಗಿಂತಲೂ ಹೆಚ್ಚು ಬಿಸಿಯಾಗಿರುತ್ತದೆ. ಇದರ ಹಿಂದಿನ ಕಾರಣವೇನೆಂದು ತಿಳಿಯಲು ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿದ್ದಾರೆ.

ಕೊರೋನಾದ ಅಧ್ಯಯನ ವಿಜ್ಞಾನಿಗಳಿಗೆ ಸೌರ ಮಾರುತ, ಸೌರ ಬಿರುಗಾಳಿ ಅಥವಾ ಕೊರೋನಲ್ ಮಾಸ್ ಇಜೆಕ್ಷನ್‌ನಂತಹ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಸೂರ್ಯನಿಂದ ಬರುವ ಇಂತಹ ಶಕ್ತಿಯ ಪ್ರಬಲ ಸ್ಫೋಟಗಳು ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ಮೇಲೆ ಪರಿಣಾಮ ಬೀರುತ್ತವೆ. ಅದರೊಡನೆ, ಸಂವಹನ ವ್ಯವಸ್ಥೆಗಳನ್ನು ಹಾಳುಮಾಡಿ, ಭೂಮಿಯಲ್ಲಿನ ಪವರ್ ಗ್ರಿಡ್‌ಗಳ ಮೇಲೂ ಅಡ್ಡ ಪರಿಣಾಮಗಳನ್ನು ಬೀರುತ್ತವೆ. ಒಕಲ್ಟರ್ ಸ್ಪೇಸ್‌ಕ್ರಾಫ್ಟ್ (ಒಎಸ್‌ಸಿ) ಎನ್ನುವ ಬಾಹ್ಯಾಕಾಶ ನೌಕೆ 1.4 ಮೀ. ಅಗಲವಿರುವ ದೊಡ್ಡ ಬಿಲ್ಲೆಯೊಂದನ್ನು ಹೊಂದಿರುತ್ತದೆ. ಈ ಬಿಲ್ಲೆಯನ್ನು ಸೂರ್ಯನ ಕಿರಣಗಳಿಗೆ ಲಂಬವಾಗಿದ್ದು, ಪ್ರಖರ ಕಿರಣಗಳನ್ನು ತಡೆಯುವಂತೆ ವಿನ್ಯಾಸಗೊಳಿಸಲಾಗಿದೆ.

ಮೊದಲ ಪರೀಕ್ಷಾ ಹಂತಗಳು ಉಡಾವಣೆಯ ಬಳಿಕ 4 ತಿಂಗಳಲ್ಲಿ ಪೂರ್ಣಗೊಳ್ಳಲಿವೆ. ಆಗ ಯೋಜನೆಯ ಆರಂಭಿಕ ಸಂಶೋಧನೆಗಳು ಲಭ್ಯವಾಗಲಿವೆ. ಪ್ರೋಬಾ-3 ಯೋಜನೆ 2 ವರ್ಷಗಳ ಕಾಲ ನಡೆಯುವ ನಿರೀಕ್ಷೆಗಳಿವೆ. ಆ ಬಳಿಕ, ಸೂರ್ಯ ಮತ್ತು ಚಂದ್ರರ ಗುರುತ್ವಾಕರ್ಷಣಾ ಸೆಳೆತದ ಪರಿಣಾಮವಾಗಿ, ಉಪಗ್ರಹಗಳ ಕಕ್ಷೆ ಕ್ರಮೇಣ ಸಣ್ಣದಾಗಲಿದೆ. ಉಡಾವಣೆಯ ಬಹುತೇಕ 5 ವರ್ಷಗಳ ಬಳಿಕ, ಉಪಗ್ರಹಗಳು ನೈಸರ್ಗಿಕವಾಗಿಯೇ ಭೂಮಿಯ ವಾತಾವರಣದೊಳಗೆ ಪ್ರವೇಶಿಸುತ್ತವೆ.

ಪ್ರೋಬಾ-3: ಭಾರತಕ್ಕಾಗುವ ಪ್ರಯೋಜನ

ಪ್ರೋಬಾ-3 ಇಎಸ್ಎಯ ತಂತ್ರಜ್ಞಾನ ಪ್ರದರ್ಶಕ ಯೋಜನೆಯಾಗಿದೆ. ಇದರ ಉಡಾವಣೆಗಾಗಿ ಇಸ್ರೋವನ್ನು ಆಯ್ಕೆ ಮಾಡಿಕೊಂಡಿರುವುದು ಭಾರತದ ಬಾಹ್ಯಾಕಾಶ ಉಡಾವಣಾ ಸೇವೆ ಅತ್ಯಂತ ನಂಬಿಕಾರ್ಹವಾಗಿದೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಪ್ರಾವೀಣ್ಯತೆ ಬಹಳಷ್ಟು ಹೆಚ್ಚುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಜಾಗತಿಕ ಬಾಹ್ಯಾಕಾಶ ಉದ್ಯಮದಲ್ಲಿ ಭಾರತ ಮುಖ್ಯ ಶಕ್ತಿಯಾಗಿರುವುದನ್ನು ಇದು ಸಾರುತ್ತಿದೆ. ಪ್ರೋಬಾ-3ರ ಪ್ರಮುಖ ವೈಶಿಷ್ಟ್ಯವೆಂದರೆ ಕಡಿಮೆ ವೆಚ್ಚದಲ್ಲಿ ಅದರ ಉಡಾವಣೆ ನಡೆಯುವುದು. ಪ್ರೋಬಾ-3ರ ಅನ್ವೇಷಣೆಗಳು ಭಾರತೀಯ ಸೌರ ಭೌತಶಾಸ್ತ್ರಜ್ಞರ ಅಧ್ಯಯನಕ್ಕೆ ಲಭ್ಯವಾಗುವ ಸಾಧ್ಯತೆಗಳಿವೆ. ಈ ಯೋಜನೆಯ ವೈಜ್ಞಾನಿಕ ಗುರಿಗಳನ್ನು ರೂಪಿಸುವ ಸಲುವಾಗಿ, ಭಾರತೀಯ ವಿಜ್ಞಾನಿಗಳೂ ಬೆಲ್ಜಿಯಂ ವಿಜ್ಞಾನಿಗಳೊಡನೆ ಕಾರ್ಯಾಚರಿಸಿದ್ದಾರೆ.

ಉಡಾವಣೆ ಯಶಸ್ವಿಯಾದ ಬಳಿಕ, ಭಾರತ ಇಎಸ್ಎಯ ಪ್ರೋಬಾ-3 ತಂಡದೊಡನೆ ಸಭೆ ನಡೆಸಲಿದೆ. ಈ ಸಭೆಯಲ್ಲಿ, ಜಂಟಿ ಸಂಶೋಧನೆಗಳಿಗಾಗಿ 2023ರಲ್ಲಿ ಉಡಾವಣೆಗೊಂಡ ಭಾರತದ ಮೊದಲ ಸೌರ ಅನ್ವೇಷಣಾ ಯೋಜನೆಯಾದ ಆದಿತ್ಯ ಎಲ್1 ಮತ್ತು ಪ್ರೋಬಾ-3ರ ಮಾಹಿತಿಗಳನ್ನು ಅನ್ವೇಷಿಸಲಾಗುತ್ತದೆ. ಈ ಸಹಯೋಗ, ಉಭಯ ತಂಡಗಳ ವಿಜ್ಞಾನಿಗಳು ಸೂರ್ಯನ ಕುರಿತ ಮಹತ್ವದ ಮಾಹಿತಿಗಳನ್ನು ಹಂಚಿಕೊಳ್ಳಲು ನೆರವಾಗಲಿದೆ.

ಪ್ರೋಬಾ-3ಗೆ ಹಣಕಾಸಿನ ಪೂರೈಕೆ

ಉಡಾವಣೆಗೆ 30 ಮಿಲಿಯನ್ ಯೂರೋ, ಕಾರ್ಯಾಚರಣೆ ಮತ್ತು ಭೂ ಕೇಂದ್ರಗಳಿಗೆ 15 ಮಿಲಿಯನ್ ಯೂರೋ, ವೈಜ್ಞಾನಿಕ ಪೇಲೋಡ್‌ಗಳ ಅಭಿವೃದ್ಧಿ ಮತ್ತು ಕಾರ್ಯಾಚರಣೆಗೆ 15 ಮಿಲಿಯನ್ ಯೂರೋ, 2 ಬಾಹ್ಯಾಕಾಶ ನೌಕೆಗಳ ತಯಾರಿ ಮತ್ತು ರಚನಾತ್ಮಕ ಹಾರಾಟ (ಫಾರ್ಮೇಶನ್ ಫ್ಲೈಯಿಂಗ್) ತಂತ್ರಜ್ಞಾನಕ್ಕೆ 140 ಮಿಲಿಯನ್ ಯೂರೋ, ಇಎಸ್ಎಯ ಜನರಲ್ ಸಪೋರ್ಟ್ ಟೆಕ್ನಾಲಜಿ ಪ್ರೋಗ್ರಾಂ (ಜಿಎಸ್‌ಟಿಪಿ) ಅಡಿಯಲ್ಲಿ ಒಟ್ಟು 200 ಮಿಲಿಯನ್ ಯೂರೋಗಳ ಬಜೆಟ್‌ನ 38% ಮೊತ್ತವನ್ನು ಸ್ಪೇನ್ ಒದಗಿಸಿದರೆ, ಬೆಲ್ಜಿಯಂ 34% ಮೊತ್ತವನ್ನು ಒದಗಿಸಿದೆ. ಪೋಲೆಂಡ್ ಮತ್ತು ರೊಮಾನಿಯಗಳು ತಲಾ 4% ಹಣ ಹೂಡಿದರೆ, ಆಸ್ಟ್ರಿಯಾ, ಲಕ್ಸೆಂಬರ್ಗ್, ಸ್ವಿಟ್ಜರ್ಲೆಂಡ್ ಮತ್ತು ಯುಕೆ ತಲಾ 3% ಹಣ ನೀಡಿವೆ.

ಉಪಗ್ರಹಗಳ ಮೂಲಕ ಕೃತಕ ಗ್ರಹಣ ಸೃಷ್ಟಿ

ಒಕಲ್ಟರ್ ಬಾಹ್ಯಾಕಾಶ ನೌಕೆಯಲ್ಲಿರುವ ಬಿಲ್ಲೆ, 150 ಮೀ. ದೂರದಲ್ಲಿ, ಅಂದಾಜು 8 ಸೆಂ.ಮೀ. ನೆರಳನ್ನು ಸೃಷ್ಟಿಸುತ್ತದೆ. ಇನ್ನೊಂದು ಉಪಗ್ರಹ (ಸಿಎಸ್‌ಸಿ), 5 ಸೆಂ.ಮೀ. ಸಣ್ಣ ತೆರೆಯುವಿಕೆ ಹೊಂದಿರುವ ವೈಜ್ಞಾನಿಕ ದೂರದರ್ಶಕವನ್ನು ಒಯ್ಯುತ್ತದೆ. ಈ ವ್ಯವಸ್ಥೆ, ದೂರದರ್ಶಕಕ್ಕೆ ನೆರಳಿನ ಪ್ರದೇಶದ ಮೇಲೆ ಗಮನ ಹರಿಸಿ, ಸೂರ್ಯನ ಪ್ರಖರ ಕಿರಣಗಳಿಂದ ಕುರುಡಾಗದೆ, ಸೌರ ಕೊರೋನಾದ ಅಧ್ಯಯನ ನಡೆಸಲು ಸಹಾಯ ಮಾಡುತ್ತದೆ. ಈ ವಿದ್ಯಮಾನ, ಎರಡೂ ಉಪಗ್ರಹಗಳು ತಮ್ಮ ಕಕ್ಷೆಯಲ್ಲಿ ಭೂಮಿಯಿಂದ ಅತ್ಯಂದ ದೂರದ (60,000 ಕೀಮಿ) ಬಿಂದುವಿನಲ್ಲಿ, ಭೂಮಿಯ ಗುರುತ್ವಾಕರ್ಷಣೆ ಅತ್ಯಂತ ಕಡಿಮೆ ಇರುವಾಗ ನಡೆಯುತ್ತದೆ.