ಕರ್ನಾಟಕದಲ್ಲಿ 60 ವರ್ಷ ಮೇಲ್ಪಟ್ಟವರಲ್ಲಿ ಡೆಮೆನ್ಷಿಯಾ ಪ್ರಮಾಣ ಶೇ. 7.61ರಷ್ಟಿದ್ದು, ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಆಲ್ಝೈಮರ್ಸ್ ಕಾಯಿಲೆಯ ಆರಂಭಿಕ ಲಕ್ಷಣಗಳು ಮತ್ತು ಸಕಾಲಿಕ ಚಿಕಿತ್ಸೆಯ ಮಹತ್ವದ ಕುರಿತು ನಿಮ್ಹಾನ್ಸ್ ತಜ್ಞರ ಸಲಹೆ ಇಲ್ಲಿದೆ.
ಬೆಂಗಳೂರು, ನ. 24, 2026: ಇತ್ತೀಚೆಗೆ ನಡೆದ ಘಟನೆಗಳು ನೆನಪಾಗದೇ ಇರುವುದು, ಸಂಭಾಷಣೆ ವೇಳೆ ಸೂಕ್ತ ಪದಗಳು ಹೊಳೆಯದಿರುವುದು ಹಾಗೂ ಸಣ್ಣಪುಟ್ಟ ವಿಷಯಗಳಿಗೆ ಗೊಂದಲಕ್ಕೊಳಗಾಗುವುದನ್ನು ಸಾಮಾನ್ಯವಾಗಿ ವಯಸ್ಸಾದಂತೆ ಇದೆಲ್ಲಾ ಸಹಜ ಎಂದು ನಿರ್ಲಕ್ಷಿಸಲಾಗುತ್ತದೆ. ಆದರೆ, ಇಂತಹ ಲಕ್ಷಣಗಳನ್ನು ಗುರುತಿಸುವಲ್ಲಿ ಆಗುವ ಸಣ್ಣ ವಿಳಂಬವೂ ಕುಟುಂಬಗಳಿಗೆ ಅಮೂಲ್ಯ ಚಿಕಿತ್ಸಾ ಸಮಯವನ್ನು ಕಳೆದುಕೊಳ್ಳುವಂತೆ ಮಾಡಬಹುದು. ಬುದ್ಧಿಮಾಂದ್ಯತೆಗೆ (ಡಿಮೆನ್ಶಿಯಾ) ಅತ್ಯಂತ ಪ್ರಮುಖ ಕಾರಣವಾಗಿರುವ ಆಲ್ಝೈಮರ್ಸ್ ಕಾಯಿಲೆಯು ಕ್ರಮೇಣ ಉಲ್ಬಣಗೊಳ್ಳುವ ನರಮಂಡಲದ ಕ್ಷೀಣಗೊಳ್ಳುವ ಕಾಯಿಲೆಯಾಗಿದೆ. ಇದು ವ್ಯಕ್ತಿಯ ನೆನಪಿನ ಶಕ್ತಿ, ಅರಿವಿನ ಸಾಮರ್ಥ್ಯ ಹಾಗೂ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ಶಕ್ತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೇಶದಲ್ಲಿ ವೃದ್ಧಾಪ್ಯದ ಜನಸಂಖ್ಯೆ ಮತ್ತು ಬುದ್ಧಿಮಾಂದ್ಯತೆ ಪ್ರಕರಣಗಳು ಏರುತ್ತಿರುವ ಹಿನ್ನೆಲೆಯಲ್ಲಿ, ರೋಗಲಕ್ಷಣಗಳ ಬಗ್ಗೆ ಜಾಗೃತಿ ಮೂಡಿಸಿ, ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚುವ ಅಗತ್ಯವಿದೆ ಎಂದು ವೈದ್ಯಕೀಯ ತಜ್ಞರು ಪ್ರತಿಪಾದಿಸಿದ್ದಾರೆ.
ಬುದ್ಧಿಮಾಂದ್ಯತೆ ಸಮಸ್ಯೆಯು ಕರ್ನಾಟಕದಲ್ಲಿ ವಿಶೇಷವಾಗಿ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ರಾಷ್ಟ್ರೀಯ ಬುದ್ಧಿಮಾಂದ್ಯತೆ ಸರಾಸರಿ ಶೇ. 7.43ರಷ್ಟಿದ್ದರೆ, ಕರ್ನಾಟಕದಲ್ಲಿ ಈ ಪ್ರಮಾಣ ಶೇ. 7.61ರಷ್ಟಿದೆ. 2016ರ ಅಂದಾಜಿನ ಪ್ರಕಾರ ರಾಜ್ಯದಲ್ಲಿ ಸುಮಾರು 5,05,000 ಜನರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು. 2036ರ ವೇಳೆಗೆ ಈ ಸಂಖ್ಯೆ ಸುಮಾರು 9,41,000ಕ್ಕೆ ಏರಿಕೆಯಾಗುವ ಆತಂಕವಿದೆ. ಈ ಅಂಕಿಅಂಶಗಳು ರಾಜ್ಯದಲ್ಲಿ ಅರಿವಿನ ಸಾಮರ್ಥ್ಯಕ್ಕೆ ಸಂಬಂಧಿಸಿದ ಕಾಯಿಲೆಗಳ ಹೆಚ್ಚುತ್ತಿರುವ ಹೊರೆಯನ್ನು ಸ್ಪಷ್ಟವಾಗಿ ತೋರಿಸುತ್ತಿದ್ದು, ಸಕಾಲಿಕ ವೈದ್ಯಕೀಯ ಆರೈಕೆ ಮತ್ತು ಜಾಗೃತಿಯ ತುರ್ತು ಅಗತ್ಯವನ್ನು ಒತ್ತಿಹೇಳುತ್ತವೆ.ಆಲ್ಝೈಮರ್ಸ್ ಕಾಯಿಲೆಯ ಹೆಚ್ಚುತ್ತಿರುವ ಹೊರೆಯನ್ನು ನಿಭಾಯಿಸುವ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ನರವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಸುವರ್ಣ ಅಲ್ಲಾಡಿ, ‘ಆಲ್ಝೈಮರ್ಸ್ ಕಾಯಿಲೆಯ ಆರಂಭಿಕ ಲಕ್ಷಣಗಳನ್ನು ಯಾವಾಗಲೂ ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ. ನೆನಪಿನ ಶಕ್ತಿ, ಸಂವಹನ, ಸುತ್ತಮುತ್ತಲಿನ ಪರಿಸರದ ಅರಿವು ಅಥವಾ ಸಾಮಾನ್ಯವಾಗಿ ಮಾಡುವ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸುವ ಸಾಮರ್ಥ್ಯದಲ್ಲಿ ನಿರಂತರ ಬದಲಾವಣೆಗಳು ಕಂಡುಬಂದರೆ, ಅವುಗಳನ್ನು ವಯಸ್ಸಾಗುವಿಕೆಯ ಅನಿವಾರ್ಯ ಭಾಗವೆಂದು ಪರಿಗಣಿಸಬಾರದು. ಹೆಚ್ಚಿನ ಜಾಗೃತಿ ಮತ್ತು ಸಕಾಲಿಕ ವೈದ್ಯಕೀಯ ತಪಾಸಣೆಯಿಂದ ಮಾತ್ರ ಈ ಸವಾಲನ್ನು ಎದುರಿಸಲು ಸಾಧ್ಯ’ ಎಂದು ವಿವರಿಸಿದರು.
ಆರಂಭಿಕ ಹಂತದಲ್ಲೇ ರೋಗಪತ್ತೆ ಮಾಡುವ ಮಹತ್ವದ ಬಗ್ಗೆ ಮಾತನಾಡಿದ ಕೋಲ್ಕತ್ತಾದ ಅಪೋಲೊ ಆಸ್ಪತ್ರೆಯ ನರವಿಜ್ಞಾನ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥ ಡಾ. ಅಮಿತಾಭ ಘೋಷ್, ‘ಆಲ್ಝೈಮರ್ಸ್ ಆರಂಭಿಕ ಲಕ್ಷಣಗಳು ಅತ್ಯಂತ ಸೂಕ್ಷ್ಮವಾಗಿರುತ್ತವೆ ಮತ್ತು ನಿಧಾನವಾಗಿ ಬೆಳವಣಿಗೆಯಾಗುತ್ತವೆ. ಇತ್ತೀಚಿನ ಸಂಭಾಷಣೆ ಅಥವಾ ಘಟನೆಗಳನ್ನು ಪದೇಪದೇ ಮರೆಯುವುದು, ಪರಿಚಿತ ಪದಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗುವುದು, ಚಿರಪರಿಚಿತ ಸ್ಥಳಗಳಲ್ಲೇ ಗೊಂದಲಕ್ಕೊಳಗಾಗುವುದು ಅಥವಾ ದಿನನಿತ್ಯದ ಕೆಲಸಗಳನ್ನು ನಿರ್ವಹಿಸಲು ತೊಂದರೆಯಾಗುವುದು ಪ್ರಮುಖ ಎಚ್ಚರಿಕೆಯ ಸೂಚನೆಗಳು. ಇಂತಹ ಲಕ್ಷಣಗಳು ದೈನಂದಿನ ಜೀವನಕ್ಕೆ ಅಡ್ಡಿಯಾಗಲು ಆರಂಭಿಸಿದಾಗ ತಕ್ಷಣವೇ ವೈದ್ಯಕೀಯ ಸಲಹೆ ಪಡೆಯಬೇಕು. ಇದರಿಂದ ರೋಗಿ ಮತ್ತು ಕುಟುಂಬದವರಿಗೆ ಸೂಕ್ತ ವೈದ್ಯಕೀಯ ಮೌಲ್ಯಮಾಪನ ಹಾಗೂ ಅಗತ್ಯ ಬೆಂಬಲ ಸಿಗಲು ಸಾಧ್ಯವಾಗುತ್ತದೆ’ ಎಂದರು.ಜನಸಂಖ್ಯೆಯ ವಯೋವೃದ್ಧಿ, ರೋಗದ ಕುರಿತಾದ ಕಡಿಮೆ ಅರಿವು ಮತ್ತು ರೋಗನಿರ್ಣಯದಲ್ಲಿನ ವಿಳಂಬದಿಂದಾಗಿ ಭಾರತದಲ್ಲಿ ಆಲ್ಝೈಮರ್ಸ್ ಹೊರೆ ತ್ವರಿತವಾಗಿ ಹೆಚ್ಚುತ್ತಿದೆ. ಪ್ರಸ್ತುತ ದೇಶದಲ್ಲಿ ಸುಮಾರು 88 ಲಕ್ಷ ಜನರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಇದರಲ್ಲಿ ಬಹುಪಾಲು ಪ್ರಕರಣಗಳಿಗೆ ಆಲ್ಝೈಮರ್ಸ್ ಕಾರಣವಾಗಿದೆ. 2036ರ ವೇಳೆಗೆ ಈ ಸಂಖ್ಯೆ ಸುಮಾರು ದ್ವಿಗುಣಗೊಂಡು 1.69 ಕೋಟಿಗೆ ತಲುಪುವ ನಿರೀಕ್ಷೆಯಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರಗಳ ಮೇಲೆ ದೊಡ್ಡ ಸವಾಲಾಗಲಿದೆ. ಜಾಗತಿಕ ಮಟ್ಟದಲ್ಲೂ ಈ ಸಂಖ್ಯೆ 2050ರ ವೇಳೆಗೆ ಮೂರು ಪಟ್ಟು ಹೆಚ್ಚಾಗಿ 15.2 ಕೋಟಿಗೆ ತಲುಪುವ ಅಂದಾಜಿದೆ. ಸಮಸ್ಯೆ ಇಷ್ಟು ವ್ಯಾಪಕವಾಗಿದ್ದರೂ, ಸಾಮಾಜಿಕ ಕಳಂಕ ಹಾಗೂ ಮರೆವು ವಯಸ್ಸಾಗುವಿಕೆಯ ಸಹಜ ಭಾಗ ಎಂಬ ತಪ್ಪು ಕಲ್ಪನೆಯಿಂದಾಗಿ ಬಹುತೇಕ ಪ್ರಕರಣಗಳು ಪತ್ತೆಯಾಗದೆ ಉಳಿಯುತ್ತಿವೆ.
ಆಲ್ಝೈಮರ್ಸ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲೇ ಪತ್ತೆಹಚ್ಚುವುದರಿಂದ ಸಕಾಲಿಕವಾಗಿ ಸೂಕ್ತ ಚಿಕಿತ್ಸಾ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು. ಇದು ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು, ರೋಗಿಯ ಜೀವನಮಟ್ಟವನ್ನು ಸುಧಾರಿಸಲು ಮತ್ತು ದೀರ್ಘಾವಧಿಯಲ್ಲಿ ಉತ್ತಮ ಚಿಕಿತ್ಸಾ ಫಲಿತಾಂಶ ಪಡೆಯಲು ನೆರವಾಗುತ್ತದೆ. ವಿಶೇಷವೆಂದರೆ, ಆಲ್ಝೈಮರ್ಸ್ ಸಂಬಂಧಿತ ಬುದ್ಧಿಮಾಂದ್ಯತೆಯ ತೀವ್ರತೆಯನ್ನು ಕೇವಲ ಎರಡು ವರ್ಷಗಳ ಕಾಲ ಮುಂದೂಡಲು ಸಾಧ್ಯವಾದರೂ, ರೋಗಿಯ ಆರೈಕೆಯ ಅಗತ್ಯ ಕಡಿಮೆಯಾಗುತ್ತದೆ ಮತ್ತು ಚಿಕಿತ್ಸೆಗೆ ತಗಲುವ ವೆಚ್ಚದಲ್ಲೂ ಗಣನೀಯ ಇಳಿಕೆಯಾಗುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ.ನಿರ್ಲಕ್ಷಿಸಬಾರದ ಆರಂಭಿಕ ಎಚ್ಚರಿಕೆಯ ಲಕ್ಷಣಗಳು
ವಯಸ್ಸಾದಂತೆ ಕೆಲವೊಮ್ಮೆ ಮರೆವು ಉಂಟಾಗುವುದು ಸಹಜ. ಆದರೆ, ಈ ಕೆಳಗಿನ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ಅಥವಾ ಕ್ರಮೇಣ ಹೆಚ್ಚಾಗುತ್ತಿದ್ದರೆ ಕಾಯದೆ ತಜ್ಞ ವೈದ್ಯರನ್ನು ಸಂಪರ್ಕಿಸಿ:ದೈನಂದಿನ ಜೀವನಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಪದೇಪದೇ ನೆನಪಿನ ಶಕ್ತಿ ಕುಂದುವುದು.
ಮಾತನಾಡುವ ಸಂದರ್ಭದಲ್ಲಿ ಸೂಕ್ತ ಮತ್ತು ಪರಿಚಿತ ಪದಗಳನ್ನು ನೆನಪಿಸಿಕೊಳ್ಳಲು ಕಷ್ಟವಾಗುವುದು.ನಿತ್ಯ ಮಾಡುತ್ತಿದ್ದ ಪರಿಚಿತ ಕೆಲಸಗಳು ಅಥವಾ ಚಟುವಟಿಕೆಗಳನ್ನು ನಿರ್ವಹಿಸುವಲ್ಲಿ ತೊಂದರೆ ಎದುರಾಗುವುದು.
ಸಮಯ, ಸ್ಥಳ ಅಥವಾ ಇತ್ತೀಚಿನ ಘಟನೆಗಳ ಕುರಿತು ಗೊಂದಲಕ್ಕೊಳಗಾಗುವುದು.ವಿವೇಚನೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಅಥವಾ ನಡವಳಿಕೆಯಲ್ಲಿ ಅಸಹಜ ಬದಲಾವಣೆಗಳು ಕಂಡುಬರುವುದು.