ಸುಪ್ರೀಂಕೋರ್ಟ್ ಮಾರ್ಗಸೂಚಿ ಅನುಸರಿಸಿ ಬೆಂಗಳೂರಲ್ಲಿ ಹಸಿರೇತರ ಪಟಾಕಿ ಮಾರಾಟಕ್ಕಿಲ್ಲ ಅಂಕುಶ !

| Published : Nov 01 2024, 01:20 AM IST / Updated: Nov 01 2024, 07:43 AM IST

ಸಾರಾಂಶ

  ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಮತ್ತು ಅವುಗಳನ್ನು ರಾತ್ರಿ 8ರಿಂದ ರಾತ್ರಿ 10ರವರೆಗೆ ಮಾತ್ರ ಸಿಡಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಪರವಾನಗಿ ಇಲ್ಲದೆ ಹಸಿರೇತರ ಪಟಾಕಿಗಳನ್ನು ಎಲ್ಲೆಡೆ ಎಗ್ಗಿಲ್ಲದೆ ರಾಜಾರೋಷವಾಗಿ ಮಾರಾಟ 

ಎಂ.ನರಸಿಂಹಮೂರ್ತಿ

 ಬೆಂಗಳೂರು ದಕ್ಷಿಣ : ಸುಪ್ರೀಂಕೋರ್ಟ್ ಮಾರ್ಗಸೂಚಿಗಳನ್ನು ಅನುಸರಿಸಿ ಪರವಾನಗಿ ಪಡೆದು ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಮತ್ತು ಅವುಗಳನ್ನು ರಾತ್ರಿ 8ರಿಂದ ರಾತ್ರಿ 10ರವರೆಗೆ ಮಾತ್ರ ಸಿಡಿಸಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ ಪರವಾನಗಿ ಇಲ್ಲದೆ ಹಸಿರೇತರ ಪಟಾಕಿಗಳನ್ನು ಎಲ್ಲೆಡೆ ಎಗ್ಗಿಲ್ಲದೆ ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವೆಡೆ ಮಾರಾಟ ಮಾಡಲಾಗುತ್ತಿದೆ. ಇದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವರ್ಷ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ 14 ಜನರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಟಾಕಿ ಮಾರಾಟಕ್ಕೆ ಬ್ರೇಕ್ ಹಾಕಿದೆ.

ಕ್ಷೇತ್ರದ ಬೀದಿ ಬೀದಿಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ರಾಜಾರೋಷವಾಗಿ ಪಟಾಕಿ ಮಾರಾಟ ನಡೆಸಲಾಗುತ್ತಿದೆ. ಪಟಾಕಿ ಅಂಗಡಿಗಳಲ್ಲಿ ಯಾವ ಪಟಾಕಿಗಳನ್ನು ಮಾರುತ್ತಿದ್ದಾರೆ ಎಂದು ತಪಾಸಣೆ ನಡೆಸುತ್ತಿಲ್ಲ, ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡುವ ಅಂಗಡಿ ಹಾಗೂ ಸುರಕ್ಷತಾ ನಿಯಮಗಳನ್ನು ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪರವಾನಗಿ ಪಡೆದು ಪಟಾಕಿಗಳನ್ನು ಗೊತ್ತುಪಡಿಸಿದ ಸ್ಥಳದಲ್ಲಿ ಮಾರಾಟ ಮಾಡದಿದ್ದರೆ ಮತ್ತು ಪಟಾಕಿ ಸಂಗ್ರಹಿಸಲು ಸರಿಯಾದ ‌ಸುರಕ್ಷತಾ ಕ್ರಮವಹಿಸದಿದ್ದರೆ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಆದರೆ ಕಾನೂನನ್ನು ಗಾಳಿಗೆ ತೂರಿ ಎಲ್ಲೆಡೆ ಎಗ್ಗಿಲ್ಲದೆ ಪರವಾನಿಗೆ ಪಡೆಯದೆ ಮಾರಾಟ ಮಾಡುತ್ತಿದ್ದರೂ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

700 ಮಂದಿಗೆ ಮಾತ್ರ ಲೈಸೆನ್ಸ್‌ : ಬೆಂಗಳೂರಿನ್ಯಾದಂತ ಒಟ್ಟಾರೆ 1800ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ಅದರಲ್ಲಿ ಬಿಬಿಎಂಪಿ 72 ಮೈದಾನಗಳನ್ನು ಗುರುತಿಸಿ 700 ಲಾಟರಿ ತೆಗೆಯುವ ಮೂಲಕ ಆಯ್ಕೆ ಮಾಡಿ ಪರವಾನಗಿ ನೀಡಿದೆ. ಒಂದೊಂದು ಮೈದಾನದಲ್ಲಿ ಅದರ ವಿಸ್ತೀರ್ಣ, ಪಾರ್ಕಿಂಗ್ ವ್ಯವಸ್ಥೆ ಅನುಗುಣವಾಗಿ 2 ರಿಂದ 20 ಅಂಗಡಿ ತೆರೆಯಲು ಅನುಮತಿ ನೀಡಲಾಗಿದೆ.

ಕಡಿಮೆ ಬಂಡವಾಳ, ಅಧಿಕ ಲಾಭದ ವ್ಯಾಪಾರ: ಐದು ರೂಪಾಯಿ ಬಂಡವಾಳ ಹೂಡಿಕೆ ಮಾಡಿದರೆ ನೂರು ರೂಪಾಯಿಗಳವರೆಗೂ ಲಾಭ. ಕೇವಲ ಮೂರ್ನಾಲ್ಕು ದಿನಗಳಲ್ಲಿ ಲಕ್ಷಗಳಿಂದ ಕೋಟ್ಯಂತರ ರೂಪಾಯಿ ವಹಿವಾಟು ಮಾಡುವ ಅವಕಾಶ ಪಟಾಕಿಯಲ್ಲಿದೆ. ಮಾರಾಟವಾಗದೇ ಉಳಿದರೆ ಮುಂದಿನ ವರ್ಷ ಮಾರಾಟ ನಡೆಸಬಹುದೆಂದು ವಿಶ್ವಾಸ ವ್ಯಾಪಾರಿಗಳಲ್ಲಿದೆ.

ಅಪಾರ ಬಂಡವಾಳ ಹೂಡಿ ಲಾಟರಿ ಮೂಲಕ ಪರವಾನಗಿ ಪಡೆದವರ ಅಂಗಡಿಗೆ ಬಂದು ಸಣ್ಣಪುಟ್ಟ ದೋಷಗಳನ್ನು ಹುಡುಕಿ ಪೊಲೀಸರು ಕೇಸು ದಾಖಲು ಮಾಡುತ್ತಾರೆ. ಅಲ್ಲದೆ ಬಲಾಢ್ಯರು ಬೇರೆಯವರ ಹೆಸರಿನಲ್ಲಿ ಹಲವು ಅರ್ಜಿಗಳನ್ನು ಸಲ್ಲಿಸಿ ಲಾಟರಿ ಮೂಲಕ ಪರವಾನಗಿ ಪಡೆದಿದ್ದಾರೆ. ಒಂದು ಪರವಾನಿಗೆ ಪಡೆದು ಹಲವೆಡೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ.

-ಹೇಸರೇಳಲಿಚ್ಚಿಸದ ಪರವಾನಗಿದಾರ.