ಸಾರಾಂಶ
ಬೆಂಗಳೂರು : ಜಯದೇವ ಹೃದ್ರೋಗ ಸಂಸ್ಥೆ ಮತ್ತು ಸಂಶೋಧನಾ ಸಂಸ್ಥೆ ಹಾಗೂ ನೆಪ್ರೋ ಯುರಾಲಜಿ ಸಂಸ್ಥೆಗಳಿಗೆ ಖಾಯಂ ನಿರ್ದೇಶಕರ ನೇಮಕಾತಿಗೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ। ಶರಣ್ ಪ್ರಕಾಶ್ ಪಾಟೀಲ್ ಅವರಿಗೆ ಸೂಚನೆ ನೀಡಿದ್ದಾರೆ.
ಅಲ್ಲದೆ, ಈ ಎರಡೂ ಸಂಸ್ಥೆಗಳಲ್ಲಿ ಕಳೆದ 10 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯನ್ನು ಖಾಲಿ ಹುದ್ದೆಗಳಿಗೆ ಅನುಗುಣವಾಗಿ ವಿಶೇಷ ನೇಮಕಾತಿ ಅಭಿಯಾನ ನಡೆಸಿ ನಿಯೋಜಿಸುವಂತೆ ನಿರ್ದೇಶನ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಎರಡು ಸಂಸ್ಥೆಗಳ ಆಡಳಿತ ಮಂಡಳಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ ಎಂದು ಸಭೆಯಲ್ಲಿದ್ದ ಮೂಲಗಳು ತಿಳಿಸಿವೆ.
ಸಂಸದ ಡಾ.ಮಂಜುನಾಥ್ ಅವರ ನಿವೃತ್ತಿ ಬಳಿಕ ಜಯದೇವ ಸಂಸ್ಥೆಗೆ ಡಾ.ಕೆ.ಎಸ್.ರವೀಂದ್ರನಾಥ್ ಅವರನ್ನು ಪ್ರಭಾರ ನಿರ್ದೇಶಕರಾಗಿದ್ದಾರೆ. ಆ ಸ್ಥಾನಕ್ಕೆ ನಿಗದಿತ ವಿದ್ಯಾರ್ಹತೆಯೊಂದಿಗೆ 50 ವರ್ಷ ಮೇಲ್ಪಟ್ಟ ತಜ್ಞ ವೈದ್ಯರಿಂದ ಅರ್ಜಿ ಆಹ್ವಾನಿಸಿ ಅರ್ಹರನ್ನು ನೇಮಕ ಮಾಡಲು ಸೂಚಿಸಲಾಗಿದೆ. ಅದೇ ರೀತಿ ನೆಪ್ರೋ ಯೂರಾಲಜಿ ಸಂಸ್ಥೆಯಲ್ಲೂ ಕಳೆದ ಒಂಬತ್ತು ವರ್ಷಗಳಿಂದ ಪ್ರಭಾರ ನಿರ್ದೇಶಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕೂಡಲೇ ಖಾಯಂ ನಿರ್ದೇಶಕರ ನೇಮಕಾತಿಗೆ ಕ್ರಮ ವಹಿಸಲು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಖಾಯಂ ನಿರ್ದೇಶಕರ ಆಯ್ಕೆ ಸಮಿತಿಯು ಡಾ.ಶಿವಲಿಂಗಯ್ಯ, ಡಾ.ಉಮೇಶ್ ಮತ್ತು ಹಾಲಿ ಪ್ರಭಾರ ನಿರ್ದೇಶಕ ಡಾ. ಆರ್.ಕೇಶವಮೂರ್ತಿ ಅವರ ಹೆಸರುಗಳನ್ನು ಅಂತಿಮಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ ಡಾ.ಶಿವಲಿಂಗಯ್ಯ ಅಥವಾ ಡಾ.ಉಮೇಶ್ ಇಬ್ಬರಲ್ಲಿ ಒಬ್ಬರನ್ನು ನೇಮಕಗೊಳಿಸುವ ಸಾಧ್ಯತೆ ಇದೆ.
ಈ ಮಧ್ಯೆ, ಎರಡೂ ಸಂಸ್ಥೆಗಳಿಗೆ ಬರುವ ರೋಗಿಗಳಿಗೆ ವಿಳಂಬವಿಲ್ಲದೆ ಸೂಕ್ತ ಚಿಕಿತ್ಸೆ ನೀಡುವುದು ಮೊದಲ ಆದ್ಯತೆಯಾಗಬೇಕು. ಚಿಕಿತ್ಸಾ ವೆಚ್ಚ ಅಥವಾ ಇನ್ಯಾವುದೇ ದಾಖಲೆಗಳ ವಿಚಾರ ನಂತರದ್ದಾಗಿರಲಿ. ಇಲ್ಲಿಗೆ ಬರುವ ಪ್ರತಿಯೊಬ್ಬರಿಗೂ ಸೂಕ್ತ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಯ ನೇಮಕಾತಿಯಲ್ಲಿ ರೋಸ್ಟರ್ ಅಥವಾ ಮೀಸಲಾತಿ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ಪಟ್ಟಿಸಹಿತ ಮಾಹಿತಿ ನೀಡಲು ಕೂಡ ನಿರ್ದೇಶನ ನೀಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.