ಸಾರಾಂಶ
ಮಂಡ್ಯ : ಅಖಿಲ ಭಾರತ ಸಾಹಿತ್ಯ ಸಮ್ಮೇಳನ ವಿಚಾರವಾಗಿ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ. ಜಿಲ್ಲಾಡಳಿತ ನೀಡಿರುವ ಸಲುಗೆಯೇ ಇದಕ್ಕೆ ಪ್ರಮುಖ ಕಾರಣ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಆರೋಪಿಸಿದರು.
ಪರಿಷತ್ತಿನ ಅಧ್ಯಕ್ಷರೊಬ್ಬರೇ ಸಾಹಿತ್ಯ ಸಮ್ಮೇಳನ ನಡೆಸುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಡಳಿತ ಹಾಗೂ ಸರ್ಕಾರ ಮೂರು ಸಂಸ್ಥೆಗಳು ಸಮ್ಮೇಳನ ನಡೆಸುತ್ತಿದ್ದು, ಮೂರೂ ಸಂಸ್ಥೆಗಳು ಒಟ್ಟಾಗಿ ಕೆಲಸ ಮಾಡದೆ ಪರಿಷತ್ತೊಂದೇ ಎಲ್ಲ ತೀರ್ಮಾನ ಕೈಗೊಂಡಂತೆ ಭಾಸವಾಗುತ್ತಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಅಧ್ಯಕ್ಷರು ಹೇಳಿಕೆ ನೀಡುವ ಮುನ್ನ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ತೀರ್ಮಾನ ಪ್ರಕಟಿಸಬೇಕು. ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಸಮ್ಮೇಳನ ನಡೆಸದೆ ಕೇವಲ ಸಮಿತಿ ರಚಿಸಿ ಸುಮ್ಮನಾಗಿರುವುದು ರಾಜ್ಯಾಧ್ಯಕ್ಷರ ಪತ್ರಿಕಾ ಹೇಳಿಕೆಗಳಿಂದಾದ ಗೊಂದಲಗಳಿಗೆ ಕಾರಣ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಸರ್ಕಾರದ ಒಂದು ಅಂಗವೆಂಬಂತೆ ಬಿಂಬಿತವಾಗಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಮ್ಮೇಳನಾಧ್ಯಕ್ಷ ಆಯ್ಕೆಯನ್ನು ಗೌಪ್ಯತೆ ಕಾಪಾಡದೆ ವಿವಾದಕ್ಕೆ ಒಳಪಡಿಸಿದ್ದಾರೆ ಎಂದರು.
1994 ರಲ್ಲಿ ನಡೆದ ಸಮ್ಮೇಳನ ಇಂದಿಗೂ ವ್ಯವಸ್ಥಿತ ರೀತಿಯಲ್ಲಿ ನಡೆದಿತ್ತು ಎಂಬ ಮಾತು ಪ್ರಚಲಿತದಲ್ಲಿದೆ. ಅಂದು ಉಳಿದ ಹಣದಲ್ಲಿ ಸ್ಥಳೀಯ ಸಾಂಸ್ಕೃತಿಕ ಪೋಷಕ ಸ್ಥಳಗಳ ನಿರ್ಮಾಣ, ಅಭಿವೃದ್ಧಿ ಮಾಡಲಾಗಿತ್ತುನಗರದೊಳಗೆ ನಡೆಸಲು ಒತ್ತಡ: ಸಮ್ಮೇಳನ ನಡೆಯುವ ಸ್ಥಳದ ವಿಚಾರವಾಗಿ ಅಧ್ಯಕ್ಷರು ತಮಗೂ ಸಮ್ಮೇಳನದ ಚಟುವಟಿಕೆಗಳಿಗೂ ಸಂಬಂಧವಿಲ್ಲದಂತೆ ಹೇಳಿಕೆ ನೀಡುತ್ತಿದ್ದಾರೆ. ಸ್ಥಳದ ಬಗ್ಗೆ ಜಿಲ್ಲಾಡಳಿತ ಈವರೆಗೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ, ನಗರದ ಒಳಗೆ ಸಮ್ಮೇಳನ ನಡೆಯಬೇಕೆಂಬುದು ಎಲ್ಲರ ಅಭಿಪ್ರಾಯವಾಗಿದೆ. ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.