ಸಾರಾಂಶ
ಬೆಂಗಳೂರು : ಹೊಸ ವರ್ಷಾಚರಣೆಗೆ ರಾಜಧಾನಿ ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಬ್ಯಾರಿಕೇಟ್ ಅಳವಡಿಕೆ ಸೇರಿದಂತೆ ಮೊದಲಾದ ಸಿದ್ಧತೆಗೆ ಬಿಬಿಎಂಪಿ ವತಿಯಿಂದ ಬರೋಬ್ಬರಿ 25 ಲಕ್ಷ ರು.ಗೂ ಅಧಿಕ ಮೊತ್ತ ವೆಚ್ಚ ಮಾಡಲಾಗಿದೆ.
ಹೊಸ ವರ್ಷದ ಆಚರಣೆಗೆ ವಿದ್ಯುತ್ ದೀಪದ ವ್ಯವಸ್ಥೆ, ಬ್ಯಾರಿಕೇಟ್ ವ್ಯವಸ್ಥೆ, ಕಸ ವಿಲೇವಾರಿ, ಸಾರ್ವಜನಿಕರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ತಕ್ಷಣ ಚಿಕಿತ್ಸೆ ನೀಡುವುದಕ್ಕೆ ವೈದ್ಯರ ನಿಯೋಜನೆ, ಆರೋಗ್ಯ ಕಿಯೋಸ್ಕ್ ಸ್ಥಾಪನೆಯ ಜವಾಬ್ದಾರಿಯನ್ನು ಬಿಬಿಎಂಪಿ ಮಾಡಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಬ್ಯಾರಿಕೇಟ್ ಅಳವಡಿಕೆಗೆ ಸುಮಾರು 14 ಲಕ್ಷ ರು. ಹಾಗೂ ವಿದ್ಯುತ್ ದೀಪಗಳ ಅಲಂಕಾರಕ್ಕೆ 12.70 ಲಕ್ಷ ರು. ವೆಚ್ಚ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ಲಾಸ್ಟಿಕ್ ಕವರ್, ಇತರೆ ಪ್ಲಾಸ್ಟಿಕ್ ತ್ಯಾಜ್ಯ, ಚಪ್ಪಲಿ, ಮಧ್ಯದ ಬಾಟಲಿ ಸೇರಿದಂತೆ ಇನ್ನಿತರೆ ಅನುಪಯುಕ್ತ ವಸ್ತುಗಳನ್ನು ಬೇರ್ಪಡಿಸಿ ಸಂಗ್ರಸಲಾಗಿದೆ. ಪುನರ್ ಬಳಕೆಯ ಸುಮಾರು 3 ಟನ್ ತ್ಯಾಜ್ಯವನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸ್ವಚ್ಚತಾ ಕಾರ್ಯದ ವೇಳೆಸಹಾಯಕ ಪ್ರಧಾನ ವ್ಯವಸ್ಥಾಪಕ ರವಿಕುಮಾರ್, ಚೀಫ್ ಮಾರ್ಷಲ್ ರಜ್‌ಬಿರ್ ಸಿಂಗ್, ಸಹಾಯಕ ಕಾರ್ಯಪಾಲಕ ಅಭಿಯತರ ಅಪ್ಪುರಾಜ್, ಘನತ್ಯಾಜ್ಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
ಒಂದೇ ದಿನದಲ್ಲಿ 15 ಟನ್ ಕಸದ ರಾಶಿ: ಹೊಸ ವರ್ಷಾಚರಣೆಯ ವೇಳೆ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ತ್ರೀಟ್, ರಿಸಿಡೆನ್ಸಿ ರಸ್ತೆ, ರಿಚ್‌ಮಂಡ್ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಕಸ್ತೂರ್ ಬಾ ರಸ್ತ್ತೆ ಸೇರಿದಂತೆ ಮುಂತಾದ ರಸ್ತೆಗಳಲ್ಲಿ 15 ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಬುಧವಾರ ಬೆಳಗಿನ ಜಾವ 3 ಗಂಟೆಯಿಂದ 7 ಗಂಟೆ ಒಳಗೆ ಸ್ವಚ್ಛತಾ ಕಾರ್ಯ ನಡೆಸಿ ತ್ಯಾಜ್ಯ ಗುಡಿಸಿ ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತಾ ಕಾರ್ಯಕ್ಕೆ 70ಕ್ಕೂ ಹೆಚ್ಚು ಪೌರಕಾರ್ಮಿಕರು ಬಳಕೆ ಮಾಡಿಕೊಳ್ಳಲಾಗಿದೆ. ಕಸ ಸಾಗಾಣಿಕೆಗೆ 25 ಆಟೋ ಟಿಪ್ಪರ್, 3 ಕಾಂಪ್ಯಾಕ್ಟರ್ ಬಳಕೆ ಮಾಡಲಾಗಿದೆ.