ಬೆಳಗ್ಗೆ ಮನೆಯ ಗಿಡಗಳಿಗೆ ನೀರು ಚಿಮುಕಿಸುವಾಗ ಪಕ್ಕದ ಮನೆಯವರೊಂದಿಗೆ ಒಂದಿಷ್ಟು ಮಾತುಕತೆ, ಸಂಜೆ ಮನೆಯ ಜಗುಲಿಯಲ್ಲಿ ಕುಳಿತು ದಿನದ ಆಗುಹೋಗುಗಳ ಚರ್ಚೆ, ಯಾರ ಮನೆಯಲ್ಲಿ ಏನಾದರೂ ವಿಶೇಷವಿದ್ದರೆ ಅಕ್ಕಪಕ್ಕದ ಮನೆಯವರಿಗೂ ಹಂಚುವ ಸಂಭ್ರಮ.

ಕುಸಿಯುತ್ತಿರುವ ಮಾನವೀಯ ಗುಣ ಒಂದು ಕಾಲವಿತ್ತು ಮನೆಗಳ ನಡುವೆ ಬೇಲಿಗಳಿದ್ದರೂ ಮನಸ್ಸುಗಳ ನಡುವೆ ಅಂತರವಿರಲಿಲ್ಲ. ಬೆಳಗ್ಗೆ ಮನೆಯ ಗಿಡಗಳಿಗೆ ನೀರು ಚಿಮುಕಿಸುವಾಗ ಪಕ್ಕದ ಮನೆಯವರೊಂದಿಗೆ ಒಂದಿಷ್ಟು ಮಾತುಕತೆ, ಸಂಜೆ ಮನೆಯ ಜಗುಲಿಯಲ್ಲಿ ಕುಳಿತು ದಿನದ ಆಗುಹೋಗುಗಳ ಚರ್ಚೆ, ಯಾರ ಮನೆಯಲ್ಲಿ ಏನಾದರೂ ವಿಶೇಷವಿದ್ದರೆ ಅಕ್ಕಪಕ್ಕದ ಮನೆಯವರಿಗೂ ಹಂಚುವ ಸಂಭ್ರಮ.

ಯಾರ ಮನೆಯಲ್ಲಿ ಯಾರಿಗಾದರೂ ಆರೋಗ್ಯ ಸರಿಯಿಲ್ಲದಿದ್ದರೆ ಆ ಸುದ್ದಿ ಇಡೀ ಓಣಿಗೆ ತಲುಪುತ್ತಿತ್ತು. ವಿಚಾರಿಸಲು ನಾಲ್ಕು ಜನ ಬರುತ್ತಿದ್ದರು. ಅಗತ್ಯವಿದ್ದಾಗ ಸಹಾಯಕ್ಕೆ ಕೈಗಳು ತಾನಾಗಿಯೇ ಮುಂದೆ ಬರುತ್ತಿದ್ದವು.ಕಾಲ ಕಳೆದಂತೆ ಮನೆಗಳ ಸ್ವರೂಪ ಬದಲಾಯಿತು, ಜಗುಲಿಗಳ ಜಾಗದಲ್ಲಿ ಬಾಗಿಲುಗಳು ಬಂದವು. ದೊಡ್ಡ ಕುಟುಂಬಗಳ ಜಾಗದಲ್ಲಿ ಪುಟ್ಟ ಕುಟುಂಬಗಳು ಬಂದವು. ಓಣಿಯ ಜಾಗದಲ್ಲಿ ಅಪಾರ್ಟ್ಮೆಂಟ್‌ಗಳು ಬಂದವು. ಬದುಕಿನ ವೇಗ ಹೆಚ್ಚಾದ ಹಾಗೆ ಕೆಲಸ, ಕುಟುಂಬ, ಜವಾಬ್ದಾರಿಗಳು, ವೈಯಕ್ತಿಕ ಆಸಕ್ತಿಗಳು ಹೀಗೆ ಪ್ರತಿಯೊಬ್ಬರ ಬದುಕಿಗೂ ತನ್ನದೇ ಆದ ಒಂದು ಸಣ್ಣ ಪ್ರಪಂಚ ಸೃಷ್ಟಿಯಾಯಿತು.ಈ ಬದಲಾವಣೆಯ ನಡುವೆ ನಮ್ಮ ಸುತ್ತಮುತ್ತಲಿನ ಜನರ ಬದುಕಿನ ಬಗ್ಗೆ ತಿಳಿದುಕೊಳ್ಳುವ ಅವಕಾಶವೂ ನಿಧಾನವಾಗಿ ಕಡಿಮೆಯಾಯಿತು.

ಹಿಂಸೆ, ಕೊಲೆ ಅಥವಾ ಅಪರಾಧದ ವಿಡಿಯೋಗಳು ಕ್ಷಣಾರ್ಧದಲ್ಲಿ ನಮ್ಮ ವಾಟ್ಸಾಪ್ಗೆ ತಲುಪುತ್ತವೆ

ಒಂದು ವಿಚಿತ್ರ ಸಂಗತಿಯೆಂದರೆ, ಇಂದು ಎಲ್ಲೋ ನಡೆದ ಅಪಘಾತದ ದೃಶ್ಯ, ಯಾರೋ ಅನುಭವಿಸಿದ ಹಿಂಸೆ, ಕೊಲೆ ಅಥವಾ ಅಪರಾಧದ ವಿಡಿಯೋಗಳು ಕ್ಷಣಾರ್ಧದಲ್ಲಿ ನಮ್ಮ ವಾಟ್ಸಾಪ್ಗೆ ತಲುಪುತ್ತವೆ. ಕೆಲವರು ಅವುಗಳನ್ನು ಯಾವುದೇ ಮುಜುಗರವಿಲ್ಲದೆ ಮತ್ತಷ್ಟು ಜನರಿಗೆ ಹಂಚುತ್ತಾರೆ. ಆದರೆ ಅದೇ ಸಮಯದಲ್ಲಿ ನಮ್ಮ ಪಕ್ಕದಲ್ಲಿ ಇರುವವರು, ಅಥವಾ ಆಪ್ತರೋ ಯಾವುದೋ ಸಂಕಷ್ಟದಲ್ಲಿದ್ದಾರೆಯೇ ಎಂಬುದನ್ನು ತಿಳಿದುಕೊಳ್ಳುವ ಸಂದರ್ಭವೇ ಬರುವುದಿಲ್ಲ. ಇಲ್ಲಿ ತಂತ್ರಜ್ಞಾನವನ್ನು ದೂಷಿಸುವುದಕ್ಕಿಂತ ಕಾಲದೊಂದಿಗೆ ಬದಲಾಗಿರುವ ನಮ್ಮ ಬದುಕಿನ ರೀತಿಯನ್ನು ಅರ್ಥಮಾಡಿಕೊಳ್ಳಬೇಕಿದೆ.

ಇತ್ತೀಚೆಗೆ ಸಾಮಾನ್ಯವಾಗಿ ಕಂಡುಬರುವ ಸಂಗತಿ ಏನೆಂದರೆ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದಾಗ ತಕ್ಷಣ ಸುತ್ತಮುತ್ತಲಿನ ಜನರೆಲ್ಲರೂ ಅಲ್ಲಿ ಸೇರುತ್ತಾರೆ. ಆದರೆ ಅವರಲ್ಲಿ ಎಷ್ಟು ಜನ ಸಹಾಯ ಮಾಡಲು ಮುಂದೆ ಬರುತ್ತಾರೆ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ. ಉಳಿದವರು ತಮ್ಮ ಮೊಬೈಲ್ ತೆಗೆದು ವಿಡಿಯೋ ಮಾಡಲು ಶುರುಮಾಡುತ್ತಾರೆ.

ಒಬ್ಬರು ಅಪಘಾತದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರೆ, ಮತ್ತೊಬ್ಬರು ಗಾಯಗೊಂಡ ವ್ಯಕ್ತಿಯ ಫೋಟೋ ತೆಗೆಯುತ್ತಿರುತ್ತಾರೆ. ಇನ್ನೊಬ್ಬರು ಅದನ್ನು ತಮ್ಮ ಸ್ನೇಹಿತರಿಗೆ ಕಳುಹಿಸುವ ಆತುರದಲ್ಲಿರುತ್ತಾರೆ. ಕೆಲವೇ ನಿಮಿಷಗಳಲ್ಲಿ ಆ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸುತ್ತದೆ.

ಆದರೆ ಆ ವ್ಯಕ್ತಿಗೆ ಆ ಕ್ಷಣದಲ್ಲಿ ಏನು ಬೇಕು , ಅವರಿಗೆ ಸಹಾಯ ಬೇಕು, ಧೈರ್ಯ ಹೇಳುವವರು ಬೇಕು, ಅಗತ್ಯವಿದ್ದರೆ ಆಸ್ಪತ್ರೆಗೆ ತಲುಪಿಸುವವರು ಬೇಕು ಅದರ ಬಗ್ಗೆ ಯೋಚಿಸದೆ ಅಲ್ಲಿ ಸೇರಿರುವ ಬಹುತೇಕ ಜನರಿಗೆ ಆ ಘಟನೆಯ ವಿಡಿಯೋ ಮಾಡುವುದೇ ಮುಖ್ಯವಾಗಿರುತ್ತದೆ.ನನಗೆ ಕೆಲವೊಮ್ಮೆ ಅನಿಸುವುದು, ಅಪಘಾತ ನಡೆದಾಗ ಜನರು ಅಲ್ಲಿ ಸೇರುವುದು ಸಹಾಯ ಮಾಡುವುದಕ್ಕೋ ಅಥವಾ ಒಂದು ಹೊಸ ವಿಡಿಯೋ ಸಿಗುತ್ತದೆ ಎಂಬ ಕುತೂಹಲಕ್ಕೋ ಎಂದು!

ನೋವನ್ನು ಅರ್ಥಮಾಡಿಕೊಂಡು ನೆರವಾಗುವುದು ಮತ್ತೊಂದು ವಿಷಯ

ಇಲ್ಲಿ ಒಂದು ಸಣ್ಣ ವ್ಯತ್ಯಾಸವನ್ನು ಗಮನಿಸಬೇಕು, ಅಪಘಾತವನ್ನು ನೋಡುವುದು ಒಂದು ವಿಷಯ, ಅಪಘಾತದಲ್ಲಿ ಸಿಲುಕಿದವರ ನೋವನ್ನು ಅರ್ಥಮಾಡಿಕೊಂಡು ನೆರವಾಗುವುದು ಮತ್ತೊಂದು ವಿಷಯ. ಮೊದಲನೆಯದಕ್ಕೆ ಕೇವಲ ಕುತೂಹಲ ಸಾಕು. ಎರಡನೆಯದಕ್ಕೆ ಭಾವನೆ ಮತ್ತು ಮಾನವೀಯತೆ ಬೇಕು.

ಇದನ್ನೇ ನಾವು IQ ಮತ್ತು EQ ನಡುವಿನ ವ್ಯತ್ಯಾಸಕ್ಕೆ ಉದಾಹರಣೆಯಾಗಿ ನೋಡಬಹುದು. ಏನಾಯಿತು ಎಂದು ಅರ್ಥಮಾಡಿಕೊಳ್ಳುವುದು ಬುದ್ಧಿವಂತಿಕೆ-Intelligence ಆದರೆ ಇನ್ನೊಬ್ಬರ ಕಷ್ಟವನ್ನು ನೋಡಿ ಸುಮ್ಮನೆ ನಿಲ್ಲದೆ, ಸುರಕ್ಷಿತವಾಗಿ ಸಹಾಯಕ್ಕೆ ಮುಂದಾಗುವುದು ಭಾವನಾತ್ಮಕ ಬುದ್ಧಿವಂತಿಕೆ-Emotional intelligence. ನಾವು ಇಂದು ಎಷ್ಟೇ ವಿದ್ಯಾವಂತರಾಗಿರಬಹುದು, ಎಷ್ಟೇ ತಂತ್ರಜ್ಞಾನವನ್ನು ಬಳಸಬಹುದು. ಆದರೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಮನಸ್ಸಿಲ್ಲದಿದ್ದರೆ ಆ ಶಿಕ್ಷಣ ಮತ್ತು ಬುದ್ಧಿವಂತಿಕೆಗೆ ಏನು ಅರ್ಥ?ಅಪಘಾತ ನಡೆದಾಗ ಸುತ್ತಲೂ ಜನ ಸೇರುತ್ತಾರೆ. ಪ್ರತಿಯೊಬ್ಬರೂ ಇನ್ನೊಬ್ಬರು ಸಹಾಯ ಮಾಡಬಹುದು ಎಂದು ಕಾಯುತ್ತಾರೆ. ಇದನ್ನು ಮನೋವಿಜ್ಞಾನದಲ್ಲಿ Bystander Effect ಎಂದು ಕರೆಯುತ್ತಾರೆ. ಅಂದರೆ ಜನರ ಸಂಖ್ಯೆ ಹೆಚ್ಚಾದಂತೆ ಪ್ರತಿಯೊಬ್ಬರ ವೈಯಕ್ತಿಕ ಜವಾಬ್ದಾರಿಯ ಭಾವನೆ ಕಡಿಮೆಯಾಗಬಹುದು.

ಇಂದಿನ ದಿನಗಳಲ್ಲಿ ಬುದ್ಧಿವಂತಿಕೆಗೆ (IQ) ಕಡಿಮೆಯೇನಿಲ್ಲ. ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಅನೇಕ ವಿಷಯಗಳನ್ನು ಕಲಿಯುತ್ತಿದ್ದಾರೆ. ತಂತ್ರಜ್ಞಾನ, ಶಿಕ್ಷಣ, ವಿಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ನಾವು ಸಾಕಷ್ಟು ಮುಂದುವರಿದಿದ್ದೇವೆ. ಇಂದಿನ ದಿನಗಳಲ್ಲಿ ಕಡಿಮೆಯಾಗುತ್ತಿದೆ ಎಂದು ಅನಿಸುವುದು ಮಾನವೀಯ ಸ್ಪಂದನೆ ಮತ್ತು ಭಾವನಾತ್ಮಕ ಬುದ್ಧಿವಂತಿಕೆ. ಭಾವನಾತ್ಮಕ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳುವ ಬಗ್ಗೆ: ಭಾವನಾತ್ಮಕ ಬುದ್ಧಿವಂತಿಕೆ ಎನ್ನುವುದು ನಮ್ಮ ದಿನನಿತ್ಯದ ಬದುಕಿನಲ್ಲಿ ಸಣ್ಣ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಇದನ್ನು ಬೆಳೆಸಿಕೊಳ್ಳಬಹುದಾದ ಗುಣ.

ಮೊದಲು ನಮ್ಮ ಭಾವನೆಗಳನ್ನು ನಾವು ಅರ್ಥಮಾಡಿಕೊಳ್ಳಬೇಕು. ಕೋಪ ಬಂದಾಗ ತಕ್ಷಣ ಮಾತನಾಡುವ ಬದಲು ಸ್ವಲ್ಪ ಸಮಯ ಸುಮ್ಮನಿದ್ದು ಯೋಚಿಸಬೇಕು. ನಮ್ಮ ಮಾತಿನಿಂದ ಬೇರೆಯವರಿಗೆ ನೋವಾಗಬಹುದೇ ಎಂದು ಆಲೋಚಿಸಬೇಕು. ಯಾರಾದರೂ ತಮ್ಮ ಕಷ್ಟವನ್ನು ಹೇಳಿಕೊಂಡಾಗ ಅವರ ಮಾತನ್ನು ಕೇಳಿಸಿಕೊಳ್ಳುವ ಸಹನೆಯನ್ನು ನಾವು ಬೆಳೆಸಿಕೊಳ್ಳಬೇಕು .ಎಲ್ಲದಕ್ಕೂ ಸಲಹೆ ನೀಡುವ ಅಗತ್ಯವಿಲ್ಲ. ಕೆಲವೊಮ್ಮೆ ನಮ್ಮ ಮಾತಿಗಿಂತ ನಾವು ತೋರಿಸುವ ಕಾಳಜಿಯೇ ಅವರಿಗೆ ಹೆಚ್ಚು ಸಮಾಧಾನ ನೀಡುತ್ತದೆ.

ಅದೇ ರೀತಿ, ಬೇರೆಯವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ರಸ್ತೆಯಲ್ಲಿ ಅಪಘಾತವಾದಾಗ ವಿಡಿಯೋ ಮಾಡುವ ಬದಲು ಸಾಧ್ಯವಾದರೆ ಸಹಾಯಕ್ಕೆ ಮುಂದಾಗಬೇಕು. ಪಕ್ಕದ ಮನೆಯವರ ಯೋಗಕ್ಷೇಮ ವಿಚಾರಿಸಬೇಕು. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣವನ್ನು ಬೆಳೆಸಿಕೊಳ್ಳಬೇಕು, ಮನೆಯಲ್ಲಿ ಮಕ್ಕಳ ಮಾತುಗಳನ್ನು ಕೇಳಬೇಕು,ವೃದ್ಧರೊಂದಿಗೆ ಸ್ವಲ್ಪ ಸಮಯ ಕಳೆಯಬೇಕು,ನಮ್ಮಿಂದ ತಪ್ಪಾದಾಗ ಅದನ್ನು ಒಪ್ಪಿಕೊಂಡು ಕ್ಷಮೆ ಕೇಳಬೇಕು. ಇತರರ ತಪ್ಪುಗಳನ್ನು ಕ್ಷಮಿಸುವ ಗುಣವನ್ನೂ ಬೆಳೆಸಿಕೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಯಾರದ್ದಾದರೂ ನೋವಿನ ಘಟನೆ ಕಂಡಾಗ ಅದನ್ನು ಹಂಚಿಕೊಳ್ಳುವ ಮೊದಲು, ಅದರಿಂದ ಅವರ ಕುಟುಂಬಕ್ಕೆ ಎಷ್ಟು ನೋವಾಗಬಹುದು ಎಂದು ಯೋಚಿಸಬೇಕು. ಭಾವನಾತ್ಮಕ ಬುದ್ಧಿವಂತಿಕೆಯ ಮಹತ್ವ

ಭಾವನಾತ್ಮಕ ಬುದ್ಧಿವಂತಿಕೆ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದು ನಮ್ಮ ಕೋಪ, ದುಃಖ, ಭಯ ಮತ್ತು ಆತಂಕವನ್ನು ಸರಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಯಾವುದೇ ಸಮಸ್ಯೆ ಎದುರಾದಾಗ ತಕ್ಷಣ ಪ್ರತಿಕ್ರಿಯಿಸುವ ಬದಲು ತಾಳ್ಮೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಲು ನೆರವಾಗುತ್ತದೆ. ಕುಟುಂಬದ ಸದಸ್ಯರು, ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತದೆ.

ಅಷ್ಟೇ ಅಲ್ಲದೆ, ಬೇರೆಯವರ ನೋವು, ಕಷ್ಟ ಮತ್ತು ಭಾವನೆಗಳನ್ನು ಅರ್ಥಮಾಡಿಕೊಂಡು ಅವರಿಗೆ ಸೂಕ್ತವಾಗಿ ಸ್ಪಂದಿಸುವ ಗುಣವನ್ನು ಬೆಳೆಸುತ್ತದೆ. ಸೋಲು ಬಂದಾಗ ಕುಗ್ಗದೆ, ಟೀಕೆ ಎದುರಾದಾಗ ಮನಸ್ಸು ಕೆಡಿಸಿಕೊಳ್ಳದೆ, ಜೀವನದ ಏರಿಳಿತಗಳನ್ನು ಧೈರ್ಯದಿಂದ ಎದುರಿಸಲು ಸಹಾಯ ಮಾಡುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಅಂಕಗಳು, ಪದವಿ, ಜ್ಞಾನ ಮತ್ತು ಸಾಧನೆಗಳಿದ್ದರೆ ಸಾಲದು. ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕು, ಭಿನ್ನಾಭಿಪ್ರಾಯಗಳನ್ನು ಹೇಗೆ ಬಗೆಹರಿಸಬೇಕು, ಕಷ್ಟದಲ್ಲಿರುವವರಿಗೆ ಹೇಗೆ ನೆರವಾಗಬೇಕು ಎಂಬುದೂ ತಿಳಿದಿರಬೇಕು.

ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ತಮ್ಮ ಭಾವನೆಗಳನ್ನು ಗುರುತಿಸುವುದು, ಇತರರ ಮಾತುಗಳನ್ನು ಆಲಿಸುವುದು ಮತ್ತು ಬೇರೆಯವರ ಭಾವನೆಗಳಿಗೆ ಗೌರವ ನೀಡುವುದನ್ನು ಕಲಿಸಬೇಕು. ಏಕೆಂದರೆ ಭಾವನಾತ್ಮಕ ಬುದ್ಧಿವಂತಿಕೆ ನಮ್ಮಲ್ಲಿ ಸಹನೆ, ಸಹಾನುಭೂತಿ, ಆತ್ಮವಿಶ್ವಾಸ ಮತ್ತು ಮಾನವೀಯತೆಯನ್ನು ಬೆಳೆಸುತ್ತದೆ.ಬುದ್ಧಿವಂತಿಕೆ ನಮ್ಮನ್ನು ಜೀವನದಲ್ಲಿ ಯಶಸ್ವಿಯಾಗಿಸಬಹುದು ಆದರೆ ಭಾವನಾತ್ಮಕ ಬುದ್ಧಿವಂತಿಕೆ ನಮ್ಮನ್ನು ಒಳ್ಳೆಯ ಮನುಷ್ಯರನ್ನಾಗಿಸುತ್ತದೆ. ಯಶಸ್ಸಿನ ಜೊತೆಗೆ ಮಾನವೀಯತೆಯೂ ಉಳಿದಾಗಲೇ ಬದುಕು ಅರ್ಥಪೂರ್ಣವಾಗುತ್ತದೆ.

ಡಾ. ವಿದ್ಯಾಲಕ್ಷ್ಮಿ ವಿ.ಶೆಟ್ಟಿ ಆಯುಷ್‌ ವೈದ್ಯಾಧಿಕಾರಿ, ತಾಲೂಕು ಆಸ್ಪತ್ರೆ ಬಂಟ್ವಾಳ.