ಸಾರಾಂಶ
ಮಹಿಳಾ ಚಾಲಕರು ಮತ್ತು ಸವಾರರಿಗಾಗಿ ಆಯೋಜಿಸಿರುವ ಈ ರ‍್ಯಾಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಲೀಲಾ ಭಾರತೀಯ ಸಿಟಿ ಹೋಟೆಲ್‌ನಿಂದ ಪ್ರಾರಂಭವಾಗಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮಹಿಳಾ ಚಾಲಕರಿಗೆ ಪ್ರೋತ್ಸಾಹ ನೀಡುವ ಸಲುವಾಗಿ ನವೆಂಬರ್ 9 ಮತ್ತು 10ರಂದು ಬೆಂಗಳೂರಿನಲ್ಲಿ ‘ಡ್ರಿವನ್ 5.0’ ಹೆಸರನ ಮೋಟಾರ್ ರ‍್ಯಾಲಿ ಆಯೋಜಿಸಲಾಗಿದೆ. ನವೆಂಬರ್ 9ರಂದು ಬೆಳಿಗ್ಗೆ 6ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ಲೀಲಾ ಭಾರತೀಯ ಸಿಟಿ ಹೋಟೆಲ್‌ನಿಂದ ರ‍್ಯಾಲಿ ಪ್ರಾರಂಭವಾಗಲಿದ್ದು, ಮಹಿಳಾ ಕಾರು ಚಾಲಕರು ಮತ್ತು ಬೈಕ್ ರೈಡರ್‌ಗಳು ಪಾಲ್ಗೊಳ್ಳಬಹುದಾಗಿದೆ. ಈ ರ‍್ಯಾಲಿ ಹಂಪಿಗೆ ಸಾಗಲಿದ್ದು, ಅಲ್ಲಿ ಹಯಾತ್ ಪ್ಲೇಸ್‌ನಲ್ಲಿ ರ‍್ಯಾಲಿ ಮುಕ್ತಾಯಗೊಳ್ಳಲಿದೆ.ಝೀರೋಯಿನ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್, ಬಕ್ಸಸ್ ಪ್ರೊಸ್ಪೋರ್ಟ್ಸ್ ಮತ್ತು ಬೆಂಗಳೂರಿನ ಲೀಲಾ ಭಾರತೀಯ ಸಿಟಿ ಜಂಟಿಯಾಗಿ ಈ ರ‍್ಯಾಲಿ ಆಯೋಜನೆ ಮಾಡಿದ್ದು, ಸುಮಾರು 300 ಮಂದಿ ಮಹಿಳಾ ಚಾಲಕರು ಈ ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ರ‍್ಯಾಲಿ ಮೂಲಕ ಸಹಿಳಾ ಸಬಲೀಕರಣದ ಆಶಯವನ್ನು ಸಾರಲಾಗುತ್ತಿದ್ದು, ಮಹಿಳಾ ಚಾಲಕರು ಮತ್ತು ಸವಾರರಿಗೆ ಈ ವಿಶೇಷ ರ‍್ಯಾಲಿಯಲ್ಲಿ ಭಾಗವಹಿಸುವ ಅವಕಾಶ ನೀಡಲಾಗುತ್ತಿದೆ. ರ‍್ಯಾಲಿ ಹಂಪಿಯಲ್ಲಿ ಕೊನೆಗೊಂಡ ಬಳಿಕ ಅಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಅನೇಕ ಕುತೂಹಲಕರ ಚಟುವಟಿಕೆಗಳು ನಡೆಯಲಿವೆ. ಈ ರ‍್ಯಾಲಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಎಲ್ಲಾ ವರ್ಗದ ಮಹಿಳೆಯರು ಭಾಗವಹಿಸಬಹುದಾಗಿದೆ. ಆಸಕ್ತರು driven.zzeroin. net ನಲ್ಲಿ ಹೆಚ್ಚಿನ ಮಾಹಿತಿ ತಿಳಿಯಬಹುದಾಗಿದೆ.ಝೀರೋಯಿನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಅರವಿಂದ್ ಜೆ ಸಬಾನಿ ಈ ರ‍್ಯಾಲಿ ಆಯೋಜನೆಯನ್ನು ಘೋಷಿಸಿದ್ದು, ಈ ರ‍್ಯಾಲಿ ಮೂಲಕ ಸಾಮಾಜಿಕ ಬದಲಾವಣೆ ಉಂಟುಮಾಡುವ ಉದ್ದೇಶ ಇದೆ ಎಂದು ಹೇಳಿದ್ದಾರೆ. ರ‍್ಯಾಲಿಯಲ್ಲಿ ಭಾಗವಹಿಸುವವರು ತಮ್ಮ ಜೊತೆ ಆಪ್ತರನ್ನು ಕರೆತರಬಹುದಾಗಿದೆ. ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ಸ್ ಆಫ್ ಇಂಡಿಯಾ ನಿಗದಿ ಮಾಡಿರುವ ಮಾರ್ಗಸೂಚಿಗಳಿಗೆ ಅನುಸಾರವಾಗಿ ರ‍್ಯಾಲಿ ನಡೆಯಲಿದೆ.