ವರ್ಷಾಂತ್ಯಕ್ಕೆ ವಿಭಜಿತ ಪಾಲಿಕೆಗಳಿಗೆ ಚುನಾವಣೆ

| Published : Feb 26 2025, 01:33 AM IST

ಸಾರಾಂಶ

ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ನೂತನ ವಿಧೇಯಕ ಜಾರಿಗೆ ತರುತ್ತಿರುವ ಬೆನ್ನಲ್ಲೇ, ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ನೂತನ ವಿಧೇಯಕ ಜಾರಿಗೆ ತರುತ್ತಿರುವ ಬೆನ್ನಲ್ಲೇ, ಈ ವರ್ಷಾಂತ್ಯಕ್ಕೆ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ನಡೆಸಿದೆ.

ಕಳೆದ ನಾಲ್ಕೂವರೆ ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಸೊರಗಿರುವ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಕೊನೆಗೂ ಮುಂದಾಗಿದೆ. ಆದರೆ, ಹಾಲಿ ಇರುವ ಬಿಬಿಎಂಪಿ ವ್ಯಾಪ್ತಿಗೆ ಹೊಸ ಪ್ರದೇಶವನ್ನು ಸೇರ್ಪಡೆ ಮಾಡಿ, ಮೂರರಿಂದ ಐದು ವಾರ್ಡ್‌ಗಳನ್ನಾಗಿ ವಿಂಗಡಿಸಿ ಚುನಾವಣೆ ಮಾಡಲು ಸರ್ಕಾರ ಮುಂದಾಗಿದೆ. 2020ರ ಸೆಪ್ಟೆಂಬರ್‌ನಲ್ಲಿ ಚುನಾಯಿತ ಪ್ರತಿನಿಧಿಗಳ ಅವಧಿ ಮುಗಿದ ನಂತರ ಬಿಬಿಎಂಪಿಗೆ ಚುನಾವಣೆ ನಡೆಸುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಬಿಎಂಪಿ ಆಡಳಿತಕ್ಕೆ ಪ್ರತ್ಯೇಕ ಕಾಯ್ದೆ ತಂದು, ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆ ನಡೆಸಲು ಮುಂದಾದ ಕಾರಣ ಚುನಾವಣೆ ಮುಂದೂಡಲಾಗಿತ್ತು. ಅದೇ ರೀತಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಬಿಎಂಪಿಯನ್ನು ವಿಭಜಿಸಲು ನಿರ್ಧರಿಸಿ ಗ್ರೇಟರ್‌ ಬೆಂಗಳೂರು ಮಸೂದೆ ಜಾರಿಗೊಳಿಸಲು ಮುಂದಾದ ಕಾರಣದಿಂದಾಗಿ ಚುನಾವಣೆ ನಡೆಸುವಲ್ಲಿ ವಿಳಂಬ ಮಾಡಲಾಗಿದೆ. ಆದರೆ, ಇದೀಗ ಗ್ರೇಟರ್‌ ಬೆಂಗಳೂರು ಮಸೂದೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಮಾರ್ಚ್‌ನಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಈ ವರ್ಷದ ಆಗಸ್ಟ್‌ ಅಥವಾ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಆಸಕ್ತಿ ತೋರಿದ್ದು, ಆ ಕುರಿತಂತೆ ಸುಪ್ರೀಂಕೋರ್ಟ್‌ಗೂ ಅಪಿಡವಿಟ್‌ ಸಲ್ಲಿಸಿದೆ.

3ರಿಂದ 5 ಪಾಲಿಕೆ ರಚನೆ:

ಸರ್ಕಾರ ಹಾಗೂ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರ ಮಟ್ಟದಲ್ಲಿ ನಡೆದಿರುವ ಚರ್ಚೆಯಂತೆ ಬಿಬಿಎಂಪಿಗೆ ಹೊಸದಾಗಿ ಕೆಲ ಪ್ರದೇಶಗಳನ್ನು ಸೇರಿಸಿ, 3ರಿಂದ 5 ಪಾಲಿಕೆಗಳನ್ನು ರಚಿಸುವ ಉದ್ದೇಶ ಹೊಂದಲಾಗಿದೆ. ಅದರಿಂದಾಗಿ ಕಾಂಗ್ರೆಸ್‌ ಸರ್ಕಾರವೇ ರಚಿಸಿರುವ 223 ವಾರ್ಡ್‌ಗಳನ್ನು ರದ್ದು ಮಾಡಿ ಹೊಸದಾಗಿ ವಾರ್ಡ್‌ಗಳ ರಚನೆ ಕಾರ್ಯ ಮಾಡಲಾಗುತ್ತದೆ. 3 ಪಾಲಿಕೆಗಳನ್ನು ರಚಿಸಿದರೆ ಪ್ರತಿ ಪಾಲಿಕೆಗೆ ತಲಾ 125 ವಾರ್ಡ್‌ಗಳಿರುವಂತೆ ಹಾಗೂ 5 ಪಾಲಿಕೆಗಳನ್ನು ರಚಿಸಿದರೆ ಪ್ರತಿ ಪಾಲಿಕೆಗೆ ತಲಾ 75 ವಾರ್ಡ್‌ಗಳಿರುವಂತೆ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ.

ಮಾರ್ಚ್‌ನಲ್ಲಿ ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ-2024ಕ್ಕೆ ಅನುಮೋದನೆ ದೊರೆತರೆ, ಏಪ್ರಿಲ್‌ನಲ್ಲಿ ಅದಕ್ಕೆ ಅಗತ್ಯವಿರುವ ನಿಯಮ ರೂಪಿಸುವುದು ಸೇರಿದಂತೆ ಮತ್ತಿತರ ಕೆಲಸಗಳನ್ನು ಪೂರ್ಣಗೊಳಿಸಿ, ಸುಪ್ರೀಂಕೋರ್ಟ್‌ಗೆ ಅದನ್ನು ಸಲ್ಲಿಸಲಾಗುತ್ತದೆ. ಅದಾದ ನಂತರದ ಒಂದು ತಿಂಗಳಲ್ಲಿ ಬಿಬಿಎಂಪಿಯ ವಿಭಜನೆ ಮಾಡಿ, ವಾರ್ಡ್‌ಗಳನ್ನು ರಚಿಸಲಾಗುತ್ತದೆ. ಆಮೇಲೆ ವಾರ್ಡ್‌ಗಳಿಗೆ ಮೀಸಲಾತಿ ನಿಗದಿ ಮಾಡಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ. ಅದಾದ ಒಂದು ತಿಂಗಳಲ್ಲಿ ಚುನಾವಣೆ ಘೋಷಣೆಯಾಗುವಂತೆ ಮಾಡುವುದು ಸರ್ಕಾರದ ಲೆಕ್ಕಾಚಾರವಾಗಿದೆ. ಈ ಎಲ್ಲ ಪ್ರಕ್ರಿಯೆಗಳನ್ನು ಆಗಸ್ಟ್‌ ತಿಂಗಳಿಗಿಂತ ಮುಂಚಿತವಾಗಿ ಪೂರ್ಣಗೊಳಿಸಿ, ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಪಾಲಿಕೆಗಳಿಗೆ ಚುನಾವಣೆ ನಡೆಸುವ ಸಾಧ್ಯತೆಗಳಿವೆ.

ಶೀಘ್ರದಲ್ಲಿ ಬಿಬಿಎಂಪಿ ಅಥವಾ ವಿಭಜಿತ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆಗೆ ಸಿದ್ಧರಾಗುವಂತೆ ಕಾಂಗ್ರೆಸ್‌ ಪಕ್ಷದಿಂದಲೂ ನಾಯಕರಿಗೆ, ಮಾಜಿ ಕಾರ್ಪೋರೆಟರ್‌ಗಳಿಗೆ ಸೂಚನೆ ಬಂದಿದೆ. ಅದಕ್ಕೆ ತಕ್ಕಂತೆ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ.

-ಎಂ.ಶಿವರಾಜು, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ.