ಕನ್ನಡಪ್ರಭವಾರ್ತೆ ಬೆಂಗಳೂರು
ಭಾರತವು ಜಾಗತಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ವಲಯದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಬೆನ್ನಲ್ಲೇ, ದೇಶದ ಆರ್ಥಿಕ ಚಿತ್ರಣವನ್ನು ಮರುರೂಪಿಸಲು ಎಐ ನೇರವಾಗಿ ನೆರವಾಗಲಿದೆ ಎಂದು ಶೇ. 80ರಷ್ಟು ಭಾರತೀಯ ಉದ್ಯಮ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. 2030ರ ವೇಳೆಗೆ ಭಾರತವು ಪ್ರಮುಖ ಜಾಗತಿಕ ಎಐ ರಾಷ್ಟ್ರವಾಗಿ ಉದಯಿಸಲಿದೆ ಎಂದು ಶೇ. 73ರಷ್ಟು ಭಾರತೀಯ ಅಧಿಕಾರಿಗಳು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ಬಿಡುಗಡೆಯಾಗಿರುವ ಐಬಿಎಂ ಇನ್‌ಸ್ಟಿಟ್ಯೂಟ್ ಫಾರ್ ಬಿಸಿನೆಸ್ ವ್ಯಾಲ್ಯೂ ಮತ್ತು ಇಂಡಿಯಾ ಎಐ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ‘ಭರವಸೆಯಿಂದ ಶಕ್ತಿಯವರೆಗೆ: ಎಐ ಭಾರತದ ಆರ್ಥಿಕ ಭವಿಷ್ಯವನ್ನು ಹೇಗೆ ಮರು ರೂಪಿಸುತ್ತಿದೆ’ ಎಂಬ ವರದಿಯಲ್ಲಿ ಈ ವಿಚಾರ ಬಹಿರಂಗಪಡಿಸಲಾಗಿದೆ.
ಈ ವರದಿಯ ಪ್ರಕಾರ, ಎಐ ಕೇವಲ ಪ್ರಯೋಗದ ಹಂತವನ್ನು ಮೀರಿ ರಾಷ್ಟ್ರೀಯ ಬೆಳವಣಿಗೆಯ ಮೂಲಶಕ್ತಿಯಾಗಿ ಬದಲಾಗುತ್ತಿದ್ದು, ಭಾರತವು ತನ್ನ ಆರ್ಥಿಕ ಬದಲಾವಣೆಯ ನಿರ್ಣಾಯಕ ಹಂತವನ್ನು ಪ್ರವೇಶಿಸುತ್ತಿದೆ. 2030ರ ವೇಳೆಗೆ ಎಐ ತಂತ್ರಜ್ಞಾನವು ಭಾರತದ ಆರ್ಥಿಕತೆಗೆ 500 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಕೊಡುಗೆ ನೀಡಲಿದ್ದು, ವಿಶ್ವದ ಅತ್ಯಂತ ಕ್ರಿಯಾತ್ಮಕ ಎಐ ಆಧರಿತ ಆರ್ಥಿಕತೆಗಳ ಪಟ್ಟಿಯಲ್ಲಿ ಭಾರತವನ್ನು ಮುಂಚೂಣಿಗೆ ತರಲಿದೆ.ಈ ಸಂಶೋಧನೆಯು ಒಂದು ನಿರ್ಣಾಯಕ ಅಂಶವನ್ನು ಬಹಿರಂಗಪಡಿಸಿದ್ದು, ಎಐ ಅಳವಡಿಕೆಯಲ್ಲಿ ಭಾರತೀಯ ಸಂಸ್ಥೆಗಳು ಜಾಗತಿಕ ಸಮಾನಸ್ಕರಿಗಿಂತ ಹಿಂದೆ ಇರುವುದನ್ನು ಸಮೀಕ್ಷೆಗೆ ಒಳಪಟ್ಟ ಶೇ. 72ರಷ್ಟು ಸಂಸ್ಥೆಗಳು ಒಪ್ಪಿಕೊಂಡಿವೆ. ಈ ಹಿನ್ನೆಲೆಯಲ್ಲಿ, ಮಹತ್ವಾಕಾಂಕ್ಷೆ ಮತ್ತು ಕಾರ್ಯಗತಗೊಳಿಸುವಿಕೆಯ ನಡುವಿನ ಈ ಕಂದಕವನ್ನು ಸರಿಪಡಿಸುವುದು ಜಾಗತಿಕ ಎಐ ಆರ್ಥಿಕತೆಯಲ್ಲಿ ಭಾರತದ ನಾಯಕತ್ವವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ವರದಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಎಸ್. ಕೃಷ್ಣನ್ ಅವರು, ‘ಭಾರತವು ಈಗ ಕೇವಲ ಜಾಗತಿಕ ಕೃತಕ ಬುದ್ಧಿಮತ್ತೆಯ ಚರ್ಚೆಗಳಲ್ಲಿ ಭಾಗವಹಿಸುವ ದೇಶವಾಗಿ ಉಳಿದಿಲ್ಲ; ಬದಲಿಗೆ ಆ ಚರ್ಚೆಗಳನ್ನು ಮುನ್ನಡೆಸುವ ಮತ್ತು ರೂಪಿಸುವ ಶಕ್ತಿಯಾಗಿ ಹೊರಹೊಮ್ಮಿದೆ. ನಮ್ಮ ದೃಷ್ಟಿಕೋನ ಅತ್ಯಂತ ಸ್ಪಷ್ಟವಾಗಿದೆ. ಎಐ ಎನ್ನುವುದು ಕೇವಲ ಯಂತ್ರಗಳ ಬುದ್ಧಿವಂತಿಕೆಯಲ್ಲ, ಅದು ನಮ್ಮ ಜನರ ಮಹತ್ವಾಕಾಂಕ್ಷೆಗಳ ಬೆಳವಣಿಗೆಯಾಗಬೇಕು. ವಿಕಸಿತ ಭಾರತದ ಗುರಿಯನ್ನು ತಲುಪಲು ಎಐ ಅತ್ಯಗತ್ಯವಾಗಿದೆ. ನಮ್ಮ ತಂತ್ರಜ್ಞಾನವು ನಂಬಿಕೆ, ನೈತಿಕತೆ ಮತ್ತು ರಾಷ್ಟ್ರೀಯ ಸಾರ್ವಭೌಮತ್ವದ ಅಡಿಪಾಯದ ಮೇಲೆ ನಿಂತಿದೆ’ ಎಂದು ತಿಳಿಸಿದರು. ಐಬಿಎಂ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್ ಅವರು ಮಾತನಾಡಿ, ‘ವಿಶ್ವದ ಇತರ ರಾಷ್ಟ್ರಗಳಿಗಿಂತ ಭಾರತವನ್ನು ಭಿನ್ನವಾಗಿ ನಿಲ್ಲಿಸುವುದು ನಾವು ಎಷ್ಟರ ಮಟ್ಟಿಗೆ ಎಐ ಅಳವಡಿಸಿಕೊಳ್ಳುತ್ತೇವೆ ಎನ್ನುವುದಲ್ಲ, ಬದಲಿಗೆ ನಾವು ಎಷ್ಟು ವಿಶ್ವಾಸಾರ್ಹವಾದ ಎಐ ವ್ಯವಸ್ಥೆಯನ್ನು ನಿರ್ಮಿಸುತ್ತೇವೆ ಎಂಬುದು ಮುಖ್ಯ. ಕೌಶಲ್ಯ, ಆಡಳಿತ ಮತ್ತು ಮೂಲಸೌಕರ್ಯಗಳಲ್ಲಿ ಸರಿಯಾದ ಹೂಡಿಕೆ ಮಾಡುವ ಮೂಲಕ ಭಾರತವು ತನ್ನ ಎಐ ಮಹತ್ವಾಕಾಂಕ್ಷೆಯನ್ನು ಸುಸ್ಥಿರ ಆರ್ಥಿಕ ಪ್ರಭಾವವಾಗಿ ಪರಿವರ್ತಿಸಬಹುದು’ ಎಂದರು. ಬ್ಯಾಂಕಿಂಗ್, ಆರೋಗ್ಯ ಮತ್ತು ಸಾರ್ವಜನಿಕ ಸೇವಾ ವಲಯಗಳಲ್ಲಿ ಸಾರ್ವಭೌಮ ಎಐ ಅಳವಡಿಕೆ ಒಂದು ಆಯಕಟ್ಟಿನ ಅಗತ್ಯವಾಗಿ ಮಾರ್ಪಟ್ಟಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 74ರಷ್ಟು ಉನ್ನತ ಕಾರ್ಯನಿರ್ವಾಹಕರು, ದತ್ತಾಂಶದ ಸಂಗ್ರಹಣೆ ಮತ್ತು ಅದರ ಮೇಲಿನ ನಿಯಂತ್ರಣ ಅತ್ಯಂತ ನಿರ್ಣಾಯಕ ಎಂದು ಅಭಿಪ್ರಾಯಪಟ್ಟಿದ್ದಾರೆ. ಪ್ರತಿ 10 ಅಧಿಕಾರಿಗಳಲ್ಲಿ 7 ಮಂದಿ ಹೈಬ್ರಿಡ್ ಮಾದರಿಯು ವೆಚ್ಚವನ್ನು ಹೆಚ್ಚಿಸದೆ ದತ್ತಾಂಶದ ಸ್ಥಳದ ಮೇಲಿನ ನಿಯಂತ್ರಣವನ್ನು ಸುಧಾರಿಸುತ್ತದೆ ಎಂದು ದೃಢವಾಗಿ ಹೇಳಿದ್ದಾರೆ.
ಆದಾಗ್ಯೂ, ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ. 57ರಷ್ಟು ಮಂದಿ ಅಸಮರ್ಪಕ ದತ್ತಾಂಶದ ಗುಣಮಟ್ಟವನ್ನು ಮತ್ತು ಶೇ. 77ರಷ್ಟು ಮಂದಿ ಸುಲಭವಾಗಿ ಲಭ್ಯವಾಗುವ, ಕೈಗೆಟುಕುವ ಮತ್ತು ಸುರಕ್ಷಿತವಾದ ಕ್ಲೌಡ್ ಮೂಲಸೌಕರ್ಯದ ಕೊರತೆಯನ್ನು ಎಐ ಸಿದ್ಧತೆಗೆ ಇರುವ ಪ್ರಮುಖ ಅಡೆತಡೆಗಳು ಎಂದು ಬೆಟ್ಟು ಮಾಡಿದ್ದಾರೆ.