ಕೆನಡಾ ಮೂಲದ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್, ₹52,878 ಕೋಟಿ ಮೊತ್ತಕ್ಕೆ ಐಡಿಬಿಐ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಕುರಿತ ವಿವರ ಇಲ್ಲಿದೆ.

ಕನ್ನಡಪ್ರಭವಾರ್ತೆ ಬೆಂಗಳೂರು

ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ಸ್ವತಂತ್ರ ಮೌಲ್ಯಮಾಪನ ಮಾನದಂಡಕ್ಕಿಂತ ಹೆಚ್ಚಿನ ಮೊತ್ತಕ್ಕೆ ಬಿಡ್ ಸಲ್ಲಿಸಿರುವ ಕೆನಡಾ ಮೂಲದ ಫೇರ್‌ಫ್ಯಾಕ್ಸ್ ಫೈನಾನ್ಶಿಯಲ್ ಹೋಲ್ಡಿಂಗ್ಸ್, ₹52,878 ಕೋಟಿ ಮೊತ್ತಕ್ಕೆ ಐಡಿಬಿಐ ಬ್ಯಾಂಕ್ ಅನ್ನು ಸ್ವಾಧೀನಪಡಿಸಿಕೊಳ್ಳಲಿದೆ.

ಈ ಮಹತ್ವದ ಸ್ವಾಧೀನದ ಮೂಲಕ ಐಡಿಬಿಐ ಬ್ಯಾಂಕ್ ಅನ್ನು ಬ್ಯಾಂಕಿಂಗ್, ವಿಮೆ, ಹೂಡಿಕೆ ಬ್ಯಾಂಕಿಂಗ್ ಹಾಗೂ ಸಂಪತ್ತು ನಿರ್ವಹಣೆ ಸೇರಿದಂತೆ ವಿವಿಧ ಹಣಕಾಸು ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಬೃಹತ್ ಸಮಗ್ರ ಹಣಕಾಸು ಸಂಸ್ಥೆಯಾಗಿ ರೂಪಿಸಲು ಫೇರ್‌ಫ್ಯಾಕ್ಸ್ ಮುಂದಾಗಿದೆ.

ಕೋಟ್ಯಧಿಪತಿ ಹೂಡಿಕೆದಾರ ಪ್ರೇಮ್ ವತ್ಸಾ ನೇತೃತ್ವದ ಫೇರ್‌ಫ್ಯಾಕ್ಸ್ ಸಂಸ್ಥೆಯು ಐಡಿಬಿಐ ಬ್ಯಾಂಕ್‌ನ ಶೇ. 60.72ರಷ್ಟು ನಿಯಂತ್ರಣ ಪಾಲನ್ನು ₹52,878 ಕೋಟಿಗೆ ಖರೀದಿಸಲಿದೆ. ಸರ್ಕಾರ ಪ್ರತಿ ಷೇರಿಗೆ ₹75.99 ಮಾನದಂಡ ಮೌಲ್ಯ ನಿಗದಿಪಡಿಸಿದ್ದರೆ, ಫೇರ್‌ಫ್ಯಾಕ್ಸ್ ಪ್ರತಿ ಷೇರಿಗೆ ₹81ರಂತೆ ಬಿಡ್ ಸಲ್ಲಿಸಿದೆ. 2026ರ ಮಾ. 31ರ ಅನ್ವಯ ಬ್ಯಾಂಕ್‌ನ ಪ್ರತಿ ಷೇರಿನ ಬುಕ್ ವ್ಯಾಲ್ಯು ₹51.85 ಇದ್ದು, ಇದಕ್ಕಿಂತ ಶೇ. 56ರಷ್ಟು ಹೆಚ್ಚಿನ ದರಕ್ಕೆ ಫೇರ್‌ಫ್ಯಾಕ್ಸ್ ಖರೀದಿಗೆ ಮುಂದಾಗಿದೆ.

ಈ ಸ್ವಾಧೀನದ ಬಳಿಕ ಬ್ಯಾಂಕ್‌ನ ಆಡಳಿತ ನಿರ್ವಹಣೆ ಫೇರ್‌ಫ್ಯಾಕ್ಸ್ ಕೈಸೇರಲಿದ್ದು, ಕೇಂದ್ರ ಸರ್ಕಾರ ಮತ್ತು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಒಟ್ಟಾಗಿ ಶೇ. 34ರಷ್ಟು ಪಾಲನ್ನು ಉಳಿಸಿಕೊಂಡು ಬ್ಯಾಂಕ್‌ನ ಮುಂದಿನ ಬೆಳವಣಿಗೆಯಲ್ಲಿ ಭಾಗಿಯಾಗಲಿವೆ.

ಐಡಿಬಿಐ ಬ್ಯಾಂಕ್ ಸ್ವಾಧೀನದ ಜೊತೆಗೆ ತನ್ನ ಅಧೀನದ ಗೋ ಡಿಜಿಟ್ ಜನರಲ್ ಇನ್ಶುರನ್ಸ್, ಗೋ ಡಿಜಿಟ್ ಲೈಫ್ ಇನ್ಶುರನ್ಸ್ ಹಾಗೂ ಐಐಎಫ್‌ಎಲ್ ಕ್ಯಾಪಿಟಲ್‌ನಲ್ಲಿನ ಪಾಲನ್ನು ಐಡಿಬಿಐ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲು ಫೇರ್‌ಫ್ಯಾಕ್ಸ್ ಯೋಜಿಸಿದೆ. ಇದರಿಂದ ಒಂದೇ ವೇದಿಕೆಯಲ್ಲಿ ಸಮಗ್ರ ಹಣಕಾಸು ಸೇವೆ ಲಭ್ಯವಾಗಲಿದ್ದು, ಎಸ್‌ಬಿಐ, ಎಚ್‌ಡಿಎಫ್‌ಸಿ, ಐಸಿಐಸಿಐ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ಗಳಂತಹ ದೈತ್ಯ ಸಂಸ್ಥೆಗಳಿಗೆ ಪ್ರಬಲ ಸ್ಪರ್ಧೆ ನೀಡುವ ಸಾಮರ್ಥ್ಯ ಬ್ಯಾಂಕ್‌ಗೆ ಬರಲಿದೆ.

ಹಿಂದೊಮ್ಮೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಐಡಿಬಿಐ ಬ್ಯಾಂಕ್, 2017ರ ಮೇನಿಂದ 2021ರ ಮಾರ್ಚ್‌ವರೆಗೆ ಆರ್‌ಬಿಐನ ತ್ವರಿತ ಸುಧಾರಣಾ ಕ್ರಮಗಳ (ಪಿಸಿಎ) ಚೌಕಟ್ಟಿನಲ್ಲಿತ್ತು. ಸರ್ಕಾರ ಮತ್ತು ಎಲ್‌ಐಸಿ ನೀಡಿದ ಬಂಡವಾಳ ನೆರವಿನಿಂದ ಚೇತರಿಸಿಕೊಂಡಿರುವ ಬ್ಯಾಂಕ್, ಕಳೆದ ಹಣಕಾಸು ವರ್ಷದಲ್ಲಿ ₹9,000 ದಿಂದ ₹10,000 ಕೋಟಿವರೆಗೆ ಲಾಭ ದಾಖಲಿಸಿ ಗಮನ ಸೆಳೆದಿದೆ.

2001ರಿಂದ ಭಾರತದಲ್ಲಿ ಹೂಡಿಕೆ ಮಾಡುತ್ತಿರುವ ಫೇರ್‌ಫ್ಯಾಕ್ಸ್, ಈಗಾಗಲೇ ಸಿಎಸ್‌ಬಿ ಬ್ಯಾಂಕ್‌ನಲ್ಲಿ ಬಂಡವಾಳ ಹೂಡಿಕೆ ಮತ್ತು ತಂತ್ರಜ್ಞಾನ ಸುಧಾರಣೆಯ ಮೂಲಕ ಬ್ಯಾಂಕ್ ಪುನಶ್ಚೇತನಗೊಳಿಸಿದ ಅನುಭವ ಹೊಂದಿದೆ. ಇದೀಗ ಐಡಿಬಿಐ ಬ್ಯಾಂಕ್‌ನೊಂದಿಗೆ ತನ್ನ ಇತರ ವಹಿವಾಟುಗಳನ್ನು ಸಂಯೋಜಿಸುವ ಪ್ರಸ್ತಾವನೆಗೆ ನಿಯಂತ್ರಣ ಸಂಸ್ಥೆಗಳು ಮತ್ತು ಷೇರುದಾರರ ಅನುಮೋದನೆ ಬಾಕಿಯಿದ್ದು, ಪಾರದರ್ಶಕ ಆಡಳಿತ ಕ್ರಮಗಳು ಬ್ಯಾಂಕ್‌ನ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿವೆ.

‘ಜಾಗತಿಕ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಭಾರತದ ಅತ್ಯುತ್ತಮ ಸಮಗ್ರ ಬ್ಯಾಂಕ್ ಆಗುವ ಸಾಮರ್ಥ್ಯ ಐಡಿಬಿಐ ಬ್ಯಾಂಕ್‌ಗಿದೆ. ಈ ನಡೆಯು ಸಾಮಾನ್ಯ ಜನರ ಆರ್ಥಿಕ ಜೀವನದಲ್ಲೂ ದೊಡ್ಡ ಪರಿವರ್ತನೆ ತರಲಿದೆ’ ಎಂದು ಫೇರ್‌ಫ್ಯಾಕ್ಸ್ ಅಧ್ಯಕ್ಷ ಹಾಗೂ ಸಿಇಒ ಪೀಟರ್ ಕ್ಲಾರ್ಕ್ ಹೇಳಿದ್ದಾರೆ.