ಕನ್ನಡಪ್ರಭವಾರ್ತೆ ಬೆಂಗಳೂರು

ಭಾರತದ ಅತಿದೊಡ್ಡ ಕ್ಯಾಂಪಸ್ ಆಧಾರಿತ ಕೋ-ವರ್ಕಿಂಗ್ ಸಂಸ್ಥೆಯಾದ ಬೀಹೈವ್ ವರ್ಕ್‌ಸ್ಪೇಸ್‌, ಖ್ಯಾತ ನಟ ಹಾಗೂ ಫಿಟ್ನೆಸ್ ಐಕಾನ್ ಮಿಲಿಂದ್ ಸೋಮನ್ ಅವರನ್ನು ತನ್ನ ನೂತನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಘೋಷಿಸಿದೆ. ಈ ಮೂಲಕ ಕ್ಯಾಂಪಸ್ ಮಾದರಿಯ ಕೋ-ವರ್ಕಿಂಗ್ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ರಾಯಭಾರಿಯೊಬ್ಬರನ್ನು ನೇಮಿಸಿಕೊಂಡ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ಬೀಹೈವ್ ಪಾತ್ರವಾಗಿದೆ.

ಸಾಂಪ್ರದಾಯಿಕ ಕಚೇರಿಗಳ ಚೌಕಟ್ಟನ್ನು ಮೀರಿ ನಿಂತಿರುವ ಬೀಹೈವ್, ವಿಶಾಲವಾದ ಕೆಲಸದ ಸ್ಥಳದೊಂದಿಗೆ ಕ್ರೀಡಾ ಮೂಲಸೌಕರ್ಯ ಹಾಗೂ ಸಮುದಾಯ ಆಧಾರಿತ ಪರಿಸರವನ್ನು ಒದಗಿಸುತ್ತಿದೆ. 50ನೇ ವಯಸ್ಸಿನಲ್ಲಿ ‘ಐರನ್ ಮ್ಯಾನ್’ ಪ್ರಶಸ್ತಿ ಗೆದ್ದ ಮಿಲಿಂದ್ ಸೋಮನ್ ಅವರ ಶಿಸ್ತು ಮತ್ತು ಸಹಿಷ್ಣುತೆಯ ಜೀವನಶೈಲಿಯು ಬೀಹೈವ್‌ನ ‘ಕೆಲಸ-ಜೀವನದ ಸಮತೋಲನ’ ತತ್ವಕ್ಕೆ ಪೂರಕವಾಗಿದೆ.

ಈ ಕುರಿತು ಮಾತನಾಡಿರುವ ಬೀಹೈವ್ ವರ್ಕ್ ಸ್ಪೇಸ್ ಸಂಸ್ಥೆಯ ಸಿಇಓ ಶೇಷ್ ರಾವ್ ಪಾಪ್ಲಿಕರ್ ಅವರು, ‘ಬೀಹೈವ್ ನಡೆಸುವುದು ಕೇವಲ ವ್ಯವಹಾರವಲ್ಲ; ಜನರ ಜೀವನಶೈಲಿಯ ಮೇಲೆ ಪ್ರಭಾವ ಬೀರುವ ಪ್ರಯತ್ನ. ಮಿಲಿಂದ್ ಸೋಮನ್ ಅವರು ಭಾರತದಲ್ಲಿ ಫಿಟ್‌ನೆಸ್‌ ವಿಚಾರದಲ್ಲಿ ಮಾದರಿಯಾಗಿರುವವರು. ಅವರ ಮುಂಚೂಣಿ ಮನೋಭಾವವೇ ನಮ್ಮ ಸಂಸ್ಥೆಯ ಮೂಲ ಮೌಲ್ಯವಾಗಿದೆ. ಕಳೆದ ವರ್ಷ ನಾನು ಐರನ್ ಮ್ಯಾನ್ 70.3 ಗೋವಾ ಪೂರ್ಣಗೊಳಿಸಿದ್ದು, ಈ ಬಾರಿ ಮಿಲಿಂದ್ ಅವರ ಮಾರ್ಗದರ್ಶನದೊಂದಿಗೆ ನಮ್ಮ ಸದಸ್ಯರ ತಂಡ ಈ ಐರನ್‌ ಮ್ಯಾನ್‌ 70.3 ಗೋವಾದಲ್ಲಿ ಭಾಗವಹಿಸಲಿದೆ’ ಎಂದು ಹೇಳಿದರು.

ಬೀಹೈವ್ ಕ್ಯಾಂಪಸ್‌ಗಳಲ್ಲಿ ಈಗಾಗಲೇ ರನ್ನಿಂಗ್ ಗ್ರೂಪ್‌ಗಳು, ಪಿಕಲ್‌ಬಾಲ್ ಕೋರ್ಟ್, ಕ್ರಿಕೆಟ್ ಮತ್ತು ಫುಟ್‌ಬಾಲ್ ಟರ್ಫ್‌ಗಳಿದ್ದು, ‘ಬೀಹೈವ್ ಪ್ರೀಮಿಯರ್ ಲೀಗ್’ ನಂತಹ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. 2026ರ ಐರನ್ ಮ್ಯಾನ್ 70.3 ಗೋವಾ ಸ್ಪರ್ಧೆಯಲ್ಲಿ 50ಕ್ಕೂ ಹೆಚ್ಚು ಸದಸ್ಯರನ್ನು ಭಾಗವಹಿಸುವಂತೆ ಮಾಡುವ ಗುರಿಯನ್ನು ಸಂಸ್ಥೆ ಹೊಂದಿದೆ.


ಈ ಸಂದರ್ಭದಲ್ಲಿ ಮಾತನಾಡಿರುವ ನಟ, ಫಿಟ್‌ನೆಸ್‌ ಐಕಾನ್‌ ಮಿಲಿಂದ್ ಸೋಮನ್ ಅವರು, ‘ಬೀಹೈವ್ ತಂಡದ ಆರೋಗ್ಯ ಮತ್ತು ಫಿಟ್‌ನೆಸ್ ಕುರಿತಾದ ಬದ್ಧತೆ ನನ್ನನ್ನು ಆಕರ್ಷಿಸಿತು. ಅವರು ಕೇವಲ ಕೆಲಸದ ಬಗ್ಗೆ ಮಾತನಾಡದೆ, ಅದನ್ನು ಮೂಲಸೌಕರ್ಯದಲ್ಲೇ ಅಳವಡಿಸಿದ್ದಾರೆ. ಕೆಲಸದ ಸ್ಥಳದ ಕುರಿತಾದ ಈ ಹೊಸ ಆಲೋಚನೆಯ ಭಾಗವಾಗಲು ನನಗೆ ಹೆಮ್ಮೆಯಿದೆ’ ಎಂದು ಹೇಳಿದರು.