ಫ್ಲಿಪ್‌ಕಾರ್ಟ್‌ನ ಬಹುನಿರೀಕ್ಷಿತ ದಿ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ-2026) 13ನೇ ಆವೃತ್ತಿಯ ಮಾರಾಟ ಮೇಳಕ್ಕೆ ದೇಶಾದ್ಯಂತ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಈ ಕುರಿತ ವರದಿ ಇಲ್ಲಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಮುಖ ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್‌ನ ಬಹುನಿರೀಕ್ಷಿತ ದಿ ಬಿಗ್ ಬಿಲಿಯನ್ ಡೇಸ್ (ಟಿಬಿಬಿಡಿ-2026) 13ನೇ ಆವೃತ್ತಿಯ ಮಾರಾಟ ಮೇಳಕ್ಕೆ ದೇಶಾದ್ಯಂತ ಗ್ರಾಹಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಮಾರಾಟ ಆರಂಭಗೊಂಡ ಮೊದಲ ಗಂಟೆಯಲ್ಲೇ ಕೇವಲ ಒಂದೇ ನಿಮಿಷದಲ್ಲಿ ಬರೋಬ್ಬರಿ 63 ಲಕ್ಷ ಗ್ರಾಹಕರು ಆ್ಯಪ್‌ಗೆ ಭೇಟಿ ನೀಡಿ ಹೊಸ ದಾಖಲೆ ಬರೆದಿದ್ದಾರೆ. ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಮೊದಲ ಗಂಟೆಯಲ್ಲೇ 6 ಪಟ್ಟು ಹೆಚ್ಚು ಭಾರತೀಯರು ಖರೀದಿಗೆ ಮುಂದಾಗಿದ್ದು, ಹೊಸ ಗ್ರಾಹಕರ ಸಂಖ್ಯೆಯಲ್ಲಿ ಶೇ. 34ರಷ್ಟು ಏರಿಕೆ ದಾಖಲಾಗಿದೆ. ಅಕ್ಟೋಬರ್ 8ರ ಮಧ್ಯರಾತ್ರಿಯಿಂದ ಆರಂಭವಾದ ‘ಅರ್ಲಿ ಆಕ್ಸೆಸ್’ ಅವಧಿಯಲ್ಲಿ ಒಟ್ಟು 28.7 ಕೋಟಿಗೂ ಅಧಿಕ ಸೆಷನ್‌ಗಳು ದಾಖಲಾಗಿವೆ.ಈ ಬಾರಿಯ ಹಬ್ಬದ ಮಾರುಕಟ್ಟೆಯಲ್ಲಿ ಮೆಟ್ರೋ ನಗರಗಳಿಗಿಂತ ಸಣ್ಣ ಪಟ್ಟಣಗಳೇ ಮುಂಚೂಣಿಯಲ್ಲಿರುವುದು ವಿಶೇಷ. ಮೊದಲ ಗಂಟೆಯಲ್ಲಿ ದಾಖಲಾದ ಭೇಟಿಗಳಲ್ಲಿ ಅರ್ಧದಷ್ಟು ಪಾಲು ಶ್ರೇಣಿ-3 ಮತ್ತು ಗ್ರಾಮೀಣ ಭಾಗಗಳಿಂದಲೇ ಬಂದಿದ್ದು, ಒಟ್ಟು ಬೇಡಿಕೆಯಲ್ಲಿ ಮೆಟ್ರೋಯೇತರ ನಗರಗಳ ಪಾಲು ಶೇ. 60ರಷ್ಟಿದೆ. ಸರ್ದುಲ್‌ಗಢ್, ಪಂಸ್ಕುರಾ, ಶೇಖ್‌ಪುರಾ ಮತ್ತು ಕಿಶನ್‌ಗಂಜ್ ನಗರಗಳು ಅತಿ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಾಗಿ ಹೊರಹೊಮ್ಮಿವೆ.
ಇತ್ತ ಕ್ವಿಕ್ ಕಾಮರ್ಸ್ ವಿಭಾಗವಾದ ‘ಫ್ಲಿಪ್‌ಕಾರ್ಟ್ ಮಿನಿಟ್ಸ್’ ಆರ್ಡರ್‌ಗಳು 3.5 ಪಟ್ಟು ಜಿಗಿದಿದ್ದು, ಹೊಸ ಗ್ರಾಹಕರ ಸಂಖ್ಯೆ 11 ಪಟ್ಟು ಹೆಚ್ಚಾಗಿದೆ. ನವದೆಹಲಿಯ ಗ್ರಾಹಕರೊಬ್ಬರಿಗೆ ಕೇವಲ 3.4 ನಿಮಿಷಗಳಲ್ಲಿ ‘ಐಫೋನ್ 17’ ತಲುಪಿಸುವ ಮೂಲಕ ಅತಿ ವೇಗದ ಡೆಲಿವರಿ ದಾಖಲೆ ಬರೆಯಲಾಗಿದೆ. ಜತೆಗೆ ಲ್ಯಾಪ್‌ಟಾಪ್ ಹಾಗೂ ಏರ್ ಫ್ರೈಯರ್‌ಗಳಿಗೂ ತ್ವರಿತ ಡೆಲಿವರಿ ವಿಭಾಗದಲ್ಲಿ ಭಾರೀ ಬೇಡಿಕೆ ಕಂಡುಬಂದಿದೆ. ಮೆಟ್ರೋಯೇತರ ನಗರಗಳ ಶೇ. 64ರಷ್ಟು ಗ್ರಾಹಕರು ಉತ್ಪನ್ನಗಳ ಹುಡುಕಾಟಕ್ಕೆ ‘ಧ್ವನಿ ಹುಡುಕಾಟ’ (ವಾಯ್ಸ್ ಸರ್ಚ್) ಬಳಸಿದ್ದು, 1.27 ಕೋಟಿಗೂ ಹೆಚ್ಚು ಬಳಕೆದಾರರು ಲೈವ್ ಕಾಮರ್ಸ್ ಮತ್ತು ಕಿರು ವೀಡಿಯೊಗಳ ಮೂಲಕ ಶಾಪಿಂಗ್ ನಡೆಸಿದ್ದಾರೆ.ಉತ್ಪನ್ನಗಳ ವಿಭಾಗವಾರು ಮಾರಾಟದಲ್ಲೂ ಗಮನಾರ್ಹ ಏರಿಕೆ ಕಂಡುಬಂದಿದೆ. ಬೃಹತ್ ಗೃಹೋಪಯೋಗಿ ವಸ್ತುಗಳ ಮಾರಾಟ ಶೇ. 30ರಷ್ಟು ಹಾಗೂ ಟ್ಯಾಬ್ಲೆಟ್ ವಿಭಾಗ ಶೇ. 73ರಷ್ಟು ವಾರ್ಷಿಕ ಬೆಳವಣಿಗೆ ಕಂಡಿವೆ. ಸೌಂದರ್ಯವರ್ಧಕಗಳ ಮಾರಾಟ ಶೇ. 42ರಷ್ಟು ಜಿಗಿದಿದ್ದು, ಗರಿಷ್ಠ ಹಂತದಲ್ಲಿ ನಿಮಿಷಕ್ಕೆ 1,600ಕ್ಕೂ ಹೆಚ್ಚು ಪುರುಷರ ಪರ್ಫ್ಯೂಮ್‌ಗಳು ಮಾರಾಟವಾಗಿವೆ. ಪ್ರತಿ ನಾಲ್ವರಲ್ಲಿ ಒಬ್ಬರು ಎಕ್ಸ್‌ಚೇಂಜ್ ಆಫರ್ ಹಾಗೂ ಮೂವರಲ್ಲಿ ಒಬ್ಬರು ನೋ-ಕಾಸ್ಟ್ ಇಎಂಐ ಸೌಲಭ್ಯ ಬಳಸಿಕೊಂಡಿದ್ದಾರೆ. ಇನ್ನು ಈ ಮೇಳದಿಂದ ಸಣ್ಣ ವ್ಯಾಪಾರಿಗಳು ಹಾಗೂ ಎಂಎಸ್‌ಎಂಇಗಳ ವಹಿವಾಟು 2.9 ಪಟ್ಟು ಹೆಚ್ಚಾಗಿದ್ದು, ಸ್ಥಳೀಯ ಉದ್ಯಮಿಗಳಿಗೂ ದೊಡ್ಡ ಮಟ್ಟದ ಉತ್ತೇಜನ ಸಿಕ್ಕಿದೆ.