ಹಿಡಿ ಮಣ್ಣಿನಾಸೆಗೆ ಬಿದ್ದು ಮಣ್ಣುಪಾಲಾದರು!

| Published : Jul 04 2024, 01:10 AM IST / Updated: Jul 04 2024, 05:06 AM IST

ಸಾರಾಂಶ

 ಹಾಥ್ರಸ್‌ ಜಿಲ್ಲಾಸ್ಪತ್ರೆ ಮುಂದೆ ಗಂಡ-ಹೆಂಡತಿ, ತಂದೆ-ತಾಯಿ, ಅಜ್ಜ, ಅಜ್ಜಿ, ತಂದೆ, ಮಗನನ್ನು ಕಳೆದುಕೊಂಡವರ ಮುಗಿಲು ಮುಟ್ಟಿದ ಆಕ್ರಂದನ ಮತ್ತು ಫುಲರೈನಲ್ಲಿ ಹರಡಿ ಬಿದ್ದಿರುವ ರಾಶಿ ರಾಶಿ ಚಪ್ಪಲಿಗಳು ಹಿಡಿ ಮಣ್ಣಿನ ಆಸೆಗಾಗಿ ನಡೆದು ಹೋದ ಘೋರ ದುರಂತ 

*ಕನ್ನಡಪ್ರಭ ಪ್ರತ್ಯಕ್ಷ ವರದಿ*

ಡೆಲ್ಲಿ ಮಂಜು

  ಫುಲರೈ :  ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟ ಎಂಟು ತಿಂಗಳ ಹಸುಗೂಸಿನ ಮೃತದೇಹ, ಹಾಥ್ರಸ್‌ ಜಿಲ್ಲಾಸ್ಪತ್ರೆ ಮುಂದೆ ಗಂಡ-ಹೆಂಡತಿ, ತಂದೆ-ತಾಯಿ, ಅಜ್ಜ, ಅಜ್ಜಿ, ತಂದೆ, ಮಗನನ್ನು ಕಳೆದುಕೊಂಡವರ ಮುಗಿಲು ಮುಟ್ಟಿದ ಆಕ್ರಂದನ ಮತ್ತು ಫುಲರೈನಲ್ಲಿ ಹರಡಿ ಬಿದ್ದಿರುವ ರಾಶಿ ರಾಶಿ ಚಪ್ಪಲಿಗಳು ಹಿಡಿ ಮಣ್ಣಿನ ಆಸೆಗಾಗಿ ನಡೆದು ಹೋದ ಘೋರ ದುರಂತಕ್ಕೆ ಸಾಕ್ಷಿ ಹೇಳುತ್ತಿದ್ದವು.

ಭೋಲೇ ಬಾಬಾನ ಕಾಲ ಧೂಳನ್ನು ಹಣೆಗೆ ಮೆತ್ತಿ ಪುನೀತರಾಗಬೇಕು ಹಾಗೂ ಭೋಲೇ ಬಾಬಾನನ್ನು ಸಮೀಪದಿಂದ ದರ್ಶನ ಮಾಡಬೇಕೆಂಬ ಆಸೆಗೆ ಬಿದ್ದು 121ಕ್ಕೂ ಹೆಚ್ಚು ಮಂದಿ ಉತ್ತರ ಪ್ರದೇಶದ ಹಾಥ್ರಸ್‌ನ ಫುಲರೈ ಗ್ರಾಮದಲ್ಲಿ ಮಂಗಳವಾರ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಒಂದು ಹಿಡಿ ಮಣ್ಣಿನ ಆಸೆ ನೂರಾರು ಮಂದಿಯ ಆಸೆ, ಕನಸುಗಳನ್ನು ಮಣ್ಣಪಾಲು ಮಾಡಿದ ಸ್ಥಳಕ್ಕೆ ‘ಕನ್ನಡಪ್ರಭ’ದ ಪ್ರತಿನಿಧಿ ಭೇಟಿ ನೀಡಿದಾಗ ಕಣ್ಣಿಗೆ ಬಿದ್ದದ್ದು ಕೇವಲ ದುರಂತ ಕಥೆ.

ಮನೋವಿಜ್ಞಾನ ಓದಿಕೊಂಡು ಮನುಷ್ಯನ ಮನಸ್ಸಿಗೆ ಮಾತಿನ ಮೂಲಕ ಉಲ್ಲಾಸ ಕೊಡುವ ಕೆಲಸವನ್ನು ದಶಕಗಳಿಂದ ಮಾಡುತ್ತಿದ್ದ ಈ ಭೋಲೇ ಬಾಬಾ ಅಲಿಯಾಸ್ ನಾರಾಯಣ ಸಹಕಾರ್ ಹರಿ ಅವರು ಈ ಘೋರ ದುರಂತದ ಬಳಿಕ ಕಂಬಿ ಎಣಿಸುವ ಸ್ಥಿತಿಗೆ ಬಂದು ನಿಲ್ಲುವಂತಾಗಿದೆ.

ಆಗಿದ್ದೇನು?:

ಕಾನ್ಪುರ-ಅಲಿಗಢ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಹಾಥ್ರಸ್ ಜಿಲ್ಲೆಯ ಫುಲರೈನಲ್ಲಿ ಭೋಲೇ ಬಾಬಾನ ಕಾರ್ಯಕ್ರಮ‌ವನ್ನು ಮಂಗಳವಾರ ಆಯೋಜಿಸಲಾಗಿತ್ತು. ಆಯೋಜಕರು 80 ಸಾವಿರ ಮಂದಿಯನ್ನು 10 ಎಕರೆ ಪ್ರದೇಶದಲ್ಲಿ ಸೇರಿಸಲು ಅನುಮತಿ ಪಡೆದಿದ್ದರು. ಆದರೆ ನಿರೀಕ್ಷೆಗೂ ಮೀರಿದ ಭಕ್ತಗಣ ಸೇರಿದಾಗ ಆ ಸಂಖ್ಯೆ ಒಂದೂವರೆ ಲಕ್ಷ ದಾಟಿತ್ತು. ಇಷ್ಟು ಮಂದಿಗೆ ಸತ್ಸಂಗ ಮಾಡುವ ಜಾಗದಲ್ಲಿ ವ್ಯವಸ್ಥೆಗಳಿರಲಿಲ್ಲ. ಇಷ್ಟಾದರೂ ಸತ್ಸಂಗ ಯಾವುದೇ ಅಪಸವ್ಯಗಳಿಲ್ಲದೆ ಮುಗಿದು ಬಾಬಾ ಅವರು ಕಾರು ಹತ್ತಿ ರಾಷ್ಟ್ರೀಯ ಹೆದ್ದಾರಿಗೆ ಬರುತ್ತಿದ್ದಾಗ ನಡೆಯಬಾರದ ದುರಂತವೊಂದು ನಡೆದೇ ಹೋಯ್ತು.

ಪ್ರವಚನ ಮುಗಿಸಿದ ಬಳಿಕ ಬಾಬಾ ಕಾರು ಜಿ.ಟಿ.ರಸ್ತೆ ಮೂಲಕ ರಾಷ್ಟ್ರೀಯ ಹೆದ್ದಾರಿಗೆ ತಿರುಗಿತು. ಈ ಹೊತ್ತಿನಲ್ಲಿ ಬಾಬಾ ಕೃಪೆ ನಮ್ಮ ಮೇಲಿರಬೇಕು, ಅವರನ್ನು ಹತ್ತಿರದಿಂದ ನೋಡಿ ಪುನೀತರಾಗಬೇಕು ಎಂದು ರಸ್ತೆಯ ಒಂದು ಕಡೆಯಲ್ಲಿ ಸೇರಿದ್ದ ಭಕ್ತಗಣ ಕಾರಿನ ಕಡೆ ಓಡಿತು. ಮತ್ತೊಂದು ಕಡೆ ಅವರು ಹೋಗುವ ಹಾದಿಯ ಒಂದು ಹಿಡಿ ಮಣ್ಣು ಪಡೆಯಲು, ಅದೇ ಮಣ್ಣನ್ನು ಹಣೆಗೆ ಹಚ್ಚಿಕೊಂಡು ಧನ್ಯರಾಗಲು ಸಾವಿರಾರು ಮಂದಿ ಮುಗಿಬಿದ್ದರು.

ಇದರಿಂದ ನೂಕುನುಗ್ಗಲು ಉಂಟಾದ ಪರಿಣಾಮ ಕಾಲ್ತುಳಿತ ಶುರುವಾಯ್ತು‌. ಬಾಬಾ ಪಾದದ ಧೂಳಿಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದರು. ತಕ್ಷಣ ಬಾಬಾ ಇದ್ದ ಕಾರು ವೇಗ ಕಡಿಮೆಯಾಗಿ ಬ್ರೇಕ್ ಹಾಕಿತು. ಬಾಬಾ ಸ್ವಂತ ರಕ್ಷಕಭಟರು ಕಾರಿನ ಹತ್ತಿರ ಬರುತ್ತಿದ್ದ ಭಕ್ತರನ್ನು ತಳ್ಳಿಕೊಂಡು ಕಾರಿಗೆ ಜಾಗ ಮಾಡಿಕೊಂಡು ಹೇಗೋ ಮುಂದೆ ಸಾಗಿದರು. ಆದರೆ, ಈ ವೇಳೆ ಭಕ್ತರು ಒಬ್ಬರ ಮೇಲೆ ಮತ್ತೊಬ್ಬರು ಬಿದ್ದು ಭಾರೀ ದುರಂತವೇ ನಡೆದು ಹೋಯಿತು.

ಕಾಲ್ತುಳಿತದಿಂದ ಬಚಾವಾಗಲು ವೇದಿಕೆ ಎದುರಿನ (ಹೆದ್ದಾರಿಯ ಮತ್ತೊಂದು ಕಡೆ) ಜಮೀನಿಗೆ ನುಗ್ಗಲು ಯತ್ನಿಸಿದವರಲ್ಲಿ ಹಲವರು ಸಣ್ಣ ಕಾಲುವೆಗೆ ಜಾರಿ ಬೀಳುತ್ತಿದ್ದರು. ಕೆಳಗೆ ಬಿದ್ದವರನ್ನು ಲೆಕ್ಕಿಸದೆ ಅವರನ್ನು ತುಳಿದು ಕೊಂಡು ಜನಸ್ತೋಮ ನುಗ್ಗಿದ ಪರಿಣಾಮ 121 ಮಂದಿ ಸಾವು ಸಂಭವಿಸಿತು ಎನ್ನುತ್ತಾರೆ ಪ್ರತ್ಯಕ್ಷದರ್ಶಿ ಸ್ಥಳೀಯ ನಿವಾಸಿ ಸೋನಲ್.

ಹೃದಯ ಕಿತ್ತುಬಂತು:

ದೇಶ ಕಂಡ ಭೀಕರ ಕಾಲ್ತುಳಿತಕ್ಕೆ ಸಾಕ್ಷಿಯಾದ ಈ ಸ್ಥಳಕ್ಕೆ ಭೇಟಿ ನೀಡಿದ ‘ಕನ್ನಡಪ್ರಭ’ ಜೊತೆ ಮಾತನಾಡಿದ ಸೋನಲ್, ನೂಕುನುಗ್ಗಲಿನಿಂದ ತಪ್ಪಿಸಿಕೊಳ್ಳಲು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪುರುಷರು ಓಡಿದರು, ಬಿದ್ದರೂ ಬಚಾವ್ ಆದರು. ಆದರೆ ಮಹಿಳೆಯರು, ವಯೋವೃದ್ಧರು, ಮಕ್ಕಳಿಗೆ ತಪ್ಪಿಸಿಕೊಳ್ಳಲು ಆಗಲೇ ಇಲ್ಲ. ಸಿಕ್ಕಿಸಿಕ್ಕವರ ಕಾಲಡಿಗೆ ಸಿಲುಕಿ ನಜ್ಜುಗುಜ್ಜಾಗಿ, ಉಸಿರುಗಟ್ಟಿ ಸ್ಥಳದಲ್ಲೇ ಶವವಾದರು.

ಸತ್ಸಂಗ ನಂತರ ಸಣ್ಣ ಪ್ರಮಾಣದಲ್ಲಿ ಮಳೆಯೂ ಆಗಿತ್ತು. ಇದರಿಂದ ಕೆಸರುಮಯವಾಗಿದ್ದ ಪಕ್ಕದ ಜಮೀನು, ರಸ್ತೆ ಪಕ್ಕದ ಸಣ್ಣ ಕಾಲುವೆಗೆ ಬಿದ್ದ ಜನ, ಕೆಸರಿನಲ್ಲಿ ಸಿಕ್ಕಿಹಾಕಿಕೊಂಡವರನ್ನು ಹೊರ ತೆಗೆಯುವಾಗ ನಮ್ಮ ಹೃದಯ ಕಿತ್ತು ಬಂತು. ಇದೇ ಭಾಗದಲ್ಲಿ 80ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆದು ಆಂಬ್ಯುಲೆನ್ಸ್‌ಗೆ ತುಂಬಿ ಕಳುಹಿಸಿದೆವು ಎಂದು ನೋವಿನಿಂದಲೇ ದುರಂತ ನಡೆದ ಸ್ಥಳದತ್ತ ನೋಡುತ್ತಲೇ ಆ ಕ್ಷಣದ ಭಯಾನಕತೆಯನ್ನು ಬಿಚ್ಚಿಟ್ಟರು ಸೋನಲ್‌.

ಇದನ್ನು ಅಂಧಭಕ್ತಿ ಅನ್ನಬೇಕೋ, ಮೌಢ್ಯ ಅನ್ನಬೇಕೋ ಗೊತ್ತಾಗುತ್ತಿಲ್ಲ. ಭೋಲೇ ಬಾಬಾನ ಪಾದಧೂಳನ್ನು ಪಡೆಯಲು ಹೋಗಿ ನೂರಾರು ಮಂದಿ ಕ್ಷಣ ಮಾತ್ರದಲ್ಲಿ ಮಣ್ಣಾದರು ಎಂದು ನೋವು ತೋಡಿಕೊಂಡರು.

ಸತ್ಸಂಗ ಇದೇ ಮೊದಲಲ್ಲ:

ಇದೇ ಫುಲರೈ ಸಮೀಪದ ಡಿಗ್ರಿ ಕಾಲೇಜು ಆವರಣದಲ್ಲಿ ಹತ್ತು ವರ್ಷಗಳ ಹಿಂದೆಯೂ ಸತ್ಸಂಗ ಆಗಿತ್ತು. ಅದಾದ ಬಳಿಕ ಈಗ ಮತ್ತೆ ಸತ್ಸಂಗ ನಡೆದಿದೆ. ಜನರಲ್ಲಿ ಮೌಢ್ಯ ಬಿತ್ತುವ ಸಲುವಾಗಿ ಬಾಬಾ ಬಂಟರು ದುಡ್ಡು ಮಾಡುವ ಸಲುವಾಗಿ ಇಂಥ ಕಾರ್ಯಕ್ರಮ ಮಾಡುತ್ತಾರೆ. ಮಹಿಳೆಯರು, ವೃದ್ದರು, ದಲಿತರು ಹಾಗು ಬಡವರೇ ಇವರ ಟಾರ್ಗೆಟ್ ಅನ್ನುತ್ತಾರೆ ಸ್ಥಳಿಯ ಯುವಕ ಮುಕೇಶ್.

ಆ ಪ್ರಾಣಗಳಿಗೆ ಬೆಲೆ ಇಲ್ವಾ? ಬಾಬಾ ಕಡೆಯಿಂದಲೇ ಮೃತರ ಕುಟುಂಬಳಿಗೆ ಪರಿಹಾರ ಕೊಡಿಸಬೇಕು. ಆಯೋಜಕರು ಮತ್ತು ಬಾಬಾ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಉತ್ತರ ಪ್ರದೇಶ ಮಾತ್ರವಲ್ಲದೆ ರಾಜಸ್ಥಾನ, ಪೂರ್ವ ಉತ್ತರ ಪ್ರದೇಶದ, ಮಧ್ಯಪ್ರದೇಶ, ಹರಿಯಾಣ, ದೆಹಲಿಯಿಂದಲೂ ಜನ ಸತ್ಸಂಗಕ್ಕೆ ಸಾವಿರಾರು ಬಂದಿದ್ದರು.

ಯೋಗಿ ಭೇಟಿ:

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ, ವಿಶ್ವಾದ್ಯಂತ ಸುದ್ದಿಯಾದ ಈ ದುರಂತ ಸ್ಥಳಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ಕೊಟ್ಟರು. ವೇದಿಕೆ, ಕಾರ್ಯಕ್ರಮ ಆಯೋಜಿಸಿರುವ ವಿಧಾನ, ನೂಕುನುಗ್ಗಲಿಂದ ಜನ ಮೃತಪಟ್ಟಿರುವ ಸ್ಥಳವನ್ನು ಮೂರ್ನಾಲ್ಕು ಬಾರಿ ಹೆದ್ದಾರಿಯಲ್ಲಿ ನಿಂತು ವೀಕ್ಷಿಸಿದ ಅವರು ಅಧಿಕಾರಿಗಳಿಂದ ಘಟನೆ ಕುರಿತು ಪೂರ್ಣ ಮಾಹಿತಿ ಪಡೆದುಕೊಂಡರು.