2025ರ ಕೇಂದ್ರ ಬಜೆಟ್ ಅನ್ನು ಮುಕ್ತವಾಗಿ ಸ್ವಾಗತಿಸಿದ ದೊಡ್ಡ ಕಂಪನಿಗಳ ಮುಖ್ಯಸ್ಥರು

| N/A | Published : Feb 02 2025, 01:02 AM IST / Updated: Feb 02 2025, 05:14 AM IST

ಸಾರಾಂಶ

ಕೇಂದ್ರ ಬಜೆಟ್‌ಗೆ ಬಹಳಷ್ಟು ದೊಡ್ಡ ಕಂಪನಿಗಳ ಮುಖ್ಯಸ್ಥರು ಪ್ರತಿಕ್ರಿಯೆ ನೀಡಿದ್ದು, ಅವರು ಏನು ಹೇಳಿದ್ದಾರೆ ಎಂಬುದನ್ನು ಇಲ್ಲಿ ಓದಬಹುದಾಗಿದೆ.

ನವದೆಹಲಿ :  2025ರ ಕೇಂದ್ರ ಬಜೆಟ್ ಅನ್ನು ಭಾರತದ ಹಲವು ಪ್ರಮುಖ ಕಂಪನಿಗಳ ಮುಖ್ಯಸ್ಥರು ಸ್ವಾಗತಿಸಿದ್ದಾರೆ. ಬಜೆಟ್ ನಲ್ಲಿ ಉತ್ತಮ ಅಂಶಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಕಂಟ್ರಿ ಹೆಡ್ ಮತ್ತು ಕಾರ್ಪೊರೇಟ್ ವ್ಯವಹಾರ ಮತ್ತು ಆಡಳಿತ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಅವರು, ‘ಕೇಂದ್ರ ಬಜೆಟ್ ಸಮಗ್ರ ಅಭಿವೃದ್ಧಿಯ ದೃಷ್ಟಿಯನ್ನು ಹೊಂದಿದ್ದು, ಅದಕ್ಕೆ ಪೂರಕವಾಗಿ ಯೋಜನೆಗಳನ್ನು ಘೋಷಿಸಲಾಗಿದೆ. ಬಂಡವಾಳ ವೆಚ್ಚಕ್ಕಾಗಿ ಹೆಚ್ಚು ಹಂಚಿಕೆಯನ್ನು ಮಾಡಿರುವುದು ಮೂಲಸೌಕರ್ಯ ಅಭಿವೃದ್ಧಿ ಕಡೆಗೆ ಸರ್ಕಾರವು ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ’ ಎಂದು ಹೇಳಿದರು.

ಕೋಟಕ್ ಮಹೀಂದ್ರಾ ಬ್ಯಾಂಕ್‌ ನ ಮುಖ್ಯ ಅರ್ಥಶಾಸ್ತ್ರಜ್ಞರಾದ ಉಪಸನಾ ಭಾರದ್ವಾಜ್ ಅವರು, ‘ಕೇಂದ್ರ ಬಜೆಟ್ ಸಮತೋಲಿತವಾಗಿದೆ’ ಎಂದು ಹೇಳಿದರೆ ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾದ ಶಾಂತಿ ಏಕಾಂಬರಂ ಅವರು, ‘ಕೇಂದ್ರ ಬಜೆಟ್ ಮಧ್ಯಮ ವರ್ಗದ ಬಳಕೆ, ಉಳಿತಾಯ ಮತ್ತು ನೇರ ತೆರಿಗೆ ಕ್ರಮಗಳ ಮೂಲಕ ಹೂಡಿಕೆ ಹೆಚ್ಚಿಸುವುದರ ಕಡೆಗೆ ಗಮನ ಹರಿಸಿದೆ. ಖಾಸಗಿ ವಲಯದ ಹೂಡಿಕೆಗಳನ್ನು ಹೆಚ್ಚಿಸಲು ಒತ್ತು ನೀಡಿರುವುದು ಆಶಾದಾಯಕವಾಗಿದೆ’ ಎಂದು ಹೇಳಿದರು.

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ವಾಣಿಜ್ಯ ಬ್ಯಾಂಕಿಂಗ್ ವಿಭಾಗದ ಮುಖ್ಯಸ್ಥ ಮನೀಶ್ ಕೊಠಾರಿ ಅವರು, ‘ಕೇಂದ್ರ ಬಜೆಟ್ ಉತ್ತಮ ಬೆಳವಣಿಗೆ ಸಾಧಿಸುವ ಕ್ರಮಗಳನ್ನು ಹೊಂದಿದೆ. ಕೃಷಿ, ಎಂಎಸ್‌ಎಂಇಗಳು, ಹೂಡಿಕೆಗಳು ಮತ್ತು ರಫ್ತುಗಳು, ಹಣಕಾಸು ಒಳಗೊಳ್ಳುವಿಕೆ (ನಗರ ಮತ್ತು ಗ್ರಾಮೀಣ ಎರಡೂ), ಮೇಕ್ ಇನ್ ಇಂಡಿಯಾ ಮುಂತಾದೆಡೆ ಗಮನ ಹರಿಸಲಾಗಿದ್ದು ವಿಕಸಿತ ಭಾರತ ದೃಷ್ಟಿಗೆ ಪೂರಕವಾಗಿದೆ’ ಎಂದು ಹೇಳಿದರು.

ಹೆಚ್‌ಡಿಎಫ್‌ಸಿ ಪೆನ್ಷನ್‌ನ ಸಿಇಓ ಶ್ರೀರಾಮ್ ಅಯ್ಯರ್ ಅವರು, ‘ಹಳೆಯ ತೆರಿಗೆ ಪದ್ಧತಿಯ ಪ್ರಕಾರ 80 ಸಿಸಿಡಿ 1(ಬಿ) ಅಡಿಯಲ್ಲಿನ ಅರ್ಹ ಹೂಡಿಕೆಯಾಗಿ ಎನ್‌ಪಿಎಸ್ ವಾತ್ಸಲ್ಯ ಯೋಜನೆ ಸೇರಿಸಿರುವುದು ಬಹಳ ಒಳ್ಳೆಯ ಕ್ರಮವಾಗಿದೆ’ ಎಂದು ಹೇಳಿದರು.

ಹೀರೋ ಮೋಟೋ ಕಾರ್ಪ್‌ನ ಎಕ್ಸಿಕ್ಯೂಟಿವ್ ಚೇರ್ ಮನ್ ಡಾ. ಪವನ್ ಮುಂಜಾಲ್ ಅವರು, ‘ಕೇಂದ್ರ ಬಜೆಟ್‌ನಲ್ಲಿ ಉತ್ಪಾದನೆ, ಹಸಿರು ಸಾರಿಗೆ ಮತ್ತು ಗ್ರಾಮೀಣ ಸಬಲೀಕರಣ ವಿಚಾರದಲ್ಲಿ ಒತ್ತು ನೀಡಲಾಗಿದ್ದು ಶ್ಲಾಘನೀಯವಾಗಿದೆ. ಹಸಿರು ಸಾರಿಗೆ ವಿಚಾರದಲ್ಲಿ ಉತ್ತಮ ಯೋಜನೆಗಳನ್ನು ಕೈಗೊಳ್ಳಲಾಗಿದ್ದು, ಈ ನಿಟ್ಟಿನಲ್ಲಿ ಮಹತ್ತರ ಬೆಳವಣಿಗೆಯನ್ನು ನಿರೀಕ್ಷಿಸಬಹುದಾಗಿದೆ’ ಎಂದು ಹೇಳಿದರು.