ಮಿಶ್ರ ಬೇಸಾಯ ಪದ್ಧತಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು : ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಕರೆ

| Published : Nov 15 2024, 01:34 AM IST / Updated: Nov 15 2024, 07:44 AM IST

ಮಿಶ್ರ ಬೇಸಾಯ ಪದ್ಧತಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು : ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಮಿಶ್ರ ಬೇಸಾಯ ಪದ್ಧತಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ರೈತರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಕರೆ ನೀಡಿದರು.

 ಬೆಂಗಳೂರು : ಮಿಶ್ರ ಬೇಸಾಯ ಪದ್ಧತಿಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಬಹುದು. ರೈತರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಕರೆ ನೀಡಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ಕೃಷಿ ಮೇಳ’ಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ವಿಶ್ವವಿದ್ಯಾನಿಲಯಗಳು ನಡೆಸುವ ಸಂಶೋಧನೆ ಹಾಗೂ ತಂತ್ರಜ್ಞಾನಗಳನ್ನು ಬಳಸಿಕೊಂಡು ರೈತರು ಮಿಶ್ರ ಬೇಸಾಯ ಪದ್ಧತಿ ಅನುಸರಿಸಬೇಕು. ಇದರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ಪಡೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು. ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಮಗ್ರ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗುತ್ತದೆ. ಆಹಾರ ಉತ್ಪಾದನೆ ಹೆಚ್ಚಳದಲ್ಲಿ ಕೃಷಿ ವಿವಿಗಳ ಸಂಶೋಧನೆಯ ಪಾತ್ರವೂ ಮಹತ್ವದ್ದಾಗಿದೆ. ವಿವಿಗಳು ನಿರಂತರವಾಗಿ ಹೊಸ ತಳಿಗಳನ್ನು ಸಂಶೋಧಿಸಿ ಬಿಡುಗಡೆ ಮಾಡುತ್ತಿದ್ದು ಕಡಿಮೆ ನೀರು ಮತ್ತು ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಬಹುದು. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಕೃಷಿಗೆ ಗರಿಷ್ಠ ಆದ್ಯತೆ

ರಾಜ್ಯದಲ್ಲಿ 78 ಲಕ್ಷಕ್ಕೂ ಅಧಿಕ ರೈತರು, 1.25 ಕೋಟಿಗೂ ಹೆಚ್ಚು ಕಾರ್ಮಿಕರು ಕೃಷಿಯಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ಕೃಷಿಗೆ ಗರಿಷ್ಠ ಆದ್ಯತೆ ನೀಡಿದೆ. ಕಳೆದ ಸಾಲಿನಲ್ಲಿ ಯಂತ್ರೋಪಕರಣ, ನೀರಾವರಿ ಸಲಕರಣೆ ವಿತರಣೆಗೆ ಸುಮಾರು ₹1000 ಕೋಟಿ ಸಬ್ಸಿಡಿ ನೀಡಲಾಗಿದೆ. ಬೆಳೆ ವಿಮೆಗೆ ₹2100 ಕೋಟಿಯನ್ನು ರೈತರಿಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. ಪಂಚ ಗ್ಯಾರೆಂಟಿ ಮೂಲಕವೂ ಕೃಷಿಕರು ಹಾಗೂ ಜನಸಾಮಾನ್ಯರಿಗೆ ನೆರವು ಒದಗಿಸಲಾಗಿದೆ ಎಂದು ವಿವರಿಸಿದರು.

ಈ ಬಾರಿ ‘ಹವಾಮಾನ ಚತುರ ಡಿಜಿಟಲ್ ಕೃಷಿ’ ಘೋಷವಾಕ್ಯದೊಂದಿಗೆ ಮೇಳವನ್ನು ಆಯೋಜಿಸುತ್ತಿರುವುದು ಕೃಷಿ ಕ್ಷೇತ್ರದ ಸಕಾಲಿಕ ಚಿಂತನೆಯಾಗಿ ಕಾಣುತ್ತಿದೆ. ರೈತ ಕುಟುಂಬಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು. ವಿವಿಯಿಂದ ಅಚ್ಚುಕಟ್ಟಾಗಿ ಮೇಳವನ್ನು ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಸಚಿವರು ಸಾಧಕ ರೈತರಿಗೆ ರಾಜ್ಯ ಮಟ್ಟದ ಕೃಷಿ ಪ್ರಶಸ್ತಿಗಳನ್ನು ನೀಡಿ ಗೌರವಿಸಿದರು. ಶಾಸಕರಾದ ಎಸ್.ಆರ್.ವಿಶ್ವನಾಥ್, ಶರತ್ ಬಚ್ಚೇಗೌಡ, ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್‌, ವಿವಿ ಕುಲಪತಿ ಡಾ.ಎಸ್‌.ವಿ.ಸುರೇಶ ಮತ್ತಿತರರು ಉಪಸ್ಥಿತರಿದ್ದರು. 

ಟ್ರ್ಯಾಕ್ಟರ್ ಮೂಲಕ ಔಷಧಿ ಸಿಂಪಡಣೆ

ಕೃಷಿ ಮೇಳ ಉದ್ಘಾಟನೆಗೂ ಮುನ್ನ ಚಲುವರಾಯಸ್ವಾಮಿ ಅವರು ಪರೀಕ್ಷಾರ್ಥವಾಗಿ ಬೆಳೆಯಲಾಗಿರುವ ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರಗಳನ್ನು ಒಳಗೊಂಡ ಔಷಧಿ ಸಿಂಪಡಣಾ ಟ್ರ್ಯಾಕ್ಟರ್ ಚಲಾಯಿಸಿದರು. ಶಾಸಕರಾದ ಎಸ್.ಆರ್.ವಿಶ್ವನಾಥ್, ಶರತ್ ಬಚ್ಚೇಗೌಡ ಅವರು ಸಹ ಸಚಿವರೊಂದಿಗೆ ಟ್ರ್ಯಾಕ್ಟರ್‌ನಲ್ಲಿ ಕುಳಿತು ಸಿಂಪಡಣಾ ವಿಧಾನವನ್ನು ವೀಕ್ಷಿಸಿದರು.