ಯಾವನಿಗೂ ನಾನು ತಲೆಬಾಗಲ್ಲ: ನಾರಾಯಣಗೌಡ

| Published : Dec 29 2023, 01:30 AM IST

ಸಾರಾಂಶ

ಕನ್ನಡಕ್ಕಾಗಿ ಹೋರಾಟ ನಡೆಸಿದ ಕಾರಣಕ್ಕೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಬಂಧಿಸಲಾಗಿದೆ. ಇದಕ್ಕೆ ಕರವೇ ಕಾರ್ಯಕರ್ತರು ಹೆದರುವುದಿಲ್ಲ. ನನ್ನನ್ನು ನೂರು ಬಾರೀ ಜೈಲಿಗೆ ನೂಕಿದರೂ ಯಾರಿಗೂ ತಲೆ ಬಾಗುವುದಿಲ್ಲ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಖಚಿತವಾಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾನು ಪ್ರತಿಭಟನೆ ವೇಳೆ ಪೊಲೀಸರಿಗೆ ಹೊಡೆದಿಲ್ಲ. ಸುಳ್ಳು ಪೊಳ್ಳು ಆರೋಪ ಮಾಡಿದರೆ ಹೆದರುವುದಿಲ್ಲ. ನೂರು ಬಾರಿ ಜೈಲಿಗೆ ಹಾಕಿದರೂ ಯಾವನಿಗೂ ತಲೆಬಾಗಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆಂಗ್ಲ ನಾಮಫಲಕ ವಿರುದ್ಧ ಪ್ರತಿಭಟನೆ ವೇಳೆ ಶಾಂತಿಭಂಗ ಮಾಡಿದ ಆರೋಪದ ಮೇರೆಗೆ ತಮ್ಮನ್ನು ಬಂಧಿಸಿ ಜೈಲಿಗೆ ಕರೆದೊಯ್ಯುವಾಗ ಗುರುವಾರ ಪೊಲೀಸ್ ವಾಹನದಲ್ಲೇ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ನಾನು 35 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದೇನೆ. ನನಗೆ ಪೊಲೀಸರ ಬಗ್ಗೆ ಭಾರಿ ಕಳಕಳಿ ಇದೆ. ಸರ್ಕಾರದ ಎಲ್ಲ ಇಲಾಖೆಗಳಿಗಿಂತ ನೂರಕ್ಕೆ ನೂರರಷ್ಟು ಕನ್ನಡಿಗರು ಪೊಲೀಸ್ ಇಲಾಖೆಯಲ್ಲಿದ್ದಾರೆ. ನಾನು ಪೊಲೀಸರ ಮೇಲೆ ಹಲ್ಲೆ ನಡೆಸಿಲ್ಲ. ನಾನು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದನ್ನು ಸಾಬೀತುಪಡಿಸಲಿ ಎಂದು ನಾರಾಯಣಗೌಡ ಸವಾಲು ಹಾಕಿದರು.ಪರಿಸ್ಥಿತಿ ಹೀಗೆ ಮುಂದುವರೆದರೆ ಕನ್ನಡಪರವಾಗಿ ಭವಿಷ್ಯದಲ್ಲಿ ಯಾರೂ ಹೋರಾಟ ಮಾಡಲು ಬರುವುದಿಲ್ಲ. ಯಾರೋ ಮಾರವಾಡಿ ಬಂದು ಅಧಿಕಾರ ಚಲಾಯಿಸಿದರೆ ಗೊತ್ತಾಗುತ್ತದೆ. ರಾಜ್ಯದ 31 ಜಿಲ್ಲೆಗಳಲ್ಲಿ ಹೋರಾಟ ನಡೆಸುತ್ತೇನೆ. ಇನ್ನು 100 ಬಾರಿ ಜೈಲಿಗೆ ಹಾಕಿದರೂ ನಾನು ಯಾವನಿಗೂ ಹೆದರಲ್ಲ. ಯಾವನಿಗೂ ತಲೆಬಾಗಲ್ಲ ಎಂದು ಗುಡುಗಿದರು.ನಾಮಫಲಕ ಪ್ರತಿಭಟನೆ ವಿಚಾರವು ಕೇಂದ್ರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆಯಂತೆ. ಅದಕ್ಕೆ ರಾಜ್ಯದವರು ಹೆದರುತ್ತಿದ್ದಾರೆ. ನಿಮಗೆ ಸ್ವಾಭಿಮಾನವಿಲ್ಲವೇ. ನಮ್ಮದು ಕನ್ನಡಪರ ಸರ್ಕಾರ ಎನ್ನುತ್ತೀರಲ್ಲ. ನಿಮ್ಮದು ಬೂಟಾಟಿಕೆ ಸರ್ಕಾರ. ಯಾವ ಸೀಮೆಯ ಕನ್ನಡಪ್ರೇಮ ನಿಮ್ಮದು ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ವಿರುದ್ಧ ನಾರಾಯಣಗೌಡ ವಾಗ್ದಾಳಿ ನಡೆಸಿದರು. ಕನ್ನಡಕ್ಕಾಗಿ ಹೋರಾಟ ನಡೆಸಿದ ಕಾರಣಕ್ಕೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಬಂಧಿಸಲಾಗಿದೆ. ಇದಕ್ಕೆ ಕರವೇ ಕಾರ್ಯಕರ್ತರು ಹೆದರುವುದಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿರುವ 70 ಲಕ್ಷ ಕರವೇ ಕಾರ್ಯಕರ್ತರು ತಕ್ಕ ಉತ್ತರ ನೀಡುತ್ತೇವೆ ಎಂದು ಕಿಡಿಕಾರಿದರು.