ಸಾರಾಂಶ
ಬೆಂಗಳೂರು : ನಗರದಲ್ಲಿ ಎರಡರಿಂದ ಏಳು ಪಾಲಿಕೆಗಳಾಗಿ ವಿಂಗಡಿಸಿ, 30 ತಿಂಗಳ ಅವಧಿಗೆ ಮೇಯರ್ ಹುದ್ದೆಯನ್ನು ನಿಗದಿಗೊಳಿಸುವ ಸಲಹೆಯೊಂದಿಗೆ ಗ್ರೇಟರ್ ಬೆಂಗಳೂರು ಮಸೂದೆ ಮೇಲಿನ ಜಂಟಿ ಸದನ ಸಮಿತಿ ಶಿಫಾರಸು ಮಾಡಿದೆ.
ಸೋಮವಾರ ವಿಧಾನಸೌಧದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ-2024 ಅನ್ನು ಪರಿಶೀಲಿಸಿ ವರದಿ ನೀಡಲು ರಚಿಸಲಾಗಿದ್ದ ವಿಧಾನಮಂಡಲದ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ವರದಿ ಸಲ್ಲಿಸಿದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುವ ದಿಸೆಯಲ್ಲಿ ಪಾಲಿಕೆಯನ್ನು ವಿಭಜಿಸುವ ಅಗತ್ಯ ಇದೆ. ಪಾಲಿಕೆಯನ್ನು ವಿಭಜಿಸುವುದರಿಂದ ಉತ್ತಮ ಅಭಿವೃದ್ಧಿ ಕಾಣಬಹುದಾಗಿದೆ. ಅಲ್ಲದೇ, ದಕ್ಷ ಆಡಳಿತಕ್ಕೆ ಪೂರಕವಾಗಿರಲಿದೆ. 7 ಪಾಲಿಕೆಗಳನ್ನಾಗಿ ವಿಂಗಡಿಸುವಂತೆ ತಿಳಿಸಿಲ್ಲ. ಆದರೆ, ಈ ಬಗ್ಗೆ ಸರ್ಕಾರ ಸಂದರ್ಭಕ್ಕಗನುಗುಣವಾಗಿ ತೀರ್ಮಾನ ಕೈಗೊಳ್ಳಬಹುದಾದಂತಹ ವರದಿಯನ್ನು ನೀಡಲಾಗಿದೆ. 2 ರಿಂದ ಗರಿಷ್ಠ 7 ಪಾಲಿಕೆಗಳನ್ನಾಗಿ ವಿಭಜಿಸುವ ಕುರಿತು ಸಲಹೆ ನೀಡಲಾಗಿದೆ ಎಂದು ತಿಳಿಸಿದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಅಸ್ತಿತ್ವಕ್ಕೆ ಬಂದಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್‍ಎಸ್‍ಬಿ, ಮೆಟ್ರೋ ರೈಲು ಮೊದಲಾದ ಸಂಸ್ಥೆಗಳ ನಡುವೆ ಸಮನ್ವಯತೆ ಸಾಧಿಸಲಿದೆ. ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. 3 ತಿಂಗಳಿಗೊಮ್ಮೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಲು ಸಲಹೆ ಮಾಡಲಾಗಿದೆ ಎಂದರು.ಬಿಬಿಎಂಪಿ ವಿಭಜನೆಯಾದರೂ ಬೆಂಗಳೂರಿಗೆ ಯಾವುದೇ ಧಕ್ಕೆಯಾಗುವುದಿಲ್ಲ.
ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಈ ರೀತಿಯೇ ಇರಬೇಕೆಂದು ಶಿಫಾರಸು ಮಾಡಲಾಗಿದೆ. ಕೆಎಂಸಿ ಕಾಯ್ದೆ ಪ್ರಕಾರ ಹೊಸ ಪಾಲಿಕೆ ರಚನೆಯಾಗುತ್ತದೆ. ಪಾಲಿಕೆ ಹತ್ತಿರದಲ್ಲಿರುವ ಅಭಿವೃದ್ಧಿ ಹೊಂದಿರುವ ಗ್ರಾಮಗಳನ್ನು ಸೇರಿಸಲು ಅವಕಾಶವಿರುತ್ತದೆ. ಬೆಂಗಳೂರಿನ ವಿವಿಧ ನಗರ ಮೂಲ ಸೌಕರ್ಯ ಏಜೆನ್ಸಿಗಳ ಮಧ್ಯೆ ಸಮನ್ವಯತೆ ಇಲ್ಲ. ಹೀಗಾಗಿ ಜಲಮಂಡಳಿ, ಬೆಸ್ಕಾಂ, ಬಿಡಿಎ ಸೇರಿದಂತೆ ನಗರ ಮೂಲಸೌಕರ್ಯ ಅಭಿವೃದ್ಧಿ ಏಜೆನ್ಸಿಗಳ ನಡುವೆ ಸಮನ್ವಯತೆ ಸಾಧಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಬೇಕು. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಮುಖ್ಯಸ್ಥರಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ ಎಂದು ಹೇಳಿದರು.
ಪ್ರತಿ ಪಾಲಿಕೆಗೆ 100-125 ವಾರ್ಡ್
ಪಾಲಿಕೆ ವಿಂಗಡನೆ ಮಾಡುವಾಗ ಆದಾಯ ಸಂಗ್ರಹವನ್ನು ಗಮದಲ್ಲಿಟ್ಟಿಕೊಂಡು ಪಾಲಿಕೆ ರಚನೆ ಮಾಡುವಂತೆ ಸಲಹೆ ನೀಡಲಾಗಿದೆ. ಆದಾಯ ಕೊರತೆಯಾಗದಂತೆ ಪಾಲಿಕೆ ರಚಿಸಬೇಕು. ಪ್ರತಿ ಪಾಲಿಕೆಗೆ 100-125 ವಾರ್ಡ್ ಇರಬೇಕು ಎಂದು ಸಲಹೆ ನೀಡಿದ್ದೇವೆ. ಪ್ರತಿ ಪಾಲಿಕೆಗಳಿಗೆ ಸಂಪೂರ್ಣ ಸ್ವಾಯತ್ತತೆ ಇರಲಿದೆ. ಪ್ರಸ್ತುತ ಬಿಬಿಎಂಪಿ 870 ಚದರ ಕಿ.ಮೀ. ವ್ಯಾಪ್ತಿ ಇದ್ದು, ಸುಮಾರು 1.51 ಕೋಟಿ ಜನಸಂಖ್ಯೆ ಇದೆ. ಹೀಗಾಗಿ ಸಣ್ಣ ಪಾಲಿಕೆಗಳಾಗಿ ವಿಂಗಡನೆ ಮಾಡಬೇಕಾಗಿದೆ. ಜೂ.30 ರೊಳಗೆ ವಾರ್ಡ್‍ಗಳ ಗಡಿ ಗುರುತಿಸಬೇಕಿದೆ. ಅಷ್ಟರೊಳಗೆ ಹೊಸ ಪಾಲಿಕೆ, ವಾರ್ಡ್‍ಗಳು ರಚನೆಯಾಗಬೇಕು. ಬಳಿಕ ಮೀಸಲಾತಿ ನಿಗದಿಯಾಗಬೇಕು. ಇಷ್ಟೆಲ್ಲಾ ಕ್ರಿಯೆಗಳು ಪೂರ್ಣಗೊಂಡರೆ ಜುಲೈನಲ್ಲೇ ಪಾಲಿಕೆ ಚುನಾವಣೆ ನಡೆಸಬಹುದು ಎಂದು ರಿಜ್ವಾನ್ ಅರ್ಷದ್ ತಿಳಿಸಿದರು.
ಬಿಜೆಪಿಯಿಂದಲೂ ಸಹಮತ ವ್ಯಕ್ತ
ಬಿಜೆಪಿ ಸದಸ್ಯರು ಒಳಗೊಂಡಂತೆ ಎಲ್ಲಾ ಸದಸ್ಯರು ವರದಿಗೆ ಸಹಮತ ವ್ಯಕ್ತಪಡಿಸಿದ್ದು, ಬಿಜೆಪಿ ಸದಸ್ಯರೂ ಸಲಹೆ ಸೂಚನೆ ಕೊಟ್ಟಿದ್ದಾರೆ. ಎಲ್ಲರೂ ಒಂದಾಗಿ ವರದಿ ಸಿದ್ಧಪಡಿಸಿದ್ದೇವೆ. ಪ್ರಸಕ್ತ ಮಸೂದೆಯಲ್ಲಿ ಆದಾಯವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಎಲ್ಲಾ ಪಾಲಿಕೆಗಳಿಗೆ ವಿತರಿಸುವ ಅಂಶದ ಬಗ್ಗೆ ಬಿಜೆಪಿ ಸದಸ್ಯರು ಸಭೆಯಲ್ಲಿ ಆಕ್ಷೇಪ ವ್ತಕ್ತಪಡಿಸಿದ್ದರು. ಆ ರೀತಿ ಇರಬಾರದು, ಆದಾಯ ನೇರವಾಗಿ ಆಯಾ ಪಾಲಿಕೆಗಳಿಗೆ ಹೋಗಬೇಕು ಎಂಬ ಸಲಹೆ ನೀಡಿದ್ದರು. ಅದನ್ನು ಒಪ್ಪಿಕೊಂಡಿದ್ದು, ಆ ಅಂಶವನ್ನು ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಜಂಟಿ ಸದನ ಸಮಿತಿಯ ಅಂತಿಮ ಸಭೆಯಲ್ಲಿ ಬಿಜೆಪಿ ಸದಸ್ಯರು ವರದಿಗೆ ಸಹಿ ಹಾಕಿದ್ದು, ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಅಧಿವೇಶನದಲ್ಲಿ ವಿಧೇಯಕ ಮಂಡನೆ
ಬಜೆಟ್ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕ ಮಂಡನೆಯಾಗಲಿದೆ ಎಂದು ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದ್ದಾರೆ. ವರದಿ ಸ್ವೀಕರಿಸಿ ಮಾತನಾಡಿದ ಅವರು, ವಿಧೇಯಕದ ಚರ್ಚೆ ಯಾವಾಗ ಮಾಡಬೇಕು ಎಂಬುದರ ಬಗ್ಗೆ ಸದನದ ಕಾರ್ಯಕಲಾಪಗಳ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಕಳೆದ ಜುಲೈನಲ್ಲಿ ನಡೆದ ಅಧಿವೇಶನದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧೇಯಕವನ್ನು ಮಂಡಿಸಿದ್ದರು. ಇನ್ನೂ ಬಹಳಷ್ಟು ಚರ್ಚೆಯಾಗಬೇಕು. ಅದಕ್ಕಾಗಿ ಜಂಟಿ ಪರಿಶೀಲನಾ ಸಮಿತಿ ರಚನೆಯಾಗಬೇಕು ಎಂಬ ಸಲಹೆ ಮಾಡಲಾಗಿತ್ತು. ಅದರಂತೆ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯಲ್ಲಿ ಜಂಟಿ ಪರಿಶೀಲನಾ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ವರದಿಯನ್ನು ಸಲ್ಲಿಸಿದೆ ಎಂದರು.