ಸಾರಾಂಶ
ಜನವರಿ 12, ರಾಷ್ಟ್ರೀಯ ಯುವ ದಿನಾಚರಣೆ
ಯುವ ಜಾಗೃತಿಯಿಂದಷ್ಟೇ ದೇಶದ ಸಮೃದ್ಧಿ ಸಾಧ್ಯ
-ದೇಶದ ಭವ್ಯತೆ ಅರಿಯದೆ ಹಾದಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಯಾವ ರೀತಿ ಮಾರ್ಗದರ್ಶನ ಅಗತ್ಯ?
ಜನವರಿ 12, ರಾಷ್ಟ್ರೀಯ ಯುವ ದಿನಾಚರಣೆ (ಲೋಗೋ ಮಾಡಿ)
ಯುವ ಜಾಗೃತಿಯಿಂದಷ್ಟೇ ದೇಶದ ಸಮೃದ್ಧಿ ಸಾಧ್ಯ
-ದೇಶದ ಭವ್ಯತೆ ಅರಿಯದೆ ಹಾದಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಯಾವ ರೀತಿ ಮಾರ್ಗದರ್ಶನ ಅಗತ್ಯ?
ಪ್ರಸ್ತುತ ಸಂದರ್ಭದಲ್ಲಿ ಇಂದಿನ ಬಹುತೇಕ ಮಂದಿ ಯುವಜನತೆಗೆ, ನಮ್ಮ ದೇಶದ ಸುವರ್ಣ ಇತಿಹಾಸ, ಭವ್ಯ ಪರಂಪರೆ ಗೊತ್ತಿಲ್ಲ. ಧರ್ಮ, ಪುರಾಣ, ದಾರ್ಶನಿಕ ಗ್ರಂಥಗಳು, ಮಹಾನ್ ವ್ಯಕ್ತಿಗಳು, ಸಾಹಿತಿಗಳು ಇವುಗಳಲ್ಲಿ ಯಾವುದರ ಜ್ಞಾನವೂ ಇರುವುದಿಲ್ಲ. ರಾಷ್ಟ್ರದ ಆಗುಹೋಗುಗಳ ಬಗ್ಗೆ ತೋರುತ್ತಿರುವ ಉದಾಸೀನತೆ, ಕ್ರಿಯಾ ಶೂನ್ಯತೆ, ನಿರಾಸಕ್ತಿ ಗಾಬರಿ ಹುಟ್ಟಿಸುವಂತಿದೆ. ಅಸತ್ಯವನ್ನೇ ಸತ್ಯವನ್ನಾಗಿ ನಂಬುತ್ತಿರುವ ಹಗಲು ಕುರುಡುತನ, ಕ್ಷಣಿಕ ಸುಖಕ್ಕೆ ಮಾರುಹೋಗುವ ಪ್ರವೃತ್ತಿಯಿಂದಾಗಿ ಸಮೃದ್ಧವಾಗಿರಬೇಕಾದ ರಾಷ್ಟ್ರದಲ್ಲಿ ಅರಾಜಕತೆಯನ್ನೇ ಸೃಷ್ಠಿ ಮಾಡುವತ್ತ ಹೊರಟು ನಿಂತಿದೆ.
ಸಮುದ್ರವಸನೇ ದೇವಿ ಪರ್ವತಸ್ತನ ಮಂಡಲೇ
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮ ಸ್ವಮೇ ॥
ಈ ಪ್ರಾರ್ಥನೆಯಲ್ಲಿ ಅಡಗಿರುವುದು ಒಂದೇ ಮಹತ್ವ. ಅದೇ ಜನ್ಮ ನೀಡಿದ ತಾಯಿನಾಡು ಅಥವಾ ಭೂಮಿತಾಯಿ ಅಥವಾ ನಮ್ಮ ದೇಶ.
ಇಂತಹ ತಾಯಿನಾಡನ್ನು, ಸಮೃದ್ಧಿಯಿಂದ ಪ್ರಜ್ವಲಿಸುವಂತೆ ಮಾಡುವ ಅದಮ್ಯ ಇಚ್ಛಾಶಕ್ತಿ, ಪ್ರಚಂಡ ಛಲ ಇರುವುದು ಇಂದಿನ ಯುವ ಜನಾಂಗಕ್ಕೆ ಮಾತ್ರ. ವಿಶ್ವ ವಿಜೇತ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಧೀರತ್ವದ ನುಡಿಯಾದ ಪರಿಶುದ್ಧರೂ, ನಿಸ್ವಾರ್ಥಿಗಳೂ, ಮಿಂಚಿನ ಬುದ್ಧಿವುಳ್ಳವರೂ, ಬಲಿಷ್ಠ ಮಾಂಸಖಂಡಗಳನ್ನು ಹೊಂದಿರುವ ಕೇವಲ ನೂರು ಯುವಕರನ್ನು ನನಗೆ ಕೊಡಿ; ನಾನು ಇಡೀ ಜಗತ್ತನ್ನೇ ಬದಲಾಯಿಸುತ್ತೇನೆ, ಎಂಬ ಘನ ಗಂಭೀರದ ನುಡಿಮುತ್ತಿನಂತೆ, ಇಂದಿನ ಯುವಜನತೆ ಮನಸ್ಸು ಮಾಡಿದರೆ, ಹಿಂದೊಮ್ಮೆ ಎಲ್ಲಾ ರಂಗಗಳಲ್ಲಿಯೂ ಸಮೃದ್ಧಿಯಿಂದ ತುಂಬಿ ತುಳುಕುತ್ತಿದ್ದ ನಮ್ಮ ಭಾರತ ದೇಶ, ಭರತಖಂಡ ಇನ್ನೂ ಮುಂದೆಯೂ, ಎಂದೆಂದಿಗೂ ಸಮೃದ್ಧತೆಯಿಂದ ಅಜರಾಮರವಾಗಿರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಯುವ ಜನತೆಯಿಂದ ಹಾಗೂ ಅವರಲ್ಲಿ ಅಡಗಿರುವ ಪ್ರಚಂಡಶಕ್ತಿಯಿಂದ ಮಾತ್ರವೇ ರಾಷ್ಟ್ರದ ರಕ್ಷಣೆ, ದೇಶದ ಪ್ರಗತಿಯು ಉತ್ತುಂಗದ ಮಟ್ಟಕ್ಕೇರಲು ಸಾಧ್ಯ. ಇಂದಿನ ಯುವ ಸಮೂಹಕ್ಕೆ ಗುಣ, ಶೀಲ, ಚಾರಿತ್ರ್ಯ, ಸಂಯಮ, ಶಿಸ್ತುಗಳನ್ನು ರೂಪಿಸಿದಾಗ ಅವರು ಭವ್ಯ ಭಾರತವನ್ನು ಕಟ್ಟಬಲ್ಲರು ಹಾಗು ರಾಷ್ಟ್ರಹಿತ ರಕ್ಷಣೆಯ ಅವಶ್ಯಕತೆಯನ್ನು ಅರಿತು ಅದನ್ನು ಸಾಧಿಸುವುದರಲ್ಲಿ ಪಣ ತೊಡಬಲ್ಲರು.
ಯುವ ಜನತೆ ಎಂದೆನಿಸುವ 16ರಿಂದ 45 ವರ್ಷ ವಯಸ್ಸಿನ ಯುವಕರು, ಯುವತಿಯರು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಧಾರ್ಮಿಕ ಹಾಗೂ ರಾಜಕೀಯವಾಗಿ ಸರಿಯಾದ ತರಬೇತಿಯನ್ನು ಪಡೆದಾಗ ಮಾತ್ರವೇ ಸಾಮಾಜಿಕ ಕ್ರಾಂತಿ, ಆರ್ಥಿಕ ಪ್ರಗತಿ, ದೇಶದ ಉದ್ದಾರ. ಈ ಮೂಲಕ ರಾಷ್ಟ್ರದ ರಕ್ಷಣೆ ಹಾಗೂ ಸಮೃದ್ಧಿ ಸಾಧ್ಯ. ಏಕೆಂದರೆ, ಯುವಜನರು ನವಭಾರತದ ನಿರ್ಮಾಣ ಶಿಲ್ಪಿಗಳು ಹಾಗೂ ಯುವಶಕ್ತಿಗಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ ಎಂಬುದು ಸೂರ್ಯ ಚಂದ್ರರಷ್ಟೇ ಸತ್ಯಸಂಗತಿ.
ಆದರೆ, ಪ್ರಸ್ತುತ ಸಂದರ್ಭದಲ್ಲಿ ಇಂದಿನ ಬಹುತೇಕ ಮಂದಿ ಯುವಜನತೆಗೆ, ನಮ್ಮ ದೇಶದ ಸುವರ್ಣ ಇತಿಹಾಸ, ಭವ್ಯ ಪರಂಪರೆ ಗೊತ್ತಿಲ್ಲ. ಧರ್ಮ, ಪುರಾಣ, ದಾರ್ಶನಿಕ ಗ್ರಂಥಗಳು, ಮಹಾನ್ ವ್ಯಕ್ತಿಗಳು, ಸಾಹಿತಿಗಳು ಇವುಗಳಲ್ಲಿ ಯಾವುದರ ಜ್ಞಾನವೂ ಇರುವುದಿಲ್ಲ. ರಾಷ್ಟ್ರದ ಆಗುಹೋಗುಗಳ ಬಗ್ಗೆ ತೋರುತ್ತಿರುವ ಉದಾಸೀನತೆ, ಕ್ರಿಯಾ ಶೂನ್ಯತೆ, ನಿರಾಸಕ್ತಿ ಗಾಬರಿ ಹುಟ್ಟಿಸುವಂತಿದೆ. ಅಸತ್ಯವನ್ನೇ ಸತ್ಯವನ್ನಾಗಿ ನಂಬುತ್ತಿರುವ ಹಗಲು ಕುರುಡುತನ, ಕ್ಷಣಿಕ ಸುಖಕ್ಕೆ ಮಾರುಹೋಗುವ ಪ್ರವೃತ್ತಿಯಿಂದಾಗಿ ಸಮೃದ್ಧವಾಗಿರಬೇಕಾದ ರಾಷ್ಟ್ರದಲ್ಲಿ ಅರಾಜಕತೆಯನ್ನೇ ಸೃಷ್ಠಿ ಮಾಡುವತ್ತ ಹೊರಟು ನಿಂತಿದೆ. ಇದಕ್ಕೆಲ್ಲ ಮುಖ್ಯ ಕಾರಣ, ಬಾಲ್ಯದಲ್ಲಿ ಸೂಕ್ತವಾದ ಶಿಕ್ಷಣ ದೊರಕಿಲ್ಲ, ವಯಸ್ಕರಾದಾಗ ಸ್ವಂತ ಅಧ್ಯಯನವಿಲ್ಲ ಹಾಗೂ ಸ್ವಂತ ಬಲದ ಮೇಲೆ ನಂಬಿಕೆಯಿಲ್ಲ, ಗುರು-ಹಿರಿಯರ ಮಾತು ಪಥ್ಯವಲ್ಲ.
ಯುವಜನತೆಯಲ್ಲಿ ವಿದ್ಯಾರ್ಹತೆ ಮತ್ತು ವೈಚಾರಿಕತೆಯ ಕೊರತೆ, ಸಂಘಟನೆಯ ಕೊರತೆ, ಕೆಲವು ಪೋಷಕರ ಬೇಜವಾಬ್ದಾರಿತನ, ಸ್ವಧರ್ಮದ ಬಗೆಗಿನ ಅಂಧಾಭಿಮಾನ, ಜಾತ್ಯತೀತ ರಾಷ್ಟ್ರದಲ್ಲಿ ಮೇಲು-ಕೀಳು ಜಾತಿಯೆಂಬ ಅನಾಗರಿಕ ವರ್ತನೆ, ವೇಗವಾಗಿ ಬೇರೂರುತ್ತಿರುವ ರಾಷ್ಟ್ರಕಂಟಕ ಶಕ್ತಿಗಳು, ಉತ್ತಮ ನಾಯಕರನ್ನು ಆಯ್ಕೆ ಮಾಡುವಲ್ಲಿ ಎಡುವುತ್ತಿರುವುದು, ಬಡತನ ಹಾಗೂ ಅಹಿಂಸಾ ತತ್ವವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ರಾಷ್ಟ್ರಘಾತುಕ ಶಕ್ತಿಗಳು ಇತ್ಯಾದಿ ತರಹದ ಘೋರ ಸಮಸ್ಯೆಗಳು ದೇಶವನ್ನು ಸಮೃದ್ಧವಾಗಿ ಬೆಳೆಸುವಲ್ಲಿ ಪ್ರತೀ ಕ್ಷಣ ಅಡ್ಡಗಾಲು ಹಾಕಿ ತೊಡಕಾಗಿ ಪರಿಣಮಿಸಿವೆ.
ಆದರೆ, ಈ ಎಲ್ಲಾ ಕಂಟಕಗಳಿಗೆ ಪರಿಹಾರವಿದೆ ಎಂದಾದರೆ ಅದು ಯುವಜನತೆಯ ಅದಮ್ಯ ಯುವ ಶಕ್ತಿಯಿಂದ ಮಾತ್ರ. ಯುವ ಶಕ್ತಿಯನ್ನು ಬಡಿದೆಬ್ಬಿಸಿ ಜಾಗೃತಗೊಳಿಸಿ ಕಾರ್ಯೋನ್ಮುಖರಾಗುವಂತೆ ಮಾಡಬೇಕು. ಯುವ ಶಕ್ತಿಯೇ ದೇಶದ ಸಂಪತ್ತು ಆಗಬೇಕು. ಅದು ಹೇಗೆ?
ಮೊದಲಾಗಿ, ಯುವಜನರು ದೇಶದಲ್ಲಿರುವ ಎಲ್ಲಾ ರೀತಿಯ ಸಮಸ್ಯೆಗಳನ್ನು, ಆ ಸಮಸ್ಯೆಗಳಿಂದ ಉಂಟಾಗುತ್ತಿರುವ ಕಷ್ಟಗಳನ್ನು, ಇದರಿಂದ ರಾಷ್ಟ್ರದ ರಕ್ಷಣೆ ಮಾಡುವಲ್ಲಿ ಆಗುತ್ತಿರುವ ತೊಂದರೆಗಳನ್ನು, ದೇಶದ ಪ್ರಗತಿ ಹಾಗೂ ಸಮೃದ್ಧತೆಯ ಅವಶ್ಯಕತೆಯನ್ನು ಅರಿಯಬೇಕಾಗಿದೆ. ನಂತರ ಎಲ್ಲಾ ರೀತಿಯ ಸಮಸ್ಯೆಗಳನ್ನು ಹೋಗಲಾಡಿಸಲು ಮುಂದಾಲೋಚಿಸಬೇಕಾಗಿದೆ.
ರಾಷ್ಟ್ರವನ್ನು ಸಮೃದ್ಧಗೊಳಿಸಬೇಕಾದರೆ ಯಾವ ರೀತಿಯ ವಿಧಿ ವಿಧಾನಗಳನ್ನು ಬಳಸಬೇಕೆಂದರೆ, ಅದರಿಂದ ಇನ್ಯಾವುದೇ ರೀತಿಯ ಹೊಸ ಸಮಸ್ಯೆ ಉದ್ಭವಿಸದಂತೆ ಜಾಗ್ರತೆಯಿಂದ ನೋಡಿಕೊಳ್ಳಬೇಕು.
1) ಇಂದು, ಜನಸಂಖ್ಯಾ ಸ್ಫೋಟದಿಂದ ದೇಶದ ಪ್ರಗತಿ ಹಾಗೂ ಸಮೃದ್ಧಿ ಕುಂಠಿತವಾಗುತ್ತಿದೆ. ಆದ್ದರಿಂದ ಯುವಜನತೆ ಎಚ್ಚೆತ್ತು, ಅದನ್ನು ಹತ್ತಿಕ್ಕಲು ಮತ್ತು ಕುಟುಂಬ ಕಲ್ಯಾಣದ ಯೋಜನೆಗಳನ್ನು ಸಶಕ್ತಗೊಳಿಸಲು ಸಣ್ಣ ಕುಟುಂಬದ ಅವಶ್ಯಕತೆಯನ್ನು ತಿಳಿ ಹೇಳಬೇಕಾಗಿದೆ. ಅತೀ ಸಂತಾನ ಭಾರ, ಮಿತ ಸಂತಾನ ದೇಶದ ಸಮೃದ್ಧಿಗೆ ಹಾರ ಎಂಬ ಮಾತುಗಳ ಬಗ್ಗೆ ಅರಿವು ಮೂಡಿಸಲು ಯುವಜನತೆ ಟೊಂಕ ಕಟ್ಟಿ ಜಾಗೃತರಾಗಬೇಕಾಗಿದೆ. ಹೀಗಾದಾಗಲೇ ರಾಷ್ಟ್ರಕ್ಕೆ ಶಾಪದಂತಿರುವ, ರಾಷ್ಟ್ರ ರಕ್ಷಣೆಗೆ ಹಾಗೂ ಸಮೃದ್ಧಿಗೆ ಅಡಚಣೆಯನ್ನುಂಟು ಮಾಡುತ್ತಿರುವ ಜನಸಂಖ್ಯಾ ಸ್ಫೋಟವನ್ನು ಸಂಪೂರ್ಣವಾಗಿ ನಾಶಪಡಿಸಲು ಸಾಧ್ಯ.
2) ನಿರುದ್ಯೋಗ ಸಮಸ್ಯೆ, ಆಹಾರ ಕೊರತೆ, ವಸತಿ ಸಮಸ್ಯೆ, ವರದಕ್ಷಿಣೆ ಪಿಡುಗು, ಅತ್ಯಾಚಾರ, ಪರಿಸರ ಕೌರ್ಯ ಇಂತಹ ಬೇತಾಳ, ಪೈಶಾಚಿಕ ಕೃತ್ಯಗಳನ್ನು ನಾಶಪಡಿಸುವಲ್ಲಿ ಯುವಜನತೆ ಜರೂರಾಗಿ ಜಾಗೃತರಾಗಬೇಕಿದೆ. ತಮ್ಮ ಮನತನವೇ ರಕ್ಷಣೆ ಇಲ್ಲದೇ ಇರಬೇಕಾದರೆ ಇನ್ನೆಲ್ಲಿ ರಾಷ್ಟ್ರರಕ್ಷಣೆ ಎಂಬ ಮನೋಭಾವನೆಯು ಯುವಕರಲ್ಲಿ ಮೂಡಿಬರಬೇಕಾಗಿದೆ. ಓದಿ ಓದಿ ಮರುಳಾಗದೆ, ಹೊಲವನ್ನು ಉತ್ತು ಅಥವಾ ಸ್ವಂತ ಉದ್ಯೋಗ ಮಾಡಿ, ಅದರ ಮೂಲಕ ಇನ್ನಿತರ ಜನರಿಗೆ ಉದ್ಯೋಗ ಕಲ್ಪಿಸಿ, ತಮ್ಮನ್ನು ತಾವು ರಕ್ಷಿಸಿಕೊಳ್ಳಬಲ್ಲೆವು ಹಾಗೂ ಈ ಮೂಲಕ ರಾಷ್ಟ್ರವನ್ನು ಖಂಡಿತ ಸಮೃದ್ಧಿಗೊಳಿಸಬಲ್ಲೆವು ಎಂಬ ಮನೋಧೈರ್ಯವನ್ನು ಹೊಂದಬೇಕಾಗಿದೆ. ಇದರಿಂದ ರಾಷ್ಟ್ರದ ಆದಾಯ ಹೆಚ್ಚಿ, ರಕ್ಷಣೆ ಇಲ್ಲದ ಜನತೆಗೆ ರಕ್ಷಣೆ ನೀಡಿ, ರಾಷ್ಟ್ರ ಸುರಕ್ಷಿತ ಹಾಗು ಸಮೃದ್ಧವಾಗಿರಬಲ್ಲದು ಎಂಬುದನ್ನು ಎಲ್ಲಾ ಯುವಜನತೆಯು ಮನಗಾಣಬೇಕಾದುದು ಇಂದಿನ ತುರ್ತು ಅಗತ್ಯವಾಗಿದೆ.
3) ಜಾತಿ ಭೇದಗಳೆಂಬ ವಿಕೃತ ನಿಯಮಗಳನ್ನು ನಿರ್ಮೂಲನೆ ಮಾಡಿ, ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ, ಜೈನ ಮುಂತಾದ ಅನೇಕ ಧರ್ಮಗಳ ಬದಲಾಗಿ ನಾವೆಲ್ಲರೂ ಹೆಮ್ಮೆಯ ಭಾರತೀಯರು ಎನ್ನುವುದರ ಮೂಲಕ ವಿವಿಧತೆಯಲ್ಲಿ ಏಕತೆ ಎಂಬ ದೃಷ್ಟಿಯಿಂದ ನೋಡುವಂತಾಗಬೇಕಿದೆ. ಈ ಮೂಲಕ ರಾಷ್ಟ್ರೀಯ ಏಕತೆ ಹಾಗೂ ಭಾವೈಕ್ಯತೆಯನ್ನು ಸಾಧಿಸುವಂತಾಗುವತ್ತ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕಾಗಿದೆ. ಹೀಗಾದಲ್ಲಿ, ಗಲಭೆ, ಯುದ್ಧ, ಹೋರಾಟ ಈ ಎಲ್ಲಾ ವಿನಾಶಕ ಘಟನೆಗಳು ಧಮನವಾಗಿ, ರಾಷ್ಟ್ರವನ್ನು ಸಮೃದ್ಧ ಪಥದಲ್ಲಿ ಕೊಂಡೊಯ್ಯಬಹುದಾಗಿದೆ.
4) ಉತ್ತಮ ಆದರ್ಶಗಳಾದ ನ್ಯಾಯ, ಸಮಾನತೆ, ಭ್ರಾತೃತ್ವ ಹಾಗು ಸ್ವಾತಂತ್ರ್ಯ ಇವುಗಳ ಮುಖಾಂತರ ಅಧಃಪತನದತ್ತ ಮುನ್ನಡೆಯುತ್ತಿರುವ ಸಮಾಜವನ್ನು ಒಂದುಗೂಡಿಸುವ ಪ್ರಧಾನ ಕಾರ್ಯ ಇಂದಿನ ಯುವ ಜನಾಂಗದ ಆದ್ಯ ಕರ್ತವ್ಯವಾಗಿರುತ್ತದೆ. ಯುವಕ-ಯುವತಿಯರು ಸುಮಧುರ ಚಪ್ಪಾಳೆಯ ಎರಡು ಕೈಗಳು, ರಥದ ಎರಡು ಗಾಲಿಗಳಂತೆ, ನಾಣ್ಯದ ಎರಡು ಮುಖಗಳಂತೆ ದೇಶದ ಪ್ರಗತಿ ಹಾಗೂ ಸಮೃದ್ಧತೆಗೆ ತಮ್ಮ ಜೀವನವನ್ನೇ ಮುಡಿಪಾಗಿಡಬೇಕು. ಆಗ ನಮ್ಮ ರಾಷ್ಟ್ರ ಸಮೃದ್ಧತೆಯಲ್ಲಿ, ಪ್ರಗತಿಯಲ್ಲಿ ಪ್ರಧಾನ ರಾಷ್ಟ್ರವಾಗುವುದರಲ್ಲಿ ಎಳ್ಳಷ್ಟು ಸಂಶಯವಿಲ್ಲ.
5) ಇಂದು ಮುಂದುವರೆಯುತ್ತಿರುವ ವಿಜ್ಞಾನ ಎಲ್ಲಾ ರೀತಿಯ ಸೌಲಭ್ಯಗಳನ್ನು ತಂದುಕೊಟ್ಟರೂ, ಅದರಿಂದ ರಾಷ್ಟ್ರವೆಲ್ಲ ಮಲಿನಗೊಳ್ಳುತ್ತಿದೆ. ಈ ಮೂಲಕ ದೇಶದ ಸಮೃದ್ಧಿ ಕುಂಠಿತವಾಗುತ್ತಿದೆ. ಇಂದಿನ ವಿಜ್ಞಾನಿಗಳು ರಾಷ್ಟ್ರವನ್ನು ಪ್ರಗತಿ ಹೊಂದಿಸಲು, ಅನೇಕ ರೀತಿಯ ಹೊಸ ಹೊಸ ರೀತಿಯ ತಂತ್ರಜ್ಞಾನಗಳನ್ನೆಲ್ಲಾ ಸಂಶೋಧಿಸಿ ಕಂಡುಹಿಡಿದು, ದೇಶವನ್ನು ಮುಂದುವರೆಯುತ್ತಿರುವ ರಾಷ್ಟ್ರವನ್ನಾಗಿ ಮಾಡುತ್ತಿದ್ದಾರೆ. ಅಂದರೆ, ಅನೇಕ ರೀತಿಯ ಔಷಧಿ ವಸ್ತುಗಳನ್ನು, ಉಪಯುಕ್ತ ಯಂತ್ರಗಳನ್ನು, ಅದರಿಂದ ವಿವಿಧ ರೀತಿಯ ಕಾಯಿಲೆಗಳನ್ನು ಹೋಗಲಾಡಿಸಿ, ಅದರ ಮುಖಾಂತರ ಎಲ್ಲ ಜನರನ್ನು ನಾಗರೀಕರನ್ನಾಗಿ ಪರಿವರ್ತಿಸುತ್ತಿದ್ದಾರೆ. ಈ ಕಾರ್ಯದಿಂದ ಉಂಟಾಗುತ್ತಿರುವ ಇತರೇ ಸಮಸ್ಯೆಗಳಿಂದ ರಾಷ್ಟ್ರದ ಪ್ರಗತಿ, ಸಮೃದ್ಧಿ ಕುಂಠಿತಗೊಂಡು ರಾಷ್ಟ್ರವೆಲ್ಲಾ ವಿವಿಧ ರೀತಿಯಲ್ಲಿ ಮಲಿನಗೊಳ್ಳುತ್ತಿದೆ. ಆದ್ದರಿಂದ ಯುವಪೀಳಿಗೆ ರಾಷ್ಟ್ರವನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುವುದರ ಜೊತೆಗೆ ಅದರಿಂದ ಉದ್ಭವಿಸುವ ಸಮಸ್ಯೆಗಳನ್ನು ಹೋಗಲಾಡಿಸುವುದರಲ್ಲಿ ರಾಮಬಾಣವಾಗಬೇಕು.
6) ಇಂದಿನ ವೈಜ್ಞಾನಿಕ ರಾಕೆಟ್ ಯುಗದಲ್ಲಿ, ವಿವಿಧ ಕೈಗಾರಿಕೆಗಳಿಂದ ಅನೇಕ ಯುವಜನರಿಗೆ ಉತ್ತಮ ಉದ್ಯೋಗಾವಕಾಶ ದೊರೆತಿದೆಯಾದರೂ, ಇದರಿಂದ ಪರಿಸರ ಮಲಿನಗೊಂಡು ರಾಷ್ಟ್ರ ಸಮೃದ್ಧಿಗೆ ಅಡಚಣೆಯಾಗುತ್ತದೆ. ಆದ್ದರಿಂದ, ಯುವಪೀಳಿಗೆ ಉದ್ಯೋಗಕ್ಕೋಸ್ಕರ ರಾಷ್ಟ್ರವನ್ನು ಮರೆಯಬಾರದು, ಜೊತೆಗೆ ತಿಳಿಯದವರಿಗೆ ತಿಳಿಯುವ ರೀತಿಯಲ್ಲಿ ರಾಷ್ಟ್ರ ನಮಗೇನು ಮಾಡಿದೆ ಎನ್ನುವುದರ ಬದಲು ರಾಷ್ಟ್ರಕ್ಕೆ ನಾವೇನು ಮಾಡಿರುವೆವು? ಎಂಬುದರ ಬಗ್ಗೆ ತಿಳುವಳಿಕೆ ಹೇಳಬೇಕು. ಈ ರೀತಿ ಮಾಡಿದರೆ ಯುವ ಪೀಳಿಗೆ ಖಂಡಿತ ಪರಿಸರವನ್ನು ರಕ್ಷಿಸಿ ದೇಶ ಸಮೃದ್ಧಿಗೆ ಕಾಣಿಕೆ ನೀಡಿದಂತಾಗುತ್ತದೆ.
ಬೆಳೆಯುವ ಸಿರಿಮೊಳಕೆಯಲ್ಲಿ, ಎಂಬಂತೆ ಯುವ ಪೀಳಿಗೆಗೆ ಚಿಕ್ಕ ವಯಸ್ಸಿನಿಂದ ಒಳ್ಳೆಯ ಬುದ್ಧಿ, ವಿದ್ಯೆಗಳೆಂಬ ಗೊಬ್ಬರಗಳನ್ನು ಕೊಟ್ಟು, ಮುಂದೆ ದೇಶ ಸಮೃದ್ಧಿಯೆಂಬ ಗಿಡ ಬೃಹತ್ ಮರವಾಗಿ, ಅದರಿಂದ ಉತ್ತಮ ಫಲ ದೊರೆಯುವುದರಲ್ಲಿ ಹಾಗೂ ಇದರೊಂದಿಗೆ ರಾಷ್ಟ್ರ ಸಮೃದ್ಧಿಯಿಂದ ವಿಜೃಂಭಿಸಿ, ಪ್ರಗತಿ ಪಥದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುವುದರಲ್ಲಿ ಸೂಜಿ ಮೊನೆಯಷ್ಟು ಸಂಶಯವಿರುವುದಿಲ್ಲ. ಯುವಜನತೆಯು ಮರಳಿನ ಮೇಲೆ ಮನೆ ಕಟ್ಟಬಾರದು; ಕಲ್ಲುಬಂಡೆಗಳ ಮೇಲೆಯೇ ಕಟ್ಟಬೇಕು. ಅಸ್ತಿಭಾರ ಸ್ಥಿರವಾಗಿ ನಿಲ್ಲದಿದ್ದರೆ ಮಂದಿರ ಬಹುಬೇಗ ನಾಶವಾಗುತ್ತದೆ. ಮಾತೃಭೂಮಿಯ ಬಗ್ಗೆ ಭಕ್ತಿಯಷ್ಟೆ ಸಾಲದು, ಅದರ ರಕ್ಷಣೆಗೆ, ಸಮೃದ್ಧಿಗೆ ಶಕ್ತಿಯನ್ನು ಬೆಳೆಸಬೇಕು. ಮಾತೃಭೂಮಿಯ ಸಮೃದ್ಧಿ ಹಾಗು ರಕ್ಷಣೆಯಲ್ಲಿ ಗೃಹಸ್ಥ-ಸನ್ಯಾಸಿ ಎಂಬ ಭೇದ ಇಲ್ಲ, ಎಲ್ಲರೂ ಅದಕ್ಕೆ ಮುಡುಪಾಗಬೇಕು. ಮುಖ್ಯವಾಗಿ ಭಾರತಾಂಬೆಯ ಪ್ರೀತಿಯ ಮಕ್ಕಳಾದ ಯುವಜನಾಂಗ.
ಪ್ರಶಾಂತ್ ಕುಮಾರ್ ಎ.ಪಿ.
ಸಹಾಯಕ ಪ್ರಾಧ್ಯಾಪಕ,
ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗ,
ಮೈಸೂರು ರಾಯಲ್ ತಾಂತ್ರಿಕ ಮಹಾ ವಿದ್ಯಾಲಯ.