ಸಾರಾಂಶ
ಬೆಂಗಳೂರು : ತನ್ನನ್ನು ತಾನು ಹುಡುಕಾಡುವ ವಿಶಿಷ್ಟ ಗುಣವಿದ್ದರೆ ಮಾತ್ರ ತೆರೆದ ಪುಸ್ತಕವಾಗಲು, ನಿರಂತರ ಬರವಣಿಗೆಯಲ್ಲಿ ತೊಡಗಲು ಸಾಧ್ಯ ಎಂದು ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಭಾನುವಾರ ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಬಿ.ಪಿ.ವಾಡಿಯಾ ಸಂಭಾಂಗಣದಲ್ಲಿ ‘ಕನ್ನಡಪ್ರಭ’ ಪುರವಣಿ ಸಂಪಾದಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ 100ನೇ ಕೃತಿ ‘ಇಳಂಗೋವನ್’ ಲೋಕಾರ್ಪಣೆ ಹಾಗೂ ಸಾವಣ್ಣ ಪ್ರಕಾಶನದ 15ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಿರಂತರವಾಗಿ ತೆರೆದ ಪುಸ್ತಕ ಆಗುವುದು ಕಷ್ಟಕರ. ತೆರೆದುಕೊಳ್ಳುವುದು ಎಂದರೆ ಪ್ರತಿ ಸಲ ಸೋಲುವುದು ಎಂದರ್ಥ. ಅದಕ್ಕೆ ಬಹಳ ಧೈರ್ಯ, ಪ್ರಾಮಾಣಿಕತೆ, ಹುಚ್ಚುತನ ಇದ್ದರೆ ಮಾತ್ರ ಸಾಧ್ಯ. ಅದರ ಜೊತೆಗೆ ತೀವ್ರವಾದ ಪ್ರೀತಿ, ತನ್ನನ್ನು ಹುಡುಕಾಡುವ ವಿಶಿಷ್ಟ ಗುಣ ಬೇಕು. ಜೋಗಿ ಅವರಲ್ಲಿ ಏನನ್ನೂ ಮುಚ್ಚಿಡದೆ ಒಪ್ಪಿಸಿಕೊಳ್ಳುವಂತ ಗುಣದವರು ಎಂದರು.
ಐವತ್ತು ಅರವತ್ತು ವರ್ಷಗಳ ಕಾಲ ಜೀವಿಸಿ ಗಂಭೀರವಾಗಿ ನಿಂತಿರುವ ಮರ ಹಲವು ವಸಂತಗಳನ್ನು ಕಂಡಿರುತ್ತದೆ. ಸಾಕಷ್ಟು ಹಕ್ಕಿಗಳಿಗೆ ಆಶ್ರಯ ನೀಡಿರುತ್ತದೆ. ಅದನ್ನು ನೋಡಿದಾಗ ನಂಬುವ, ತಬ್ಬಿಕೊಳ್ಳುವ ಮನಸ್ಸಾಗುತ್ತದೆ. ಆದರೆ, ಅಷ್ಟು ವಯಸ್ಸಾದ ಮನುಷ್ಯರಲ್ಲಿ ಆ ಭಾವ ಕಾಣುವುದು ಕಡಿಮೆ. ನಂಬುವುದಕ್ಕಿಂತ ಹೆಚ್ಚಾಗಿ ಕಳ್ಳ, ಬುದ್ಧಿವಂತ ಎನ್ನಿಸಿಕೊಂಡುಬಿಡುತ್ತಾರೆ. ಆದರೆ, ಜೋಗಿ ಮರದ ರೀತಿಯ ವ್ಯಕ್ತಿತ್ವದವರು ಎಂದು ಹೇಳಿದರು.
ಜೋಗಿ ಅವರು ಮಾತನಾಡಿ, ನೂರು ಪುಸ್ತಕಕ್ಕಿಂತ ಹೆಚ್ಚಾಗಿ ಹೆಚ್ಚು ಹೆಚ್ಚು ಸ್ನೇಹಿತರು ಸಿಕ್ಕಿದ್ದಾರೆ. ಪುಸ್ತಕಗಳು ನಿರಂತರ ಪ್ರಯಾಣ ಮಾಡುವಂತೆ ಮಾಡಿವೆ. ಪುಸ್ತಕ ನನ್ನ ಮುಂದಿನ ದಾರಿಯನ್ನು ತೆರೆಯುತ್ತ ಹೋಗಿದೆ. ಮುದ್ರಣ ಮಾಡುವುದನ್ನು ನಿಲ್ಲಿಸಬಲ್ಲೆ, ಆದರೆ, ಬರೆಯುವುದನ್ನು ನಿಲ್ಲಿಸಲಾರೆ. ಬರೆಯುವುದು ಹೆಚ್ಚಿನ ಸಂತೋಷ ಕೊಟ್ಟಿದೆ ಎಂದು ಹೇಳಿದರು.
ಸಾವಣ್ಣ ಪ್ರಕಾಶನದ ಜಮೀಲ್ ಸಾವಣ್ಣ, ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಮಾತನಾಡಿದರು. ಕವಿ ಬಿ.ಆರ್.ಲಕ್ಷ್ಮಣ್‌ರಾವ್ ಹಾಗೂ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಕವಿತೆಗಳನ್ನು ವಾಚಿಸಿದರು. ಚಂಪಾಶೆಟ್ಟಿ, ಪ್ರಿಯಾ ಕೆರ್ವಾಶೆ, ನಂದಕುಮಾರ್ ಸೃಜನಶೀಲ ಪ್ರಸ್ತುತಿ ಹಾಗೂ ಕೀರ್ತಿನಾರಾಯಣ ಅವರ ಇಎನ್‌ಟಿ ಕ್ಲಿನಿಕ್, ರಾಜೇಶ್ ಶೆಟ್ಟಿ ಸಂದರ್ಶನ ಕಾರ್ಯಕ್ರಮ ನಡೆಯಿತು.