ಸಾರಾಂಶ
ಅಲ್ರೀ.. ಉಡುಪಿ ಹೋಟೆಲ್‌ನಲ್ಲಿ ಕಲಂದರಸಾಬರ ಬಿರಿಯಾನಿ ಸಿಗುತ್ತೇನ್ರೀ..? ಕಲಂದರಸಾಬರ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ಕೇಳಿದರೆ ಸಿಗುತ್ತಾ?
ಅಲ್ರೀ.. ಉಡುಪಿ ಹೋಟೆಲ್‌ನಲ್ಲಿ ಕಲಂದರಸಾಬರ ಬಿರಿಯಾನಿ ಸಿಗುತ್ತೇನ್ರೀ..? ಕಲಂದರಸಾಬರ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ಕೇಳಿದರೆ ಸಿಗುತ್ತಾ?
----
ರಾಜ್ಯೋತ್ಸವ ಸೇರಿದಂತೆ ಯಾವುದೇ ಪ್ರಶಸ್ತಿಯಾದರೂ ಲಾಬಿ ಎಂಬ ತೆರೆ ಹಿಂದಿನ ಕಸರತ್ತು ಇದ್ದೇ ಇರುತ್ತದೆ. ಜನನಾಯಕರು, ಜಾತಿ ಸಂಘಟನೆಗಳು, ಪ್ರದೇಶವಾರು ಬೇಡಿಕೆಗಳು ಪ್ರತಿಧ್ವನಿಸಿ ತರಹೇವಾರಿ ಲಾಬಿ ನಡೆಯುವುದು ಸಾಮಾನ್ಯ.
ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ, ಪ್ರಶಸ್ತಿ ಕೊಟ್ಟಾಗಿದೆ. ಪ್ರಶಸ್ತಿ ಪಡೆದವರು ಅದಕ್ಕೆ ದೊರೆಯುವ ನಗದನ್ನು ಬಹುಶಃ ಖರ್ಚು ಮಾಡಿಕೊಂಡಿರಬೇಕು.
ಇಷ್ಟೆಲ್ಲ ಆದ ಮೇಲೆ ಕಲಬುರಗಿಯ ಕಲಾವಿದರೊಬ್ಬರಿಗೆ ಈಗ ಎಚ್ಚರವಾಗಿದೆ. ಅವರಿಗೆ ಅರ್ಜೆಂಟಾಗಿ ರಾಜ್ಯೋತ್ಸವ ಪ್ರಶಸ್ತಿ ಬೇಕಂತೆ. ಹೀಗಂತ ಅವರು ಪ್ರಶಸ್ತಿ ಕೇಳುತ್ತಿರುವುದು, ಅದಕ್ಕಾಗಿ ಲಾಬಿ ಮಾಡುತ್ತಿರುವುದು ರಾಜ್ಯ ಸರ್ಕಾರದ ಬಳಿಯಲ್ಲ... ಬದಲಾಗಿ, ಉಪ ಲೋಕಾಯುಕ್ತರ ಬಳಿ!
ಕಳೆದೆರಡು ದಿನದಿಂದ ಕಲಬುರಗಿಯಲ್ಲೇ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಠಿಕಾಣಿ ಹೂಡಿದ್ದರು. ಇದನ್ನು ಅರಿತ ಕಲಾವಿದನೊಬ್ಬ ಅರ್ಜೆಂಟಾಗಿ ತನಗೆ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿ ಎಂದು ಅರ್ಜಿ ಹಿಡ್ಕೊಂಡು ಅವರ ಮುಂದೆ ಪ್ರತ್ಯಕ್ಷನಾದ.
ಈ ಅರ್ಜಿ ನೋಡುತ್ತಿದ್ದಂತೆಯೇ ಬಿ.ವೀರಪ್ಪ ಅವರಿಗೆ ಅಚ್ಚರಿ. ಈ ಪ್ರಶಸ್ತಿಗೂ ತನಗೂ ಏನು ಸಂಬಂಧ. ತಾವು ಶಿಫಾರಸು ಮಾಡಿದರೆ ಸರ್ಕಾರ ಕೇಳುವುದೇ? ಇಷ್ಟಕ್ಕೂ ಈ ಪ್ರಶಸ್ತಿ ಪ್ರದಾನ ಸಮಾರಂಭವೇ ಮುಗಿದಿರುವಾಗ ಈತ ಪ್ರಶಸ್ತಿ ಕೇಳುತ್ತಿದ್ದಾನೆ ಅಂದರೆ ಇದು ಮುಂದಿನ ವರ್ಷಕ್ಕೆ ಅಡ್ವಾನ್ಸ್ ಲಾಬಿಯೇ ಎಂಬೆಲ್ಲ ಪ್ರಶ್ನೆಗಳು ಕಾಡಿದವು.
ಆದರೆ, ಆತ ಅರ್ಜೆಂಟ್‌ನಲ್ಲಿದ್ದ. ಹೀಗಾಗಿ ಬೀರಪ್ಪನವರು, ನಿಮ್ಮ ಕಲೆ ಬಗ್ಗೆ ನಮಗೆ ಗೌರವವಿದೆ. ಪ್ರಶಸ್ತಿ ಕೊಡುವಂತೆ ನಾವು ಯಾರಿಗೂ ಹೇಳಲು ಆಗುವುದಿಲ್ಲ ಎಂದು ನಮ್ರರಾಗಿ ಮನದಟ್ಟು ಮಾಡಿಕೊಟ್ಟರು.
ಆ ಅರ್ಜೆಂಟ್ ಕಲಾವಿದ ಅಲ್ಲಿಂದ ತರಾತುರಿಯಿಂದ ಹೊರಟ. ಬಹುಶಃ ಲೋಕಾಯುಕ್ತರ ಬಳಿಗೆ ಲಾಬಿಗಾಗಿ ಬೆಂಗಳೂರು ಬಸ್ ಹತ್ತಿದನೋ ಏನೋ ಗೊತ್ತಾಗಲಿಲ್ಲ!
ಉಡುಪಿ ಹೋಟೆಲ್ ಬಿರಿಯಾನಿ ಪ್ರಸಂಗ!
ಕರ್ನಾಟಕದ ಕಾಯಂ ಸಿಎಂ ಎಂದು ತಮಾಷೆಯಾಗಿ ಕರೆಸಿಕೊಳ್ಳೋ ಸಿಎಂ ಇಬ್ರಾಹಿಂ ಅವರು ಇದ್ದ ಕಡೆ ಲಾಜಿಕ್ ಇರುತ್ತದೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ನಗು ಮಾತ್ರ ಖಂಡಿತ ಇರುತ್ತದೆ.
ಚುನಾವಣೆ ವೇಳೆ ಗಂಭೀರ ಭಾಷಣಗಳನ್ನು ಕೇಳಿ ಜನ ಬೋರ್ ಆದಾಗ ಇಬ್ರಾಹಿಂ ಸಾಹೇಬರನ್ನು ವೇದಿಕೆಗೆ ಬಿಟ್ಟು ಜನರನ್ನು ತುಸು ನವಿರಾಗಿಸೋ ಕಲೆ ಬಹುಶ ಬಿಜೆಪಿ ಬಿಟ್ಟು ಉಳಿದ ಎರಡು ಪಾರ್ಟಿಗಳಿಗೆ ಕರಗತವಾಗಿದೆ. ಹೀಗಾಗಿಯೇ ಕಾಂಗ್ರೆಸ್ ಬಿಟ್ಟು ಜೆಡಿಎಸ್, ಆಮೇಲೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಅಂತ ಅವರು ಓಡಾಡಿಕೊಂಡಿದ್ದಾರೆ.
ಹೀಗೆ ಓಡಾಡುತ್ತಾ ಅವರು ಇತ್ತೀಚೆಗೆ ವಿಜಯಪುರಕ್ಕೆ ಬಂದಿದ್ದರು. ಅಲ್ಲಿ ಅವರ ಈ ನಗೆ ಚಟಾಕಿ ವಕ್ಫ್‌ಗೆ ತಗಲಿಕೊಂಡಿತ್ತು.
ಅಲ್ಲಾರೀ, ಈ ಹೆಣ್ಣು ನಮ್ದು ಅಂತ ನಿಶ್ಚಿತಾರ್ಥ ನಡೀವಾಗ ಹೇಳಬೇಕಿತ್ತು. ಅದಾಗಲಿಲ್ವ, ಮದುವೆಗೆ ಮುನ್ನವಾದರೂ ಹೇಳಬೇಕಿತ್ತು. ಮದುವೆಯಾಗಿ ಈಗ ಮಗು ಆಗಿಬಿಟ್ಟಿದೆ. ಇಂತಹ ಟೈಮ್‌ನಲ್ಲಿ ನಮ್ದು ನಮ್ದು.. ಅಂದ್ರೆ ಯಾರ್ ಕೇಳ್ತಾರೆ ಅಂತ ವಕ್ಫ್ ಆಸ್ತಿಯನ್ನು ಹೆಣ್ಣಿಗೆ ಹೋಲಿಕೆ ಮಾಡಿ ಹೇಳಿದಾಗ ಸಭೆ ಗೊಳ್ ಅಂತು.
ಇಷ್ಟಕ್ಕೆ ಇಬ್ರಾಹಿಂ ಸಾಹೇಬರು ಸುಮ್ಮನಾಗಲಿಲ್ಲ. ಈಗಾಗಲೇ ಮದುವೆಯಾಗಿ ಮಗು ಹುಟ್ಟಿದೆ. ಅದರ ಅಪ್ಪ ಬೇರೆ ಇದ್ದಾನೆ. ಈಗ ಯಾರು ಭೂಮಿ ಉಳ್ತಿದಾರೋ, ಈಗ ಯಾರ ಹೆಸರಿನಲ್ಲಿ ಪಹಣಿ ಇದೆಯೋ ಅವರೇ ಅದರ ಅಪ್ಪ. ಕೈ ನೋಡಬೇಕಾದರೆ ಕನ್ನಡಕ ಬೇಕಾಗಿಲ್ಲ ಎಂದರು.
ಜತೆಗೆ, ಜಮೀರ್ ಮಾಡಿದ್ದನ್ನೇ ಮೋದಿ ಮಾಡಲು ಹೊರಟಿದ್ದಾರೆ. ಇವರಿಬ್ಬರೂ ವಕ್ಫ್ ವಿಚಾರದಲ್ಲಿ ನಡೆದುಕೊಳ್ಳುತ್ತಿರುವುದು ನೋಡಿದರೆ ಉಡುಪಿ ಹೋಟೆಲ್ ಕಲಂದರ್ ಬಿರಿಯಾನಿ ಕಥೆಯಾಗಿದೆ. ಅಲ್ರೀ.. ಉಡುಪಿ ಹೋಟೆಲ್‌ಗೆ ಹೋಗಿ ಕಲಂದರಸಾಬರ ಬಿರಿಯಾನಿ ಕೇಳಿದರೆ ಸಿಗುತ್ತೇನ್ರೀ..? ಕಲಂದರಸಾಬರ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ಕೇಳಿದರೆ ಸಿಗುತ್ತಾ? ಮಂಗಮುಂಡೇವ ಎಂದರು.
ಅಂದಹಾಗೇ ಮಂಗಮುಂಡೇವ ಎಂದದ್ದು ಯಾರಿಗೆ ? ವಕ್ಫ್ ವಿವಾದ ಹುಟ್ಟು ಹಾಕುತ್ತಿದ್ದವರಿಗೋ ಅಥವಾ...
- ಶೇಷಮೂರ್ತಿ ಅವಧಾನಿ
- ಶಶಿಕಾಂತ ಮೆಂಡೆಗಾರ