ಸಂಪತ್ ತರೀಕೆರೆ
ಕನ್ನಡಪ್ರಭ ವಾರ್ತೆ, ಬೆಂಗಳೂರುನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಹಾದು ಹೋಗಿರುವ ಮೇಜರ್ ಆರ್ಟೀರಿಯಲ್ ರಸ್ತೆ (ಎಂಎಆರ್) ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದ್ದು, ಮೇ ತಿಂಗಳ ಅಂತ್ಯದೊಳಗೆ ಸಂಚಾರ ಮುಕ್ತಗೊಳ್ಳುವ ಸಾಧ್ಯತೆ ಇದೆ.
ಮಾಗಡಿ ರಸ್ತೆಯನ್ನು (ಕಡಬಗೆರೆ ಕ್ರಾಸ್) ಮೈಸೂರು ರಸ್ತೆಗೆ (ಚಲ್ಲಘಟ್ಟ ಮೆಟ್ರೋ ಡಿಪೋ) ಸಂಪರ್ಕ ಕಲ್ಪಿಸುವ ಎಂಎಆರ್ ರಸ್ತೆ ಸಂಚಾರ ಕಾರ್ಯ ರೂಪಕ್ಕೆ ಬಂದರೆ, ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರು ನಡುವಿನ ಸಂಚಾರ 1.30 ಗಂಟೆಯಿಂದ 10 ನಿಮಿಷಕ್ಕೆ ಇಳಿಕೆಯಾಗಲಿದೆ.ಪ್ರಸ್ತುತ ಚಲ್ಲಘಟ್ಟದ ರೈಲ್ವೆ ಅಂಡರ್ ಪಾಸ್ (ಆರ್‌ಯುಬಿ) ಮತ್ತು ಅಂತಿಮ ಹಂತದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಏಪ್ರಿಲ್ ಅಥವಾ ಮೇ ಮೊದಲ ವಾರದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದ್ದು, ಅ ನಂತರ ರಸ್ತೆ ಉದ್ಘಾಟನೆ ನಡೆಸುವ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಚಿಂತನೆ ನಡೆಸಿದೆ ಎಂದು ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಮೇಜರ್ ಆರ್ಟೀರಿಯಲ್ ರಸ್ತೆ 100 ಮೀಟರ್ ಅಗಲದ 10.77 ಕಿ.ಮೀ ಉದ್ದದ ದಶಪಥ ರಸ್ತೆಯಾಗಿದೆ. ಈ ರಸ್ತೆ ನಾಡಪ್ರಭು ಕೆಂಪೇಗೌಡ ಲೇಔಟ್‌ಗೆ ಸಂಪರ್ಕ ಕಲ್ಪಿಸುವುದರ ಜೊತೆಗೆ ಸುತ್ತಮುತ್ತಲ ಹಳ್ಳಿಗಳಿಗೂ ಇದು ಪ್ರಮುಖ ರಸ್ತೆಯಾಗಲಿದೆ. ಈ ರಸ್ತೆ ನಿರ್ಮಾಣಕ್ಕಾಗಿ 321.21 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದು, ಆರಂಭಿಕ ವೆಚ್ಚ 465 ಕೋಟಿ ರು.ಎಂದು ಯೋಜಿಸಲಾಗಿತ್ತು. ಆದರೆ, 585 ಕೋಟಿ ರು.ಗಳನ್ನು ವೆಚ್ಚ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ರಸ್ತೆಯು ಕಂಬಿಪುರ, ಕೆ. ಕೃಷ್ಣ ಸಾಗರ, ಭೀಮನ-ಕುಪ್ಪೆ, ಕೊಮ್ಮಘಟ್ಟ, ಕೆಂಚನಪುರ ಮತ್ತು ಸುಳಿಕೆರೆ ಗ್ರಾಮಗಳ ಮೂಲಕ ಹಾದುಹೋಗುತ್ತದೆ.
2 ಕಿಮೀ ದೂರದಲ್ಲೇ ನೈಸ್ ರಸ್ತೆ:
ಎಂಎಆರ್ ರಸ್ತೆಗೆ ಎರಡು ಕಿ.ಮೀ ದೂರದಲ್ಲಿ ನೈಸ್ ರಸ್ತೆಯು ಹಾದು ಹೋಗಿದೆ. ಎಂಎಆರ್ ರಸ್ತೆಯ ಒಂದು ತುದಿಯಲ್ಲಿ ಚಲ್ಲಘಟ್ಟ ಮೆಟ್ರೋ ರೈಲು ನಿಲ್ದಾಣ ಇರುವುದರಿಂದ ಮೆಟ್ರೋ ಸಂಪರ್ಕಕ್ಕೂ ಇದು ಸಹಕಾರಿಯಾಗಲಿದೆ. ಜೊತೆಗೆ ನೈಸ್ ರಸ್ತೆ ತಲುಪಲು ಕೂಡ ನೆರವಾಗಲಿದೆ. ಹಾಸನ ಮತ್ತು ಕುಣಿಗಲ್‌ನಿಂದ ಮಾಗಡಿ ಮೂಲಕ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ಮತ್ತು ಮಂಡ್ಯ ಮತ್ತು ರಾಮನಗರ ಕಡೆಯಿಂದ ಬಿಡದಿ ಮೂಲಕ ಬರುವ ಪ್ರಯಾಣಿಕರಿಗೆ ಎಂಎಆರ್ ಹೆಚ್ಚು ಉಪಯುಕ್ತವಾಗಲಿದೆ. ನೈಸ್ ರಸ್ತೆಗೂ ಮುಂಚಿತವಾಗಿ ಈ ರಸ್ತೆ ಸಿಗುವುದರಿಂದ ನೇರವಾಗಿ ಯಾವುದೇ ದಟ್ಟಣೆಗೆ ಸಿಲುಕದೆ ಈ ರಸ್ತೆಯಿಂದ ನಗರವನ್ನು ಪ್ರವೇಶಿಸಬಹುದು ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.ಬಿಬಿಸಿಗೆ ಸಂಪರ್ಕ:
ಈ ಮೇಜರ್ ಆರ್ಟೀರಿಯಲ್ ರಸ್ತೆಯನ್ನು ಹೊಸೂರು ರಸ್ತೆ ಮತ್ತು ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಬೆಸೆಯುವ ಉದ್ದೇಶಿತ ''''''''ಪೆರಿಫೆರಲ್ ರಿಂಗ್ ರಸ್ತೆ (ಬೆಂಗಳೂರು ಬಿಜಿನೆಸ್ ಕಾರಿಡಾರ್) ಹಂತ-2''''''''ರ ಭಾಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕಾಗಿ ರಸ್ತೆ ಮಾರ್ಗದಲ್ಲಿ 4 ಎಕರೆ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಪ್ರಸ್ತುತ ಸರ್ವಿಸ್ ರಸ್ತೆಗಳಲ್ಲಿ ಕೆಲವೆಡೆ ಸಂಪರ್ಕ ಕಡಿತಗೊಂಡಿದ್ದು ಅಲ್ಲಿ ಡಕ್ಟ್‌ಗಳು ಮತ್ತು ಯುಟಿಲಿಟಿ ಸೌಲಭ್ಯಗಳನ್ನು ಅಳವಡಿಸುವ ಮೂಲಕ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ.ಹಸಿರು ಕಾರಿಡಾರ್:
10.77 ಕಿ.ಮೀ ಉದ್ದದ ರಸ್ತೆಯ ಎರಡು ಬದಿಯಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣವಾಗಲಿದೆ. ಎರಡು ಕಡೆ 27.5 ಮೀಟರ್ ಅಗಲದಲ್ಲಿ ಭೂದೃಶ್ಯಗಳು ಇರಲಿವೆ. ಇಲ್ಲಿ ಹೂವು, ಹಣ್ಣಿನ ಗಿಡ, ಸಸಿಗಳನ್ನು ನೆಡಲಾಗುವುದು. ಕೆಂಪೇಗೌಡ ಬಡಾವಣೆಯ ವಿವಿಧ ಬ್ಲಾಕ್‌ಗಳಿಗೆ ತೆರಳಲು ಅನುಕೂಲವಾಗುವಂತೆ ಹಲವು ರೋಟರಿ ಜಂಕ್ಷನ್‌ಗಳನ್ನು ಸಹ ನಿರ್ಮಿಸಲಾಗುತ್ತಿದೆ. ಈ ಬೃಹತ್ ಯೋಜನೆ ಪೂರ್ಣಗೊಂಡರೆ, ದಕ್ಷಿಣ ಬೆಂಗಳೂರು-ಪಶ್ಚಿಮ ಬೆಂಗಳೂರು ನಡುವಿನ ಸಂಚಾರ ಅಂತರವೂ ಕಡಿಮೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಕ್ಸ್100 ಮೀಟರ್ ಅಗಲದ ರಸ್ತೆಯಲ್ಲಿ ಏನಿದೆ?
ಮುಖ್ಯ ರಸ್ತೆ-10 ಮೀಟರ್* 2ಸರ್ವೀಸ್ ರಸ್ತೆ- 7 ಮೀಟರ್* 2
ಭೂದೃಶ್ಯಗಳು- 27.5 ಮೀಟರ್* 2ಪಾದಚಾರಿ ಮಾರ್ಗ- 2 ಮೀಟರ್*2
ಸೈಕಲ್ ಟ್ರ್ಯಾಕ್- 2 ಮೀಟರ್*2-------
- ಉದ್ದೇಶಿತ ಮೇಜರ್ ಆರ್ಟೀರಿಯಲ್ ರಸ್ತೆ 100 ಮೀಟರ್ ಅಗಲ 10.77 ಕಿ.ಮೀ ಉದ್ದದ ದಶಪಥ ರಸ್ತೆಯಾಗಿದೆ - ಇದು ನಾಡಪ್ರಭು ಕೆಂಪೇಗೌಡ ಲೇಔಟ್‌ಗೆ ಸಂಪರ್ಕ ಕಲ್ಪಿಸುವುದಲ್ಲದೆ ಸುತ್ತಲ ಹಳ್ಳಿಗಳಿಗೂ ಮುಖ್ಯ ರಸ್ತೆಯಾಗಲಿದೆ- ಕಂಬಿಪುರ, ಕೆ. ಕೃಷ್ಣ ಸಾಗರ, ಭೀಮನ-ಕುಪ್ಪೆ, ಕೊಮ್ಮಘಟ್ಟ, ಕೆಂಚನಪುರ ಮತ್ತು ಸುಳಿಕೆರೆ ಮೂಲಕ ಹಾದುಹೋಗಲಿದೆ.- ಇದರಿಂದ ದಕ್ಷಿಣ, ಪಶ್ಚಿಮ ಬೆಂಗಳೂರು ನಡುವಿನ ಸಂಚಾರ ಅವಧಿ 1.5 ಗಂಟೆಯಿಂದ 10 ನಿಮಿಷಗಳಿಗೆ ಇಳಿಕೆಯಾಗಲಿದೆ- ಈ ರಸ್ತೆಗಾಗಿ ಒಟ್ಟು 321.21 ಎಕರೆ ಜಮೀನು ಸ್ವಾಧೀನಪಡಿಸಿಕೊಂಡಿದ್ದು, 585 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ---------