ಸಾರಾಂಶ
ನಾಗರ ಪಂಚಮಿ ನಾ ಹೆಂಗ ಮರೆಯಲಿ ಅಣ್ಣಾ. ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬವಾಗಿದೆ ಅಣ್ಣಾ. ಗೆಳತಿಯರೊಡನೆ ಜೋಕಾಲಿ ಆಡುವ ಆಶೆ ಅಣ್ಣಾ. ನನ್ನನ್ನು ತವರಿಗೆ ಕರೆಯುವುದನ್ನು ಮರೆಯ ಬೇಡ ಅಣ್ಣಾ...
-ಬಸವರಾಜ ಎಮ್ ಯರಗುಪ್ಪಿ. ಶಿಕ್ಷಕರು, ಸಾ.ಪೊ ರಾಮಗೇರಿ, ಗದಗ.
ನಾಗರ ಪಂಚಮಿ ನಾ ಹೆಂಗ ಮರೆಯಲಿ ಅಣ್ಣಾ. ನಾಗರ ಪಂಚಮಿ ನಾಡಿಗೆ ದೊಡ್ಡ ಹಬ್ಬವಾಗಿದೆ ಅಣ್ಣಾ. ಗೆಳತಿಯರೊಡನೆ ಜೋಕಾಲಿ ಆಡುವ ಆಶೆ ಅಣ್ಣಾ. ನನ್ನನ್ನು ತವರಿಗೆ ಕರೆಯುವುದನ್ನು ಮರೆಯ ಬೇಡ ಅಣ್ಣಾ... ಇದು ತನ್ನ ಸಹೋದರಿಯ ಕೊರಗು. ಇನ್ನು ನನ್ನ ಅಣ್ಣ ನಾಗರ ಪಂಚಮಿ ಹಬ್ಬಕ್ಕೆ ತವರಿಗೆ ಕರೆಯಲು ಇನ್ನೂ ಯಾಕ ಬರಲಿಲ್ಲ ಅಂತ ದಾರಿ ಕಾಯುವ ಸಹೋದರಿಯರು.
ಹಾಗೆಯೇ ‘ಪಂಚಮಿ ಬಂದಿತು ಸನ್ಯಾಕ, ಅಣ್ಣ ಬರಲಿಲ್ಲ ಕರಿಯಾಕ’ ಎಂದು ಗಂಡನ ಮನೆಯಲ್ಲಿರುವ ಸಹೋದರಿ ತವರ ಮನೆಯನ್ನು ನೆನಸಿಕೊಂಡು ತನ್ನ ಆಸೆಯನ್ನು ವ್ಯಕ್ತಪಡಿಸುವ ಪರಿ ಇದು. ಎಷ್ಟೇ ವರ್ಷವಾಗಿದ್ದರೂ ಸಹ ಸಹೋದರರಿಯರಿಗೆ ತವರ ಮನೆಯ ಮೇಲಿನ ವ್ಯಾಮೋಹ ಕಡಿಮೆಯಾಗಿರುವುದಿಲ್ಲ. ಏಕೆಂದರೆ ಈ ಹಬ್ಬವು ಅಣ್ಣ-ತಂಗಿ ಇಬ್ಬರೂ ಸೇರಿ ಪೂಜಿಸಲ್ಪಡುವ ಹಬ್ಬವೆಂದು ಪ್ರತೀತಿ ಇದೆ. ಅದರಲ್ಲಿಯೂ ನಾಗಪಂಚಮಿ ಶ್ರಾವಣ ಮಾಸದ ಮೊದಲ ಹಬ್ಬ. ಇಲ್ಲಿಂದ ವರ್ಷದ ಸಾಲು ಸಾಲು ಹಬ್ಬಗಳು ಆರಂಭವಾಗುತ್ತವೆ. ಈ ವರ್ಷ ಅಂದರೆ 2025ರಲ್ಲಿ ನಾಗರ ಪಂಚಮಿಯನ್ನು ಜುಲೈ 29ರಂದು ಅಂದರೆ ಮಂಗಳವಾರ ಆಚರಿಸಲಾಗುತ್ತಿದೆ.
ನಾಗರ ಪಂಚಮಿಯು ಉತ್ತರ ಕರ್ನಾಟಕದವರಿಗೆ ದೊಡ್ಡ ಹಬ್ಬವಾಗಿದೆ. ಈ ಪಂಚಮಿ ತಿಥಿಯ ಅಧಿಪತಿಯಾದ ನಾಗದೇವತೆಯನ್ನು ಪೂಜಿಸಲಾಗುತ್ತದೆ. ಪೂಜೆಯ ಅಂಗವಾಗಿ ದೇವಸ್ಥಾನ ಹಾಗೂ ಹುತ್ತಗಳಿಗೆ ಭೇಟಿ ನೀಡಿ, ಎಲ್ಲ ಕೆಡುಕುಗಳಿಂದ ತಮ್ಮನ್ನು ರಕ್ಷಿಸಲೆಂದು ಬೇಡಿಕೊಂಡು ಜನರು ಹಾಲು ಮತ್ತು ಬೆಳ್ಳಿ ಆಭರಣಗಳನ್ನು ಅರ್ಪಿಸುತ್ತಾರೆ.
ನಾಗ ಪಂಚಮಿ ಕಥೆ:
ಈ ಹಿಂದೆ ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯವರೆಲ್ಲಾ ಸೇರಿ ಒಟ್ಟಿಗೆ ನಾಗರ ಪಂಚಮಿಯಂದು ಪೂಜಾ ಕಾರ್ಯಕ್ರಮದಲ್ಲಿ ತೊಡಗಿದ್ದರು. ಆ ಸಮಯದಲ್ಲಿ ಅಲ್ಲಿಗೆ ನಾಗರಹಾವೊಂದು ರಭಸದಿಂದ ಬಂದು ನಾಲ್ಕು ಜನ ಅಣ್ಣಂದಿರನ್ನು ಬಲಿ ತೆಗೆದುಕೊಂಡಿತು. ನಂತರ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾರದೆ ಆ ನಾಗರಹಾವಿಗೆ ಹೇಳಿದಳು, ನನ್ನ ನಾಲ್ಕು ಜನ ಅಣ್ಣಂದಿರಲ್ಲಿ ಒಬ್ಬರನ್ನಾದರೂ ಬದುಕಿಸಿಕೊಡು, ನಾನು ‘ಯಾರನ್ನು ಅಣ್ಣ’ ಎಂದು ಕರೆಯಲಿ ಎಂದು ಕಣ್ಣೀರಿಟ್ಟಳು. ತದ ನಂತರ ಆ ನಾಗರ ಹಾವು ಆಕೆಯ ಮಾತಿಗೆ ಕಿವಿಗೊಟ್ಟು, ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಪ್ರಾಣಾಪಾಯದಿಂದ ಕಾಪಾಡಿತು. ನಂತರ ಅಣ್ಣ - ತಂಗಿ ಇಬ್ಬರು ಸೇರಿ ನಾಗರಪಂಚಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ನಾಗರ ಪಂಚಮಿ ಪೌರಾಣಿಕ ಹಿನ್ನೆಲೆ:
ಶ್ರಾವಣ ಮಾಸವೆಂದರೆ ಹಿಂದುಗಳಿಗೆ ಪವಿತ್ರವಾದ ಹಬ್ಬವಾಗಿದೆ. ಈ ಮಾಸದ ಚತುರ್ಥಿ ಹಾಗೂ ಪಂಚಮಿಯಂದು ಬರುವ ನಾಗರ ಪಂಚಮಿಯ ಪೌರಾಣಿಕ ಹಿನ್ನೆಲೆಯೂ ವಿಶಿಷ್ಟವಾಗಿದೆ. ಜನಮೇಜಯ ತಂದೆಯ ಪರೀಕ್ಷಿತ ರಾಜನ ಸಾವಿಗೆ ಸರ್ಪ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಭೂ ಲೋಕದಲ್ಲಿರುವ ಸರ್ಪಗಳನ್ನು ನಾಶ ಮಾಡಲು ಸರ್ಪಯಜ್ಞ ಆರಂಭಿಸುತ್ತಾನೆ. ಈ ಸಂದರ್ಭದಲ್ಲಿ ಸರ್ಪಗಳ ಸಂಬಂಧಿಯಾದ ಆಸ್ತಿಕ ಮುನಿಯು ಪರೀಕ್ಷಿತ ರಾಜರನ್ನು ಸಮಾಧಾನಗೊಳಿಸಿ, ಪ್ರಾಣಿ ಹಿಂಸೆ ಮಹಾಪಾಪ ಎಂದು ಹೇಳಿ ಸರ್ಪಯಜ್ಞ ನಿಲ್ಲಿಸುತ್ತಾನೆ. ಈ ದಿನವನ್ನೇ ನಾಡಿನಲ್ಲಿ ನಾಗರ ಪಂಚಮಿಯಾಗಿ ಆಚರಿಸುತ್ತಾರೆ ಎಂದು ಪೌರಾಣಿಕ ಕಥೆ ಹೇಳುತ್ತಿದೆ.
ನಾಗರ ಪಂಚಮಿಯ ಪೂಜೆ:
ನಾಗರಪಂಚಮಿಯ ದಿನ ಅರಿಶಿನ ಅಥವಾ ರಕ್ತಚಂದನದಿಂದ ಮಣೆಯ ಮೇಲೆ ನವನಾಗಗಳ ಆಕೃತಿಗಳನ್ನು ಬಿಡಿಸಿ ಅವುಗಳ ಪೂಜೆಯನ್ನು ಮಾಡಿ ಹಾಲು ಮತ್ತು ಅರಳಿನ ನೈವೇದ್ಯವನ್ನು ಅರ್ಪಿಸಬೇಕು. ನವನಾಗಗಳು ಪವಿತ್ರಕಗಳ ಒಂಬತ್ತು ಪ್ರಮುಖ ಗುಂಪುಗಳಾಗಿವೆ.
ಮಹಿಳೆಯರು ತಮ್ಮ ಪತಿಗಾಗಿ ಮಂಗಳವಾರ ಉಪವಾಸವನ್ನು ಮಾಡುತ್ತಾರೆ. ಶ್ರಾವಣ ಸೋಮವಾರದಂತೆಯೇ ಮಂಗಳವಾರವೂ ಬಹಳ ಮುಖ್ಯ. ಈ ವರ್ಷ ನಾಗರಪಂಚಮಿ ದಿನವೇ ಮಂಗಳಗೌರಿ ವ್ರತ ಸಹ ಆಚರಿಸುವುದರಿಂದ ನಾಗಪಂಚಮಿಯಂದು ನಾಗದೇವತೆಯೊಂದಿಗೆ ಶಿವ ಮತ್ತು ತಾಯಿ ಪಾರ್ವತಿಯನ್ನೂ ಪೂಜಿಸಲಾಗುವುದು. ಹೀಗಾಗುವುದು ಅಪರೂಪ. ಆದ್ದರಿಂದ ನಾಗದೇವತೆ ಮತ್ತು ಶಿವ-ಪಾರ್ವತಿಯನ್ನು ಪೂಜಿಸುವುದರಿಂದ ಹೆಚ್ಚಿನ ಫಲಿತಾಂಶ ಸಿಗುತ್ತದೆ ಎನ್ನಲಾಗುತ್ತದೆ.
ಉತ್ತರ ಕರ್ನಾಟಕದಲ್ಲಿ ವಿಶೇಷ ಆಚರಣೆ:
ಸಾಮಾನ್ಯವಾಗಿ ನಾಗರ ಪಂಚಮಿ ಆರಂಭವಾಗುವುದೇ ನಾಗರ ಅಮವಾಸ್ಯೆಯಿಂದ ಅಮವಾಸ್ಯೆಯ ನಂತರ ಮೂರನೆಯ ದಿನ ರೊಟ್ಟಿ ಹಬ್ಬ, ನಾಲ್ಕನೆಯ ದಿನ ಚತುರ್ಥಿ, ಐದನೆಯ ದಿನ ಪಂಚಮಿ ಆಚರಿಸುತ್ತಾರೆ. ರೊಟ್ಟಿ ಹಬ್ಬದಂದು ಮನೆ ಮನೆಯಲ್ಲಿ ಬಗೆ ಬಗೆಯ ಪಲ್ಯೆ, ಚಟ್ನಿ ತಯಾರಿಸಿ ರೊಟ್ಟಿ, ಚಪಾತಿಯನ್ನು ತಯಾರಿಸಿ ತಮ್ಮ ಅಕ್ಕ ಪಕ್ಕದ ಮನೆಯವರೊಂದಿಗೆ ಪರಸ್ಪರ ಹಂಚಿಕೊಳ್ಳುತ್ತಾರೆ. ಇದಕ್ಕೆ ಕಾರಣ ನಾಗರ ಪಂಚಮಿ ಹಬ್ಬದ ನಾಲ್ಕೈದು ದಿನ ಉಂಡಿ, ಹೋಳಿಗೆ ಮಾಡುವುದರಿಂದ ನಾಲ್ಕೈದು ದಿನಕ್ಕೆ ಬೇಕಾಗುವಷ್ಟು ಸಜ್ಜಿ, ಜೋಳದ ಹಿಟ್ಟಿನಲ್ಲಿ ಎಳ್ಳು ಹಾಕಿ ರೊಟ್ಟಿ ತಯಾರಿಸುತ್ತಾರೆ. ಅದನ್ನೇ ಬಾಂಧವ್ಯ ರೂಪದಲ್ಲಿ ಹಂಚಿಕೊಳ್ಳುತ್ತಾರೆ.
ರೊಟ್ಟಿ ಹಬ್ಬದ ನಂತರ ಶೇಂಗಾ ಉಂಡಿ, ಅಳ್ಳಿಟ್ಟು ಉಂಡಿ, ಎಳ್ಳುಂಡಿ, ಬುಂದಿಗಳಿಗೆ ಉಂಡಿ ಹಾಗೂ ಚಕ್ಕುಲಿ ಸೇರಿ ಬಗೆ ಬಗೆಯ ಉಂಡಿಗಳನ್ನು ತಯಾರಿಸುತ್ತಾರೆ. ಈ ಉಂಡಿಗಳನ್ನು ಶ್ರಾವಣ ಮಾಸ ಪೂರ್ತಿ ತಿನ್ನುವುದು ವಾಡಿಕೆ. ಇನ್ನೂ ಬೇರೆ ಬೇರೆ ಊರುಗಳಲ್ಲಿರುವ ತಮ್ಮ ಸಂಬಂಧಿಕರಿಗೆ ಉಂಡಿ ಕೊಟ್ಟು ತರುವ ಸಂಪ್ರದಾಯವಿದೆ. ಅದರಲ್ಲಿಯೂ ತವರ ಮನೆಯಿಂದ ಉಂಡಿ ಬರಲೇಬೇಕು. ಇದು ಸಹೋದರ ಸಹೋದರರ ಮಧ್ಯೆ ಬಾಂಧವ್ಯಕ್ಕೆ ಸಾಕ್ಷಿಯಾಗುತ್ತದೆ.
ರೈತರು ಹುತ್ತಕ್ಕೆ ಹಾಲೆರೆಯುವ ಹಬ್ಬ:
ನಾಗರ ಪಂಚಮಿಯು ರೈತರ ಹಬ್ಬವಾಗಿದೆ. ಅದರಲ್ಲಿಯೂ ಮುಂಗಾರು ಬೆಳೆ ಬರುವ ಹಿನ್ನೆಲೆಯಲ್ಲಿ ರೈತರಿಗೆ ಇದು ಸಂಭ್ರಮದ ಹಬ್ಬ. ವಿಷ ಜಂತು ಎಂದು ಕರೆಯುವ ಹಾವುಗಳು ರೈತರಿಗೆ ಕೃಷಿ ಸ್ನೇಹಿಗಳಾಗಿವೆ. ಮಣ್ಣಿನಲ್ಲಿರುವ ಕೀಟಗಳನ್ನು ತಿನ್ನುವ ಹಾವುಗಳು ಭೂಮಿಯ ಫಲವತ್ತಾದ ಪ್ರದೇಶದಲ್ಲಿಯ ಹುತ್ತದಲ್ಲಿ ವಾಸವಾಗಿರುತ್ತವೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕೆ ರೈತರು ನಾಗರ ಪಂಚಮಿಯಿಂದ ವಿಷಜಂತುಗಳು ಮನುಷ್ಯರಿಗೆ ಕಾಟ ನೀಡದೆ, ಭೂಮಿಯಲ್ಲಿಯ ಕೀಟಗಳನ್ನು ತಿಂದು ಫಸಲು ಕೈಗೆ ಬರಲಿ ಎಂಬ ಕಾರಣಕ್ಕೆ ಹುತ್ತಕ್ಕೆ ಹಾಲೆರೆಯುತ್ತಾರೆ.
ಒಟ್ಟಾರೆಯಾಗಿ ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಒಲೆಯ ಮೇಲೆ ತವೆಯನ್ನು ಇಡಬಾರದು ಹಾಗೂ ಭೂಮಿಯನ್ನು ಅಗೆಯಬಾರದು ಮುಂತಾದ ನಿಷೇಧ ನಿಯಮಗಳನ್ನು ಹಿರಿಯರು ಈ ದಿನ ಪಾಲಿಸುತ್ತಾ ಬಂದಿರುವ ಪ್ರತೀತಿ ನಡುವೆಯೇ ರೊಟ್ಟಿ ಹಬ್ಬ ಮಾಡಿ, ಬಗೆ ಬಗೆಯ ಉಂಡಿ ಗಳನ್ನು ಮಾಡಿ, ನಾಗದೇವತೆಯನ್ನು ಪೂಜಿಸಿ, ಹುತ್ತಗಳಿಗೆ ಹಾಲೆರದು ಸಂಭ್ರಮದಿಂದ ಆಚರಿಸಿ, ಪ್ರೀತಿ, ವಿಶ್ವಾಸ ಬಂಧುತ್ವದೊಂದಿಗೆ ಸಹೋದರ ಮತ್ತು ಸಹೋದರಿಯರ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವಾಗಿ ಈ ನಾಗ ಪಂಚಮಿ ಬರುವ ವರ್ಷದವರೆಗೆ ಹರುಷದಿಂದ ಇರುವಂತೆ ಮಾಡುತ್ತದೆ.