ಸಾರಾಂಶ
ಬಂಗಾರಪೇಟೆ : ನೂತನ ಸಂಸದ ಎಂ. ಮಲ್ಲೇಶಬಾಬು ಮುಂದೆ ಸಾಲು ಸಾಲು ಸವಾಲುಗಳು ಇದ್ದು, ಅವುಗಳನ್ನು ಅವರು ಎದುರಿಸುವಲ್ಲಿ ಸಫಲರಾಗುತ್ತಾರೆಯೇ ಎಂಬುದು ಜಿಲ್ಲೆಯಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ. ಮಲ್ಲೇಶಬಾಬು ೪೫ ವರ್ಷಗಳ ನಂತರ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿರುವುದು ಕಾರ್ಯಕರ್ತರಿಗೆ ಎಲ್ಲಿಲ್ಲದ ಸಂತಸ ತಂದಿದೆ. ಸಂಸದರಾಗಿ ಅವರು ಹೇಗೆ ಜಿಲ್ಲೆಗೆ ನ್ಯಾಯ ಕೊಡಿಸುತ್ತಾರೆ ಎಂಬುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ವ್ಯಕ್ತಿಗತವಾಗಿ ಮಲ್ಲೇಶಬಾಬು ಉತ್ತಮ ರಾಜಕಾರಣಿಯಾಗಿದ್ದು ಎಂತಹ ಪರಿಸ್ಥಿತಿಯನ್ನಾದರೂ ನಿಭಾಯಿಸಬಲ್ಲರು ಎಂಬುದು ಕಾರ್ಯಕರ್ತರ ಭಾವನೆ .ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆ
ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಸತತವಾಗಿ ೭ಬಾರಿ ಸಂಸದರಾದರೂ ಜಿಲ್ಲೆಗೆ ಅವರ ಕೊಡುಗೆ ಅಷ್ಟಕಷ್ಟೆ ಎಂಬು ಆರೋಪವಿದೆ. ಅಲ್ಲದೆ ಸ್ವಪಕ್ಷದ ನಾಯಕರೇ ಮುನಿಯಪ್ಪ ವಿರುದ್ದ ತಿರುಗಿ ಬಿದ್ದು ಸೋಲಿಸಿ ಬಿಜೆಪಿಯ ಎಸ್.ಮುನಿಸ್ವಾಮಿರನ್ನು ಗೆಲ್ಲಿಸಿದ್ದು ಈಗ ಇತಿಹಾಸ. ಮುನಿಸ್ವಾಮಿ ಅಧಿಕಾರಾವಧಿಯಲ್ಲಿಯೂ ಜಿಲ್ಲೆಯ ಪರಿಸ್ಥಿತಿ ಸುಧಾರಣೆ ಆಗಲಿಲ್ಲ ಎಂಬ ಟೀಕೆಗಳು ವ್ಯಕ್ತವಾಗಿವೆ.
ಈಗ ಅವರ ಜಾಗಕ್ಕೆ ಮಲ್ಲೇಶಬಾಬು ಆಯ್ಕೆಯಾಗಿದ್ದಾರೆ. ಮೊದಲು ಜಿಲ್ಲೆಗೆ ಶಾಶ್ವತವಾಗಿ ನೀರಾವರಿ ಯೋಜನೆ ರೂಪಿಸಬೇಕು, ದಶಕಗಳಿಂದ ನನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ಮರು ಜೀವ ತುಂಬಬೇಕು, ಈ ಹಿಂದಿನ ಸಂಸದರು ಕೆಜಿಎಫ್ ಬಿಜಿಎಂಎಲ್ ಪ್ರದೇಶದಲ್ಲಿ ಕಾರ್ಖಾನೆಗಳನ್ನು ಅಳವಡಿಸುವ ಭರವಸೆ ನೀಡಿದ್ದರು. ಅದನ್ನು ಜಾರಿಗೊಳಿಸುವ ಹೊಣೆ ಈಗಿನ ಸಂಸದರ ಮೇಲಿದೆ.
ಮೇಲ್ಸೇತುವೆ ನಿರ್ಮಾಣ ಹೊಣೆ
ಮಾಜಿ ಸಂಸದ ಮುನಿಸ್ವಾಮಿ ಅಧಿಕಾರದ ಕೊನೆ ದಿನಗಳಲ್ಲಿ ಪಟ್ಟಣದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೇಗೆರಿಸುವ ಕಾಮಗಾರಿಗೆ ಚಾಲನೆ ನೀಡಿದರು. ಬೂದಿಕೋಟೆ ವೃತ್ತದ ಬಳಿ ನಿತ್ಯ ಟ್ರಾಫಿಕ್ ಜಾಮ್ ತಪ್ಪಿಸಲು ಮೇಲ್ಸೇತುವೆ ನಿರ್ಮಾಣಕ್ಕೆ ೫ ವರ್ಷದಿಂದ ಒತ್ತಾಯ ಮಾಡಿದರೂ ಕೊನೆಗಳಿಗೆಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಯೋಜನೆಯೂ ಅನುಷ್ಠಾನವಾಗಬೇಕಿದೆ.
ಈಗ ಮಲ್ಲೇಶಬಾಬು ಜೆಡಿಎಸ್- ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಸಂಸದರು ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರ ಸಮನ್ವಯ ಸಾಧಿಸಿಕೊಂಡು ಸಾಗಬೇಕಿದೆ. ಇದು ದೊಡ್ಡ ಸವಾಲಿನ ಕೆಲಸ.
ಸವಾಲಾಗಲಿರುವ ಚುನಾವಣೆ
ಇದಲ್ಲದೆ ಮುಂಬರುವ ಜಿಪಂ,ಹಾಗೂ ತಾಪಂ ಚುನಾವಣೆಯಲ್ಲಿಯೂ ಮೈತ್ರಿ ಮುಂದುವರೆಯಲಿದ್ದು ದಶಕಗಳಿಂದ ಕಾಂಗ್ರೆಸ್ ಆಡಳಿತದಲ್ಲಿರುವ ಎರಡೂ ಆಡಳಿತ ಮಂಡಳಿಗಳನ್ನು ಕಸಿದುಕೊಳ್ಳುವುದು ಸಂಸದರ ಮುಂದಿರುವ ದೊಡ್ಡ ಸವಾಲು. ಜೆಡಿಎಸ್ ಪಕ್ಷದ ಹೆಚ್.ಡಿ.ಕುಮಾರಸ್ವಾಮಿ ಈಗ ಕೇಂದ್ರ ಸಚಿವರಾಗಿರುವುದರಿಂದ ಸಂಸದ ಮಲ್ಲೇಶಬಾಬು ಅವರ ನೆರವುಪಡೆದು ಕೋಲಾರ ಜಿಲ್ಲೆ ಅಭಿವೃದ್ದಿಗೆ ಮುಂದಾಗುವರೆ ಎಂಬುದು ಕಾದು ನೋಡಬೇಕು.