ಸಾರಾಂಶ
ಡಿಜಿಟಲ್ ಪೇಮೆಂಟ್ ಮಾಡೋದಾದ್ರೆ ಬರೋದೆ ಬೇಡ ! ಯುಪಿಎ ಪೇಮೆಂಟ್ ಮಾಡುತ್ತಿದ್ದವರ ಮೇಲೆ ವ್ಯಾಪಾರಿ ಸಿಟ್ಟು
ಕಾಫಿ ತಿಂಡಿಗಾಗಿ ನಗದು ಬದಲು ಯುಪಿಐ ಮೂಲಕ ಪೇಮೆಂಟ್ ಮಾಡುತ್ತಿದ್ದವರ ಮೇಲೆ ಮಾಲೀಕ ಸಿಟ್ಟಿಂದ ಹಲ್ಲು ಕಡಿಯುತ್ತಿದ್ದ. ಇದನ್ನು ನೋಡಿದ ಕಾಯಂ ಗಿರಾಕಿಯೊಬ್ಬರು ಸಮಾಧಾನದಿಂದ ‘ಏನ್ ಆತ್ರಿ, ಯಾಕೆ ಬೆಳಗ್ಗೆನೇ ಗರಂ ಆಗಿದ್ದೀರಿ’ ಅಂತ ಕೇಳಿದ್ದೇ ತಡ ಮೈಮೇಲೆ ಬಂದವರಂತೆ, ಯುಪಿಐ ಬಳಸಿದ್ದಕ್ಕೆ 20 ಲಕ್ಷ ಟ್ಯಾಕ್ಸ್ ಹಾಕಿದ್ದಾರೆ. ಅದೂ 2021ನೇ ಇಸ್ವಿಯಿಂದ. ಎಲ್ಲಿಂದ ತಂದು ಕಟ್ಟೋದು. ಇದಕ್ಕೆಲ್ಲ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ಹೇಳತೊಡಗಿದರು.
‘ನೆಕ್ಸ್ಟ್ ಬರುವಾಗ ಯಾವ ಪೋನ್ ಪೇನೂ ಇಲ್ಲ, ಜಿಪೇನೂ ಇಲ್ಲ. ಡಿಜಿಟಲ್ ಪೇಮೆಂಟ್ ಮಾಡೋದಾದ್ರೆ ಬರೋದೆ ಬೇಡ...’ ಎಂದು ಮಾಲೀಕ ಕೂಗಾಡುತ್ತಿದ್ದರೆ, ಬಂದ ಗ್ರಾಹಕರು ತಬ್ಬಿಬ್ಬು. ಈವರೆಗೆ ನಗು ನಗುತ್ತಾ ಬನ್ನಿ, ಹೇಗಿದ್ದೀರಿ ಎಂದು ಉಭಯಕುಶಲೋಪರಿ ವಿಚಾರಿಸುತ್ತಿದ್ದ ಮಾಲೀಕ ಬೆಳ್ಳಂಬೆಳಗ್ಗೆ ಕೆಂಡಾಮಂಡಲವಾಗಿ ಕೂಗಾಡುತ್ತಿದ್ದರೆ ಗ್ರಾಹಕರಿಗೆ ಹೇಗಾಗಬೇಡ...!
ಇಷ್ಟಕ್ಕೂ ಹೊಟೇಲ್ ಮಾಲೀಕ ಕೆಂಡಾಮಂಡಲವಾಗಲು 20 ಲಕ್ಷ ಟ್ಯಾಕ್ಸ್ ಕಟ್ಟುವಂತೆ ತೆರಿಗೆ ಅಧಿಕಾರಿಗಳು ನೀಡಿರುವ ನೋಟಿಸ್ ಕಾರಣವಾಗಿತ್ತು. ಆದರೆ ನೋಟಿಸ್ ನೀಡಲು ಗ್ರಾಹಕರೇ ಕಾರಣವೆಂದು ತನ್ನ ಸಿಟ್ಟು ಜನರ ಮೇಲೆ ತೋರಿಸತೊಡಗಿದ್ದ.
ನಡೆದಿದ್ದು ಇಷ್ಟೇ... ಕಾಫಿ ತಿಂಡಿಗಾಗಿ ನಗದು ಬದಲು ಯುಪಿಐ ಪೇಮೆಂಟ್ ಮಾಡುತ್ತಿದ್ದವರ ಮೇಲೆ ಮಾಲೀಕ
ಸಿಟ್ಟಿಂದ ಹಲ್ಲು ಕಡಿಯುತ್ತಿದ್ದ. ಇದನ್ನು ನೋಡಿದ ಕಾಯಂ ಗಿರಾಕಿಯೊಬ್ಬರು ಸಮಾಧಾನದಿಂದ ‘ಏನ್ ಆತ್ರಿ, ಯಾಕೆ ಬೆಳಗ್ಗೆನೇ ಗರಂ ಆಗಿದ್ದೀರಿ’ ಅಂತ ಕೇಳಿದ್ದೇ ತಡ ಮೈಮೇಲೆ ಬಂದವರಂತೆ, ಯುಪಿಐ ಬಳಸಿದ್ದಕ್ಕೆ 20 ಲಕ್ಷ ಟ್ಯಾಕ್ಸ್ ಹಾಕಿದ್ದಾರೆ. ಅದೂ 2021ನೇ ಇಸ್ವಿಯಿಂದ. ಎಲ್ಲಿಂದ ತಂದು ಕಟ್ಟೋದು. ಇದಕ್ಕೆಲ್ಲ ಡಿ.ಕೆ.ಶಿವಕುಮಾರ್ ಅವರೇ ಕಾರಣ ಎಂದು ಹೇಳತೊಡಗಿದರು.
ಅದಕ್ಕೆ ಪಕ್ಕದಲ್ಲೇ ನಿಂತಿದ್ದ ಮತ್ತೊಬ್ಬ ವ್ಯಕ್ತಿಯೊಬ್ಬ ಗ್ಯಾರಂಟಿಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ. ಅದಕ್ಕೆ ಸಿಕ್ಕಿದಕ್ಕೆಲ್ಲ ಟ್ಯಾಕ್ಸ್ ಹಾಕ್ತಿದ್ದಾರೆ ಅಂತ ಅಸಮಾಧಾನ ಹೊರ ಹಾಕಿದ. ಇದರಿಂದ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿ, ಹೋಟೆಲ್ ಮಾಲೀಕ ಇದಕ್ಕೆಲ್ಲ ರಾಜ್ಯ ಸರ್ಕಾರವೇ ಕಾರಣ ಅದರಲ್ಲೂ ಡಿ.ಕೆ.ಶಿವಕುಮಾರ್ ಅವರೇ ಮಾಸ್ಟರ್ ಮೈಂಡ್ ಎಂದು ಬಿಟ್ಟರು.
ಮತ್ತೊಬ್ಬರು ಸ್ವಾಮಿ, ಯುಪಿಐ ಬಳಕೆಗೂ ಟ್ಯಾಕ್ಸ್ ಗೂ ರಾಜ್ಯಕ್ಕೂ ಸಂಬಂಧ ಇಲ್ಲ, ಕೇಂದ್ರವೇ ಇದನ್ನು ತೀರ್ಮಾನ ಮಾಡುತ್ತೆ ಅಂತ ಹೇಳುವ ಪ್ರಯತ್ನ ಮಾಡಿದರೂ ಕೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಸೆಂಟ್ರಲ್ ಗವರ್ನ್‌ಮೆಂಟ್ ಮಾಡಿರ್ಬೋದು, ಆದರೆ ಕಮಿಷನ್ ರಾಜ್ಯ ಸರ್ಕಾರಕ್ಕೂ ಬರುತ್ತಲ್ಲ ಎಂದು ಹೋಟೆಲ್ ಮಾಲೀಕ ಸಮರ್ಥಿಸಿಕೊಳ್ಳುತ್ತಿರುವಾಗಲೇ ಪಕ್ಕದಲ್ಲಿ ನಿಂತಿದ್ದ ಮತ್ತೊಬ್ಬ ವ್ಯಕ್ತಿ ರಾಜ್ಯ, ಕೇಂದ್ರ ಎರಡೂ ಕಮಿಷನ್ ಗಿರಾಕಿಗಳು ಅಂತ ಗೊಣಗಿದ.
ಕುಂತ್ಕೋಳಪ್ಪ ನನಗ್ ಬುದ್ಧಿ ಹೇಳಾಕ್ ಬರಬ್ಯಾಡ...
ನೀನೇ ಎಲ್ಲ ಪ್ರಕರಣಗಳಿಗೂ ಕೋರ್ಟ್‌ಗೆ ಹೋಗುವುದಾದರೆ ಗದಗ-ಬೆಟಗೇರಿ ನಗರಸಭೆಗೆ ಇಬ್ಬರು ಕಮಿಷನರ್ ಅವರನ್ನು ನೇಮಿಸಲಿ, ಒಬ್ಬರು ಕೋರ್ಟ್‌ಗೆ ಇನ್ನೊಬ್ಬರು ಸಾರ್ವಜನಿಕರ ಕೆಲಸಕ್ಕೆ ಹೋಗಬೇಕಾದೀತು, ಸಾಕ್ ಕುಂತ್ಕೋಳಪ್ಪ ನನಗ್ ಬುದ್ಧಿ ಹೇಳಾಕ್ ಬರಬ್ಯಾಡ...
ಗದಗ ಜಿಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗದಗ-ಬೆಟಗೇರಿ ನಗರಸಭೆ ಕಮಿಷನರ್ ಅವರನ್ನು ಈ ರೀತಿ ತರಾಟೆಗೆ ತೆಗೆದುಕೊಂಡಿದ್ದು ನರಗುಂದ ಶಾಸಕ ಸಿ.ಸಿ.ಪಾಟೀಲ್.
ಆಗಿದ್ದೇನೆಂದರೆ ಕಮಿಷನರ್ ಕಚೇರಿ ಕೆಲಸ ಬಿಟ್ಟು, ಸದಾಕಾಲ ನ್ಯಾಯಾಲಯದಲ್ಲಿಯೇ ಇರುತ್ತಾರೆ. ಇದರಿಂದ ಆಡಳಿತ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂದು ಶಾಸಕರು ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಮಿಷನರ್ ರಾಜಾರಾಮ ಪವಾರ್, ನಗರಸಭೆ ಮೇಲೆ 47 ಪ್ರಕರಣಗಳಿವೆ. ಅದಕ್ಕಾಗಿ ಕೋರ್ಟ್‌ಗೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದಾಗ ಆಕ್ರೋಶಗೊಂಡ ಸಿ.ಸಿ.ಪಾಟೀಲ್, ನಿಮ್ಮ ಪರ ವಕೀಲರು ಇರುತ್ತಾರೆ. ನನಗೂ ಕಾನೂನು ಗೊತ್ತಿದೆ, ನೀನೇ ಎಲ್ಲ ಪ್ರಕರಣಗಳಿಗೂ ನ್ಯಾಯಾಲಯಕ್ಕೆ ಹೋಗೋದಾದರೆ, ಗದಗ ನಗರಸಭೆಗೆ ಇಬ್ಬರು ಪೌರಾಯುಕ್ತರ ನೇಮಿಸೋಣ, ಒಬ್ಬರು ಆಡಳಿತ ನೋಡ್ಕೊಳ್ಳಲಿ, ನೀನು ನ್ಯಾಯಾಲಯಕ್ಕೆ ಓಡಾಡು ಎಂದು ಹೇಳಿದ್ದಲ್ಲದೆ, ಕುಂತ್ಕೋಳಪ್ಪ ನನಗ್ ಬುದ್ದಿ ಹೇಳಾಕ್ ಬರಬ್ಯಾಡ ಎಂದಾಗ ಅಧಿಕಾರಿ ತಬ್ಬಿಬ್ಬಾದರು.
ಆಸ್ಪತ್ರೆ ಓಪಿಡಿ ರಿಜಿಸ್ಟರ್‌ನಲ್ಲಿ ಸಿನಿಮಾ ಹಾಡು ಬರೆದದ್ಯಾಕೆ..!?
‘ಪೂಜಿಸಲೆಂದೇ ಹೂಗಳ ತಂದೆ, ದರುಶನ ಕೋರಿ ನಾ ನಿಂದೇ, ತೆರೆಯೋ ಬಾಗಿಲನು ರಾಮ...’
‘ಮೋಡದ ಮೇಲೆ ಚಿನ್ನದ ನೀರು, ಚೆಲ್ಲುತ ಸಾಗಿದೆ ಹೊನ್ನಿನ ತೇರು, ಮಾಣಿಕ್ಯದಾರತಿ ಉಷೆ ತಂದಿಹಳು
ತಾಮಸವೇಕಿನ್ನು ಸ್ವಾಮಿ...’
ಕನ್ನಡ ಸಿನಿಮಾದ ಜನಪ್ರಿಯ ಗೀತೆಯ ಈ ಸಾಲುಗಳು ಆಸ್ಪತ್ರೆಯೊಂದರ ಹೊರರೋಗಿಗಳ ಮಾಹಿತಿ ರಿಜಿಸ್ಟರ್‌ನ ಪುಟಗಳನ್ನು ತೆರೆಯುತ್ತಿಂತೆ ನೋಡೋರ್ ಕಣ್ಣಿಗೆ ರಾಚಿದ್ರೆ ಹೇಗಾಗಬೇಡ? ಅದೂ ಇನ್ಸ್‌ಪೆಕ್ಷನ್‌ಗೆ ಅಂತ ಹೋಗಿದ್ದವರ ಕಣ್ಣಿಗೆ ಬಿದ್ದರೆ ಕೆರಳಿ ಕೆಂಡಾಮಂಡಲವಾಗದೆ ಇನ್ನೇನು ತಾನೆ ಆಗಲು ಸಾಧ್ಯ ಹೇಳಿ?
ಜೇವರ್ಗಿ ಪಟ್ಟಣದಲ್ಲಿ ಮೊನ್ನೆ ಹೀಗೆ ಆಯ್ತು. ಬಿಸಿಯೂಟ ಉಂಡು ಅಸ್ವಸ್ಥರಾಗಿದ್ದ ಮಾರಡಗಿ (ಎಸ್‌ಎ) ಶಾಲಾ ಮಕ್ಕಳ ಆರೋಗ್ಯ ವಿಚಾರಿಸೋದಲ್ದೆ, ಆಸ್ಪತ್ರೆ ಪರಿಶೀಲನೆಗೆಂದು ಕಲಬುರಗಿ ಲೋಕಾಯುಕ್ತ ಎಸ್ಪಿ, ಡಿವೈಎಸ್ಪಿ, ಪಿಐಗಳು ಸೇರಿದ್ಹಂತೆ ಎಂಟ್ಹತ್ತು ಜನರ ತಂಡ ಆಸ್ಪತ್ರೆ ಓಪಿಡಿ ವಿಭಾಗದಲ್ಲಿನ ರಿಜಿಸ್ಟರ್ ಪುಟಗಳನ್ನು ತೆರೆಯುತ್ತಿದ್ದಂತೆ ದಾಖಲಾದ ಶಾಲಾ ಮಕ್ಕಳ ಹೆಸರು ಅಲ್ಲಿ ಕಾಣಲೇ ಇಲ್ವಂತೆ!
ಮಕ್ಕಳ ಹೆಸರಿರಬೇಕಾದ ಜಾಗದಲ್ಲಿ ಪೂಜಿಸಲೆಂದೆ ಹಾಡು, ರೇಣುಕಾ ದೇವಿ ಅಷ್ಟೋತ್ತರ ನಾಮಾವಳಿ ಕಂಡು ಗರಂ ಆದ ಲೋಕಾಯುಕ್ತ ತಂಡ ಸಿಬ್ಬಂದಿ ಯಡವಟ್ಟಿಗೆ ರೇಗಿದ್ದಷ್ಟೇ ಅಲ್ಲ, ಇದೇನಾ ನೀವ್‌ಗಳು ಮಾಡೋ ಕೆಲ್ಸ, ಓಪಿಡಿಯಲ್ಲಿ ರೋಗಿಗಳ ದಾಖಲೆ ಬದಲಿಗೆ ಸಿನಿಮಾ ಹಾಡು ಬರೆದಿದ್ದೀರಲ್ಲ..? ಎಂದು ಆಸ್ಪತ್ರೆ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡರಂತೆ.
ಇಷ್ಟಕ್ಕೂ ಓಪಿಡಿ ರಿಜಿಸ್ಟರ್‌ನಲ್ಲಿ ಸಿನಿಮಾ ಹಾಡು, ಮಂತ್ರಗಳನ್ನು ಬರೆದಿದ್ಯಾರೆಂದು ನಡೆದ ತೆಹಕೀಕತ್ (ತನಿಖೆ) ನಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಾರ್ಥನಾ ಗೀತೆ, ಸ್ತ್ರೋತ್ರ ಹಾಡುವ ಹೊಣೆ ಹೊತ್ತಿದ್ದ ಆಸ್ಪತ್ರೆ ಸ್ಟಾಫ್ ಒಬ್ರು ಪ್ರ್ಯಾಕ್ಟೀಸ್ ಮಾಡಲೆಂದು ಹೀಗೆಲ್ಲ ಹಾಡು, ಹರಿಕಥೆ ಬರೆದು ಓಪಿಡಿ ರಿಜಿಸ್ಟರ್ ಪುಟಗಳನ್ನು ತುಂಬಿಸಿದ್ರೆಂಬ ಅಂಶ ಪತ್ತೆಯಾಗಿದೆ.
ಮಾಡಿದ್ದುಣ್ಣೋ ಮಾರಾಯ ಎಂಬಂತೆ ಮಾಡಿದ ಯಡವಟ್ಟಿಗೆ ಕಾರಣ ಕೇಳಿ ಕಲಬುರಗಿ ಡಿಎಚ್‌ಓ ನೀಡಿರುವ ಶೋಕಾಸ್ ನೋಟೀಸ್ ಈಗ ದವಾಖಾನಿಯಲ್ಲೇ ಕುಂತು ಓಪಿಡಿ ರಿಜಿಸ್ಟರ್‌ನಲ್ಲೇ ಹಾಡಿನ ಪ್ರ್ಯಾಕ್ಟೀಸ್ ಮಾಡಿದ್ದ ಸಿಬ್ಬಂದಿ ಕೈ ಸೇರಿದೆಯಂತೆ!
-ಸಂಪತ್ ತರೀಕೆರೆ
-ಶಿವಕುಮಾರ ಕುಷ್ಟಗಿ
-ಶೇಷಮೂರ್ತಿ ಅವಧಾನಿ