ಹಲವು ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಹರಾಜಿಗೆ ಬಿಬಿಎಂಪಿಯಿಂದ ನೋಟಿಸ್‌

| Published : Jan 23 2025, 02:02 AM IST / Updated: Jan 23 2025, 05:06 AM IST

ಹಲವು ವರ್ಷದಿಂದ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿ ಹರಾಜಿಗೆ ಬಿಬಿಎಂಪಿಯಿಂದ ನೋಟಿಸ್‌
Share this Article
  • FB
  • TW
  • Linkdin
  • Email

ಸಾರಾಂಶ

ನಗರದಲ್ಲಿ ಹಲವು ವರ್ಷದಿಂದ ಆಸ್ತಿ ತೆರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಆರು ಆಸ್ತಿಗಳನ್ನು ಹರಾಜು ಹಾಕಲು ಆಸ್ತಿಗಳ ಮಾಲೀಕರಿಗೆ ಬಿಬಿಎಂಪಿ ಹರಾಜು ನೋಟಿಸ್‌ ಜಾರಿಗೊಳಿಸಿದೆ.

  ಬೆಂಗಳೂರು : ನಗರದಲ್ಲಿ ಹಲವು ವರ್ಷದಿಂದ ಆಸ್ತಿ ತೆರಿಗೆ ಪಾವತಿ ಮಾಡದೇ ಬಾಕಿ ಉಳಿಸಿಕೊಂಡ ಆರು ಆಸ್ತಿಗಳನ್ನು ಹರಾಜು ಹಾಕಲು ಆಸ್ತಿಗಳ ಮಾಲೀಕರಿಗೆ ಬಿಬಿಎಂಪಿ ಹರಾಜು ನೋಟಿಸ್‌ ಜಾರಿಗೊಳಿಸಿದೆ.

ಆರಂಭಿಕವಾಗಿ ದಾಸರಹಳ್ಳಿ ವಲಯಕ್ಕೆ ಸೇರಿದ ಎರಡು ಪೂರ್ವ, ಬೊಮ್ಮನಹಳ್ಳಿ, ಆರ್‌ ಆರ್‌ ನಗರ ಹಾಗೂ ಪಶ್ಚಿಮ ವಲಯಕ್ಕೆ ಸೇರಿದ ತಲಾ ಒಂದು ಆಸ್ತಿಗಳ ಮಾಲೀಕರಿಗೆ ನೋಟಿಸ್‌ ನೀಡಲಾಗಿದೆ.

ದಾಸರಹಳ್ಳಿಯ ಎಂ.ರಂಗಪ್ಪ ಎಂಬುವರ ಮಾಲೀಕತ್ವದ ಕಟ್ಟಡದಿಂದ ಒಟ್ಟು 1.85 ಕೋಟಿ ರು. ಆಸ್ತಿ ತೆರಿಗೆ ಬಾಕಿ ಇದೆ. ಅದನ್ನು 12.92 ಕೋಟಿ ರು.ಗೆ ಹಾಗೂ ಶಂಕರೇಗೌಡ ಎಂಬುವವರಿಗೆ ಸೇರಿದ ಆಸ್ತಿಯಿಂದ 30.99 ಲಕ್ಷ ರು. ಆಸ್ತಿ ತೆರಿಗೆ ಬಾಕಿ ಇದೆ. ಅದನ್ನು 15.61 ಕೋಟಿ ರು. ಹರಾಜು ಹಾಕಲು ನೋಟಿಸ್‌ ನೀಡಿದೆ.

ಬೊಮ್ಮನಹಳ್ಳಿಯ ಎಂ.ಕುಮಾರ್‌ ಎಂಬುವವರು 31.94 ಲಕ್ಷ ರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, 6.62 ಕೋಟಿ ರು.ಗೆ ಆಸ್ತಿ ಹರಾಜಿಗೆ ನೋಟಿಸ್‌ ನೀಡಿದೆ. ಪೂರ್ವ ವಲಯದ ಮೊಹಮ್ಮದ್‌ ಇಶಾಕ್‌ ಎಂಬುವವರು 11.22 ಲಕ್ಷ ರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, 10.49 ಕೋಟಿ ರು.ಗೆ ಆಸ್ತಿ ಹರಾಜು ಹಾಕುವುದಕ್ಕೆ ನೋಟಿಸ್‌ ನೀಡಲಾಗಿದೆ.

ಆರ್‌.ಆರ್‌. ನಗರ ಚಿಟ್ಟಿಬಾಬು ಎಂಬುವವರು 4.36 ಲಕ್ಷ ರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, 70.68 ಕೋಟಿ ರು. ಹರಾಜಿಗೆ ನೋಟಿಸ್‌ ನೀಡಲಾಗಿದೆ. ಇನ್ನೂ ಪಶ್ಚಿಮ ವಲಯದ ಪಿಲ್ಲಮ್ಮ ಅವರು 2.02 ಕೋಟಿ ರು. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, 25.92 ಕೋಟಿ ರು.ಗೆ ಹರಾಜಿಗೆ ನೋಟಿಸ್‌ ನೀಡಲಾಗಿದೆ.

ಈ ಆರು ಆಸ್ತಿಗಳ ಹರಾಜು ಪ್ರಕ್ರಿಯೆ ಫೆ.5, 6,7 ಹಾಗೂ ಫೆ 10 ರಂದು ನಡೆಯಲಿದೆ ಎಂದು ನೋಟಿಸ್‌ ನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ವಿವರಣೆ ನೀಡಿರುವ ಬಿಬಿಎಂಪಿಯ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್, ಈಗಾಗಲೇ ಬಾಕಿ ಇರುವ ಆಸ್ತಿ ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಮಾಲೀಕರಿಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ. ಬೇಡಿಕೆ ನೋಟಿಸ್ ನೀಡಲಾಗಿದೆ. ಆದರೂ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಹೀಗಾಗಿ, ಬಿಬಿಎಂಪಿ ಕಾಯ್ದೆ 2020 ರ ಸೆಕ್ಷನ್ 156 ಉಪಪ್ರಕರಣ 5 ರ ಅಡಿಯಲ್ಲಿ ಹರಾಜು ಹಾಕಿ ಆಸ್ತಿ ತೆರಿಗೆ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಹರಾಜಿನಲ್ಲಿ ಬಂದ ಹಣದಲ್ಲಿ ಬಾಕಿ ಇರುವ ಆಸ್ತಿ ತೆರಿಗೆ ವಸೂಲಿ ಮಾಡಿಕೊಂಡು ಉಳಿದ ಹಣವನ್ನು ಮಾಲೀಕರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಮುಂದಿನ ವಾರದಿಂದ ಹೆಚ್ಚು ಆಸ್ತಿ ಹರಾಜು:

ಈಗಾಗಲೇ ವಾಣಿಜ್ಯ ಕಟ್ಟಡಗಳನ್ನು ಸೀಜ್‌ ಮಾಡುವ ಕೆಲಸ ಮಾಡಲಾಗಿದೆ. ಆದರೂ ಪಾವತಿ ಮಾಡದ ಮಾಲೀಕರ ಕಟ್ಟಡಗಳನ್ನು ಇದೀಗ ಅಂತಿಮವಾಗಿ ಹರಾಜು ಹಾಕಲು ಕ್ರಮ ಕೈಗೊಳ್ಳಲಾಗಿದೆ. ಇದೀಗ ವಲಯಕ್ಕೆ ಒಂದು ಅಥವಾ ಎರಡು ಆಸ್ತಿ ಹರಾಜು ಪ್ರಕ್ರಿಯೆ ನಡೆಸುವುದಕ್ಕೆ ಸೂಚಿಸಲಾಗಿದೆ. ಮುಂದಿನ ವಾರದಿಂದ ಹೆಚ್ಚಿನ ಸಂಖ್ಯೆಯ ಸುಸ್ತಿದಾರರ ಆಸ್ತಿಗಳನ್ನು ಹರಾಜು ಹಾಕಲು ನಿರ್ಧರಿಸಲಾಗಿದೆ. ನಗರದಲ್ಲಿ ಸುಮಾರು 2 ಲಕ್ಷ ಆಸ್ತಿಗಳು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು, ಮಾಲೀಕರು ತ್ವರಿತವಾಗಿ ಬಾಕಿ ಇರುವ ಆಸ್ತಿ ತೆರಿಗೆ ಪಾವತಿ ಮಾಡುವುದಕ್ಕೆ ಮುಂದಾಗಬೇಕು ಎಂದು ಕೋರಿದ್ದಾರೆ.

ಜ.19ರಂದೇ ಕನ್ನಡಪ್ರಭ ವಿಶೇಷ ವರದಿ:

ಹಲವು ವರ್ಷದಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಹರಾಜು ಹಾಕಲು ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದ್ದು, ಈ ವಾರ ಹರಾಜು ನೋಟಿಸ್‌ ನೀಡಲಿದೆ ಎಂದು ‘ಕನ್ನಡಪ್ರಭ’ ಜ.19 ರಂದೇ ವಿಶೇಷ ವರದಿ ಪ್ರಕಟಿಸಿತ್ತು.