ಆ ಕರಾಳ ದಿನ
ಭಾರತದ ಕಿರೀಟದಂತಿರುವ ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬೈಸರನ್ ಕಣಿವೆ ‘ಭಾರತದ ಮಿನಿ ಸ್ವಿಜರ್ಲೆಂಡ್’ ಎಂದೇ ಸುಪ್ರಸಿದ್ಧ. ಕುದುರೆಯನ್ನೇರಿ ಪ್ರೀತಿಪಾತ್ರರೊಂದಿಗೆ ಇಲ್ಲಿಗೆ ಬಂದು ಪ್ರಕೃತಿ ಸೌಂದರ್ಯವನ್ನು ಸವಿಯುತ್ತ ಸ್ವರ್ಗಸುಖದಲ್ಲಿ ತೇಲುತ್ತಿದ್ದ ಪ್ರವಾಸಿಗರ ಪಾಲಿಗೆ ಏ.22ರ ಮಧ್ಯಾಹ್ನ 3 ಗಂಟೆಗೆ ನರಕವೇ ಕಣ್ಮುಂದೆ ಸೃಷ್ಟಿಯಾಗಿತ್ತು. ಹಸಿರು ಹುಲ್ಲುಹಾಸಿನ ಮೇಲೆ ಅದೆಷ್ಟೋ ಜನರ ನೆತ್ತರು ಚೆಲ್ಲಾಡಿತ್ತು.
ಲಷ್ಕರ್-ಎ-ತೊಯ್ಬಾ ಸಂಘಟನೆ ಜತೆ ನಂಟಿದ್ದ ಉಗ್ರರು ಇದ್ದಕ್ಕಿದ್ದಂತೆ ಬೈಸರನ್‌ನಲ್ಲಿ ಪ್ರತ್ಯಕ್ಷವಾಗಿ, ಪ್ರವಾಸಿಗರ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದರು. ಅದಕ್ಕೂಮೊದಲು ಅವರ ಜಾತಿ ಧರ್ಮ ಖಚಿತಪಡಿಸಿಕೊಂಡರು ಎನ್ನಲಾಗಿದೆ. ಬಳಿಕ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ 26 ಪ್ರವಾಸಿಗರನ್ನು ಕೊಂದರು. ಇವರಲ್ಲಿ ಇಬ್ಬರು ಕನ್ನಡಿಗರೂ ಇದ್ದರು. ಇದು 2019ರ ಪುಲ್ವಾಮಾ ದಾಳಿಯ ಬಳಿಕ ಕಾಶ್ಮೀರದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿ ಎಂದೇ ಕರೆಸಿಕೊಂಡಿತು. ಈ ದಾಳಿ ನಡೆಸಿದ 7 ಉಗ್ರರ ಪೈಕಿ 5 ಜನ ಪಾಕ್‌ನವರಾಗಿದ್ದರು.
ದಾಳಿಯಿಂದ ನಲುಗಿದ ಕಾಶ್ಮೀರ ಪ್ರವಾಸೋದ್ಯಮ
ಪಹಲ್ಗಾಂ ದಾಳಿಯ ಬಳಿಕ ಕಾಶ್ಮೀರದ ಪ್ರವಾಸಕ್ಕೆ ಸನ್ನದ್ಧರಾಗಿದ್ದವರೆಲ್ಲಾ ಜೀವಭಯದಿಂದ ಆ ಆಸೆಯನ್ನೇ ಕೈಬಿಟ್ಟರು. ಇದರಿಂದ ನರಳಿದ್ದು, ಅಲ್ಲಿನ ಸ್ಥಳೀಯರ ಹೊಟ್ಟೆ ತುಂಬಿಸುತ್ತಿದ್ದ ಪ್ರವಾಸೋದ್ಯಮ ಕ್ಷೇತ್ರ. ನೋಡನೋಡುತ್ತಿದ್ದಂತೆ ಹೊಟೆಲ್, ವಿಮಾನಗಳ ಬುಕಿಂಗ್ ಶೂನ್ಯಕ್ಕಿಳಿಯಿತು. ಆಗಿದ್ದ ಬುಕಿಂಗ್‌ಗಳು ಕ್ಯಾನ್ಸಲ್ ಆದವು. ಅದಾಗಲೇ ಕಾಶ್ಮೀರ ತಲುಪಿದ್ದವರು ತವರಿಗೆ ಮರಳುವ ತುರ್ತಿನಲ್ಲಿದ್ದರು. ಕೆಲವೇ ದಿನಗಳಲ್ಲಿ ಕಾಶ್ಮೀರದ ಬಹುತೇಕ ಪ್ರವಾಸಿ ತಾಣಗಳು ನಿರ್ಜನವಾದವು. ಕುದುರೆ ನಿರ್ವಾಹಕರು, ಕಣಿವೆ ಹಾಗೂ ಅದರ ದಾರಿಯಲ್ಲಿದ್ದ ವ್ಯಾಪಾರಿಗಳ ಆದಾಯದ ಮೂಲಕ್ಕೆ ಕತ್ತರಿ ಬಿತ್ತು. ಒಟ್ಟಿನಲ್ಲಿ ಪ್ರವಾಸೋದ್ಯಮದಿಂದ ರಾಜ್ಯದ ಬೊಕ್ಕಸಕ್ಕೆ ಬರುತ್ತಿದ್ದ ಪಾಲು ಕ್ಷೀಣಿಸಿತು.
ಭಾರತದ ಪ್ರತೀಕಾರದ ಹೆಜ್ಜೆ
ಪಹಲ್ಗಾಂ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಸೌದಿಯಿಂದ ದೆಹಲಿಗೆ ದೌಡಾಯಿಸಿದ ಪ್ರಧಾನಿ ನರೇಂದ್ರ ಮೋದಿ, ‘ಉಗ್ರರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಘರ್ಜಿಸಿದರು ಏ.23ರಂದು ರಾಜತಾಂತ್ರಿಕ ಪ್ರತೀಕಾರದ ಭಾಗವಾಗಿ ಉಗ್ರಪೋಷಕ ಪಾಕ್ ಮೇಲೆ 6 ನಿರ್ಬಂಧ ಹೇರಲಾಯಿತು. ಸಿಂಧೂ ಜಲ ಒಪ್ಪಂದ ಸ್ಥಗಿತ, ಅಟ್ಟಾರಿ-ವಾಘಾ ಗಡಿ ಬಂದ್‌ನಂತಹ ಕ್ರಮಗಳು ಪ್ರಮುಖವಾಗಿದ್ದವು. ಆದರೆ 26 ಜೀವಗಳ ಬಲಿಗೆ ಇಷ್ಟು ಸಾಲದು ಎಂಬ ಇಂಗಿತ ಸರ್ಕಾರದ ಮನಸ್ಸಿನಲ್ಲಿತ್ತು. ಹೀಗಾಗಿ ಭಾರತ ಸೇನೆ ಯುದ್ಧ ತಾಲೀಮು (ಮಾಕ್ ಡ್ರಿಲ್) ಆರಂಭಿಸಿತ್ತು. ಇದು ಪಾಕ್ ಮೇಲಿನ ದಾಳಿಯ ಮುನ್ಸೂಚನೆ ಆಗಿತ್ತು.
ಪಾಕ್ ಹರಿಸಿದ ನೆತ್ತರಿಗೆ ಸಿಂದೂರ ಉತ್ತರ
ಮಾಕ್ ಡ್ರಿಲ್ ಬೆನ್ನಲ್ಲೇ ಭಾರತ ಮೇ 7ರ ನಸುಕಿನಲ್ಲಿ ಯಾರೂ ಊಹಿಸದ, ಆದರೆ ಎಲ್ಲರೂ ಬಯಸಿದ ಪ್ರತೀಕಾರ ಕ್ರಮ ಆರಂಭಿಸಿತ್ತು. 25 ನಿಮಿಷ ನಡೆದ ‘ಆಪರೇಷನ್ ಸಿಂದೂರ’ದಲ್ಲಿ, ಪಾಕಿಸ್ತಾನ ತನ್ನ ಆಸ್ತಿಯೆಂದು ಪರಿಗಣಿಸುವ 9 ಉಗ್ರನೆಲೆ ಧ್ವಂಸವಾಗಿದ್ದವು. ಜೈಷ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಕುಟುಂಬದ 10 ಮಂದಿ ಹತರಾಗಿದ್ದರು. ಈ ಕಾರ್ಯಾಚರಣೆ ಬಗ್ಗೆ ದೇಶಕ್ಕೆ ಮಾಹಿತಿ ನೀಡಿದ್ದು ಕರ್ನಾಟಕದ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್.
ಈ ಅನಿರೀಕ್ಷಿತ ದಾಳಿಗೆ ತತ್ತರಿಸಿದ ಪಾಕಿಸ್ತಾನ, ಜಮ್ಮು, ಪಂಜಾಬ್, ರಾಜಸ್ಥಾನದ 15 ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಿತು. ಆದರೆ ಗಡಿ ಕಾಯಲು ನಿಂತಿದ್ದ ಸುದರ್ಶನ ಚಕ್ರದ (ಎಸ್-400 ವಾಯುರಕ್ಷಣಾ ವ್ಯವಸ್ಥೆ) ಮುಂದೆ ಆಟ ನಡೆಯಲಿಲ್ಲ. ಇತ್ತ ಭಾರತ ಮಾತ್ರ ತನ್ನ ಬತ್ತಳಿಕೆಯಲ್ಲಿದ್ದ ಬ್ರಹ್ಮೋಸ್ ಕ್ಷಿಪಣಿ, ಹ್ಯಾಮರ್ ಬಾಂಬ್, ಆತ್ಮಾಹುತಿ ಡ್ರೋನ್, ಸ್ಕ್ಯಾಲ್ಪ್ ಕ್ಷಿಪಣಿಯಂತಹ ಬಲಿಷ್ಠ ಅಸ್ತ್ರಗಳನ್ನು ಹೊರತೆಗೆದು, ಪಾಕಿಸ್ತಾನದ ಒಳಗೆ ಇನ್ನಷ್ಟು ನುಗ್ಗಿ ತನ್ನ ಗುರಿಗಳ ಪಟ್ಟಿಯಿಂದ ಒಂದೊಂದೇ ಹೆಸರುಗಳನ್ನು ಅಳಿಸುತ್ತಾ ಸಾಗಿತ್ತು.
ಭಾರತದ ಏಟನ್ನು ಸಹಿಸಲಾಗದೆ ಪಾಕ್ ತನ್ನನ್ನು ತಾನು ಸಂತ್ರಸ್ತನೆಂಬಂತೆ ಬಿಂಬಿಸಿಕೊಳ್ಳಲು ಯತ್ನಿಸುತ್ತಿದ್ದರೆ, ಅತ್ತ ಅಮೆರಿಕ ಸೇರಿ ಕೆಲ ರಾಷ್ಟ್ರಗಳು ಭಾರತಕ್ಕೆ ಬುದ್ಧಿವಾದ ಹೇಳಲು ಮುಂದಾದವು. ಅದಕ್ಕೆ ನಮ್ಮ ಸರ್ಕಾರ ಅಥವಾ ಸೇನೆ ಕಿವಿಗೊಡಲಿಲ್ಲ. ಕೊನೆಗೆ ಪಾಕಿಸ್ತಾನದ ಡಿಜಿಎಂಒ ಕದನವಿರಾಮಕ್ಕೆ ಅಂಗಲಾಚಿದ್ದರು. ಇದಕ್ಕೆ ಸ್ಪಂದಿಸಿ ಭಾರತ ಮೇ 10ರ ಸಂಜೆ ಜಂಟಿಯಾಗಿ ಯುದ್ಧಕ್ಕೆ ಅಲ್ಪವಿರಾಮವನ್ನಿಟ್ಟಿತು. ಆದರೆ ಅತ್ತ ಕಪಟಿ ಪಾಕ್ ತನ್ನ ಬುದ್ಧಿಯನ್ನು ಬಿಡಲಿಲ್ಲ. ಕತ್ತಲಾವರಿಸುತ್ತಿದ್ದಂತೆ ಮತ್ತೆ ದಾಳಿಯನ್ನಾರಂಭಿಸಿತು. ಇದನ್ನು ಹಿಮ್ಮೆಟ್ಟಿಸಿ ಎದಿರೇಟು ನೀಡುವಲ್ಲಿ ಭಾರತ ಹಿಂದೆ ಬೀಳಲಿಲ್ಲ.
ವರ್ಷದ ಹಿಂದೆ ಭಾರತದ ದಾಳಿಯಿಂದ ನಾಶವಾಗಿದ್ದ ವಾಯುನೆಲೆಗಳಲ್ಲಿ ಕೆಲವನ್ನು ಪಾಕಿಸ್ತಾನ ಇನ್ನೂ ರಿಪೇರಿ ಮಾಡುತ್ತಲೇ ಇದೆ. ಇತ್ತೀಚೆಗಷ್ಟೇ ಮುರೀದ್‌ನಲ್ಲಿರುವ ಏರ್‌ಬೇಸ್ ರಿಪೇರಿ ಸಾಧ್ಯವಾಗದೆ, ತಾನೇ ಅದನ್ನು ನೆಲಸಮ ಮಾಡಿತ್ತು.
ಮನಕುಲುಕಿದ ದಾಳಿ ಸಂತ್ರಸ್ತೆಯ ಚಿತ್ರ
ತಮ್ಮವರನ್ನು ಕಳೆದುಕೊಂಡು ರೋಧಿಸುತ್ತಿರುವ ಎಲ್ಲರ ದುಃಖ ಸಮಾನವಾದರೂ, ರಕ್ತದ ಮಡುವಾಗಿದ್ದ ಬೈಸರನ್ ಕಣಿವೆಯಲ್ಲಿ, 5 ದಿನದ ಹಿಂದಷ್ಟೇ ಸಪ್ತಪದಿಗೆ ಜತೆಯಾಗಿದ್ದ ನೌಕಾಪಡೆ ಅಧಿಕಾರಿ ವಿನಯ್ ನರ್ವಾಲ್‌ರ ಮೃತದೇಹದ ಬಳಿ ನಿಸ್ತೇಜವಾಗಿ ಕುಳಿತಿದ್ದ ಪತ್ನಿ ಹಿಮಾಂಶಿಯ ಚಿತ್ರ ಇಡೀ ದೇಶದ ಕರುಳನ್ನು ಹಿಂಡಿತ್ತು. ನವಜೀವನಕ್ಕೆ ಮುನ್ನುಡಿ ಬರೆಯಲು ಬಂದಿದ್ದ ಜೋಡಿಯ ಕತೆ ಶುರುವಾಗುವ ಮೊದಲೇ ಮುಗಿದದ್ದಕ್ಕೆ ಕೋಟ್ಯಂತರ ಮನಗಳು ಮರುಗಿದ್ದವು.
ಹಿಮಾಂಶಿ ಈಗ ಹೇಗಿದ್ದಾರೆ?
ಪಹಲ್ಗಾಂ ದಾಳಿಗೆ ವರ್ಷವಾದರೂ, ಅದರಲ್ಲಿ ಮೃತಪಟ್ಟ ವಿನಯ್ ನರ್ವಾಲ್‌ರ ನೆನಪು ಅವರ ಪರಿವಾರದ ಮನಸ್ಸಲ್ಲಿ ಹಸಿಯಾಗಿಯೇ ಉಳಿದಿದೆ. ಅವರ ತಂದೆ ರಾಜೇಶ್ ನರ್ವಾಲ್ ಮಾತನಾಡಿ, ‘ಪುತ್ರನನ್ನು ಕಳೆದುಕೊಂಡ ನೋವನ್ನು ಒಬ್ಬ ತಂದೆ ಈ ರೀತಿ ಹೊತ್ತುಕೊಂಡು ತಿರುಗಬಾರದು. ಆದರೆ ನಾನಿನ್ನೂ ಅದನ್ನೇ ಮಾಡುತ್ತಿದ್ದೇನೆ. ಸಮಯಕ್ಕೂ ಈ ನೋವನ್ನು ನುಂಗಲು ಆಗುತ್ತಿಲ್ಲ’ ಎಂದು ದುಃಖ ತೋಡಿಕೊಂಡಿದ್ದಾರೆ.
ಐದೇ ದಿನಕ್ಕೆ ವಿಧವೆಯಾದ ಹಿಮಾಂಶಿ ಅವರ ಬಗ್ಗೆ ಮಾತನಾಡುತ್ತಾ, ‘ಆಕೆ ನಮ್ಮ ಮಗಳಿದ್ದಂತೆ. ಇನ್ನೂ ಒಡನಾಟ ಇಟ್ಟುಕೊಂಡಿದ್ದಾಳೆ. ಮದುವೆಗೆ ಮುಂಚೆ ಮಾಡುತ್ತಿದ್ದ ನೌಕರಿಯನ್ನು ಅವಳು ಈಗಲೂ ಮಾಡುತ್ತಿದ್ದಾಳೆ. ಹೃದಯ ಭಾರವಾಗಿದ್ದರೂ, ಕೆಲಸದಿಂದ ಮನಸ್ಸನ್ನು ವ್ಯಸ್ತವಾಗಿಡುವುದು ಉತ್ತಮ’ ಎಂದು ರಾಜೇಶ್ ಹೇಳಿದ್ದಾರೆ.
ಬಂದಾದ 50 ಪ್ರವಾಸಿ ತಾಣಗಳಲ್ಲಿ ಅರ್ಧ ಮಾತ್ರ ಓಪನ್
ಪಹಲ್ಗಾಂ ದಾಳಿಯ ನಂತರ ಮುಚ್ಚಿಹೋಗಿದ್ದ ಕಾಶ್ಮಿರದ ಪ್ರವಾಸಿ ತಾಣಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ದಾಳಿಯ ಬಳಿಕ ಮುಚ್ಚಲಾಗಿದ್ದ 50 ತಾಣಗಳ ಪೈಕಿ ಅರ್ಧದಷ್ಟನ್ನು ತೆರೆಯಲಾಗಿದೆ. ಆದರೆ ಪ್ರವಾಸಿಗರ ಸಂಖ್ಯೆ ಮೊದಲಿನಂತಾಗಲು ಕೆಲ ಕಾಲ ಹಿಡಿಸುತ್ತದೆ ಎಂದು ಸಿಎಂ ಒಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ತಾಣಗಳು ಮೇ 9ರ ಬಳಿಕ ಪ್ರವಾಸಿಗರಿಗೆ ಮುಕ್ತವಾಗುತ್ತವೆ ಎಂದೂ ಅವರು ತಿಳಿಸಿದ್ದಾರೆ. ಜತೆಗೆ, ಇನ್ನೂ 9 ಸ್ಥಳಗಳನ್ನು ಹೊಸದಾಗಿ ಪ್ರವಾಸಿ ತಾಣವನ್ನಾಗಿಸುವ ಯೋಜನೆಯೂ ಇದೆಯೆಂದು ಘೋಷಿಸಿದ್ದಾರೆ.
ಪ್ರವಾಸಿಗರ ಭದ್ರತಾ ದೃಷ್ಟಿಯಿಂದ, ಕುದುರೆ ನಿರ್ವಾಹಕರು, ವ್ಯಾಪಾರಿಗಳು, ವ್ಯಾಪಾರ ಸಂಸ್ಥೆಗಳು, ಮಾರಾಟಗಾರರು ಮತ್ತು ಎಲ್ಲಾ ಟೂರ್ ಆಯೋಜಕರಿಗೆ ಕ್ಯುಆರ್ ಕೋಡ್ ಆಧರಿತ ಗುರುತಿನ ವ್ಯವಸ್ಥೆಯನ್ನು ಅಧಿಕಾರಿಗಳು ಜಾರಿಗೆ ತಂದಿದ್ದಾರೆ. ಅದನ್ನು ಸ್ಕ್ಯಾನ್ ಮಾಡಿ ಪ್ರವಾಸಿಗರು ಅವರ ವಿವರಗಳು ತಿಳಿಯಬಹುದಾಗಿದೆ.
ಯಾವ್ಯಾವ ಉಗ್ರನೆಲೆ ನಾಶ?:
ಮೆಹ್ಮೂನಾ ಝೋಯಾ, ಮುರೀದ್ಕೆ
ಮರ್ಕಜ್ ಸುಭಾನ್, ಬಹಾವಲ್ಪುರ
ಮರ್ಕಜ್ ತೈಬಾ, ಸಿಯಾಲ್‌ಕೋಟ್
ಸರ್ಜಲ್, ಸಿಯಾಲ್‌ಕೋಟ್
ಶವಾಯ್ ನಲ್ಲಾ, ಮುಜಫ್ಫರಾಬಾದ್
ಸೈದಾನಾ ಬಿಲಾಲ್, ಮುಜಫ್ಫರಾಬಾದ್
ಮರ್ಕಜ್ ರಹೀಲ್ ಶಹೀದ್, ಕೋಟ್ಲಿ
ಅಬ್ಬಾಸ್ ಕ್ಯಾಂಪ್, ಕೋಟ್ಲಿ
ಬರ್ನಾಲಾ ಕ್ಯಾಂಪ್, ಭಿಂಬರ್
ಬೈಸರನ್ ಕಣಿವೆಯಲ್ಲಿ 26 ಅಮಾಯಕರ ಬಲಿ
15 ದಿನದಲ್ಲೇ ಭಾರತ ಅನೂಹ್ಯ ಪ್ರತೀಕಾರ
25 ನಿಮಿಷದಲ್ಲಿ 9 ಉಗ್ರನೆಲೆಗಳು ಉಡೀಸ್
ಬಳಿಕ ನರಳಿದ್ದ ಕಾಶ್ಮೀರ ಪ್ರವಾಸೋದ್ಯಮ
ಈಗ ಚೇತರಿಕೆ, ಮತ್ತೆ ಸಹಜ ಸ್ಥಿತಿಯತ್ತ
