ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾನಗರ ಪಾಲಿಕೆ ಹಾಗೂ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಹಲವು ದಶಕಗಳಿಂದ ಹಾಗೂ ಹಿಂದಿನ ಸರ್ಕಾರಗಳಿಂದಲೂ ಹೋರಾಟ ನಡೆದಿದೆ. ಈಗ ಅವುಗಳನ್ನು ಕ್ರಮಬದ್ಧಗೊಳಿಸಲಾಗಿದೆ. ಇದರ ಶ್ರೇಯ ಹಿಂದಿನ ಹಾಗೂ ಇಂದಿನ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಮಂಗಳವಾರ ನಡೆದ ವಿವಿಧ ಸ್ಥಳೀಯ ಸಂಸ್ಥೆಗಳ ಹಾಗೂ ಮಹಾನಗರ ಪಾಲಿಕೆಯ 382 ಪೌರಕಾರ್ಮಿಕರಿಗೆ ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಅವರು, ಉಳಿದ ಗುತ್ತಿಗೆ ಕಾರ್ಮಿಕರನ್ನು ಕಾಯಂ ನೌಕರರನ್ನಾಗಿ ನೇಮಿಸುವುದಕ್ಕೆ ನ್ಯಾಯಾಲಯದ ತಡೆಯಾಜ್ಞೆಯಿಂದ ವಿಳಂಬವಾಗುತ್ತಿದೆ. ಶೀಘ್ರವೇ ಇತ್ಯರ್ಥವಾಗಲಿದ್ದು, ಶೀಘ್ರವೇ ನೇಮಕಾತಿ ಪತ್ರ ನೀಡಲಾಗುವುದು. ಹೆಚ್ಚು ಸಂಬಳ ಕೊಟ್ಟರೂ ಯಾರೂ ಈ ಕೆಲಸಕ್ಕೆ ಬರುವುದಿಲ್ಲ. ನಗರಸಭೆ ಪೌರಕಾರ್ಮಿಕರ ಶ್ರಮವನ್ನು ನಾವು ಶ್ಲಾಘಿಸಬೇಕು. ಬೆಳಗಾವಿ ನಗರ ಮತ್ತು ಜಿಲ್ಲೆಯ ಇತರ ಪಟ್ಟಣಗಳ ಸೌಂದರ್ಯ, ಸ್ವಚ್ಛತೆ, ಹಸಿರೀಕರಣಕ್ಕೆ ಆದ್ಯತೆ ನೀಡುವಂತೆ ಪುರಸಭೆಯ ಪೌರಕಾರ್ಮಿಕರಿಗೆ ಮನವಿ ಮಾಡಿದರು.
ಕೈಯಾರೆ ಚರಂಡಿ ಸ್ವಚ್ಛಗೊಳಿಸುವ ಘಟನೆಗಳು ನಮ್ಮ ಸುತ್ತಮುತ್ತ ಈಗಲೂ ನಡೆಯುತ್ತಿರುವುದು ವಿಷಾದದ ಸಂಗತಿ. ಹೀಗಾಗಿ, ನೈರ್ಮಲ್ಯೀಕರಣದ ಯಾಂತ್ರೀಕರಣಕ್ಕೆ ಇತ್ತೀಚಿನ ತಂತ್ರಜ್ಞಾನವನ್ನು ತರುವ ಪ್ರಯತ್ನಗಳು ಅಗತ್ಯವಿದೆ. ಈ ಬದಲಾವಣೆಯನ್ನು ಶೀಘ್ರದಲ್ಲೇ ತರಲು ಸರ್ಕಾರ ಬದ್ಧವಾಗಿದೆ. ಪುರಸಭೆ ಕಾರ್ಮಿಕರ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಬಗೆಹರಿಸಿ ಪರಿಹರಿಸಲಾಗುವುದು ಎಂದು ತಿಳಿಸಿದರು.ಪೌರಾಡಳಿತ ಮತ್ತು ಹಜ್ ಸಚಿವ ರಹೀಮ್ ಖಾನ್ ಮಾತನಾಡಿ, ನಗರ ಮತ್ತು ಪಟ್ಟಣಗಳನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿಡುವಲ್ಲಿ ಪೌರಕಾರ್ಮಿಕರ ಶ್ರಮ ಬಹಳ ಮುಖ್ಯ. ಬೆಳಗಾವಿ ನಗರವನ್ನು ಹೇಗೆ ಸ್ವಚ್ಛ ಮತ್ತು ಸುಂದರವಾಗಿ ಇರಿಸಲಾಗಿದೆ ಎಂಬುವುದನ್ನು ನಾನು ನೋಡಿದೆ. ಇನ್ನೆರಡು ತಿಂಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಎಲ್ಲ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಈಗಾಗಲೇ ಶೇ.70ರಷ್ಟು ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. ನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತಿಗೆ ಅಧಿಕಾರ ನೀಡಲಾಗುತ್ತಿದ್ದು, ಹೆಚ್ಚಿನ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬಹುದು ಮತ್ತು ಸ್ವಂತ ಆದಾಯದಿಂದ ಸಂಬಳ ಪಾವತಿಸಬಹುದು. ಈ ನಿಟ್ಟಿನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆರಿಗೆ ಸಂಗ್ರಹ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲ ಸ್ಥಳೀಯ ಸಂಸ್ಥೆ, ಪಾಲಿಕೆಗಳಲ್ಲಿರುವ ಎಲ್ಲ ಆಸ್ತಿಗಳನ್ನು ಸಕ್ರಮಗೊಳಿಸಲು ಉಪಸಮಿತಿ ರಚಿಸಲಾಗಿದೆ. ತೆರಿಗೆ ಸಂಗ್ರಹ ವ್ಯವಸ್ಥೆಯಿಂದ ಹೊರಗುಳಿದಿರುವ ಎಲ್ಲ ಆಸ್ತಿಗಳಿಗೂ ಎ ಖಾತಾ ಮತ್ತು ಬಿ ಖಾತಾ ಪ್ರಮಾಣ ಪತ್ರ ನೀಡಲು ಉಪ ಸಮಿತಿ ನಿರ್ಧರಿಸಿದೆ. ಇದರಿಂದ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಅನುದಾನಿತ ಸಂಸ್ಥೆಗಳಿಗೆ ಸಾಕಷ್ಟು ಸಹಕಾರಿಯಾಗಲಿದೆ. ಸರ್ಕಾರ ಸದಾ ಪೌರಕಾರ್ಮಿಕರ ಪರವಾಗಿದ್ದು, ಅವರಿಗೆ ವಸತಿ ಸೌಲಭ್ಯ ಕಲ್ಪಿಸಲು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಮಾತನಾಡಿ, ಪೌರಕಾಮಿರ್ಕರು ಕೆಲಸದ ಸಮಯದಲ್ಲಿ ಪರಿಕರಗಳಿಲ್ಲದೇ ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರ ಕಾರ್ಮಿಕರಿಗೆ ಪರಿಕರಗಳನ್ನು ವಿತರಿಸಲು ತ್ವರಿತ ಕ್ರಮಕೈಗೊಳ್ಳಬೇಕು ಎಂದು ವೇದಿಕೆ ಮೇಲಿದ್ದ ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ರಹಿಂ ಖಾನ್ ಅವರಿಗೆ ಮನವಿ ಮಾಡಿದರು.ಪೌರಕಾರ್ಮಿಕರು ಸ್ವಚ್ಛತೆಗೆ ನಿರಂತರ ಶ್ರಮಿಸುತ್ತಿದ್ದಾರೆ. ಅವರಿಗೆ ಪ್ರತಿ ತಿಂಗಳು ನಿಗದಿತ ದಿನಾಂಕದೊಳಗೆ ವೇತನ ಪಾವತಿಸಬೇಕು ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಮಾತನಾಡಿ, ಸುಮಾರು 368 ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪ್ರತಿ ನೀಡಲಾಗಿದೆ. ಜಿಲ್ಲೆಯ ಸ್ವಚ್ಛತೆ ಕಾಪಾಡುವುದರ ಜೊತೆಗೆ ಕೋವಿಡ್ ಸಮಯದಲ್ಲಿ ತಮ್ಮ ಜೀವ ಲೆಕ್ಕಿಸದೆ ಪೌರ ಕಾರ್ಮಿಕರು ಜನತೆಯ ಸೇವೆ ಮಾಡಿದ್ದಾರೆ. ಸರ್ಕಾರದ ಹೊಸ ಮಾರ್ಗಸೂಚಿಯಂತೆ ಎಲ್ಲಾ ಪೌರ ಕಾರ್ಮಿಕರಿಗೆ ಮತ್ತೆ ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಶಾಸಕ ಆಸೀಫ್ ಸೇಠ್, ವಿಧಾನಪರಿತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ, ಮೇಯರ್ ಶೋಭಾ ಸೋಮನಾಚೆ, ಉಪಮೇಯರ್ ರೇಷ್ಮಾ ಪಾಟೀಲ್, ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಗುಂಪಿನ ನಾಯಕ ರಾಜಶೇಖರ್ ಡೋಣಿ, ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿಯುಡಿಸಿ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ ಕಲಾದಗಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.ಪ್ಲಾಸಿಕ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ:
ಪ್ಲಾಸಿಕ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ:ಕಾರ್ಯಕ್ರಮದ ಬಳಿಕ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್, ಶಾಸಕ ಆಸೀಫ್ (ರಾಜು) ಸೇಠ್ ಅವರು ಮಹಾನಗರ ಪಾಲಿಕೆ ಮುಖ್ಯ ಕಚೇರಿಯ ಮುಂಭಾಗದಲ್ಲಿ ನಿರುಪಯುಕ್ತ, ನಿಷೇಧಿತ ಪ್ಲಾಸ್ಟಿಕ್ ತ್ಯಾಜ್ಯದಿಂದ ಪ್ಲಾಸಿಕ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.