ಸಾರಾಂಶ
ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ಪರಿಣಾಮ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿದಿದ್ದು, ಈ ನಡುವೆ ಏರಿಸಿರುವ ದರ ಹಿಂಪಡೆಯುವಂತೆ ‘ಮೆಟ್ರೋ ಪ್ರಯಾಣಿಕರ ಸಂಘಟನೆ’ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿದ್ದು, ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲು ನಿರ್ಧರಿಸಿದೆ.
‘ಬೆಂಗಳೂರು ಉಳಿಸಿ ಸಮಿತಿ’ ಸಹಯೋಗದಲ್ಲಿ ಪ್ರಯಾಣಿಕರ ಸಂಘ ನಗರದಲ್ಲಿನ ಐಟಿ ಸೇರಿ ಖಾಸಗಿ ಕಚೇರಿಗಳು, ಪ್ರಯಾಣಿಕರು ಬರುವ ಮೆಟ್ರೋ ನಿಲ್ದಾಣಗಳ ಬಳಿ ಹಾಗೂ ಇತರೆಡೆ ಕರಪತ್ರ ವಿತರಣೆ ಮಾಡಲು ಮುಂದಾಗಿದೆ. ಈ ಮೂಲಕ ದರ ಏರಿಕೆ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಹೋರಾಟಕ್ಕೆ ಕೈಜೋಡಿಸುವಂತೆ ಕೋರಲು ನಿರ್ಧರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ದೂಷಣೆ ಕೈಬಿಟ್ಟು ದರ ಇಳಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಕಳೆದ ವಾರದಲ್ಲಿ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹಿಂದಿಗಿಂತ 1.50ಲಕ್ಷದಷ್ಟು ಇಳಿದಿದೆ. ಮೆಟ್ರೋ ಪ್ರಯಾಣಿಕರ ಸಂಖ್ಯೆ 8-9 ಲಕ್ಷ ಇರುತ್ತಿತ್ತು. ಆದರೆ, ಸೋಮವಾರ (ಫೆ.10) 8.28 ಲಕ್ಷ, ಮಂಗಳವಾರ 7.79 ಲಕ್ಷ, ಬುಧವಾರ 7.62 ಲಕ್ಷ, ಗುರುವಾರ 7.51ಲಕ್ಷ, ಶುಕ್ರವಾರ 7.63ಲಕ್ಷ, ಶನಿವಾರ 6.90ಲಕ್ಷ ಜನರು ಸಂಚರಿಸಿದ್ದಾರೆ. ಭಾನುವಾರದ ಮೆಟ್ರೋ ಪ್ರಯಾಣಿಕರ ಸಂಖ್ಯೆಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ ಬಹಿರಂಗಪಡಿಸಿಲ್ಲ.
ಈ ಬಗ್ಗೆ ಮಾತನಾಡಿದ ಸಂಘಟನೆಯ ರಾಜೇಶ್ ಭಟ್, ಭಾನುವಾರ ಅರಮನೆ ರಸ್ತೆಯ ಸಭಾಂಗಣವೊಂದರಲ್ಲಿ ಮೆಟ್ರೋ ದರ ಏರಿಕೆ ಖಂಡಿಸಿ ಪ್ರತಿಭಟನಾ ಸಮಾವೇಶ ಏರ್ಪಡಿಸಲು ಮುಂದಾಗಿದ್ದೇವೆ. ನಗರ ಸಾರಿಗೆ ತಜ್ಞರು, ದರ ನಿಗದಿ ಬಗ್ಗೆ ಸಂಪನ್ಮೂಲ ವ್ಯಕ್ತಿಗಳನ್ನು ಸಮಾವೇಶಕ್ಕೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.